ಅಕೇಷಿಯಾ ಹಾಗು ಯುಕೆಲಿಪ್ಟಸ್ ‘ತೋಪಿ’ಗೆ ಧಾರವಾಡದ ಅಂತರ್ಜಲ ‘ತೋಪು’!

ಅಕೇಷಿಯಾ ಹಾಗು ಯುಕೆಲಿಪ್ಟಸ್ ‘ತೋಪಿ’ಗೆ ಧಾರವಾಡದ ಅಂತರ್ಜಲ ‘ತೋಪು’!

ಬರಹ

"ಹೂವು ಹೊರಳುವವು
ಸೂರ್ಯನ ಕಡೆಗೆ,
ನಮ್ಮ ದಾರಿ ಬರಿ
ಚಂದ್ರನ ವರೆಗೆ..."

‘ಚೆಂಬೆಳಕಿನ ಕವಿ’ ನಾಡೋಜ ಚೆನ್ನವೀರ ಕಣವಿ ಅವರು ಅತ್ಯಂತ ಸುಂದರವಾಗಿದ್ದ ಧಾರವಾಡದ ಅಂದಿನ ಸ್ವಚ್ಛಂದ ಪರಿಸರವನ್ನು ಆಸ್ವಾದಿಸುತ್ತ ಮನದುಂಬಿ ಉದ್ಧರಿಸಿದ ವಾಕ್ಯಗಳಿವು.

ಆದರೆ ಇಂದು ಕವಿಯ ಕಲ್ಯಾಣನಗರದ ಮನೆಯಿಂದ ಕೇವಲ ಹತ್ತಾರು ಹೆಜ್ಜೆ ದೂರದ ಆ ಸ್ವಚ್ಚಂದ ಗಿರಿ-ಕಾನನದ ಪರಿಸರ ಕಾಂಕ್ರೀಟ್ ಕಾಡಾಗಿ ಪರಿವರ್ತನೆಗೊಂಡಿದೆ. ಗುಡ್ಡಗಳಂತೂ ನೆಲಸಮವಾಗಿವೆ. ಕಾಡು ಪ್ರಾಣಿಗಳು, ಪಕ್ಷಿಗಳು ಹೇಳ ಹೆಸರಿಲ್ಲದಂತೆ ಮಾಯವಾಗಿವೆ. ನೆರಳು ನೀಡುವ ಗಿಡಗಳು ಸಹ ಇನ್ನಿಲ್ಲವಾಗಿವೆ. ಕೆರೆಗಳು ಮರಣಶಯ್ಯೆಯಲ್ಲಿವೆ. ಸಾಂಸ್ಕೃತಿಕ ರಾಜಧಾನಿ ಕ್ರಮೇಣ ಬಂಜೆಯಾಗುತ್ತಿದೆ. ಧಾರವಾಡ ಕಳೆದ ಕೇವಲ ೩೦ ವರ್ಷಗಳಲ್ಲಿ ಸಾಧಿಸಿದ ‘ಪ್ರಗತಿ’ಯ ಓರೆ ನೋಟ ಇದು!

ನಮ್ಮಂತಹ ಮನುಷ್ಯರ ಹತ್ತು ಹಲವಾರು ಅವಶ್ಯಕತೆಗಳನ್ನು ಮಿತಿ ಮೀರಿ ಪೂರೈಸಿ ಭೂಮಿತಾಯಿ ಈ ಪರಿ ತನ್ನ ಒಡಲನ್ನು ಕೊರೆಯಿಸಿಕೊಂಡು ಕಾಂಕ್ರೀಟ್ ಕಾಡಿಗೆ ಆಶ್ರಯ ನೀಡುತ್ತಿದ್ದಾಳೆ. ಧಾರವಾಡದ ಏಳು ಕೆರೆ ಹಾಗು ಏಳು ಗುಡ್ಡಗಳ ‘ಛೋಟಾ ಮಹಾಬಳೇಶ್ವರ’ ಎಂಬುವುದು ನಮ್ಮ ಹಿರಿಯರ ಸ್ಮೃತಿ ಪಟಲದಲ್ಲಿ ಮಾತ್ರ ಈಗ ಉಳಿದಿದೆ.

ಸದ್ಯ ಧಾರವಾಡದಲ್ಲಿ ಸಸ್ಯ ಸಂಪತ್ತು ಅಥವಾ ಅರಣ್ಯವೆಂದರೆ ‘ಅಕೇಷಿಯಾ’ ಹಾಗು ‘ನೀಲಗಿರಿ’ (ಯುಕೆಲಿಪ್ಟಸ್) ಗಿಡಗಳದ್ದು ಮಾತ್ರ. ರೈಲ್ವೆ ನಿಲ್ದಾಣದ ಸುತ್ತಲಿನ ಪರಿಸರ, ಕರ್ನಾಟಕ ವಿಶ್ವವಿದ್ಯಾಲಯದ ೭೫೦ ಎಕರೆ ಆವರಣ, ಜಿಲ್ಲಾಧಿಕಾರಿಗಳ ಕಚೇರಿ ಪ್ರದೇಶ, ಪೊಲೀಸ್ ಹೆಡ್ ಕ್ವಾಟರ್ಸ್, ದಾಸನಕೊಪ್ಪ ವೃತ್ತ, ಆಕಾಶವಾಣಿ ಆವರಣ, ದೂರದರ್ಶನ ಟಾವರ್ ಪ್ರದೇಶ...ಈ ಎಲ್ಲ ಏರಿಯಾಗಳು ಅಕೇಷಿಯಾ ಮತ್ತು ನೀಲಗಿರಿ ಗಿಡಗಳ ಅರಣ್ಯಕ್ಕೆ ಮೂಲಸ್ಥಾನ.

ಈ ಗಿಡಗಳ ಬೆಳವಣಿಗೆಯಿಂದಾಗಿ ಧಾರವಾಡದ ಅಂತರ್ಜಲ ಮಟ್ಟ ಹಾಗು ಗುಣಮಟ್ಟ ಗಣನೀಯ ಪ್ರಮಾಣದಲ್ಲಿ ದಿನೇ ದಿನೆ ಕುಸಿಯುತ್ತಿದೆ. ದಿನವೊಂದಕ್ಕೆ ೨ ರಿಂದ ೩ ಬೋರ್ ವೆಲ್ ಗಳನ್ನು ಇಲ್ಲಿನ ‘ಪ್ರಜ್ನಾವಂತರು’ ಕೊರೆಯಿಸುತ್ತಿದ್ದು, ಸದ್ಯ ನಗರದ ಎಲ್ಲ ಹೊರವಲಯಗಳಲ್ಲಿ ೧೦೦ಕ್ಕೂ ಹೆಚ್ಚು ಜನ ನೀರಿನ ವ್ಯಾಪಾರದ ಮೇಲೆಯೇ ಜೀವನ ನಡೆಸುತ್ತಿದ್ದಾರೆ ಎಂಬುದು ಆಘಾತಕಾರಿ. ಏತನ್ಮಧ್ಯೆ ಕೆಲವು ‘ಸಧ್ಯದ ಪರಿಸ್ಥಿತಿಯಲ್ಲಿ ಪರಿಸ್ಥಿತಿ ಅಸ್ನೇಹಿ’ ಆಗಿ ಪರಿಣಮಿಸಿರುವ ಗಿಡಗಳು ಈ ಸಮಸ್ಯೆ ಎಂಬ ಉರಿಗೆ ಅಗೋಚರವಾಗಿ ತುಪ್ಪಸುರಿಯುತ್ತಿವೆ.

ನೀಲಗಿರಿ ಜಾತಕ: ‘ಮೆರಿಟಸ್ಸಿ’ ಕುಟುಂಬಕ್ಕೆ ಸೇರಿದ ನೀಲಗಿರಿ (ಯುಕೆಲಿಪ್ಟಸ್) ತನ್ನ ಬೇರುಗಳಲ್ಲಿ ‘ಡೈಕೋಟ್’ ಹಾಗು ‘ಟ್ಯಾಫ್ ರೂಟ್’ ವ್ಯವಸ್ಥೆ ಹೊಂದಿದ್ದು, ಸುಮಾರು ೪೦೦ ರಿಂದ ೫೦೦ ಫೂಟ್ ಎತ್ತರದ ವರೆಗೆ ಈ ಗಿಡಗಳು ಬೆಳೆಯುತ್ತವೆ. ೯೦ ಫೂಟ್ ನಷ್ಟು ಅಗಲವಾದ ಕಾಂಡವನ್ನು ಈ ಗಿಡ ಹೊಂದಬಲ್ಲುದು. ಉಷ್ಣವಲಯದ ಆಸ್ಟೇಲಿಯಾ ಹಾಗು ಅಮೇರಿಕಾದಲ್ಲಿ ಹೇರಳವಾಗಿ ಬೆಳೆಯುವ ಈ ಗಿಡವನ್ನು ಅರಣ್ಯ ವೃದ್ಧಿಸುವ ದೃಷ್ಠಿಯಿಂದ, ಪೇಪರ್ ಪಲ್ಪ್ ಗಾಗಿ ಕಚ್ಚಾವಸ್ತು ಪಡೆಯಲು ಹಾಗು ಮಲೇರಿಯಾ ನಾಶಕವಾಗಿ ಬೆಳೆಸಲಾಗುತ್ತದೆ. ಆದರೆ ಧಾರವಾಡದ ಅಂತರ್ಜಲ ಪ್ರಮಾಣ ಕುಸಿಯಲು ಈ ಗಿಡಗಳು ಸಹ ಕಾರಣವಾಗಿವೆ ಎಂಬ ಆಘಾತಕಾರಿ ಅಂಶ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಭೂಮಿಯ ಮೇಲೆ ಅತ್ಯಂತ ಎತ್ತರವಾಗಿ ಬೆಳೆಯುವ ನೀಲಗಿರಿ ಭೂಮಿಯ ಅಡಿಯಲ್ಲೂ ತನ್ನ ಬೇರುಗಳನ್ನು ಅಷ್ಟೇ ಆಳಕ್ಕೆ ಹಾಗು ಅಗಲಕ್ಕೆ ಹರಡಿಸಿಕೊಂಡು ನೀರಿನ ಪಾತ್ರವನ್ನು ಜಾಲಾಡಿ ಹುಡುಕಿಕೊಳ್ಳುತ್ತದೆ. ಪ್ರತಿ ದಿನ ೬ ರಿಂದ ೮ ಲೀಟರ್ ನೀರು ಒಂದು ನೀಲಗಿರಿ ಗಿಡ ಹೀರಿಕೊಳ್ಳಬಲ್ಲುದು! ಈ ಗಿಡಗಳು ಯಾವುದೇ ಕೊಳವೇ ಬಾವಿ, ಕೆರೆಗಳ ಸಮೀಪದಲ್ಲಿದ್ದರೆ ಕೆಲವೇ ತಿಂಗಳುಗಳಲ್ಲಿ ಈ ಪಾತ್ರವನ್ನು ಬರಿದು ಮಾಡಬಲ್ಲವು ಈ ತೋಪು!

ಸಾಲದ್ದಕ್ಕೆ ನೀಲಗಿರಿ ಗಿಡದ ಎಲೆಗಳು ಬಲಿತು, ಒಣಗಿ ನೆಲಕ್ಕೆ ಬಿದ್ದರೆ ಬೇರೆ ಯಾವ ಸಸಿಗಳೂ ಆ ಜಾಗೆಯಲ್ಲಿ ಬೆಳೆಯಲಾರವು! ನೀಲಗಿರಿ ಗಿಡದ ಎಲೆಯಲ್ಲಿರುವ ಅಂಟು, ದ್ರವ ಹಾಗು ಮ್ಯಾಣದಂತಹ ವಸ್ತು, ರಾಸಾಯನಿಕ ವಸ್ತುಗಳಿಂದಾಗಿ ಬೇರೆ ಗಿಡದ ಬೀಜ ಫಲಿಸಲು ಅವಕಾಶ ನೀಡುವುದಿಲ್ಲ. ನೀಲಗಿರಿಯ ‘ಆಂಟಿಗೊನಾಸ್ಟಿಕ್’ ಸ್ವಭಾವದಿಂದಾಗಿ ತನ್ನ ಪ್ರಾಬಲ್ಯ ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತದೆ.

ಔಷಧಿಯಾಗಿ ನೀಲಗಿರಿ: ದಕ್ಷಿಣ ಯುರೋಪ್ ನಲ್ಲಿ ‘ಬ್ಲೂಗಮ್ ಟ್ರೀ’ ಎಂದು ಕರೆಯಿಸಿಕೊಳ್ಳುವ ನೀಲಗಿರಿಯನ್ನು ಉರುವಲಾಗಿ, ಪೇಪರ್ ತಯಾರಿಕೆಯಲ್ಲಿ, ಸೋಂಕು ನಿವಾರಕವಾಗಿ, ಕೀಟನಾಶಕವಾಗಿ ಕೂಡ ಬಳಸಲ್ಪಡುತ್ತದೆ. ಈ ಗಿಡದ ಔಷಧೀಯ ಉಪಯೋಗ ಸಹ ಇಲ್ಲದಿಲ್ಲ. ನಂಜು ನಿವಾರಕವಾಗಿಯೂ ‘ಆಂಟಿಸೆಪ್ಟಿಕ್’ ಹಾಗು ಸೆಟೆಬೇನೆ ‘ಆಂಟಿಸ್ಪ್ಯಾಸ್ಮೋಡಿಕ್’ ಶಮನಕಾರಿಯಾಗಿ ಕೂಡ ಉಪಯೋಗಿಸುತ್ತಾರೆ. ಅಸ್ತಮಾ, ಡಿಫ್ತೇರಿಯಾ, ಗಂಟಲು ಬೇನೆ ಇತ್ಯಾದಿ ರೋಗಗಳ ನಿವಾರಣೆಗಾಗಿ ನೀಲಗಿರಿ ಎಲೆಯಿಂದ ಪಡೆದ ಎಣ್ಣೆಯನ್ನು ಬಳಸುತ್ತಾರೆ.

ಅಕೇಷಿಯಾ ಜಾತಕ: ಯುಕೆಲಿಪ್ಟಸ್ ಗಿಡದ ಅರ್ಧಾಂಗಿ ‘ಅಕೇಷಿಯಾ’! ಕಾರಣ ನೀಲಗಿರಿ ಇದ್ದಲ್ಲಿ ಇದು ಇರಲೇಬೇಕು. ಈ ಗಿಡಗಳೂ ಕೂಡ ಧಾರವಾಡದಲ್ಲಿ ಅಂತರ್ಜಲ ಪ್ರಮಾಣ ಕುಸಿಯಲು ಕಾರಣವಾಗಿದೆ. ನೀಲಗಿರಿಯೊಂದಿಗೆ ಹೇರಳವಾಗಿ ಬೆಳೆಸಲ್ಪಟ್ಟಿರುವ ಈ ಗಿಡ ಪ್ರತಿಶತ ೨೫ ರಷ್ಟು ಗಾಳಿ, ೨೫% ನೀರು, ೧೦% ಸೇಂದ್ರೀಯ ಲವಣಾಂಶ ಹಾಗು ೪೦% ಖನಿಜಾಂಶಗಳನ್ನು ಬಳಸಿಕೊಂಡು ಈ ಗಿಡಗಳು ಬದುಕುವಂಥವು.

ಇವುಗಳ ಬೇರುಗಳಲ್ಲಿರುವ ನೈಸರ್ಗಿಕವಾದ ‘ಆಕ್ಟಿವ್ ಟಿಪ್’ ತಂತ್ರಜ್ನಾನ ಹೆಚ್ಚ್ಜಿನ ನೀರನ್ನು ಹೀರಿಕೊಳ್ಳಲು ಸಹಕಾರಿಯಾಗಿದೆ. ಉತ್ತರ ಅಫ್ರಿಕಾ ಮತ್ತು ಸಿನೇಗಲ್ ನಲ್ಲಿ ಈ ಗಿಡಗಳನ್ನು ಮಣ್ಣಿನ ಸವಕಳಿ ತಡೆಗಟ್ಟಲು, ಮರಭೂಮಿ ಬೆಳೆಯುವುದನ್ನು ತಪ್ಪಿಸಲು ಹಾಗು ಆ ಪ್ರದೇಶದಲ್ಲಿ ಸಾರಜನಕದ ಪ್ರಮಾಣ ಹೆಚ್ಚಿಸಲು ಬೆಳೆಸಲಾಗುತ್ತದೆ. ಭೂಮಿಯ ಮಣ್ಣಿಗೆ ವಾತಾವರಣದ ಸಾರಜನಕ ಸಾಗಿಸುವಲ್ಲಿ ಅಕೇಷಿಯಾದ ಪಾತ್ರ ಮಹತ್ವದ್ದು.

ಅಕೇಷಿಯಾ ಗಿಡದಿಂದ ಲಭ್ಯವಾಗುವ ‘ಟ್ಯಾನಿಕ್ ಆಸಿಡ್’ ಪದಾರ್ಥವನ್ನು ಬಾಯಿಯ ಹುಣ್ಣು ನಿವಾರಿಸುವಲ್ಲಿ, ಹಲ್ಲಿನ ಒಸಡುಗಳನ್ನು ಬಲ ಪಡಿಸುವಲ್ಲಿ ಬಳಸುತ್ತಾರೆ. ಚರ್ಮದ ಕೈಗಾರಿಕೆಗಳಲ್ಲಿಯೂ ಹೇರಳವಾಗಿ ಈ ಗಿಡಗಳನ್ನು ಬಳಸಲಾಗುತ್ತದೆ. ಕಡಿಮೆ ವೆಚ್ಚದ ‘ಲ್ಯಾರಿ ಬೇಕರ್’ ಮಾದರಿ ಮನೆಗಳನ್ನು ಕಟ್ಟಲು ಸಹ ಇತ್ತೀಚೆಗೆ ಈ ಗಿಡದ ಕೊಂಬೆಗಳನ್ನು ಬಳಸಲಾಗುತ್ತದೆ. ಈ ಗಿಡದ ಕಾಂಡವನ್ನು ಘಾಸಿಗೊಳಿಸುವುದರಿಂದ ಅಂಟು ಸ್ರಾವವಾಗುತ್ತದೆ. ಈ ಅಂಟನ್ನು ಸಂಗ್ರಹಿಸಿ ಬಿಸಿ ನೀರಿನಲ್ಲಿ ಕರಗಿಸಿದಾಗ ಒಳ್ಳೆಯ ಅಂಟು ‘ಅಡೇಸಿವ್’ ಆಗಿ ಬಳಸಬಹುದು. ಜೊತೆಗೆ ಈ ಅಂಟನ್ನು ಬೇಧಿ, ಡಯೋರಿಯಾ, ಜ್ವರ ಹಾಗು ಕೆಮ್ಮಿಗೂ ಕೂಡ ಔಷಧವನ್ನಾಗಿ ಬಳಸಬಹುದಾಗಿದೆ.

ತಜ್ನ ಡಾ. ಸಿ.ಜಿ.ಪಾಟೀಲ ಅಭಿಮತ: ಕರ್ನಾಟಕ ವಿಜ್ನಾನ ಮಹಾವಿದ್ಯಾಲಯದ ಸಸ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಿ.ಜಿ.ಪಾಟೀಲ ಅವರ ಪ್ರಕಾರ- "ನೀಲಗಿರಿ ಬೆಳೆಸುವುದರಿಂದ ಮಣ್ಣಿನ ಸಾರವತ್ತತೆ ಕುಂಠಿತಗೊಳ್ಳುತ್ತದೆ. ಜೊತೆಗೆ ಸಂವರ್ಧನಾ ಶಕ್ತಿ ಇಂಗಿ ಹೋಗುತ್ತದೆ. ಫಲವತ್ತತೆಯ ಪ್ರಶ್ನೆಯಂತೂ ಉದ್ಭವಿಸುವುದೇ ಇಲ್ಲ. ಈ ಗಿಡಗಳನ್ನು ಕಡಿದ ಮೇಲೆ ಆ ಜಾಗೆಯಲ್ಲಿ ಬೇರೆ ಗಿಡ ಬೆಳೆಯಲಿಕ್ಕೆ ಅಂದಾಜು ೧೦ ವರ್ಷದ ಅವಧಿ ಬೇಕಾಗುತ್ತದೆ. ನೀಲಗಿರಿ ಗಿಡದ ಎಲೆಗಳು ‘ಡ್ವಾರ್ಸಿ ವೆಂಡ್ರಲ್’ ನಮೂನೆಯವು ಇರುವುದರಿಂದ ನೀರು ಆವಿರ್ಭವಿಸುವುದು ಕಡಿಮೆ ಇದ್ದರೂ ಈ ಗಿಡ ಹೆಚ್ಚು ನೀರನ್ನು ಆಕಾಶ ಮಾರ್ಗವಾಗಿ ದಾಟಿ ಹೋಗುವ ಮೋಡಗಳಿಂದ, ಜೊತೆಗೆ ಭೂಮಿಯ ಅಡಿಯಲ್ಲಿ ಅತ್ಯಂತ ಆಳವಾಗಿ ಹರಿಯುವ ಅಂತರ್ಜಲದಿಂದಲೂ ಏಕಕಾಲದಲ್ಲಿ ಹೀರುತ್ತಿದೆ. ಎಂದರೆ ಎರಡು ರೀತಿಯ ನಷ್ಟ ಈ ಗಿಡದಿಂದ" ಎಂದು ಅಭಿಪ್ರಾಯ ಪಡುತ್ತಾರೆ.

ಇಲ್ಲಿಯ ತನಕ ತಾವು ಕೈಗೊಂಡಿರುವ ಸಂಶೋಧನೆಗಳ ಆಧಾರದ ಮೇಲೆ ಡಾ. ಸಿ.ಜಿ.ಪಾಟೀಲರು ನೀಲಗಿರಿಯ ಬಾಧಕಗಳನ್ನು ತಡೆಯುವ ಉದ್ದೇಶದಿಂದ ಬಿದಿರು, ಕ್ಯಾಲೆರೇನಾ ಇಕ್ವಿಸಿಟಿ ಫೋಲಿಯಾ ಹಾಗು ಸಮೋನಿಯಾ ಸಮನ್ (ರೇನ್ ಟ್ರೀ) ಇವುಗಳನ್ನು ಬೆಳೆಸಬಹುದು. ಇದರಿಂದ ಅಂತರ್ಜಲದ ಪ್ರಮಾಣ ಕುಸಿಯುವುದಿಲ್ಲ ಎನ್ನುತ್ತಾರೆ.

ಪರಿಸರವಾದಿಗಳ ಕೂಗು: ಖ್ಯಾತ ಪರಿಸರವಾದಿ, ಕ್ರಿಯಾಶೀಲ ಗೆಳೆಯರು ಬಳಗದ ಡಾ. ಮುಕುಂದ ಮೈಗೂರ್ ಅವರ ಪ್ರಕಾರ- "ಇನ್ನು ಮುಂದೆ ನೀರಿಗಾಗಿ ೩ನೇ ಮಹಾಯುದ್ಧ ಜರುಗುವ ಕಾಲ ದೂರವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಏರ್ಪಟ್ಟಿರುವ ಸಂದರ್ಭದಲ್ಲಿ ಅಕೇಷಿಯಾ ಹಾಗು ಯುಕೆಲಿಪ್ಟಸ್ ಗಿಡಗಳನ್ನು ಕಿತ್ತು ಹಾಕಿ, ಕಡಿಮೆ ನೀರು ಪಡೆದು ಅಥವಾ ಸಿಕ್ಕಷ್ಟು ನೀರಿನಲ್ಲಿಯೇ ಬದುಕುವ ಹುಣಿಸೆ, ಮಾವು, ಹಲಸು ಇತ್ಯಾದಿ ಗಿಡಗಳನ್ನು ಬೆಳೆಸಬೇಕು. ಮನೆಗೊಂದು ಮಗು, ಮಗುವಿಗೆ ಎರಡು ಮರ ಧ್ಯೇಯವಾಗಬೇಕು. ‘ಜೀವಸೆಲೆ’ ಆದ ನೀರಿನ ಮೂಲಗಳನ್ನು ಉಳಿಸಿಕೊಳ್ಳಲು ಗಂಭೀರ ಹೆಜ್ಜೆಗಳನ್ನು ಇಡಲೇಬೇಕು. ಫಲ, ಜೊತೆಗೆ ಉರುವಲು, ಪರಿಸರ ಸ್ನೇಹಿಯಾದ ವಾತಾವರಣದಲ್ಲಿ ಆಮ್ಲಜನಕ ವೃದ್ಧಿಸಬಲ್ಲ ಗಿಡಗಳನ್ನು ಬೆಳೆಸಬೇಕಿದೆ’ ಎಂದು ಅಭಿಪ್ರಾಯ ಪಡುತ್ತಾರೆ.

ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಪರಿಸರ ಸ್ನೇಹಿಯಾದ ಇಂತಹ ಒಂದಷ್ಟು ಗಿಡಗಳನ್ನು ಹುಡುಕಿ ತೆಗೆದು ಆದಷ್ಟು ಅಂತರ್ಜಲ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಮಳೆ ನೀರು ಸಂಗ್ರಹ, ಅಂತರ್ಜಲ ವೃಧ್ಧಿಸುವಿಕೆ, ಬಳಕೆಯಾದ ನೀರಿನ ಪುನರ್ಬಳಕೆಗಾಗಿ ಪ್ರಯತ್ನ ಮಾಡಬೇಕಿದೆ. ಮಳೆ ನೀರು ಕೊಯ್ಲು, ಅಂತರ್ಜಲ ಅಭಿವೃದ್ಧಿಗೆ ಪೂರಕ ಕ್ರಮಗಳು, ಇಂಗು ಗುಂಡಿ ತಯಾರಿಕೆ ಇತ್ಯಾದಿ ಕೆಲಸಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸಮರೋಪಾದಿ ಕ್ರಮ ಕೈಗೊಳ್ಳಬೇಕಿದೆ.

ಮುಖ್ಯವಾಗಿ ಇದೊಂದು ಜನಾಂದೋಲನವಾಗಿ ರೂಪುಗೊಂಡು ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಹೊಸ ಭಾಷ್ಯ ಬರೆಯುವಂತಾಗಬೇಕು. ಅಂದಾಗ ಮಾತ್ರ ಧಾರವಾಡದ ಪರಿಸರವಾದಿಗಳಾದ ಡಾ. ಪ್ರಕಾಶ ಭಟ್, ಡಾ.ಎಸ್.ಆರ್. ಹಿರೇಮಠ, ಪಂಡಿತ್ ಮುಂಜಿ, ಡಾ.ಸಂಜೀವ ಕುಲಕರ್ಣಿ, ನ.ಹ.ಕಟಗೇರಿ, ಚಾರಣಿಗ ಪ್ರೊ.ಜಿ.ಎಸ್.ಕಲ್ಲೂರ್, ಪ್ರೊ.ಬಸವಪ್ರಭು ಹೊಸಕೇರಿ, ಪ್ರೊ.ಎ.ಎಸ್.ಬಾಲಸುಬ್ರಮಣ್ಯ ಸೇರಿದಂತೆ ಅವಳಿ ನಗರ ನಾಗರಿಕ ಪರಿಸರ ವೇದಿಕೆ ಮೊದಲಾದ ಸಂಸ್ಥೆಗಳ ಕೂಗಿಗೆ ಬೆಲೆ ಬರುವುದು.