ಅಕ್ಷರ

ಅಕ್ಷರ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಪ್ರೊ. ಒ ಎನ್ ವಿ ಕುರುಪ್, ಕನ್ನಡಕ್ಕೆ: ಡಾ. ಸುಷ್ಮಾ ಶಂಕರ್
ಪ್ರಕಾಶಕರು
ದ್ರಾವಿಡಿಯಂ ಪಬ್ಲಿಕೇಷನ್ಸ್,
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೩

ಜ್ಞಾನಪೀಠ ಪುರಸ್ಕೃತ ಮಲಯಾಳಂ ಕವಿ ಪ್ರೊ.ಒ ಎನ್ ವಿ ಕುರುಪ್ ಅವರು ಬರೆದ ಕೃತಿಯನ್ನು ‘ಅಕ್ಷರ' ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಸುಷ್ಮಾ ಶಂಕರ್. ಈ ೧೦೨ ಪುಟಗಳ ಪುಟ್ಟ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಡಾ. ಚಂದ್ರಶೇಖರ ಕಂಬಾ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...  

“ಸಣ್ಣ ಸಣ್ಣ ವಿವರಗಳಲ್ಲಿಯೇ ರೂಪಕಗಳನ್ನು ಹೆಣೆಯುತ್ತ ಕವನ ಕಟ್ಟುವ ಅಪರೂಪದ ಕಲೆ ಶ್ರೀ ಒ.ಎನ್. ವಿ ಕುರುಪ್ ಅವರ ವಿಶಿಷ್ಟ ಕಲೆ. ಇದಕ್ಕೆ "ಅಕ್ಷರ" ಎಂಬ ಈ ಸಂಕಲನದ 'ಅಕ್ಷರ', 'ಸಣ್ಣದುಃಖ', 'ಸ್ನೇಹ ಎಂಬ ಭಾರ', 'ಒಂದು ಹಳೆಯ ಹಾಡು', 'ಸತ್ತಬೇರುಗಳು', 'ಹಸ್ತಲಾಘವ', 'ಫೀನಿಕ್ಸ್' ಒಳ್ಳೆಯ ಉದಾಹರಣೆಗಳು. ವರ್ಷಗಳ ಪರಿಚಯ ಹಾಗೂ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾದ ಮಲಯಾಳದ ಶ್ರೇಷ್ಠ ಕವಿ ಶ್ರೀ ಒ. ಎನ್. ವಿ ಕುರುಪ್ ಅವರೊಂದಿಗೆ ಹಲವಾರು ವೇದಿಕೆಗಳಲ್ಲಿ ಕಾವ್ಯಗೋಷ್ಠಿ ಹಾಗೂ ಕಾವ್ಯ ಚರ್ಚೆಗಳಲ್ಲಿ ಭಾಗವಹಿಸಿದ್ದೇನೆ. ಅವರ ಕಾವ್ಯ ನಿಷ್ಠೆ ಹಾಗೂ ಸಾಮಾಜಿಕ ಕಳಕಳಿ ಮೆಚ್ಚತಕ್ಕದ್ದು. ಸಮಾಜದ ಯಾವುದೇ ಕ್ಷೇತ್ರದ ಕುಂದುಕೊರತೆಗಳನ್ನು ಲೋಪದೋಷಗಳನ್ನು ನೇರವಾಗಿ ಅವರ ಕಾವ್ಯದ ಮುಖೇನ ಹೇಳುತ್ತಿದ್ದಾರೆ.

ಮಕ್ಕಳ ಕಥೆಗಳು, ಜನಪದ ಕಥೆಗಳೆಂದರೆ ನನಗೆ ಬಹಳ ಇಷ್ಟ. ಕಥೆಗಳು ಹೇಳಲು ಹಾಗೂ ಕೇಳಲು ದೊರೆಯುವ ಸಮಯವೆಲ್ಲವನ್ನೂ ಸದುಪಯೋಗ ಮಾಡಿಕೊಳ್ಳಬೇಕು ಎಂಬುದು ನನ್ನ ಆಶಯ. ಇಂದಿನ ಮಕ್ಕಳಿಗೂ ಬರಹಗಾರರಿಗೂ ನಾನು ಹೇಳುವುದು ಅದನ್ನೆ. ಕಥೆಗಳನ್ನು ಕೇಳುತ್ತಾ ತನ್ನ ಮನಸ್ಸಿನಲ್ಲಿ ಹೊಸ ಭಾವನೆ ಅರಳುತ್ತದೆ, ಕಲ್ಪನಾಲೋಕ ವಿಕಾಸಗೊಳ್ಳುತ್ತದೆ. ಆದರೆ ದುರಾದೃಷ್ಟವೇನೆಂದರೆ ಇಂದು ಕಥೆ ಹೇಳುವವರು ಮತ್ತು ಕೇಳುವವರು ತೀರ ಇಲ್ಲದಂತಾಗಿದೆ.

ಒ. ಎನ್. ವಿ ಕುರುಪ್ ಅವರ ಕವನಗಳು ನನಗೆ ಬಹಳ ಇಷ್ಟ. ಏಕೆಂದರೆ ಅವರ ಹೆಚ್ಚು ಕವಿತೆಗಳಲ್ಲೂ ಮುಖ್ಯವಾಗಿ ನೀಳ್ಗವಿತೆಗಳೆಲ್ಲದರಲ್ಲಿ ಒಂದು ಕಥೆ ಇರುತ್ತದೆ. ಉದಾಹರಣೆಗೆ "ಕುಂಜ್ಞೇಡತ್ತಿ " (ಸಣ್ಣಕ್ಕ), “ಕೋತಂಪು ಮಣಿಕಳ್” (ಗೋಧಿಕಾಳುಗಳು), "ಸ್ವಯಂವರಂ" (ಸ್ವಯಂವರ) ಮುಂತಾದವುಗಳು. ಶ್ರೀಯುತ ಒ. ಎನ್. ವಿ ಕುರುಪ್ ಅವರನ್ನು 'ಲೋಕ ಕವಿ' ಎಂದು ಹೇಳಬಹುದು. ಏಕೆಂದರೆ ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ಆಂಗ್ಲ, ಜರ್ಮನ್, ಚೈನೀಸ್, ಜಾಪನೀಸ್ ಮುಂತಾದ ಭಾಷೆಗಳಲ್ಲಿ ಇವರ ಕವನಗಳು ಭಾಷಾಂತರಗೊಂಡಿದೆ ಎಂಬುದರಲ್ಲಿ ಭಾರತೀಯನಾಗಿ ನಾನು ಹೆಮ್ಮೆಪಡುತ್ತೇನೆ.

೧೯೭೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕೃತಿ "ಅಕ್ಷರಂ" (ಅಕ್ಷರ). ಸುಮಾರು ನಾಲ್ಕು ದಶಕಗಳ ಹಿಂದೆಯೇ ಈ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದರೆ ಅವರ ಕಾವ್ಯ ಜ್ಞಾನದ ವ್ಯಾಪ್ತಿ ನಾವು ಊಹಿಸಬಹುದು. 'ಅಕ್ಷರ'ದಲ್ಲಿ ಇಪ್ಪತ್ತು ಕವನಗಳಿದ್ದರು ಕೆಲವನ್ನು ಕುರಿತು ಇಲ್ಲಿ ಹೇಳುತ್ತೇನೆ. 'ಸಣ್ಣದುಃಖ' ಎಂಬ ಕವನದಲ್ಲಿ,

"ಕಂಬನಿ ಚಿಮ್ಮಿದೆ ಮಗು -
ವಿನ ಕಂಗಳಲ್ಲಿ ಈ -
ಮಧ್ಯಾನದುಪವಾಸ
ಎಂಬ ದುಃಖವಲ್ಲ!
ಊಟದ ಡಬ್ಬಿಯಿಂದ
ಬಿದ್ದ ತಂಗಳು ರಾಗಿ
ಮುದ್ದೆಯನ್ನೆಲ್ಲರೂ
ಕಂಡರಲ್ಲಾ ಎಂದು."

ಇಲ್ಲಿ ಮಗುವಿಗೆ ಉಂಟಾದ ದುಃಖ ಹೃದಯಸ್ಪರ್ಶಿಯಾಗಿದೆ. ಇಂದಿನ ಆಡಂಬರದ ಬದುಕಿನಲ್ಲಿ ವಿಧ ವಿಧವಾದ ಬಣ್ಣದ ಡಬ್ಬಿಗಳಲ್ಲಿ ಮೃಷ್ಟಾನ್ನ ಭೋಜನ ತೆಗೆದುಕೊಂಡು ಶಾಲೆಗೆ ಹೋದರು ವಿದ್ಯೆ ಕಲಿಯಬೇಕು ಎಂಬ ಆಲೋಚನೆ ಎಷ್ಟೋ ಮಕ್ಕಳಲ್ಲಿ ಇಲ್ಲ. ಪ್ರತಿಯೊಂದು ಸಮಾಜಿಕ ಪಿಡುಗಿನ ನಿವಾರಣೆಗೆ ಒಂದೇ ಮಾರ್ಗವೆಂದರೆ ವಿದ್ಯೆ ಅಥವಾ ಜ್ಞಾನವನ್ನು ಸಂಪಾದಿಸುವುದು. ಅಂತಹ ದಾರಿಗೆ ಅಡ್ಡಬರುವುದು ಬಡತನ. ಆ ಬಡತನವನ್ನೂ ಎದುರಿಸಿ ತಂಗಳ ರಾಗಿ ಮುದ್ದೆಯನ್ನು ಡಬ್ಬಿಯಲ್ಲಿ ತಂದಿದ್ದ ಬಾಲಕಿಯನ್ನು ಶ್ರೀ ಒ. ಎನ್. ವಿ ಕುರುಪ್ ರವರು ಬಹಳ ಮನೋಹರವಾಗಿ ಚಿತ್ರಿಸಿದ್ದಾರೆ. ಪ್ರತಿಯೊಂದು ಮಗುವಿನ ಹಕ್ಕು 'ವಿದ್ಯೆ ಪಡೆಯುವುದು' ಎಂಬುದು ಪರೋಕ್ಷವಾಗಿ ಸಾರುವುದರೊಂದಿಗೆ ಬಡತನದಲ್ಲೂ ವಿದ್ಯೆ ಪಡೆಯಲು ಒದ್ದಾಡುವ ಅನೇಕ ಮಂದಿಗೆ ಇದು ಪ್ರೋತ್ಸಾಹವು ಆಗುತ್ತದೆ.

ಪಕ್ಷಿಗಳ ಸಾನಿಧ್ಯವಿರುವ ಕವನಗಳು ಒ. ಎನ್. ವಿ ಕುರುಪ್‌ರವರ ಪ್ರತಿಯೊಂದು ಸಂಕಲನದಲ್ಲೂ ಇದ್ದೇ ಇರುತ್ತದೆ. ಈ ಕವನ ಸಂಕಲನದಲ್ಲಿ ಅಂತಹ ಒಂದು ಕವಿತೆ 'ಫೀನಿಕ್ಸ್' ಎಂತಹ ದುರಂತದ ಸಂದರ್ಭದಲ್ಲೂ ಆತ್ಮಸ್ಥೆರ್ಯ ತುಂಬುವ ಕವನ 'ಫೀನಿಕ್ಸ್'.

"ಚಿತೆಯಿಂದ ನಾನು ಮತ್ತೆ
ಮೇಲಕ್ಕೇರುವೆ
ರೆಕ್ಕೆಗಳು ಹೂಗಳಂತೆ
ಅರಳಿಸಿಯೆದ್ದೇರುವೆ!”

ಮರುಭೂಮಿಯಲ್ಲಿ ಸ್ವಯ ದಹಿಸಿಹೋದ ಬೂದಿಯಿಂದ ಪೌರಾಣಿಕ ಪಕ್ಷಿ ತನಲ್ಲಿ ಹಿಂದೆ ಶಕ್ತಿಗಿಂತ ಶಕ್ತಿಯುತವಾಗಿ ಮತ್ತೆ ಎದ್ದೇಳುತ್ತದೆ. ನಾಶದಿಂದ ಅನಶ್ವರತೆಗೆ ಗುರಿಯಿಡುವ ಮನುಷ್ಯನ ಅಭಿಲಾಷೆಯ ಉತ್ತಮ ಪ್ರತೀಕ 'ಫೀನಿಕ್ಸ್' ಕವನ.

ಕವಿಗಳೆಂದ ಮೇಲೆ ಅಕ್ಷರ, ಭಾಷೆ, ಸಾಹಿತ್ಯವನ್ನು ಕೊಂಡಾಡದವರು ಯಾರೂ ಇಲ್ಲ. ಆದರೆ ಒ. ಎನ್. ವಿಯವರ 'ಅಕ್ಷರ' ಎಂಬ ಕವನ ವ್ಯತ್ಯಸ್ತವಾಗಿ ಪ್ರತಿಭಿಂಬಿಸುತ್ತದೆ.

ನಾನಕ್ಷರಾತ್ಮವಾಗಿ"-

ಇಂದು ನಿನ್ನನ್ನು ನನ್ನ ಹೃದಯವಾಗಿಸಿ,
ಹೃತ್ಪದ್ಮವಾಗಿ ರಾಗ, ಪರಮತತ್ವವನ್ನಾಗಿ - ಸೌಂದರ್ಯವಾದಂತೆ!

ನೀನೇ ಅಲ್ಲವೇ ನಾನು! ಅಕ್ಷರ!

ಮೋಹಭಂಗ, ನಿಷ್ಪಲತಾ ಪ್ರಜ್ಞೆ, ಸರ್ವನಿಷೇಧ, ಅಸ್ತಿತ್ವ ದುಃಖ, ಮೃತ್ಯು ಭಯ ಮುಂತಾದವು ಇಂದು ಸಾಂಕ್ರಾಮಿಕ ರೋಗಗಳಂತೆ ಹಲವರನ್ನು ಹಿಡಿದಿರುವ ಭ್ರಮೆಗಳು. ಆದರೆ ಈ ಯಾವುದೇ ಭಾವಗಳು ಒ. ಎನ್. ವಿಯಲ್ಲಿ ಕಾಣುತ್ತಿಲ್ಲ ಎಂಬುದಕ್ಕೆ 'ನಿಶಾಗಂಧಿ ನೀಯೆತ್ರ ಧನ್ಯ' ಎಂಬ ಕವನ ಉತ್ತಮ ಉದಾಹರಣೆಯಾಗಿದೆ.

'ಹಳೆಯ ಹಾಡು', 'ಅಂತರ್ಧಾರೆಗಳು', 'ಸತ್ತ ಬೇರುಗಳು', 'ಹಸ್ತಲಾಘವ' ಮುಂತಾದ ಕವನಗಳ ಆಶಯ ಬಹಳಷ್ಟು ಹೃದ್ಯವಾಗಿದೆ. 'ಭೂಮಿಗೊಂದು ಚರಮಗೀತೆ' ಹಾಗೂ 'ಅಕ್ಷರ' ಕವನಸಂಕಲನಗಳಲ್ಲಿರುವ ಕವನಗಳನ್ನು ಹೊರತುಪಡಿಸಿದರೆ ಆಂಗ್ಲ ಭಾಷೆಯಲ್ಲಿನ ಕೆಲವು ಅನುವಾದಗಳನ್ನು ಓದಿದ್ದೇನೆ. ನಾನು ಓದಿದ ಕವನಗಳೆಲ್ಲದರಲ್ಲೂ ಕೃಷಿ, ಕೃಷಿಕ, ಮಣ್ಣು, ಬೆಳೆ. ಪ್ರಕೃತಿ ಮುಂತಾದವುಗಳಿಗೆ ಪ್ರಾಧಾನ್ಯ ನೀಡಿರುವುದು ಕಂಡುಬರುತ್ತದೆ.

'ಪಾರಿವಾಳಗಳು', 'ಫೀನಿಕ್ಸ್' ಮುಂತಾದ ಕವಿತೆಗಳಲ್ಲಿ ಅವರ ಪಕ್ಷಿಪ್ರೇಮ ತೋರುವುದರೊಂದಿಗೆ ಪಕ್ಷಿಗಳ ಬದುಕನ್ನು ಮಾನವರ ಬದುಕಿಗೆ ಹೋಲಿಸುತ್ತಿರುವುದನ್ನು ಕಾಣಬಹುದು. ಮಲಯಾಳಂ ಮತ್ತು ಕನ್ನಡ ಭಾಷೆಗಳ ಸಾಹಿತ್ಯವನ್ನು ಪರಸ್ಪರ ಸಾರುವುದಕ್ಕೆ ಒಂದು ಸೇತುವೆಯಂತೆ ಸಾಹಿತ್ಯ ಸೇವೆ ಮಾಡುವ ಡಾ. ಸುಷ್ಮಾ ಶಂಕರ್ ರವರಿಗೆ ಶುಭಾಶಯಗಳು.”