ಅಂಟೇನಮತ್ತು ಕಾಗೆ
ಬರಹ
ಅಂಟೇನಮತ್ತು ಕಾಗೆ
ಈ ಧೂಳು
ನಮ್ಮ ಉಸಿರಿನಿಂದಲೆ
ಮುಖ ತೊಳೆದುಕೊಂಡಂತೆ
ಮೈದದವಿಕೊಂಡೇಳುತ್ತದೆ
ಮತ್ತೆ ಹೊಸದಾಗುತ್ತದೆ
ಬಿಸಿಲು ಕಣ್ಣೀರು ಸುರಿಸುವುದು
ಬೆವರ ಮಣಿಯಂತಾಗಿ
ಹೊಟ್ಟೆ ತೊಳೆಸಿ ಜೀವ ಹಳಸುತಿರುವಂತೆ...
ಮತೀಗ ಆ ಗಟಾರು ವಾಸನೆ
ನಿವಾಳಿಸಿ ಎಸೆದಂತೆ ಹಬ್ಬಿ
ಊರೆಲ್ಲ ಮಬ್ಬು ಕಾರ್ಮೋಡ,
ಕಾರ್ಮೋಡವೇ ಆಗಿ
ಬಿದ್ದರೆ ಎಂಥಾ ಮಳೆ ಅಂತೀರಾ!
ಹುಚ್ಚು ತರಂಗಕೆ ಬೆಚ್ಚುವ ಪತಂಗ
ಅದರುತಿವೆ ಬಾವಲಿ, ಹೆದರುವ ಹಕ್ಕಿ ಮರಿ
ಹಗಲೇ ಕತ್ತಲ ಹಾಡು.
ಚಂದ್ರ ಭೂಮಿಯ ಲಾಂದ್ರ
ರಾತ್ರಿ ಹೊತ್ತ ಸಾವಿರ ಸೂರ್ಯ
ನುಗ್ಗುವ ರಭಸ ನಿಂತಲ್ಲೇ ಧ್ಯಾನಸ್ಥ ಚಕ್ರ
ದಾರಿ ಚಕ್ರತೀರ್ಥ!
ಕಾಗೆ ಹಸಿದಿದೆ ಅಂಟೇನ ಮೇಲಿದೆ
ಕಾಳು ನೆಲದ ಮೇಲಿದೆ
ಹಸಿವಿಗೆ ಹಲವು ತೊಡಕು, ತಡಿಕೆ ತಡಕಾಡುವತನಕ
ಎಲ್ಲಾ ಹೊತ್ತಿಗೂ ತುತ್ತಿಗೂ ಉತ್ತರ
ಮೇಲಿಂದ-
ಮೇಲೆ!