ಅತಿರೇಕದ ಸಂಭ್ರಮಕ್ಕಿಂತ ಸಂಯಮದ ನಡವಳಿಕೆ ಒಂದು ಮಾದರಿಯಾಗಲಿ !

ಅತಿರೇಕದ ಸಂಭ್ರಮಕ್ಕಿಂತ ಸಂಯಮದ ನಡವಳಿಕೆ ಒಂದು ಮಾದರಿಯಾಗಲಿ !

ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವಿನ ಅಂತರ ತಿಳಿದಿರಲಿ. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ನಡೆದ ಹೊಸ ವರ್ಷಾಚರಣೆಯ ಕೆಲವು ಅತಿರೇಕಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗುತ್ತಿದೆ. ಕೆಲವು ಪಾನಮತ್ತ ಯುವಕ ಯುವತಿಯರ ಈ ವರ್ತನೆ ಆಕ್ಷೇಪಾರ್ಹ. ಹೊಸ ವರ್ಷದ ಸ್ವಾಗತವನ್ನು ಇನ್ನಷ್ಟು ಸಂಯಮದಿಂದ ಆಚರಿಸಬಹುದು. ಆದರೆ ಅದೇ ಸಮಯದಲ್ಲಿ ಕುಡಿಯದೆಯೂ ತಮ್ಮ ಸಾಮಾಜಿಕ ಜವಾಬ್ದಾರಿ ಮರೆತು ಬಹುತೇಕ ಅದಕ್ಕೆ ಹತ್ತಿರದ ನಡವಳಿಕೆಯನ್ನು ಕನ್ನಡ ಟಿವಿ ಸುದ್ದಿ ಮಾಧ್ಯಮಗಳೆಂಬ ಮನರಂಜನಾ ಉದ್ಯಮದ  ಪತ್ರಕರ್ತರು ಮತ್ತು ನಿರೂಪಕರು ಆಚರಿಸಿರುವುದನ್ನು ಸಹ ಗಮನಿಸಬೇಕು. ಸಾಂಸ್ಕೃತಿಕ ಮತ್ತು ಸಂಭ್ರಮದ ಹೆಸರಿನಲ್ಲಿ ಬಹಳಷ್ಟು ಮೋಜು ಮಸ್ತಿಯ ಕಾರ್ಯಕ್ರಮಗಳು ಸಹ ಯುವಕ ಯುವತಿಯರಿಗೆ ಪ್ರಚೋದನಾಕಾರಿಯಾಗಿತ್ತು ಎಂಬುದು ವಾಸ್ತವವಾಗಿದೆ.

ಮಾಧ್ಯಮ ಎಂಬುದು ಪ್ರಜಾಪ್ರಭುತ್ವದ ಕಣ್ಗಾವಲು ವ್ಯವಸ್ಥೆ. ಅದು ವ್ಯಾಪಾರಕ್ಕಾಗಿ ಕೆಲಸ ಮಾಡತೊಡಗಿದರೆ ನಿಜವಾದ ಅಪಾಯ ಎದುರಾಗುತ್ತದೆ. ಕೇವಲ ಆಡಳಿತದ ವಿಷಯದಲ್ಲಿ ಮಾತ್ರವಲ್ಲ ಇಡೀ ಸಮಾಜದ ಮೌಲ್ಯಗಳ ಅಧಃಪತನಕ್ಕೆ ದಾರಿ ಮಾಡಿಕೊಡುತ್ತದೆ. ಈಗಾಗಲೇ ಟಿವಿ ಸುದ್ದಿ ಮಾಧ್ಯಮಗಳು ಫರ್ನೀಚರ್ ಎಕ್ಸ್ ಫೋ, ರಿಯಲ್ ಎಸ್ಟೇಟ್ ಎಕ್ಸ್ಪೋ , ಪುಡ್ ಎಕ್ಸ್ಪೋ  ಫ್ಯಾಷನ್ ಎಕ್ಸ್ಪೋ, ಎಜುಕೇಶನ್ ಎಕ್ಸ್ಪೋ ಇತ್ಯಾದಿ ವ್ಯಾಪಾರವನ್ನು ಮಾಡುತ್ತಿವೆ. ಅವುಗಳ ಬಗ್ಗೆ ಇದ್ದ ಗೌರವ ಅಭಿಮಾನ ವಿಶ್ವಾಸ ನಂಬಿಕೆಗಳು ಬಹುತೇಕ ಕುಸಿದಿದೆ.‌ ಇಂತಹ ಸಂದರ್ಭಗಳಲ್ಲಿ ಹೊಸ ವರ್ಷದ ಆಚರಣೆಯಲ್ಲಿ ಮತ್ತೆ ಪ್ರಚೋದನಾತ್ಮಕ ನಡವಳಿಕೆ ತೋರಿಸುತ್ತಿದ್ದಾರೆ.

ಸಂಗೀತ ಹಾಸ್ಯ ನೃತ್ಯ ಮುಂತಾದ ಎಲ್ಲಾ ಸಂಭ್ರಮಗಳು ಯಾವುದೇ ಉತ್ಸವಗಳಲ್ಲಿ ಸಹನೀಯ. ಮನುಷ್ಯನ ಜೀವನೋತ್ಸಾಹಕ್ಕೆ ಇದು ಅತ್ಯಂತ ಅಗತ್ಯ. ಆದರೆ ಆ ನೆಪದಲ್ಲಿ ನಡೆಯುವ ಮಾದರಿ ವ್ಯಕ್ತಿಗಳ ಅತಿರೇಕ ಮತ್ತು ಕೀಳು ಅಭಿರುಚಿಯ ವರ್ತನೆಗಳು ಯುವ ಜನಾಂಗದ ಮೇಲೆ ಕೆಟ್ಟ ಪರಿಣಾಮ ಬೀರುವ ಪ್ರಜ್ಞೆ ಜವಾಬ್ದಾರಿಯುತ ಪತ್ರಕರ್ತರಿಗೆ ಮತ್ತು ಇತರ ಎಲ್ಲಾ ಕ್ಷೇತ್ರದ ವ್ಯಕ್ತಿಗಳಿಗೆ ಇರಬೇಕು ಎಂಬ ಆಶಯವಷ್ಟೇ.

ಹೊಸ ವರ್ಷದ ದಿನ ಕೇವಲ ಸಿನಿಮಾ ಧಾರವಾಹಿಗಳ ನಟ ನಟಿಯರು, ನಕಲಿ ಜ್ಯೋತಿಷಿಗಳು ಮುಂತಾದವರನ್ನೇ ವಿಜೃಂಭಿಸುವುದಕ್ಕಿಂತ ಇನ್ನೂ ಹಲವಾರು ಮಾದರಿ‌ ಆದರ್ಶ ವ್ಯಕ್ತಿತ್ವಗಳು ಈ ಸಮಾಜದಲ್ಲಿವೆ. ಅವರಿಂದ ಜನರಿಗೆ ಒಂದಷ್ಟು ಮಾಹಿತಿ ತಿಳಿವಳಿಕೆ ಅರಿವು ಮೂಡಿಸುವ ಕೆಲಸಗಳು ಸಹ ಆಗಬೇಕು. ಕೇವಲ ಮನರಂಜನೆ ಮತ್ತು ಜನಪ್ರಿಯತೆಯೇ ಬದುಕಲ್ಲ. ವೀಕ್ಷಕರ ಸಂಖ್ಯೆ ಕಡಿಮೆಯಾದರು ಚಿಂತಿಸದೆ ಪತ್ರಕರ್ತರು ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ನಿರ್ವಹಿಸಬೇಕು. ಹಾಗೆಯೇ ಭಾರತದಲ್ಲಿ ಹೊಸ ವರ್ಷವನ್ನು ವಿವಿಧ ವರ್ಗಗಳ ಜನರು ಬಹುತೇಕ ಆಚರಿಸಿದ ಬಗೆ ಹೀಗಿದೆ...

Scotland Scotch Whisky- ಮುಂಬಯಿ ಕೊಲಾಬಾದ ಪ್ರತಿಷ್ಠಿತ " ತಾಜ್ ಮಹಲ್ ಪ್ಯಾಲೇಸ್ ಹೋಟೆಲ್" ನ ತುತ್ತತುದಿಯ ಓಪನ್ ಗಾರ್ಡನ್ ರೆಸ್ಟೋರೆಂಟ್ ನಲ್ಲಿ, ಅರಬ್ಬೀ ಸಮುದ್ರದ ಅಲೆಗಳ ವಿಹಂಗಮ ನೋಟದ ಆನಂದದಲ್ಲಿ, ತಣ್ಣನೆ ಬೀಸುತ್ತಿದ್ದ ತಂಗಾಳಿಯ ಮೈಸ್ಪರ್ಶದ ಪುಳಕದಲ್ಲಿ, ಆಕಾಶದ ಚೆಂದಿರನ ಬೆಳಕಿನಲ್ಲಿ, ರೌಂಡ್ ಟೇಬಲ್ಲಿನ ಸುತ್ತ, ನಾಲ್ಕು ಹುಡುಗಿಯರು ಕುಳಿತು ಲೇಡಿ ಸಹಾಯಕರು ಕೇಳಿ ಬೆರೆಸುತ್ತಿದ್ದ ನೀರು ಸೋಡಾ ಹಣ್ಣಿನ ರಸದ ಜೊತೆ ಸ್ಕಾಟಿಷ್ ವಿಸ್ಕಿ ಹೀರುತ್ತಾ ಆ ಲಕ್ಸುರಿ ಸೋಫಾದ ಉದ್ದಕ್ಕೂ ಕಾಲುಚಾಚುತ್ತಾ ಮೋಹಕವಾಗಿ ನಗುತ್ತಾ ಹೊಸ ವರ್ಷವನ್ನು ಎಂಜಾಯ್ ಮಾಡುತ್ತಿದ್ದರು. ವಿಶ್ವವನ್ನೇ ಗೆದ್ದ ಸಂತಸ ಅವರ ಮುಖಗಳಲ್ಲಿ ಕಾಣುತ್ತಿತ್ತು. ಎಲ್ಲವನ್ನೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಅವರು ತುಟಿಗೆ ತಾಗಿಸುತ್ತಿದ್ದ ವಿಸ್ಕಿಯ ಗ್ಲಾಸಿನ ಪ್ರತಿ ಗುಟುಕಿನಲ್ಲೂ ಇಡೀ ಬದುಕಿನ ಸ್ವಾದವನ್ನೇ ಹೀರುತ್ತಿರುವಂತೆ ಅನುಭವಿಸುತ್ತಿದ್ದರು.

ಸುಮಾರು 23-25 ವಯಸ್ಸಿನ ಆ ಹುಡುಗಿಯರ ಹಿನ್ನೆಲೆ ಗೊತ್ತಿಲ್ಲ. ಆದರೆ ಅತ್ಯಂತ ಶ್ರೀಮಂತ ಮನೆತನದವರು ಎಂಬುದಕ್ಕೆ ಸಾಕ್ಷಿ ಬೇಕಿರಲಿಲ್ಲ. ಜೋರಾಗಿ ಮಾತನಾಡುತ್ತಿದ್ದ ಅವರು ವಿಶ್ವದ ಅತ್ಯಂತ ಶ್ರೀಮಂತ ಸ್ಥಳಗಳು, ವಿಹಾರ ಧಾಮಗಳು, ಲೇಟೆಸ್ಟ್ ಫ್ಯಾಷನ್ ಡಿಸೈನರುಗಳು, ಮೇಕಪ್ ಮತ್ತು ಪರ್ ಪ್ಯೂಮ್ ಗಳ ಹೆಸರುಗಳು, ಆಗೊಮ್ಮೆ ಹೀಗೊಮ್ಮೆ ತಮ್ಮ ಪೋಷಕರ ಬಿಸಿನೆಸ್ ಮತ್ತು ಹೊಸ ಹೊಸ ಮಾರ್ಕೆಟಿಂಗ್ ತಂತ್ರಗಳ ಸುತ್ತಲೇ ತಿರುಗುತ್ತಿತ್ತು.

KINGFISHER BEER- ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಪುರುಷರ ಹಾಸ್ಟೆಲ್. ರಾತ್ರಿ 9 ಗಂಟೆ, ಸುಮಾರು 13/15 ಜನ ಹುಡುಗರು ಹೊಸ ವರ್ಷದ ಸಂಭ್ರಮ ಆಚರಿಸಲು ಹಾಲ್ ನಲ್ಲಿ ಕುಳಿತಿದ್ದಾರೆ. ಸುತ್ತಲೂ ಕಿಂಗ್ ಫಿಶರ್ ಬಾಟಲುಗಳಿರುವ ಕ್ರೇಟುಗಳು ಇವೆ. ಒಂದಿಬ್ಬರು ಹುಡುಗರು ಚಿಪ್ಸ್, ಮಸಾಲೆ ಕಡಲೆಬೀಜ, ಚಿಕನ್ ಕಬಾಬ್ ಅನ್ನು ಪೇಪರ್ ಪ್ಲೇಟುಗಳಲ್ಲಿ ಜೋಡಿಸುತ್ತಿದ್ದರೆ, ಇನ್ನೊಂದಿಬ್ಬರು ಗ್ಲಾಸುಗಳಿಗೆ ಬಿಯರ್ ಹಾಕುತ್ತಿದ್ದಾರೆ. ಎಲ್ಲವೂ ಸೆಟ್ಲ್ ಆದ ಮೇಲೆ ಮಾತುಗಳು ಜೋರಾಗುತ್ತವೆ. ಅವರ ಸಹಪಾಠಿ ಹುಡುಗಿಯರ ವಿಷಯಗಳು, ಪ್ರೊಫೆಸರ್ ಗಳ ಜಾತಿ ರಾಜಕೀಯ, ಕ್ಯಾಂಪಸ್‌ನ ರೌಡಿಗಳ ಗುಣಗಾನ, ತಂದೆ ತಾಯಿಗಳ ಸಂಕಷ್ಟ, ಭವಿಷ್ಯದ ಕನಸುಗಳೇ ಅವರ ಮಾತಿನ ಮುಖ್ಯ ವಿಷಯಗಳಾಗಿದ್ದವು.

KHODAY'S XXX RUM- ಊರಿನ ಪಾಳು ಬಿದ್ದ ಕಟ್ಟಡದಲ್ಲಿ ಒಂದಷ್ಟು ಜನ ಸೇರಿದ್ದಾರೆ. ಕಲ್ಲು ಮಣ್ಣುಗಳು ಜಾಗದ ಮಧ್ಯೆ ಒಂದು ಚಾಪೆ ಹಾಸಿ ಇಸ್ಪೀಟೆಲೆಗಳನ್ನು ಇಟ್ಟಿದ್ದಾರೆ. ಯಾರದೋ ಮನೆಯಿಂದ ದೊಡ್ಡ ತಪ್ಪಲೆಯಲ್ಲಿ ಮಸಾಲೆ ಹಾಕಿ ಬೇಯಿಸಿದ ಕೋಳಿ ಮಾಂಸದ ಅಡುಗೆ ಇಟ್ಟಿದ್ದಾರೆ. ಪಕ್ಕದಲ್ಲಿ ಒಂದು ರಾಶಿ ಬೇಯಿಸಿದ ಮೊಟ್ಟ ಇದೆ. ಒಂದಷ್ಟು ಈರುಳ್ಳಿ ಮತ್ತು ಸೌತೆಕಾಯಿ ಹೋಳುಗಳನ್ನು ಪೇಪರಿನಲ್ಲಿ ಸುತ್ತಿಟ್ಟಿದ್ದಾರೆ. ಕತ್ತಲೆಯನ್ನು ಹೋಗಲಾಡಿಸಲು ಎಲ್ಲರೂ ಮೊಬೈಲ್‌ ಟಾರ್ಚ್ ಆನ್ ಮಾಡಿದ್ದಾರೆ. ಆ ಬೆಳಕಿನಲ್ಲಿ ದಟ್ಟನೆಯ ಸಿಗರೇಟ್ ಹೊಗೆ ಸುತ್ತಲೂ ಆವರಿಸಿದೆ. ಯಾರೋ ಒಬ್ಬ ಚಿಕ್ಕ ಹುಡುಗ ಎಲ್ಲರಿಗೂ ಪ್ಲಾಸ್ಟಿಕ್ ಲೋಟಗಳಲ್ಲಿ ಆ ರಮ್ ಅನ್ನು ಅಳತೆಯಲ್ಲಿ ಸುರಿದು ಸುರಿದು ಕೊಡುತ್ತಿದ್ದಾನೆ. ಕುಡಿಯುತ್ತಾ ತಿನ್ನುತ್ತಾ ಇಸ್ಪೀಟು ಆಟ ಶುರುವಾಗುತ್ತದೆ.

ಮೌನವೇ ಹೆಚ್ಚಾಗಿದ್ದರೂ ಆಗಾಗ ಸೋತವರು ಕೆಟ್ಟ ಕೊಳಕ ಭಾಷೆಯಲ್ಲಿ ಅವರ ಅದೃಷ್ಟವನ್ನು ಹಳಿಯುತ್ತಾರೆ. ಕಳೆದುಹೋದ ‌ವರ್ಷದ ಘಟನೆಗಳನ್ನು ನೆನಪಿಸಿಕೊಂಡು ಯಾರಿಗೋ ಶಾಪ ಹಾಕುತ್ತಾರೆ. ಒಬ್ಬ ಕುಡಿತ ಹೆಚ್ಚಾಗಿ ವಾಂತಿ ಮಾಡಿದರೆ ಇನ್ನೊಬ್ಬ ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾನೆ. ಉಳಿದವರು ತಮಗೆ ಇದು ಸಂಭಂದವೇ ಇಲ್ಲದಂತೆ ಆಟದಲ್ಲಿ ಮಗ್ನರಾಗಿದ್ದಾರೆ.

CAKES AND JUICE- ಒಂದು ಮನೆಯ ಮಹಡಿಯ ಮೇಲೆ ಸುತ್ತಮುತ್ತಲಿನ ಕೆಲವು ಕುಟುಂಬಗಳು ಮತ್ತು ಅವರ ಸಂಬಂಧಿಗಳು ಒಂದಷ್ಟು ಹಣವನ್ನು ಎಲ್ಲರೂ ಸಮನಾಗಿ ಒಟ್ಟುಗೂಡಿಸಿ ಕೇಕ್, ಮಿಕ್ಸ್ಚರ್, ಜ್ಯೂಸ್ ತಂದು, ಕೆಳಗೆ ಕುಳಿತು ಕೊಳ್ಳಲು ಚಾಪೆಗಳನ್ನು ಹಾಕಿ, ಯಾರದೋ ಮನೆಯಿಂದ ಆಡಿಯೋ ಸಿಸ್ಟಮ್ ತಂದು ಜೋರಾಗಿ ಸಿನಿಮಾ ಹಾಡುಗಳನ್ನು ಹಾಕಿ ಮನಸ್ಸಿಗೆ ಬಂದಂತೆ ಕುಣಿಯುತ್ತಿದ್ದಾರೆ. ಚಿಕ್ಕ ಮಕ್ಕಳಲ್ಲಿ ಕೆಲವರು ಜ್ಯೂಸ್ ಕುಡಿಯುತ್ತಾ ತಾವು ಕುಣಿಯುತ್ತಿದ್ದರೆ ಇನ್ನೊಂದಿಷ್ಟು ಮಕ್ಕಳು ಆ ಜೋರು ಗಲಾಟೆಯಲ್ಲೂ ನಿದ್ದಿಗೆ ಜಾರಿದ್ದಾರೆ. ಒಂದೆರಡು ಸಂಸಾರಗಳಲ್ಲಿ ಗಂಡ ಹೆಂಡತಿಯ ಮುನಿಸು ಕಾಣಿಸುತ್ತಿದೆ. ಅವರು ಸುಮ್ಮನೆ ಕಾಟಾಚಾರಕ್ಕೆ ಕುಳಿತಿದ್ದಾರೆ. ಹೀಗೆ ಭಾರತದ ಕೆಲವು ವರ್ಗಗಳ ಹೊಸ ವರ್ಷದ ಸಂಭ್ರಮ  ನಡೆಯುತ್ತದೆ. ಇದಲ್ಲದೆ ಇನ್ನೂ ಹೇಗೇಗೋ...

ಅರ್ಥಪೂರ್ಣ ಆಚರಣೆಯೂ ಉಂಟು.

ಸಹಜ ಸರಳ ಸ್ವಾಗತವೂ ಕೋರಲಾಗುತ್ತದೆ.

ಹಾಗೇ ಕೆಲವರು ನಿರ್ಲಕ್ಷ್ಯವನ್ನು ತೋರುತ್ತಾರೆ. 

ಕ್ಯಾಲೆಂಡರಿನ ಮೊದಲನೇ ದಿನಕ್ಕೆ ಏನೇನು ಅವತಾರಗಳೋ...

-ವಿವೇಕಾನಂದ. ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ