ಅದೃಷ್ಟವಂತರು
ಜನರು ಅದೃಷ್ಟದ ಬಗ್ಗೆ ಮಾತನಾಡುವುದನ್ನು ಕೇಳಿದ್ದೇವೆ. ಬೆಂಗಳೂರಿನ ಮೀನು ವ್ಯಾಪಾರಿ ಕೇರಳದ ಲಾಟರಿ ಗೆದ್ದ. ಅವನಿಗೆ ಇಪ್ಪತ್ತೈದು ಲಕ್ಷ ರೂಪಾಯಿ ಬಹುಮಾನ. ಆತ ಬಹಳ ಅದೃಷ್ಟವಂತ. ನಮಗೆ ಹೊಸ ಮನೆ ಕಟ್ಟಿಸುವ ಆಸೆ. ಅದೃಷ್ಟ ಯಾವಾಗ ಕೈಗೂಡುತ್ತದೋ ಭಗವಂತನೇ ಬಲ್ಲ. ಚುನಾವಣೆಯಲ್ಲಿ ಗೆಲ್ಲಲು ಅದೃಷ್ಟ ಬೇಕಲ್ಲ! ಹೀಗೆ ಅದೃಷ್ಟವನ್ನು ನಂಬುವ ಅಸಂಖ್ಯರಲ್ಲಿ ನಾವೂ ಒಬ್ಬರು. ಅದೃಷ್ಟ ಎಂಬುದೊಂದು ಇದೆಯೇ? ಯಕ್ಷ ಪ್ರಶ್ನೆಯಿದು.
ಕೆಲವರು ಅದೃಷ್ಟದ ಕಲ್ಲುಗಳ ಬಗ್ಗೆ ಹೇಳುತ್ತಾರೆ. ನಮ್ಮ ಜನ್ಮ ನಕ್ಷತ್ರ ಆಧರಿಸಿ ಉಂಗುರಕ್ಕೆ ಅಥವಾ ಆಭರಣಗಳಿಗೆ ಯಾವ ಬಣ್ಣದ ಕಲ್ಲು ಅದೃಷ್ಟಕರ ಎಂದು ಜ್ಯೋತಿಷ್ಯ ಹೇಳುತ್ತಾರೆ. ವಾಹನಕ್ಕೆ ನೋಂದಣಿ ಮಾಡುವಾಗ ನೋಂದಣಿ ಸಂಖ್ಯೆಯನ್ನು ಅದೃಷ್ಟ ಸಂಖ್ಯೆಯನ್ನಾಧರಿಸಿ ಪಡೆಯುತ್ತಾರೆ. ಆ ಸಂಖ್ಯೆ ಸಿಗಲು ಕೆಲವು ತಿಂಗಳು ಕಾಯುವ ಅಥವಾ ಹೆಚ್ಚು ಶುಲ್ಕ ಪಾವತಿಗೆ ಸಿದ್ಧರಿರುವ ಮಂದಿಯೂ ನಮಗೆ ಹೊಸತೇನಲ್ಲ. ಅದೃಷ್ಟ ಸಂಖ್ಯೆ ಎನ್ನುವುದಕ್ಕಿಂತ ಅದೃಷ್ಟ ಅಂಕಿಯೆನ್ನುವುದು ಸೂಕ್ತವೇನೋ. ಸಂಖ್ಯೆ 10ನ್ನು ಒಂದು ಎಂದೂ, 12ನ್ನು ಮೂರು ಎಂದೂ, 99ನ್ನೂ ಒಂಭತ್ತೆಂದೂ, 108ನ್ನು ಒಂಭತ್ತೆಂದೂ ನಿರ್ಣಯಿಸಲಾಗುತ್ತದೆ. 1+0+8 ಎಂದರೆ ಮೊತ್ತ ಒಂಭತ್ತು ಅಲ್ಲವೇ. ಧ್ಯಾನ ಮಾಡುವಾಗ 108 ಸಲ ನಾಮ ಜಪ ಮಾಡುವ ಪರಿಪಾಠ ಒಂಭತ್ತು ಎಂಬ ಸಂಖ್ಯೆಯ ಗುಣಾತಿಶಯಗಳ ಮೇಲಿನ ನಂಬಿಕೆಯಿರಬೇಕು.
ಮದುವೆಯಾದೊಡನೆ ಅದೃಷ್ಟ ಖುಲಾಯಿಸಿತು. ಹೊಸ ಮನೆ ಕಟ್ಟಿಸಿದ, ದೊಡ್ಡ ಕಾರು ಬಂತು. ಈಗ ಅವನಿಗೆ ಭಾರೀ ಮರ್ಯಾದೆಯಪ್ಪ…! ಹೀಗೆ ನೀವೂ ಕೇಳಿಸಿದ ಸಂದರ್ಭಗಳಿರಬಹುದು. ಮದುವೆಯಾದೊಡನೆ ಅದೃಷ್ಟ ಖುಲಾಯಿಸಿತೆನ್ನುವುದಕ್ಕಿಂತ ಸಾಲ ಸೋಲ ಮಾಡಿ ಹೆಂಡತಿಯ ಒತ್ತಾಯಕ್ಕೆ ಬಾಗಿ ಮನೆ ಕಟ್ಟಿಸಿದ. ಅಥವಾ ಕಾರು ಖರೀದಿಸಿದ ಎಂದರೆ ಹೆಚ್ಚು ಸಮರ್ಪಕವಾಗಬಹುದೆಂದೂ, ಚೇಷ್ಟೆಯ ಮಾತು ಅಥವಾ ಬುರುಡೆ ಬಿಡುವವರೂ ಇದ್ದಾರೆ. ಯಾರನ್ನು ನಂಬ ಬೇಕು? ಯಾರನ್ನು ನಂಬ ಬಾರದೆಂಬ ಹೊಯ್ದಾಟ ಸಹಜ. ಅದೃಷ್ಟ ಎನ್ನುವುದು ಜಾಣ ಸೋಮಾರಿಯು ಬಳಸುವ ವಿಶಿಷ್ಟ, ಆದರೆ ಅರ್ಥ ಮತ್ತು ಆಧಾರವಿಲ್ಲದ ಪದವೆಂದು ಚುಡಾಯಿಸುವವರನ್ನೂ ನೋಡಿದ್ದೇವೆ. ಆದರೆ ಚುಡಾಯಿಸಿದಂತೆ ಕಂಡರೂ ಮೇಲ್ನೋಟಕ್ಕೆ ಒಪ್ಪದಿರುವ ಯಾವ ಅಂಶಗಳೂ ಇಲ್ಲ. ಅದೃಷ್ಟದ ಮೇಲೆ ಭಾರ ಹಾಕಿ ಕೈ ಕಟ್ಟಿ ಕುಳಿತು ಕೊಳ್ಳುವವರು ಸೋಮಾರಿಗಳೆಂದರೆ ತಪ್ಪೇನೂ ಇಲ್ಲ. ತಮಾಶೆಗಾಗಿ ಹೇಳುವ ಕಥೆಯೊಂದಿದೆ. ದೇವರೇ ನನಗೆ ತಿಂಡಿ ತೀರ್ಥಕೊಡು ಎಂದು ಬೇಢುತ್ತಾ, ಅದೃಷ್ಟವಿದ್ದರೆ ದೇವರು ಕೊಟ್ಟೇ ಕೊಡುತ್ತಾನೆ ಎಂದು ಅಂಗಾತ ಮಲಗಿದವನ ಬಾಯಿಗೆ ನಾಯಿಯೊಂದು ಕಾಲೆತ್ತಿ ತಿಂಡಿ ಮತ್ತು ತೀರ್ಥ ಸುರಿಯಿತಂತೆ. ತಮಾಷೆಯೊಳಗೊಂದು ನೀತಿಯೂ ಇರುವುದೆಂಬುದನ್ನು ಒಪ್ಪದಿರುವುದಾದರೂ ಹೇಗೆ?
ಕಾಯಿಲೆ ಬಂದಾಗ, ಅದೃಷ್ಟವನ್ನು ನಂಬಿ ಔಷಧ ಸೇವಿಸದೇ ಇದ್ದರೆ ಕಾಯಿಲೆ ವಾಸಿಯಾಗದು. ಕಾಯಿಲೆ ಗುಣ ಪಡಿಸಲು ಇರುವ ಎಲ್ಲ ಬಾಗಿಲುಗಳನ್ನು ತೆರೆದು ಇಣುಕದೇ ಇದ್ದರೆ ಮೂರ್ಖತನ ಆಗದೇ?
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ