ಅಕ್ಷರವೆಂಬೆನೇ ಅಗ್ಗಳಿಕೆಯೆಂಜಲು

ಅಕ್ಷರವೆಂಬೆನೇ ಅಗ್ಗಳಿಕೆಯೆಂಜಲು

ಬರಹ

ಅಕ್ಷರವೆಂಬೆನೇ ಅಗ್ಗಳಿಕೆಯೆಂಜಲು

ಕಳೆದೊಂದೆರಡು ದಶಕಗಳಲ್ಲಿ ‘ಸಾಹಿತ್ಯ ಸಮ್ಮೇಳನಗಳಿಂದ ರಾಜಕಾರಣಿಗಳನ್ನು ದೂರವಿಡಬೇಕು’
ಎಂಬ ಕೂಗು ಕೇಳಿಬರುತ್ತಿರುವುದು ಸರ್ವವೇದ್ಯ. ‘ಹೌದು, ದೂರವಿಡಬೇಕು, ಅವರು ಅಲ್ಲಿಗೆ
ಸಲ್ಲದವರು’ ಮತ್ತು ‘ಯಾಕೆ ದೂರವಿಡಬೇಕು? ಅವರು ಕನ್ನಡಿಗರ ಪ್ರತಿನಿಧಿಗಳಲ್ಲವೇ?’
ಎಂಬಿತ್ಯಾದಿ ಉತ್ತರಗಳು ಸಹಜವಾಗಿಯೇ ಕೇಳಿಬಂದವು. ಈ ಬಾರಿ ಚಿತ್ರದುರ್ಗದಲ್ಲಿ ನಡೆದ
೭೫ನೆಯ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೇ ‘ಸಾಹಿತ್ಯಕ್ಕೆ ಸರಕಾರದಿಂದೇನೂ
ಆಗಬೇಕಾಗಿಲ್ಲ; ರಾಜಾಶ್ರಯ ಬೇಕಾಗಿಲ್ಲ; ರಾಜಕಾರಣಿಗಳನ್ನು, ಮಠಾಧೀಶರನ್ನು ದೂರವಿಡಿ’
ಎಂದು ಅಬ್ಬರಿಸಿದ್ದು ವಿಶೇಷವಾಗಿತ್ತು.

ಯಾರ್‍ಯಾರು ಯಾವ್ಯಾವ ವೇದಿಕೆಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ‘ಸಭಾಲಕ್ಷಣ’ದ, ಔಚಿತ್ಯದ
ಪ್ರಶ್ನೆ ಇದಾಗಿದ್ದರೆ ವಿಷಯ ಇಷ್ಟು ಕಗ್ಗಂಟಾಗುತ್ತಿರಲಿಲ್ಲ. ಹಾಗಿದ್ದಲ್ಲಿ ರಾಜಕಾರಣಿಗಳು ತಾವಾಗಿಯೇ
ದೂರವಿರುತ್ತಿದ್ದರು. (ಮಹಾರಾಷ್ಟ್ರದಲ್ಲಿ ಅಂತಹ ವಿದ್ಯಮಾನವಿದೆ; ಅದರರ್ಥ ಅಲ್ಲಿನ
ರಾಜಕಾರಣಿಗಳು ನಮ್ಮ ರಾಜಕಾರಣಿಗಳಿಗಿಂತ ಉತ್ತಮರೆಂದಲ್ಲ.) ಆದರೆ ನಮ್ಮಲ್ಲಿ ಅದು ವೇದಿಕೆಯ
ಔಚಿತ್ಯದ ವಿಷಯವಾಗಿಲ್ಲ; ಬದಲಿಗೆ ರಾಜಕಾರಣಿಗಳೆಂಬ ಅವಹೇಳನ, ಮತ್ಸರ, ತಾತ್ಸಾರವೇ
ಮುಖ್ಯ ಕಾರಣವಾಗಿದೆ. ಈ ಭರ್ತ್ಸನೆಯು ಗಣತಂತ್ರ ಮನೋಭಾವಪ್ರೇರಿತವಲ್ಲ. ‘ಜನಪ್ರತಿನಿಧಿ’
ಎಂಬುದು ಕೇವಲ ಪದನಾಮವಾಯಿತೇ ವಿನಹ ನಿಜವಾಗಲಿಲ್ಲ. ರಾಜ-ಮಹಾರಾಜ-ನವಾಬರ
ಸಿಂಹಾಸನದಲ್ಲಿ ಇವರನ್ನು ಕುಳ್ಳಿರಿಸಿದ್ದೇವೆ ಅಷ್ಟೆ. ಅವರನ್ನು ಬೇಡುವುದು, ಗಿಂಜುವುದು,
ಆರಾಧಿಸುವುದು, ದ್ವೇಷಿಸುವುದು ಎಲ್ಲವೂ ಸುಲಭ ನಮಗೆ. ಆದುದರಿಂದ ಅವರು ಇವ್ಯಾವುದಕ್ಕೂ
ಬಗ್ಗುವುದಿಲ್ಲ. ನಮ್ಮ ಸೋಲುಗಳೇ ಅವರ ಸುರಕ್ಷಾತಂತ್ರಗಳಾಗುತ್ತವೆ.

ಈ ಮೇಲುಸ್ತರದ ಪ್ರಜಾತಾಂತ್ರಿಕ ಸೋಲೆಂಬುದು ನಮ್ಮ ಅಕ್ಷರವಂತರು ಸೋಲಬೇಕಾದ ಎರಡು
ಸಮಾನಾಂತರ ಮಾರ್ಗಗಳನ್ನು ಜಗ್ಗಿ ಸಂಧಿಸುತ್ತದೆ. ಒಂದು ಸಮಾನಾಂತರ ಮಾರ್ಗವೆಂದರೆ,
(ಸಾಹಿತ್ಯ) ಪ್ರಕಾಶನವೆಂದರೆ ಅದೆಷ್ಟು ದೊಡ್ಡ ಉದ್ಯಮ ಎಂಬ ಕಲ್ಪನೆಯಿಲ್ಲದೆ (ಇದ್ದರೂ
ಜಾಣ್ಮೆಯಿಂದ ಮರೆತು) ‘ರಾಜಾಶ್ರಯ ಬೇಡ, ಸರಕಾರದ ಪಾಲುದಾರಿಕೆ ಬೇಡ’ ಎಂದು
ಹುಯಿಲೆಬ್ಬಿಸುವ ಪೆದ್ದುತನ. ಈ ಸಮ್ಮೇಳನ, ಅಧ್ಯ಼ಕ್ಷತೆ, ಪರಿಷತ್ತು, ಕೇಂದ್ರ ಗ್ರಂಥಾಲಯ,
ನೂರಾರು ಸರಕಾರಿ ಪ್ರಾಯೋಜಿತ ಪ್ರಶಸ್ತಿಗಳು, ಪ್ರಾಧಿಕಾರಗಳು, ಅಕಾಡೆಮಿಗಳೆಂದರೇನು?
ರಾಜಾಶ್ರಯವೇ ತಾನೆ? ೪೦ ಪುಟಗಳ ಕವನ ಸಂಕಲನವನ್ನು ಪ್ರಕಟಿಸಲಾಗದೆ ಅನುದಾನ,
ಸಹಾಯಧನ, ಪ್ರಾಯೋಜಕತ್ವ ಎಂದು ಅಂಡಲೆಯುವ ಕವಿವರ್ಯರೆಲ್ಲ ಹತ್ತಾರು ಕೋಟಿ ರೂಪಾಯಿಗಳ
ಅಗತ್ಯವಿರುವ ಸಾಹಿತ್ಯ ಸಮ್ಮೇಳನಕ್ಕೆ ‘ಸರಕಾರದ, ಮಠಗಳ ಅನುದಾನ ಬೇಡ, ರಾಜಕಾರಣಿಗಳು,
ಮಠಾಧೀಶರು ಬೇಡ’ ಎಂದು ಕೂಗಾಡುವುದು ಹಾಸ್ಯಾಸ್ಪದ. ಪುಸ್ತಕೋದ್ಯಮವೆಂಬುದು ಸಾಮಾನ್ಯರ
ಕಲ್ಪನೆಗೂ ನಿಲುಕದ ಅಸಂಖ್ಯ ಮುಖಗಳ, ಅಸಹಾಯಕ ಮುಖಹೇಡಿತನದ ದೊಡ್ಡ ಉದ್ಯಮ. ಕಾಗದ,
ಸಾಗಾಟ, ಪ್ರಕಟಣೆ, ಮುದ್ರಣ, ಖರೀದಿ, ಮಾರಾಟ, ವಿತರಣೆ ಎಲ್ಲವೂ ಮುಖವಿಲ್ಲದ
ಕಬಂಧಬಾಹುಗಳು. ‘ಇದೆ’ ಎಂದು ತಿಳಿಯುವ, ನಂಬುವ ‘ರಾಜಾಶ್ರಯ’ಕ್ಕೂ ಮುಖವಿಲ್ಲ.
ಧರಣಿಮಂಡಲ ಮಧ್ಯದೊಳಗೆ ಮೆರೆವ ಕರ್ಣಾಟ ದೇಶದೊಳಗೇ ವರ್ಷಕ್ಕೆ ಕೋಟಿಕೋಟಿ ಹುಡಿಹಾರಿಸುವ
ಉದ್ಯಮವಿದು. ತಾಲೂಕು-ಜಿಲ್ಲೆ-ರಾಜ್ಯ-ಅಖಿಲಭಾರತ-ವಿಶ್ವ ಕನ್ನಡ ಸಮ್ಮೇಳನಗಳು,
ಪುಸ್ತಕ ಬಿಡುಗಡೆ, ಪುಸ್ತಕ ವಿಮರ್ಶೆ ಇತ್ಯಾದಿಗಳು ಇನ್ನೊಂದು ದೊಡ್ಡ ಉದ್ಯಮ. ಇಂತಹ ದೊಡ್ಡ
ಉದ್ಯಮದೊಳಗೆ ರಾಜ್ಯಭಾರ ನಡೆಸುವ ಸರಕಾರಗಳು, ರಾಜಕೀಯ ಪಕ್ಷಗಳು, ಮಠಾಧೀಶರು
ಸೇರಿಕೊಳ್ಳಬಾರದು, ಸೇರಿಕೊಂಡಿಲ್ಲ ಎಂದರೆ ಅದು ಕಾರ್ಯಸಿಂಧುವಾದ ಮಾತಾಗುವುದಿಲ್ಲ,
ಆತ್ಮವಂಚನೆಯ ಮಾತಾಗುತ್ತದೆ. ಈ ಸಂಧಿಗ್ಧದಲ್ಲಿ ಕವಿಪುಂಗವರು ‘ನಿರ್ಬಿಢೆ’ಯಿಂದ ಸೋಲುತ್ತಾರೆ
ಎಂಬುದು ರಾಜಕಾರಣಿಗಳಿಗೆ, ಮಠಾಧೀಶರಿಗೆ ಸ್ಪಷ್ಟವಾಗಿ ತಿಳಿದಿರುವುದರಿಂದ ಇವರ ‘ಆಯಕಟ್ಟಿನ’
ಅರಚುವಿಕೆಯನ್ನು ಮುಗುಳ್ನಕ್ಕು/ಮುಗುಮ್ಮಾಗಿ ಸ್ವಾಗತಿಸಿ ಏನೂ ಆಗಿಲ್ಲವೆಂಬಂತೆ ಇವೆಲ್ಲದರಲ್ಲಿ ಅವರು
ಪಾಲ್ಗೊಳ್ಳುತ್ತಾರೆ.

ಕಳೆದ ಸಹಸ್ರಮಾನದ ಅಂತ್ಯದಲ್ಲಿ ಉಡುಪಿಯ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜಿನಲ್ಲಿ ಎರಡು ದಿನಗಳ
ರಾಷ್ಟ್ರಮಟ್ಟದ ವಿಚಾರಸಂಕಿರಣ ನಡೆದಿತ್ತು. ದೇಶಮಟ್ಟದ ಸಂಘಟನೆಗಳು, ವಿತ್ತೀಯ ಸಂಸ್ಥೆಗಳು
ಪ್ರಾಯೋಜಿಸಿದ್ದವು. ರಾಷ್ತ್ರೀಯ-ಅಂತಾರಾಷ್ಟ್ರೀಯ ಬುದ್ಧಿಜೀವಿಗಳು ಭಾಗವಹಿಸಿದ್ದರು. ವಿಷಯ
ಯಥಾಪ್ರಕಾರ ಅದೇ - ಭಾರತೀಯ ಸಂಸ್ಕೃತಿ, ಕೋಮುವಾದ, ಬಾಬರಿ ಮಸೀದಿ,
ಚೆಡ್ಡಿ... ಇತ್ಯಾದಿ. ರಾತ್ರಿ ಬಿ.ವಿ. ಕಾರಂತ ನಿರ್ದೇಶನದ ನೀನಾಸಂ ಆಡಿದ ಗೋಕುಲ
ನಿರ್ಗಮನ ಮತ್ತು ..... ನಾಟಕಗಳು. ಎರಡು ದಿನಗಳ ಕಾಲ ಉಡುಪಿಯ ಎಲ್ಲ ಮಠಾಧೀಶರೂ
ಸೇರಿದಂತೆ ಅಖಂಡ ಭಾರತದ ಸಮಸ್ತ ಕೋಮುವಾದಿಗಳನ್ನು ಸಿಗಿಸಿಗಿದು ತೋರಣ ಕಟ್ಟಿದರು. ಆ ಎರಡು
ದಿನಗಳ ಕಾಲ ಉಡುಪಿಯಲ್ಲಿ ಬೀಡುಬಿಟ್ಟಿದ್ದ ಬುದ್ಧಿಜೀವಿಗಳಿಗೆ, ನಾಟಕಕಾರರಿಗೆ, ಶ್ರೋತೃ-ಪ್ರೇಕ್ಷಕರಿಗೆ
ಊಟೋಪಚಾರಗಳನ್ನು ಪ್ರಾಯೋಜಿಸಿದವರು ಪೇಜಾವರ ಮತ್ತು ಶ್ರೀಕೃಷ್ಣ ಮಠ! ಎರಡು ದಿನಗಳ ಕಾಲ
ಎಲ್ಲರೂ ಗೋಕುಲದಲ್ಲಿ ಸುಖವಾಗಿ ತಿಂದುಂಡು ವಿಹರಿಸಿ ನಿರ್ಗಮಿಸಿದರು. ಯಾವ ಕೋಮುವಾದಿಯೂ
ಇವರನ್ನು ಪ್ರಶ್ನಿಸಲಿಲ್ಲ. ಆದರೆ ‘ನಮ್ಮ ಶರಾಬಿನ ಹಣ ಬೇಕು, ನಾವು ಮಾತ್ರ ರಾಜ್ಯಸಭೆಗೆ
ಬರಬಾರದಲ್ಲ?’ ಎಂದು ‘ಯು.ಬಿ’ ಮಲ್ಯರು ಎಸ್.ಎಂ ಕೃಷ್ಣರನ್ನು ಪ್ರಶ್ನಿಸಿದ್ದರು.

‘ಎಲ್‍ಬಿ’ಯವರು ಅಧ್ಯಕ್ಷರಾಗಬಾರದಿತ್ತು’ ಎಂದು ಒಬ್ಬ ಸ್ವಾಮೀಜಿ ಹೇಳಿಕೆಯಿತ್ತದ್ದಕ್ಕೆ ಕೀ.ರಂ ಅವರು
ಆಕ್ಷೇಪ ಎತ್ತುತ್ತಾರೆ. ಬಿಕ್ಷುಕ ಸ್ಥಾನದಲ್ಲಿ ನಿಂತಿರುವ ಕವಿಗಳು ಆ ಮಾತನ್ನು ಹೇಳುವ ಪೊಗರನ್ನು ತೋರಿದರೆ
‘ದಾನಿ’ಯ ಸ್ಥಾನದಲ್ಲಿ ನಿಂತವನು ಅದೆಷ್ಟು ಪೊಗರನ್ನು ತೋರಿಸಬೇಕು? ‘ಅದು ಅವರ ಹಣವಲ್ಲ;
ಜನರ ಹಣ, ತೆರಿಗೆದಾರನ ಹಣ’ ಎಂದು ಹೇಳಬಹುದು. ಆದರೆ ಅದನ್ನು ಪಡೆಯುವವರಾಗಲಿ,
ನೀಡುವವರಾಗಲಿ ಅದನ್ನು ಎಂದೂ ಹಾಗೆ ಪರಿಗಣಿಸಿದ್ದಿಲ್ಲ, ಪರಿಭಾವಿಸಿದ್ದಿಲ್ಲ. ಪ್ರತಿಪಕ್ಷದ
ಬಾಯಿಮುಚ್ಚಿಸಲು ಬರಿದೇ ಹೇಳಬಹುದಷ್ಟೆ.

ಅಕ್ಷರವಂತರು ಸೋಲುವ ಇನ್ನೊಂದು ಸಮಾನಾಂತರ ಮಾರ್ಗವೆಂದರೆ ಅಕ್ಷರ ಕಟ್ಟುವ ಅಮೂರ್ತಲೋಕವನ್ನು
ತಾರ್ಕಿಕ ಮತ್ತು ಅತಾರ್ಕಿಕ ಅತಿರೇಕಗಳಲ್ಲಿ ಗ್ರಹಿಸುವುದು, ಬಿಂಬಿಸುವುದು, ನಂಬುವುದು ಮತ್ತು
ನಂಬಿಸುವುದು. ‘ಅಕ್ಷರ’ ಎಂಬ ಶಬ್ಧವೇ ಎಂತಹ ಅಹಂಕಾರದಲ್ಲಿ ಹುಟ್ಟಿದ್ದಲ್ಲವೇ?! ಕ್ಷಯವಿಲ್ಲದ್ದು,
ನಾಶವಿಲ್ಲದ್ದು. ಈ ಮಹತ್ತಾದ ಅಹಂಕಾರವನ್ನು ಹೊರುವಷ್ಟು ದೊಡ್ಡವನೇ ಕವಿಮಹಾಶಯ?!

ಅಶಾಶ್ವತವೂ, ನಶ್ವರವೂ ಆದ ಜಗತ್ತಿನಲ್ಲಿ ‘ಅಕ್ಷರ’ವು ಹುಟ್ಟಿಸಿದ ಸಂಚಲನವು ಮಹತ್ತಾದದ್ದು. ಜಗತ್ತು
ಅದನ್ನು ನಂಬಿ ಅಕ್ಷರವಂತರನ್ನು ಉಚ್ಛ ಸ್ಥಾನದಲ್ಲಿ ಕುಳ್ಳಿರಿಸಿದ್ದು ವಾಸ್ತವ. ಈಗಂತೂ ಎಲ್ಲವನ್ನೂ
ಅನಂತಕಾಲದವರೆಗೆ ಜತನದಿಂದ ಕಾಪಿಡುವ ತಂತ್ರಜ್ಞಾನಗಳು ಬಂದಮೇಲೆ ಈ ಶಾಶ್ವತದ ಭ್ರಮೆ
ಅತಿರೇಕವಾಗಿದೆ. ಅದ್ಭುತವಾದ ಕಲ್ಪನಾಶಕ್ತಿಯಿರುವ ಪ್ರಾಣಿ ಮನುಷ್ಯ ಮಾತ್ರ. ಈ ಶಕ್ತಿ ಅಪರಿಮಿತವಾದದ್ದು
ಮತ್ತು ಅಮಿತವಾದ ಸಾಧ್ಯತೆವುಳ್ಳದ್ದು. ಅವುಗಳಲ್ಲಿ ಮುಖ್ಯವಾದದ್ದು ಅಮೂರ್ತ ಪ್ರಪಂಚಗಳನ್ನು ಸೃಷ್ಟಿಸುವ
ಶಕ್ತಿ. ಸಹಜವಾಗಿಯೇ ಮಾನವನ ಬುದ್ಧಿಭಾವಗಳು ಈ ಅಮೂರ್ತ ಪ್ರಪಂಚಗಳಿಗೆ ತಲೆಬಾಗುತ್ತವೆ.
ಎಲ್ಲರನ್ನೂ, ಎಲ್ಲವನ್ನೂ ಅಡಿಯಾಳಾಗಿಸುವ ಎರಡು ‘ದೊಡ್ಡ’ ಅಮೂರ್ತ ಪ್ರಪಂಚಗಳೆಂದರೆ ದೇವರು
ಮತ್ತು ಕಾವ್ಯ. ಇವುಗಳನ್ನು ಕಟ್ಟುವ ಅಕ್ಷರಗಳಿಗೆ ಸೋಲುವುದೇನು ವಿಶೇಷ?! ಇವುಗಳನ್ನು ಕಟ್ಟುವ
ನೀರ್ಗುಳ್ಳೆಗಳನ್ನು ಊದಿಬಿಡುವ ವ್ಯಕ್ತಿಗಳಿಗೆ ಸೋಲುವುದೇನು ವಿಶೇಷ?!

ಸೂರ್ಯಚಂದ್ರರಿರುವ ತನಕ ಅಕ್ಷರಕ್ಕೆ ಸಾವಿಲ್ಲ. ಆದುದರಿಂದ ನನ್ನ ಸಾಹಿತ್ಯ ಶಾಶ್ವತ. ತನ್ಮೂಲಕ
ನಾನು ಶಾಶ್ವತ ಎಂಬ ನಂಬುಗೆ. ಅಕ್ಷರ ಮತ್ತು ಪದ ವಿನ್ಯಾಸಗಳು ಕಟ್ಟುವ ಸಾಹಿತ್ಯ, ಅದರಲ್ಲಿ
ಬಿಂಬಿತವಾಗುವ ಮೌಲ್ಯಗಳು, ಸೌಂದರ್ಯಗಳು, ಸತ್ಯಗಳು, ಪ್ರತೀಕಗಳು... ಎಲ್ಲವೂ ತನ್ನ
ಸೃಷ್ಟಿಯೆಂಬ ಪುಳಕ. ಈ ಬೃಹತ್ತಾದ ಅಮೂರ್ತ ಪ್ರಪಂಚವನ್ನು ತಾನು ಹೊತ್ತಿದ್ದೇನೆ, ಹೆತ್ತಿದ್ದೇನೆ
ಎಂಬ ಅಹಂಕಾರವೇನೇ ಇರಲಿ, ಕವಿಯೆಂಬ ಕೇವಲ ಮನುಷ್ಯ ಅಷ್ಟು ದೊಡ್ಡವನೇನಲ್ಲ. ಈ ಅತಾರ್ಕಿಕ,
ಆರೋಪಿತ ದೊಡ್ಡತನವನ್ನು ಹೊರಲಾರದೆ ಆತ ಲೋಲುಪತೆಗೆ ಇಳಿಯುತ್ತಾನೆ. ಮಾನ-ಸಮ್ಮಾನ-
ಪ್ರಶಸ್ತಿ-ವೇದಿಕೆ-ಬಿರುದುಬಾವಲಿಗಳಿರಲಿ, ಈ ಜೀವನವೇ ನಶ್ವರ, ಕ್ಷಣಭಂಗುರವೆಂದು ಅಕ್ಷರಗಳಲ್ಲಿ
ಭಟ್ಟಿಯಿಳಿಸುವ ಕವಿಗಳು ಅವಕ್ಕೇ ಬಲಿಬೀಳುವ ಪರಿಯ ನಾನೆಂತು ಪೇಳ್ವೆನು! ಚಿರಂತನ ಸತ್ಯಗಳನ್ನು
ಕಂಡುಕೊಂಡ, ಸಾರ್ವಕಾಲಿಕ ಮೌಲ್ಯಗಳನ್ನು ಕಟ್ಟಿದ, ‘ಆನೆಕುದುರೆಪಟ್ಟವೆಲ್ಲ ಲೊಳಲೊಟ್ಟೆ’ ಎಂದು
ಹಾಡುವ ಕವಿಗಳೆಲ್ಲ ಹಾರಸ್ಮರಣಿಕೆಗಳಿಗಾಗಿ, ಮೈಕ್‍ಗಾಗಿ ಪೈಪೋಟಿ ನಡೆಸುವ, ವಶೀಲಿಮಾಡುವ,
ಜಗಳಾಡುವ, ಕೆಂಡಕಾರುವ ಪರಿಯೇನು! ಪ್ರಶಸ್ತಿವೇದಿಕೆಅನುದಾನಗಳಿಗಾಗಿ ಆತ ಗಿಂಜುವ,
ತೋರುವ ದೈನ್ಯತೆ ಯಾವ ಬಿಕ್ಷುಕನನ್ನೂ ನಾಚಿಸುತ್ತದೆ. ಅವುಗಳಿಗಾಗಿ ಆತ ನಡೆಸುವ ರಾಜಕೀಯಕ್ಕೆ
ಒಂದಲ್ಲ, ಹತ್ತು ಲಾಲು, ನೂರು ದೇವೇಗೌಡರು ಸಮನಲ್ಲ. (ಈ ಅಕ್ಷರಗಳು ಕಟ್ಟುವ ಮೌಲ್ಯಗಳು,
ಸತ್ಯಗಳು, ಪ್ರತೀಕಗಳು ಕವಿಯೆಂಬ ವ್ಯಕ್ತಿಯ ಅಂತರಾತ್ಮನ ರಕ್ಷಣೆಗೆ ಒದಗಿ ಬಂದ ನಿದರ್ಶನಗಳು
ಬೆರಳೆಣಿಕೆಯಲ್ಲಿರಬಹುದು ಅಷ್ಟೆ.) ಅದಕ್ಕೇ ಇರಬೇಕು, ಪ್ಲೇಟೋನ ಆದರ್ಶ ರಾಷ್ಟ್ರದಲ್ಲಿ ಕವಿಗಳಿಗೆ
ಜಾಗವಿಲ್ಲ! ಅದಕ್ಕೇ ಇರಬೇಕು, ‘ಕವಿಕಾವ್ಯಂ ವರ್ಜಯೇತ್’ ಎಂದಿದ್ದರು ನಮ್ಮ ಪೂರ್ವಸೂರಿಗಳು!

ಇನ್ನು, ಕವಿಗಳು ಅಕ್ಷರದ ಮೂಲಕ ಶಾಶ್ವತರಾಗಿಬಿಡುವ ವೈಚಿತ್ರ್ಯಕ್ಕೆ ಕರುಬಿ ‘ಲಕ್ಷ್ಮೀಪುತ್ರರಾಗಿ ಕೆಟ್ಟೆವು,
ಸರಸ್ವತೀಪುತ್ರರಾಗಬೇಕಿತ್ತು’ ಎಂದು ಹಲವು ಮಂದಿ ವ್ಯಾಪಾರಿಗಳು ತಮ್ಮ ಕೆಲಸಬಿಟ್ಟು ಸಾಹಿತ್ಯ
ಸಂಘಟನೆ-ಪೋಷಣೆಗಳಿಗೆ ಇಳಿದು ಸಂಕಟಪಡುವುದನ್ನು (ಕೊಡುವುದನ್ನು) ನೋಡುವುದೇ ಒಂದು
ಸಂಭ್ರಮ!

(ಸನ್ಯಾಸವನ್ನು ತಾರ್ಕಿಕ-ಅತಾರ್ಕಿಕ ಅತಿರೇಕಗಳಲ್ಲಿ, ಸ್ವರೂಪಗಳಲ್ಲಿ ಆವಾಹಿಸಿಕೊಂಡ ಯತಿಗಳು,
ಮಠಾಧೀಶರೆಲ್ಲ ಅದೆಂತಹ ಲೋಲುಪರು! ಪಾದಪೂಜೆ, ಅಡ್ಡಪಲ್ಲಕ್ಕಿ, ವೃಂದಾವನ, ತುಲಾಭಾರ,
ಕಿರೀಟ, ಸಿಂಹಾಸನ, ಸುವರ್ಣಸಂಪುಟ, ಶಾಲಾಕಾಲೇಜು, ಆಸ್ಪತ್ರೆ, ಮಡಿ, ಆಶೀರ್ವಚನ,
ಉದ್ಘಾಟನೆ, ಚಾತುರ್ಮಾಸ್ಯ, ಮೃಷ್ಠಾನ್ನ.... ಬಿಟ್ಟೆವೆಂದವರು ಹಿಡಿದದ್ದು ಮತ್ತೂ ಗಟ್ಟಿಯಾಗಿ.
ನನ್ನ ಜೀವನದಲ್ಲಿ ಅದೆಷ್ಟು ಮಂದಿ ಸನ್ಯಾಸಿಗಳನ್ನು ಕಂಡಿದ್ದೇನೆ. ಅವರಲ್ಲಿ ಕಾವಿವಸನಧಾರಿ ಒಬ್ಬನನ್ನೂ
ಕಾಣೆ!)

ಒಂದೊಂದು ಸಮ್ಮೇಳನ ನಿಗದಿಯಾದ ಕೂಡಲೇ ಸಂಘಟಕರ, ಸ್ಥಳೀಯ ಪುಡಾರಿಗಳ ಮನೆಯ ಮೆಟ್ಟುಕಲ್ಲು
ಕವಿಗಳ ಪಾದದೂಳಿಯಿಂದ ಸವೆಯುತ್ತದೆ, ಕರೆಮಹಾಪೂರದಿಂದ ಫೋನ್ ನರಳುತ್ತದೆ. ಆ ಮಾರ್ಗದ
ಬಸ್ಸುರಿಕ್ಷಾಗಳಿಗೆ ಸುಗ್ಗಿ. ಅಂತರಾಷ್ಟ್ರೀಯ ಪ್ರಶಸ್ತಿಯೊಂದರ ಮಾನದಂಡವಾಗಿ ಪರಿಸರ, ಸಾಮಾಜಿಕ
ಚಳುವಳಿಗಳಲ್ಲಿ ಭಾಗವಹಿಸಿದ ‘ಕುರುಹು’ ಬೇಕಿತ್ತಂತೆ. ಅದನ್ನು ಕೇಳಿದ್ದೇ ತಡ, ನಮ್ಮ
‘ಅಂತರಾಷ್ಟ್ರೀಯ’ ಕನ್ನಡ ಕವಿಯೊಬ್ಬರು ‘ಜಟ್‍ಪಟ್’ ಪರಿಸರವಾದಿಗಳಾಗಿ ‘ತುಂಗಾ ಉಳಿಸಿ’
ಅಭಿಯಾನಕ್ಕೆ ಧುಮುಕಿದರು. ಪ್ರಶಸ್ತಿ ಪರರ ಪಾಲಾಯಿತು. ಇವರು ತುಂಗೆಗೆ ಎಳ್ಳುನೀರು ಬಿಟ್ಟು ದಡ
ಹತ್ತಿದರು. ಇವರನ್ನು ನಂಬಿ ತುಂಗೆಗೆ ಇಳಿದ ಪರಿಸರವಾದಿಗಳು ಅಲ್ಲಿಯೇ ಬಾಕಿ!

ಅಭಿನವ ‘ನೃಪತುಂಗ’ರ ಕೈಯಲ್ಲಿ ಶಾಯಿಯಿಲ್ಲದ ಪೆನ್ನುಕೊಟ್ಟು, ಕವಿರಾಜಮಾರ್ಗದಲ್ಲಿ ನಿಲ್ಲಿಸಿ ಕಾಸುಕುರ್ಚಿ
ಗಿಟ್ಟಿಸಿಕೊಂಡ ಶ್ರೀವಿಜಯರದೆಷ್ಟು ಮಂದಿ! ಈ ಕವಿರಾಜಮಾರ್ಗದ ಇಕ್ಕೆಲಗಳಲ್ಲಿ ವಿಮರ್ಶೆಯ ತಂಪು ನೆರಳನ್ನು
ಹರಡಿ ಕೂತ (ಪಕ್ಕದಲ್ಲಿ ಟವೆಲ್!) ಉರಿಯ ನಾಲಗೆಯ ವಿಮರ್ಶಕರದೆಷ್ಟು ಮಂದಿ! ನಿರಕ್ಷರಕುಕ್ಷಿಗಳ
ಹೆಸರಲ್ಲಿ ಬರೆದು ಯಾರ್‍ಯಾರಿಗೋ ಮುಸುಕಿನ ಗುದ್ದುಕೊಟ್ಟ ಕವಿಗಳೆದೆಷ್ಟು ಮಂದಿ!

ಅಧಿಕಾರ, ಹಣ, ಜಾತಿ-ಮತೀಯತೆ, ತೋಳ್ಬಲ ಇತ್ಯಾದಿಗಳಿಗೆ ಕವಿ-ಬುದ್ಧಿಜೀವಿಗಳು ಮಣೆಹಾಕಿದಷ್ಟು
ಮತ್ಯಾರೂ ಹಾಕುವುದಿಲ್ಲ. ಮಂತ್ರಿಮಾಗಧರಿರಲಿ, ಸಾಮಾನ್ಯ ಅಧಿಕಾರಿಗಳನ್ನೂ ಅವರು ‘ತೂಗಿ’
ನೋಡುತ್ತಾರೆ. ಒಂದು ಸರಕಾರಿ ಕಛೇರಿ ಹೊಕ್ಕರೆ ಯಾವ ಮೇಜಿಗೆ ಗಾಜಿನ ಹೊದಿಕೆಯಿದೆ; ಅದರ ಮೇಲೆ
ಎಷ್ಟು ಫೈಲು, ಪೋನ್‍ಗಳಿವೆ; ಯಾರ್‍ಯಾರಿಗೆ ಹಸಿರು-ಕೆಂಪು ಪೆನ್ನುಗಳಿವೆ; ಯಾವ್ಯಾವ ಕುರ್ಚಿಗೆ
ಎಷ್ಟು ಅಧಿಕಾರ; ಯಾರನ್ನು ಮಾತನಾಡಿಸಿದರೆ ತೂಕ ಹೆಚ್ಚು; ಯಾರು ಅಧಿಕಾರದಲ್ಲಿದ್ದಾಗ
ಯಾರ್‍ಯಾರನ್ನು ಕಾಣಬಾರದು; ಯಾರ್‍ಯಾರಿಗೆ ‘ಪದನಾಮ’ಗಳನ್ನು ಮೀರಿದ ಅಡ್ಡ
ಅಧಿಕಾರಗಳಿವೆ... ಇವೆಲ್ಲವನ್ನು ಅವರು ಕ್ಷಣಮಾತ್ರದಲ್ಲಿ ಗ್ರಹಿಸಬಲ್ಲರು.

ಜಾತಿರಾಜಕಾರಣವನ್ನು ವೃತ್ತಿನಿರತ ರಾಜಕಾರಣಿಗಳಿಗೆ ಕಲಿಸಿದವರೇ ಈ ಪ್ರವೃತ್ತಿನಿರತರು. ಅಕಾಡೆಮಿ,
ಪರಿಷತ್, ಸಮ್ಮೇಳನ, ಪ್ರಶಸ್ತಿ ಇತ್ಯಾದಿಗಳು ರಾಜಕೀಯ ಚುನಾವಣೆಯ ಕಣಗಳಿಗಿಂತ ಮೊದಲು
ಜಾತಿಪ್ರಾತಿನಿಧ್ಯದ ರಿವಾಜನ್ನು ತಂದವು. ವೀರಶೈವ ಮಠಗಳು ಸಮ್ಮೇಳನಕ್ಕೆ ಅನ್ನ ಕೊಡಲಿ ಎಂದೇ
ಈ ಬಾರಿ ಎಲ್‍ಬಿಯವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು! ಹಲವು ಸಂದರ್ಭಗಳಲ್ಲಿ ಸಮ್ಮೇಳನಾಧ್ಯಕ್ಷರು
ಆ ಮನೋಭಾವದವರಲ್ಲವಾದರೂ ಅವರ ಆಯ್ಕೆಗೆ ಅದೇ ಮಾನದಂಡವಾದದ್ದುಂಟು. (ಪುನರೂರರು
ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುವ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಯೋರ್ವರು ‘ಕನ್ನಡ ಸಾಹಿತ್ಯಕ್ಕೆ
ಬ್ರಾಹ್ಮಣರ ಕೊಡುಗೆ ಮಹತ್ತರವಾದುದು; ಇತರರದ್ದು ಗೌಣ’ ಎಂಬರ್ಥದ ಮಾತುಗಳನ್ನಾಡಿದರು.
ಮೊನ್ನಿನ ಸಮ್ಮೇಳನಾಧ್ಯಕ್ಷರು ‘ಬ್ರಾಹ್ಮಣರು ಏನೂ ಮಾಡಿಲ್ಲ’ ಎಂದಾಡಿದರು. ಮೂರ್ಖತನದಲ್ಲಿ
ಸಮಾನರಾಗುವ ತವಕ! ‘ಏನಾದರೂ’ ಮಾಡಲು ಜಾತಿಯ ಹಣೆಬರಹವನ್ನು ಅಂಟಿಸಿಕೊಂಡು
ಬರಬೇಕೆ?) ಜಾತೀಯತೆ ಮತ್ತು ಅಸ್ಪ್ರಶ್ಯತೆಗಳಿಗೆ ಸಂಬಂಧಿಸಿದಂತೆ ತಾರತಮ್ಯದ ಏಣಿಯಲ್ಲಿ ಮೇಲಿರುವ
ಬ್ರಾಹ್ಮಣರ ನೈತಿಕ ಹೊಣೆಗಾರಿಕೆ ಶೇಕಡಾವಾರು ಹೆಚ್ಚೆಂಬುದು ಸರಿ. ಅವರಿಗದನ್ನು ಅರ್ಥ ಮಾಡಿಸುವ
ಬಗೆ ಇದಂತೂ ಅಲ್ಲ! ಬ್ರಾಹ್ಮಣರನ್ನು, ಮಠಾಧೀಶರನ್ನು ಹಣಿಯಲು ಎಲ್‍ಬಿಯವರು ಮೌಖಿಕ ಮತ್ತು
ಬರಹ ಮಾರ್ಗಗಳೆರಡರ ಲಕ್ಷಣಗಳನ್ನು ಮೇಳೈಸಿಕೊಂಡ ಒಂದು ಅಪೂರ್ವ ಕೃತಿ ‘ಕುಸುಮಬಾಲೆ’ಯನ್ನು
ಝಳಪಿಸುತ್ತಾರೆ! ಕೆಂಪುಕೋಟೆಯ ಮೇಲಿಂದ ವೀಪಿಸಿಂಗರು ಭಾರತದ ನೂರುಕೋಟಿ ಕೋಮುವಾದಿಗಳ
ವಿರುದ್ಧ ‘ಬಕ್ರೀದ್’ ರಜೆಯನ್ನು ಬೀಸಿದಂತೆ!

ನಾಡು-ನುಡಿಯ ರಕ್ಷಣೆಯ ಬಗ್ಗೆ ಪುಂಖಾನುಪುಂಖ ಮಾತನಾಡುವ ಕವಿಸಾಹಿತಿಗಳನ್ನು ಹೇಗೆ ನಂಬಬೇಕು?
ಮಾತೃಭಾಷಾ ಶಿಕ್ಷಣದ ಮಾತು ಬಂದಾಗಲೆಲ್ಲಾ ಆಂಗ್ಲಭಾಷಾ ಮಾಧ್ಯಮ ಶಾಲೆಗಳನ್ನು ನಡೆಸಿ ಸುಲಿಗೆ ನಡೆಸುವ
ಭಾಷಾ-ಮತೀಯ ಅಲ್ಪಸಂಖ್ಯಾಕರ ಪಕ್ಷವಹಿಸಿ ‘ಕೃತಾರ್ಥ’ರಾಗುವವರು ಇವರೇ. ಸಹ್ಯಾದ್ರಿಯ
ಇಕ್ಕೆಲಗಳಲ್ಲಿ ಬೀಡುಬಿಟ್ಟು ರಬ್ಬರ್-ಗಾಂಜಾ-ಶುಂಠಿ-ಸಿಂಟಿನೆಲ್ಲಾಹುಲ್ಲು ಬೆಳೆಸುವ ಅಕ್ರಮ ವಲಸಿಗರು ಅನ್ನ,
ಆಶ್ರಯ, ಹಣ ನೀಡಿ ‘ನಕ್ಸಲ್’ ಎಂಬ ಗುಮ್ಮನನ್ನು ಪೋಷಿಸಿ ಸ್ಥಳೀಯರು ಆಸ್ತಿಪಾಸ್ತಿ ಮಾರಿಹೋಗುವಂತೆ
ಮಾಡುವುದು ಹಗಲುಬೆಳಕಿನಷ್ಟು ನಿಚ್ಛಳವಾದ ಸತ್ಯವಾದರೂ ಕನ್ನಡ ಕವಿಗಳು ಮತ್ತು ಬುದ್ಧಿಜೀವಿಗಳು ಈ
ನಕ್ಸಲರನ್ನು ನಮ್ಮ ಬಿಡುಗಡೆಗೆ ಬಂದ ಕಲ್ಕಿಭಗವಾನರೆಂದೇ ಹೇಳುತ್ತಿದ್ದಾರೆ. ಪ್ರಪಂಚದ ಒಂದು ಅತಿದೊಡ್ಡ
ಮತೀಯ-ರಾಜಕೀಯ ಹುನ್ನಾರವಾದ ಬಾಂಗ್ಲಾದೇಶೀಯರ ಅಕ್ರಮವಲಸೆಯನ್ನು ಇದುವರೆಗೆ ಯಾವ
ರಾಜಕೀಯ ಪಕ್ಷವೂ ‘ಮಾತಿನಲ್ಲಿ’ ಸಮರ್ಥಿಸಿಕೊಂಡದ್ದಿಲ್ಲ, ಲಾಭ ಮಾಡಿಕೊಂಡದ್ದುಂಟು.
‘ಬರಲಿ ಬಿಡಿ, ಹೊಟ್ಟೆಪಾಡಿಗೆ ಬರುತ್ತಾರೆ, ಬಡವರು’ ಎಂದು ಕನ್ನಡದ ಖ್ಯಾತ ವಿಮರ್ಶಕ
ಜಿ. ರಾಜಶೇಖರರು ಬಿ.ವಿ. ಕಕ್ಕಿಲ್ಲಾಯರ ಜನ್ಮದಿನಾಚರಣೆಯ ಶುಭಸಂದರ್ಭದಲ್ಲಿ ಘೋಷಿಸಿದ್ದರು.
ಕುಡಿತ, ವ್ಯಭಿಚಾರಗಳನ್ನು ವ್ಯಕ್ತಿಸ್ವಾತಂತ್ರ್ಯ, ಮುಕ್ತಸಮಾಜ ಎನ್ನುವವರು ಕವಿವಿಮರ್ಶಕರು ಮಾತ್ರ.
ತಮಗೆ ವೇದಿಕೆ ಸಿಕ್ಕಿದರೆ ಮಾತ್ರ ಕನ್ನಡಮ್ಮನ ಮನೆಕಡೆಗೆ ತಲೆಹಾಕುವವರು ಇವರು. ಶಾಸ್ತ್ರೀಯ
ಸ್ಥಾನಮಾನವೂ ಅಷ್ಟೆ. ಅದೇನೂ ಕನ್ನಡಮ್ಮನ ಉದ್ಧಾರಕ್ಕಲ್ಲ. ಅಧ್ಯಯನಕೇಂದ್ರಗಳು, ವಿವಿಗಳು,
ಪೀಠಗಳೆಂದು ಗಾಳಹಾಕಿ ಕೂತಿದ್ದಾರೆ ಅನುದಾನಕ್ಕಾಗಿ! ಸಂಸ್ಕೃತಿ, ಪರಂಪರೆಯೆಂದು ಹಾಡುವ,
ಜನಪದ-ಸಂಸ್ಕೃತಿ-ಸಾಹಿತ್ಯ ಸಂಶೋಧನೆಯೆಂದು ಪದವಿ ಉದ್ಯೋಗ ಪಡೆದು (ಇವರಿಗೆ
ಸಹಾಯಮಾಡಿದ ಜನಪದ ಕಲಾವಿದರಿಗೆ ತುಂಡುಬೀಡಿ ಕಾಸುಕೊಟ್ಟು), ಕೊನೆಗೆ ಇವೆಲ್ಲವನ್ನೂ
ನುಂಗಿನೊಣೆಯುವ ಸಮಿಟಿಕ್ ವರ್ತಕರನ್ನು ‘ಉಘೇ ಉಘೇ’ ಎಂದು ಸ್ವಾಗತಿಸಿ
ವಿಶ್ವಮಾನವರಾಗುವವರು ಇವರ್‍ಏ.

ಹೀಗೆ, ಅಕ್ಷರಲೋಕ ಯಾವ ಸ್ಥಿತಿಯಲ್ಲಿದೆ ಎಂದರೆ ನಾಳೆದಿನ ನಾಡು-ನುಡಿಯ ರಕ್ಷಣೆಗಾಗಿ ಮಹತ್ತರ
ನಿರ್ಣಯಗಳನ್ನು ಕೈಗೊಳ್ಳುವುದಾದರೆ ರಾಜ್ಯಾಡಳಿತವು ಈ ಕವಿ-ವಿಮರ್ಶಕ-ಬರಹಗಾರರನ್ನು ಹೊರಗಿಟ್ಟೇ
ಕಾರ್ಯಪ್ರವೃತ್ತವಾಗಬೇಕಾಗಿದೆ. (ಅರೆಕಾಲಿಕ ಬರಹಗಾರನಾದ ನನ್ನನ್ನು ಆ ಪಟ್ಟಿಯಲ್ಲಿ ಸೇರಿಸಲು ಅಡ್ಡಿಯಿಲ್ಲ.)

___________________________________________

ದೇವು ಹನೆಹಳ್ಳಿ

ದಿನಾಂಕ 28-2-2009, ಶನಿವಾರದಂದು ಕನ್ನಡಪ್ರಭ ದಿನಪತ್ರಿಕೆಯಲ್ಲಿ
ಪ್ರಕಟವಾದ ಲೇಖನ.