“ಮೈ ನಹೀ,ತೂ ಹೀ”…

“ಮೈ ನಹೀ,ತೂ ಹೀ”…

ಚಿತ್ರ

 

ಇಂದು RSS ನ ಎರಡನೇ ಸರಸಂಘಚಾಲಕರಾಗಿದ್ದ ಶ್ರೀ ಗುರೂಜಿ ಗೊಲ್ವಾಲ್ಕರ್ ರವರ ಜನ್ಮದಿನ. ಅವರ ಒಂದು ಮಾತನ್ನು ಸ್ಮರಣೆ ಮಾಡಲು ಈ ಕಿರು ಲೇಖನ

 “ಮೈ ನಹೀ,ತೂ ಹೀ”…ಇದು ಗುರೂಜಿಯವರ ಮಾತು. ನನ್ನ ಕೊಟೇಶನ್ ಕೂಡ “ನನ್ನದೇನೂ ಇಲ್ಲ, ಅವನದೇ ಎಲ್ಲಾ” ಹೆಚ್ಚು ಕಮ್ಮಿ ಎರಡೂ ಮಾತುಗಳು ತಾಳೆಯಾಗುತ್ತವೆ. ಒಂದು ವಿಚಾರದಲ್ಲಿ ಮನುಷ್ಯ ಬೆಳೆದಾಗ ಕೆಲವು ಗುಣಗಳು ಅವನ ಅರಿವಿಲ್ಲದೇ ಅವನಲ್ಲಿ ಮನೆಮಾಡುತ್ತವೆ. ಗುರೂಜಿಯವರು ಬದುಕಿದ್ದಾಗ RSS ಪ್ರವೇಶಿಸಿದ ನನ್ನಲ್ಲಿ  ಹಲವಾರು ಗುಣಗಳು ಪರೋಕ್ಷವಾಗಿ ಮೈಗೂಡಿವೆ, ಎಂಬುದನ್ನು ಅತ್ಯಂತ ವಿನಮ್ರವಾಗಿ ಹೇಳಿಕೊಳ್ಳ   ಬೇಕೆನಿಸುತ್ತದೆ.ನನ್ನಲ್ಲಿ ಏನಾದರೂ ಒಳ್ಳೆಯ ಗುಣಗಳಿದ್ದರೆ ಅದಕ್ಕೆ ಕಾರಣ RSS.

ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆಯು ಎಲ್ಲೆಲ್ಲೂ ನಡೆಯುತ್ತಿದೆ. ಗುರೂಜಿಯವರಿಗೂ ಸ್ವಾಮಿ ವಿವೇಕಾನಂದರಿಗೂ ಹಲವು ಸಾಮ್ಯತೆಗಳಿವೆ. ಅದರಲ್ಲಿ ಒಂದು ಸಾಮ್ಯತೆಯ ಬಗ್ಗೆ ಇಲ್ಲಿ ಸ್ಮರಿಸುವೆ. ತಮ್ಮ 30 ನೇ ವಯಸ್ಸಿನಲ್ಲಿ  ಕನ್ಯಾಕುಮಾರಿಯ ಸಮುದ್ರದ ಮಧ್ಯೆ ಇರುವ ಬಂಡೆಯ ಮೇಲೆ ಕುಳಿತು ಸ್ವಾಮಿ ವಿವೇಕಾನಂದರು ಏಕಾಂತದಲ್ಲಿ ಧ್ಯಾನ ಮಾಡಿದ್ದಾದರೂ ತಮ್ಮ ಮುಕ್ತಿಗಾಗಿ ಅಲ್ಲ, ಬದಲಿಗೆ ದೇಶದಲ್ಲಿ ತಾಂಡವವಾಡುತ್ತಿದ್ದ ದಾರಿದ್ರ್ಯ ಮತ್ತು ಅಜ್ಞಾನದಿಂದ ದೇಶವನ್ನು ಮುಕ್ತಿಗೊಳಿಸುವ ಬಗ್ಗೆ!! ಆಗ ಅವರ ಕಣ್ಮುಂದೆ 100 ಜನ ಯುವಕರ ಗುಂಪು ಇರಲಿಲ್ಲ. ದೇಶಭಕ್ತ ತರುಣರನ್ನು ಸಿದ್ಧಗೊಳಿಸಬೇಕೆಂಬುದು ಅವರ ಕನಸಾಗಿತ್ತು.

ಗುರೂಜಿಯವರಿಗೂ  ಕೂಡ ಅವರ  30ನೇ ವಯಸ್ಸಿನಲ್ಲಿ ಎರಡು ವಿಚಾರಗಳು ಕಣ್ಮುಂದಿತ್ತು. ಒಂದು ರಾಮಕೃಷ್ಣಾಶ್ರಮದ ಸಂನ್ಯಾಸಿಯಾಗುವುದು ,ಎರಡು ಅದಾಗಲೇ ಸಂಪರ್ಕದಲ್ಲಿದ್ದ ಡಾ.ಹೆಡಗೇವಾರರ “ಹಿಂದು ಸಮಾಜ ಪುನರುತ್ಥಾನ ಕಾರ್ಯಕ್ಕೆ ಕೈ ಜೋಡಿಸುವುದು. ಏಕಾಂತದಲ್ಲಿ ಕುಳಿತು ಧ್ಯಾನಿಸಿದರು. ಮೊದಲ ವಿಚಾರ ಆಯ್ಕೆಮಾಡಿಕೊಂಡರು. ಸ್ವಾಮಿ ಅಖಂಡಾನಂದರ ಸಹವಾಸದಲ್ಲಿ ಎರಡು ವರ್ಷಗಳಿದ್ದು ಧೀಕ್ಷೆ ಪಡೆದು ತಮ್ಮನ್ನು ಸಮಾಜಕಾರ್ಯಕ್ಕೆ ಅರ್ಪಿಸಿಕೊಳ್ಳಲು ಸಿದ್ಧರಾದರು. ಅಖಂಡಾನಂದರ  ಭೌತಿಕ ಶರೀರವು ಪಂಚಭೂತಗಳಲ್ಲಿ ಲೀನವಾದಮೇಲೆ ಸ್ವಾಮೀಜಿಯವರ ಅನುಗ್ರಹದಂತೆ ಡಾ.ಹೆಡಗೇವಾರರ “ಹಿಂದು ಸಮಾಜ ಪುನರುತ್ಥಾನ ಕಾರ್ಯಕ್ಕೆ ಕೈ ಜೋಡಿಸಿದರು. ಆ ಹೊತ್ತಿಗೆ ಗುರೂಜಿಯವರ ಜೊತೆಗೆ ಸಹಸ್ರಾರು ಮಂದಿ ಸ್ವಯಂಸೇವಕರನ್ನು ಡಾ.ಹೆಡಗೇವಾರರು ಸಿದ್ಧ ಗೊಳಿಸಿದ್ದರು. ಡಾಕ್ಟರ್ ಜಿ  ವ್ಯವರ ನಂತರ ಸಂಘದ ಹೊಣೆ ಗುರೂಜಿಯವರ ಹೆಗಲ ಮೇಲೆ ಬಿತ್ತು. ದೇಶಾದ್ಯಂತ ಲಕ್ಷ ಲಕ್ಷ  ಸಮರ್ಪಿತ ಕಾರ್ಯಕರ್ತರ ಪಡೆಯನ್ನು ಕಟ್ಟಿದರು.ವಿವೇಕಾನಂದರು ಬಯಸಿದ್ದನ್ನು ಗುರೂಜಿಯವರು ಕಾರ್ಯಗತಗೊಳಿಸಿದರು.    

Rating
No votes yet