ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ
"ತುಂಗಾ ಮೂಲ ಚಳುವಳಿ"ಯ ಕೆಲವು ಸಂಗತಿಗಳು:
" ತುಂಗಾ ಮೂಲ ಚಳುವಳಿ" ಕುರಿತಾಗಿ ದಿನಾಂಕ ೧/೭/೨೦೦೭ ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಹಳ ಲಘುವಾಗಿ ಬರೆದಿದ್ದಾರೆ. ಅದು ಶ್ರೀ. ಅನಂತಮೂರ್ತಿಯವರನ್ನು ಲೇವಡಿ ಮಾಡಲು ಬರೆದದ್ದು. ಇದು ಅತ್ಯಂತ ಬೇಜವಾಬ್ದಾರಿ ನಡುವಳಿಕೆಯಾಗಿದ್ದು ಇದನ್ನು ನಾವು ಖಂಡಿಸುತ್ತಿದ್ದೇವೆ. 'ತುಂಗಾ ಮೂಲ ಉಳಿಸಿ ಹೋರಾಟ' ಈ ನಾಡಿನ ಕೋಟ್ಯಾಂತರ ಜನರ, ರೈತರ ಬದುಕಿನಮೇಲೆ ನೇರವಾಗಿ ಪರಿಣಾಮ ಬೀರುವ ತುಂಗಾ- ಭದ್ರಾ ನದಿಗಳ ಉಳಿವಿನ ಹೋರಾಟವದು. ಈ ಅಹಿಂಸಾತ್ಮಕ ಆಂದೋಳನಕ್ಕೆ ಜನಕೋಟಿಯ ಮನಸ್ಸು- ಹೃದಯದ ಬೆಂಬಲ ದೊರಕುವಂತೆ ಮಾಡಿ ಸರ್ಕಾರವನ್ನು ಮಣಿಸಿದ್ದು ಅನಂತಮೂರ್ತಿಯವರ ನಾಯಕತ್ವ. ನಮ್ಮ ಕಾಲದ ಈ ಮಹತ್ವದ ಘಟನೆಯ ಹಿಂದಿನ ಸಂಗತಿಗಳನ್ನು ತಿಳಿಸದೇ ಹೋದರೆ ಹೀನ ಮನಸ್ಸಿನ ಜನ ಸತ್ಯವನ್ನೇ ತಿರುಚಿಬಿಡುತ್ತಾರೆಂದು ಈ ಕೆಳಗಿನ ಮಾಹಿತಿಗಳನ್ನು ನಾವು ನೀಡಬೇಕಾಗಿದೆ.
ಯಾವುದೇ ಚಳುವಳಿಗಳಿರಲಿ ಅದೊಂದು ರೀತಿಯಲ್ಲಿ ರಿಲೇ ಓಟದಂತೆ. ಕೊನೆಯ ಹಂತದ 'ಲ್ಯಾಪಿ'ನಲ್ಲಿ ಗುರಿಮುಟ್ಟುವವನು ಹಿಂದಿನವರ ಎಲ್ಲಾ ಸರಿ-ತಪ್ಪುಗಳನ್ನೂ ಹೆಗಲಮೇಲೆ ಹೊತ್ತು-ಬಳಸಿಕೊಂಡು ಗೆಲುವನ್ನು ಸಾಧಿಸಬೇಕು. ನಮ್ಮ ದೇಶದ ಸ್ವಾತಂತ್ರ ಹೋರಾಟವನ್ನೂ ಹೀಗೇ ನೋಡಿದರೆ ಗಾಂಧೀಜಿಯವರ ನಾಯಕತ್ವ ಕೊನೆಯಲ್ಲಿ ನಮಗೆ ಬಿಡುಗಡೆಯನ್ನು ನೀಡಿತು. ಈ ಕೊನೆಯ ಹಂತವೇ ಬಹಳ ಸೂಕ್ಷ್ಮ ಮತ್ತು ಆತಂಕಭರಿತವಾದದ್ದು. ಏಕೆಂದರೆ ನಿಜಕ್ಕೂ ನಮಗೆ ಯಶಸ್ಸು ಸಿಗಬಹುದೆಂಬ ಸಂಪೂರ್ಣ ನಂಬಿಕೆ ಹೋರಾಟಗಾರರಲ್ಲಿ ಇರುವುದಿಲ್ಲ. ಇಲ್ಲಿ ಸಿನಿಕತನ, ಅನುಮಾನಗಳೆಲ್ಲಾ ಇದ್ದೇ ಇರುತ್ತವೆ. ನಾವೇನು ನೂರಕ್ಕೆ ನೂರು ದೇವರನ್ನು ನಂಬುವವರೇ? ಈ ರೀತಿಯ ಅಂತಿಮ ಗಳಿಗೆಯ ಮನಸ್ಸಿನ ಸ್ಥಿತಿ ಹೋರಾಟವನ್ನು ಹಿಂಸಾ ಮಾರ್ಗದತ್ತ ತಳ್ಳುವುದನ್ನು ನಾವು ನೋಡುತ್ತಲೇ ಇರುತ್ತೇವೆ. ನಿಜಕ್ಕೂ ಅಹಿಂಸಾ ಮಾರ್ಗದಿಂದಲೇ ಕೊನೆಯ ಹಂತದ ಜಯವನ್ನು ಸಾಧಿಸಬೇಕೆಂದರೆ ನಾಯಕತ್ವದಲ್ಲಿ ಅಸೀಮ ಜಾಣತನ, ಚಾಲೂಕುತನ,ಯಾರನ್ನೂ ದ್ವೇಶಿಸದೇ ಎಲ್ಲರ ಮನಸ್ಸನ್ನು ತಟ್ಟುವ ಪ್ರಾಮಾಣಿಕತೆ- ಇವೆಲ್ಲವೂ ಮೇಳೈಸಿರಬೇಕಾಗುತ್ತದೆ. ಗಾಂಧೀಜಿ ಇದರಲ್ಲಿ ನಿಪುಣರಾಗಿದ್ದರಿಂದಲೇ ರಕ್ತಪಾತವಿಲ್ಲದೇ ಸ್ವಾತಂತ್ರ ದೊರಕಿತು.
ಇದನ್ನು ನಮ್ಮ ' ತುಂಗಾ ಮೂಲ ಉಳಿಸಿ' ಹೋರಾಟಕ್ಕೂ ಅನ್ವಯಿಸಬಹುದು. ಅನೇಕ ವರ್ಷಗಳಿಂದ ನಡೆಯುತ್ತಿದ್ದ ಚಳುವಳಿಯಿದು. ಶ್ರೀ. ಕಲ್ಕುಳಿ ವಿಟ್ಟಲ್ ಹೆಗಡೆ, ಸುಂದರ್ ಮುಂತಾದವರು ಕುದುರೇಮುಖ ಗಣಿಗಾರಿಕೆಯ ವಿಚಾರವಾಗಿ ಸಂಗತಿಗಳನ್ನು ಮನಗಂಡು ಚಳುವಳಿ ಕಟ್ಟಿದರು. ಕೆಳಹಂತದಲ್ಲಿ ಜನರನ್ನು ಸಂಘಟಿಸಿದರು. ಜನರನ್ನು ಜಾಗೃತಿಗೊಳಿಸಲು ನಾಡಿನಾದ್ಯಂತ ಓಡಾಡಿದರು. ನಂತರದಲ್ಲಿ ಈ ಚಳುವಳಿಗೆ ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಹೆಗ್ಗೋಡಿನ ಸುಬ್ಬಣ್ಣ ನಾಯಕತ್ವ ನೀಡಿದರು. ಇನ್ನೂ ಹೆಚ್ಚಿನ ಜನ ಸಮುದಾಯ ಹೀಗೆ ಈ ಚಳುವಳಿಗೆ ಆಕರ್ಷಿತವಾಯಿತು. ಇನ್ನೋಂದೆಡೆ ಈ ನದೀ ಮೂಲ ಪ್ರದೇಶವನ್ನು ಅರಣ್ಯ ಕಾನೂನಿನ ಮೂಲಕವೇ ಗಣಿಗಾರಿಕೆಯಿಂದ ಮುಗ್ತವಾಗಿಸುವ ನಿಟ್ಟೀನಲ್ಲಿ ಪ್ರಯತ್ನಗಳು ನಡೆಯುತ್ತಿದ್ದವು. ಆದರೆ ನಿರ್ಣಾಯಕ ಹಂತದಲ್ಲಿ ಹೇಗೆ ಯಾರಿಂದ ಜಯ ಲಭಿಸಬಹುದು ಎಂಬುದು ಮಾತ್ರ ಯಕ್ಷಪ್ರಶ್ಣೆಯಾಗಿ ನಮಗೆಲ್ಲ ಕಾಡಿತ್ತು. ಕೊನೆಯ ಹಂತದಲ್ಲಿ ಅಂದರೆ ಇನ್ನೇನು ಸರ್ಕಾರ ಗಣೀಕರಣದ ಪರವಾನಗೆಯನ್ನು ನವೀಕರಿಸಿಬಿಡುತ್ತದೆ ಎಂಬ ಅನುಮಾನ ನಮಗೆ ದಟ್ಟವಾದಾಗ ನಿಜಕ್ಕೂ ಅದು ಚಳುವಳಿಯ ಸ್ಪೋಟಕ ಸ್ಥಿತಿ. ಈ ಪರಿಸ್ಥಿತಿಯಲ್ಲಿ ನಾವು ಹಿಂಸಾ ಮಾರ್ಗವನ್ನು ಹಿಡಿಯುವುದು ನ್ಯಾಯವೆಂದು ಅನ್ನಿಸುವಂಥ ಗಳಿಗೆ ಅದು. ಇಷ್ಟು ವರ್ಷಗಳ ನಮ್ಮ ಹೋರಾಟ ನಿಜವಾದ ಜನಬೆಂಬಲವಿಲ್ಲದೇ ಸೋಲುತ್ತದೆ ಎಂಬ ಹತಾಶೆ. ಈ ಗಳಿಗೆಯಲ್ಲಿಯೇ ಡಾ. ಯು.ಆರ್. ಅನಂತಮೂರ್ತಿಯವರ ಪ್ರವೇಶ ನಮ್ಮ ಚಳುವಳಿಗೆ ಆಗಿದ್ದು.
ಶ್ರೀ ಅನಂತಮೂರ್ತಿಯವರಿಗೆ ನಮ್ಮ ಈ ಚಳುವಳಿಯ ಕುರಿತಾಗಿ ಹಿಂದಿನಿಂದಲೇ ಆಸಕ್ತಿ ಇತ್ತು. ಅಲ್ಲದೇ ಅವರ ಮಿತ್ರರಾದ ಸುಬ್ಬಣ್ಣ ನವರೇ ಈ ಚಳುವಳಿಯಲ್ಲಿ ಮುಖ್ಯರಾಗಿ ನಮ್ಮೊಂದಿಗಿದ್ದ ಕಾರಣ ಅನೇಕಬಾರಿ ಈ ಚಳುವಳಿಯ ಕುರಿತು ಚರ್ಚಿಸುತ್ತಲೂ ಇದ್ದೆವು. ನಾವೇ ಅವರನ್ನು ನೇರವಾಗಿ ಇಲ್ಲಿಗೆ ಬಂದು ಪಾಲ್ಗೊಳ್ಳಲು ಒತ್ತಾಯಿಸಿರಲಿಲ್ಲ. ಸುಬ್ಬಣ್ಣನವರು ತಮ್ಮ ಅನಾರೊಗ್ಯದ ಕಾರಣದಿಂದ ಕೊನೆಯಲ್ಲಿ ಚಳುವಳಿಯಲ್ಲಿ ಹೆಚ್ಚು ಹೆಚ್ಚು ಭಾಗವಹಿಸಲು ಸಾಧ್ಯವಾಗದ ಕಾರಣದಿಂದ ನಮ್ಮ ಆತ್ಮಬಲ ಕ್ಷೀಣಿಸುವ ಹೊತ್ತಿನಲ್ಲಿ ನಮಗೆ ಬಲ-ಬೆಂಬಲ ಕೊಟ್ಟವರು ಅನಂತಮೂರ್ತಿ.
ಆಗತಾನೆ ಅವರು ತಮ್ಮ "ದಿವ್ಯ" ಕಾದಂಬರಿಯನ್ನು ಮುಗಿಸಿದ್ದರು. ಆ ಕಾದಂಬರಿಯಲ್ಲಿ ಅವರು ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಜೋಯಿಸರ ವಿಚಾರವಾಗಿ ಆಲೋಚಿಸಿದ್ದರೆಂದು ಕಾಣುತ್ತದೆ. ಎಂದಿನಂತೆ ತಮ್ಮೂರೇ ಆಗಿರುವ ತೀರ್ಥಹಳ್ಳಿಗೆ ಬಂದವರು ಹೊರನಾಡಿಗೆ ಹೋಗಿಬರುವ ಆಸಕ್ತಿಯನ್ನು ತೋರಿದರು. ನಮಗೆ ಇದು ಸಹಕಾರಿ ಆಯಿತು. ಅವರೊಂದಿಗೆ ನಾವು ಕಳಸ-ಹೊರನಾಡಗೆ ಹೊರಟು ದಾರಿಯಲ್ಲಿ ಸಿಗುವ ಕುದುರೇಮುಖ ಗಣಿಗಾರಿಕೆಯ ಅವಾಂತರಗಳನ್ನು ಪ್ರತ್ಯಕ್ಷವಾಗಿ ತೋರಿಸಿದೆವು. ಆ ನಂತರ ಅವರಿಗೆ ನಾವು ಏನನ್ನೂ ಹೇಳಬೇಕಾಗಿ ಬರಲಿಲ್ಲ. ಈ ಕೆಲಸವನ್ನು ತಡೆಯಬೇಕೆಂಬ ಸಂಕಲ್ಪ ಅವರಲ್ಲಿ ಗಟ್ಟಿಯಾಗಿ ಬೇರೂರಿತು.
ನಾವು ಚಳುವಳಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ನೇರ ಭಾಗವಹಿಸುವಿಕೆಗೆ ಈವರೆಗೂ ಆಸ್ಪದ ನೀಡಿರಲಿಲ್ಲ. ಅಂತೆಯೇ ಯಾವುದೇ ರಾಜಕೀಯ ಮುಖಂಡರನ್ನೂ ಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ ಅನಂತಮೂರ್ತಿಯವರು ತೀರ್ಥಹಳ್ಳಿಗೆ ವಾಪಾಸ್ಸಾಗುತ್ತಿದ್ದಂತೆ ಕೂಡಲೆ ಅವರು ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರ ಹಾಗೂ ಸಾಮಾಜಿಕ ಕಳಕಳಿಯ ಗಣ್ಯರ, ಪರಿಸರಾಸಕ್ತರ ಸಭೆಯನ್ನು ಕರೆಯಲು ಸೂಚಿಸಿದರು. ಶಾಸಕರನ್ನು ಖುದ್ದಾಗಿ ಸಂಪರ್ಕಿಸಿ ಮಾತನಾಡಿದರು. ಕುದುರೇಮುಖ ಗಣಿಗಾರಿಕೆಯನ್ನು ನಿಲ್ಲಿಸಲು ತೀರ್ಥಹಳ್ಳಿಯಲ್ಲಿ ಮಹತ್ವದ ಸರ್ವಪಕ್ಷಗಳ ಸಮಾವೇಶ ನಡೆಸಲು ಪೂರ್ವಭಾವಿ ಸಭೆ ನಿರ್ಣಯಿಸಿತು.೯-೭-೨೦೦೧ ರಂದು ನಡೆದ ಸಭೆ ನಿಜಕ್ಕೂ ಐತಿಹಾಸಿಕವಾದದ್ದು. ನಮ್ಮ ಅಷ್ಟೂ ವರ್ಷಗಳ ಚಳುವಳಿಯ ಸದಾಭಿಪ್ರಾಯ ಅಂದು ಕಣ್ಣಿಗೆ ಕಾಣುವಂತಾಯಿತು. ನಿಜಕ್ಕೂ ನಮಗೆ ಆನೇಬಲವೇ ಬಂದಿತ್ತು. ಸಮಾವೇಶದ ನಂತರ ಅಂದಿನ ಸಾಯಂಕಾಲವೇ ಅಂದಿನ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರಿಗೆ ಇ ಮೈಲ್ ಮೂಲಕ ಸಭೆಯ ಅಭಿಪ್ರಾಯವನ್ನು ಅನಂತಮೂರ್ತಿಯವರು ಕಳುಹಿಸಿದರು. "ನಾನು ಮಲೆನಾಡಿನ ಮಗ. ನೀವು ಮಲೆನಾಡಿನ ಅಳಿಯ. ಈಗ ನಾವು ಅಭಿವೃದ್ದಿಯ ಭ್ರಮೆಯಿಂದ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಲು ಸಕಾಲ. ನೀವು ಗಣಿಗಾರಿಕೆಗೆ ಪುನಹ ಅವಕಾಶ ಕೊಡಬಾರದು" ಎಂದು ಬರೆದಿದ್ದಕ್ಕೆ ಅಂದಿನ ರಾತ್ರಿಯೇ ಮು.ಮಂ ಗಳಿಂದ ಸಕಾರಾತ್ಮಕ ಉತ್ತರದ ಜೊತೆಯಲ್ಲಿ ಬೆಂಗಳೂರಿಗೆ ಬಂದು ಕಾಣುವಂತೆ ಚಳುವಳಿಗಾರರಿಗೆ ಆಹ್ವಾನ ಕೂಡ ಬಂದಿತು. ಈ ಸಂದರ್ಭದಲ್ಲಿ ಅನಂತಮೂರ್ತಿಯವರು ತೇಜಸ್ವಿ ಮುಂತಾದವರ ಜೊತೆ ಸತತ ಸಂಪರ್ಕದಲ್ಲಿದ್ದರು. ತೇಜಸ್ವಿಯವರು ನೇರವಾಗಿ ಚಳುವಳಿಯಲ್ಲಿ ಭಾಗವಹಿಸಿರಲಿಲ್ಲ. ಆದರೆ ಅದೇ ಸಮಯದಲ್ಲಿ ಉಲ್ಲಾಸ್ ಕಾರಂತ್ ಹಾಗೂ ವೈಲ್ಡ್ ಲೈಫ಼್ ಗಿಲ್ದ್ ಅವರೊಂದಿಗೆ ನ್ಯಾಷನಲ್ ಪಾರ್ಕಿನ ವ್ಯಾಪ್ತಿಯ ಪ್ರದೇಶವಾದ ಕಾರಣದಿಂದ ಕುದುರೇಮುಖದಲ್ಲಿ ಗಣಿಗಾರಿಕೆ ನಡೆಸುವಂತಿಲ್ಲವೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಾದಿಸುತ್ತಿದ್ದರು. ಹೀಗೆ ನಮ್ಮ ಕನ್ನಡದ ಮತ್ತೊಬ್ಬ ಮುಖ್ಯ ಲೇಖಕರಾದ ಫೂರ್ಣಚಂದ್ರ ತೇಜಸ್ವಿಯವರು ಕೂಡ ಗಣಿಗಾರಿಕೆಯನ್ನು ನಿಲ್ಲಿಸಲು ಮಹತ್ವದ ಪ್ರಯತ್ನವನ್ನು ಪಟ್ಟಿರುವುದನ್ನು ನಾವೆಲ್ಲರೂ ಧನ್ಯತೆಯಿಂದ ನೆನಪಿಸಿಕೊಳ್ಳಲೇ ಬೇಕು. ದಕ್ಷಿಣ ಕನ್ನಡದ ನಾಗರ್ಈಕ ಸೇವಾ ಟ್ರಸ್ಟ್ ಹಾಗೂ ದಿ. ಮುರಾರಿ ಬಲ್ಲಾಳ್ ಕೂಡ ಅಲ್ಲಿ ಜನಜಾಗೃತಿಯನ್ನು ಮೂಡಿಸಿ ಸರ್ಕಾರದ ಮೇಲೆ ಒತ್ತಡವನ್ನು ತಂದರು.
ತೀರ್ಥಹಳ್ಳಿಯ ಸಮಾವೇಶದ ನಂತರ ನಿಜಕ್ಕೂ ನಾವು ಇಡೀ ದೇಶಕ್ಕೆ ಈ ಗಣಿಗಾರಿಕೆ ಬೇಡ ಎನ್ನುವ ಕೂಗನ್ನು ಕೇಳಿಸಬೇಕೆಂದು ನಿರ್ಧರಿಸಿ ಇಡೀ ಶಿವಮೊಗ್ಗ ಬಂದ್ ಗಾಗಿ ಕರೆಕೊಡಲಾಯಿತು. ಇದಕ್ಕಾಗಿ ಬಂದ್ ಅನ್ನು ಯಶಸ್ವಿಗೊಳಿಸಬೇಕೆಂದು ಕೋರಿ ಅನಂತಮೂರ್ತಿಯವರ ನೇತ್ರತ್ವದಲ್ಲಿ ಚಳುವಳಿಯಲ್ಲಿ ಭಾಗಿಯಾಗಿದ್ದ ವಿವಿಧ ಪ್ರಗತಿಪರ ಸಂಘಟನೆಗಳೆಲ್ಲರ ಸಂಗಡ ಪಾದಯಾತ್ರೆ ಕೈಗೊಂಡು ಎಲ್ಲಾ ವರ್ಗಗಳ ಜನರನ್ನು ಕೋರಲಾಯಿತು. ಜ್ಞಾನಪೀಠ ಪುರಸ್ಕೃತ ಸಾಹಿತಿಯೇ ಹೀಗೆ ಜನರೊಡನೆ ಸಂವಾದ ನಡೆಸುತ್ತಾ ಗಣಿಗಾರಿಕೆಯನ್ನು ನಿಲ್ಲಿಸುವ ಹೋರಾಟಕ್ಕೆ ಬೆಂಬಲವನ್ನು ಕೋರುತ್ತಿದ್ದರೆ ಏಲ್ಲರ ನಿರೀಕ್ಷೇಗೂ ಮೀರಿ ಜನರಿಂದ ಸ್ಪಂದನೆ ವ್ಯಕ್ತವಾಯಿತು. ಹೀಗೆ ೨೪/೭/೨೦೦೧ ರಂದು ಇಡೀ ಜಿಲ್ಲೆಯಲ್ಲಿ ಯಶಸ್ವಿ ಬಂದ್ ಕಾರ್ಯಕ್ರಮ ಏರ್ಪಟ್ಟಿತು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳೂ ಗಣಿಗಾರಿಕೆಯನ್ನು ನಿಲ್ಲಿಸಲು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಒತ್ತಾಯಿಸಿದವು. ಈ ನಂತರ ತುಂಗ ಭದ್ರ ನದಿಗಳ ತಟಗಳ ಇತರ ಜಿಲ್ಲೆಗಳಲ್ಲೂ ಈ ಆಂದೋಳನ ಸ್ಪೂರ್ತಿಯನ್ನು ಪಡೆದು ಸರ್ಕಾರವನ್ನು ಒತ್ತಾಯಿಸಿದವು. ಅನಂತಮೂರ್ತಿಯವರು ಹೊಸಪೇಟೆ, ಹಗರಿಬೊಮ್ಮನಹಳ್ಳಿ ಮುಂತಾದೆಡೆ ಹೋಗಿ ಅಲ್ಲಿನ ಜನರನ್ನು ಉದ್ದೇಶಿಸಿ ಈ ಗಣಿಗಾರಿಕೆಯನ್ನು ನಿಲ್ಲಿಸಲು ಸರ್ಕಾರವನ್ನು ಒತ್ತಾಯಿಸುವಂತೆ ಸಭೆಗಳಲ್ಲಿ ಮಾತನಾಡಿದರು. ಆಗ ಅಧಿಕಾರದಲ್ಲಿ ಇರದ ಎಂಪಿ. ಪ್ರಕಾಶ್ ಕೂಡ ಒಂದು ಸಭೆಯನ್ನು ಈ ಕಾರಣಕ್ಕಾಗಿಯೇ ಏರ್ಪಡಿಸಿದ್ದರು. ಚಳುವಳಿಗೆ ಬೆಂಬಲವನ್ನು ಕೋರ್ಇದ್ದರು. ಮಹಿಮಾ ಪಟೇಲ್ ಮುಂತಾದವರು ನಮ್ಮ ಚಳುವಳಿಯಲ್ಲಿ ಭಾಗಿಯಾಗಿದ್ದೂ ಇದೇ ಸಂದರ್ಭದಲ್ಲಿ.
ಅನಂತಮೂರ್ತಿಯವರ ಅಧ್ಯಕ್ಷತೆಯಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕೂಡ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು. ಚಳುವಳಿಗಾರರ ಜತೆಗೂಡಿ ಮು.ಮಂ.ಯವರನ್ನು ಭೇಟಿಯಾಗಿ ಅವರಿಗೆ ಮನದಟ್ಟುಮಾಡಿದ್ದಾಯಿತು. ನಂತರ ಶಾಸನ ಸಭೆಯಲ್ಲಿ ಮಾನ್ಯ ಮು.ಮಂ.ಯವರು ಈ ಕುರಿತು ಗಣಿಗಾರಿಕೆಯ ಮುಂದುವರಿಕೆಗೆ ಅವಕಾಶ ನೀಡುವುದಿಲ್ಲ ಏಂದು ಘೋಷಿಸಿದ್ದೂ ಆಯಿತು. ಈ ಕುರಿತು ಸುಪ್ರೀಂ ಕೋರ್ಟಿಗೆ ಅಫ಼ಿಡವಿಟ್ಟನ್ನು ಸಲ್ಲಿಸುವುದಾಗಿಯೂ ಮು.ಮಂ.ಯವರು ತಿಳಿಸಿದರು. ಹೀಗೆ ಶ್ರೀ.ಎಸ್,ಎಂ. ಕೃಷ್ಣ ಅವರೂ ಮುಖ್ಯಮಂತ್ರಿಯಾಗಿ ನಿಜಕ್ಕೂ ಈ ಚಳುವಳಿಗೆ ಸ್ಪಂದಿಸಿ ಜನಾಭಿಪ್ರಾಯಕ್ಕೆ ಮನ್ನಣೆಕೊಟ್ಟು ಮೆಚ್ಚುಗೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ನಾವು ಎಲ್ಲಾ ಶಾಸಕರನ್ನು ಕೂಡ ಅಭಿನಂದಿಸುತ್ತೇವೆ. ನಮಗೆ ಜನತಂತ್ರ ಉಳಿಯುತ್ತದೆ ಎಂಬ ಭರವಸೆ ಮೂಡಿಸಿದ ಈ ಘಟನಾವಳಿಗಳು ಐತಿಹಾಸಿಕವೆಂದೇ ಹೇಳಬೇಕು.
ಮುಂದಿನ ಘಟನಾವಳಿಗಳು ನ್ಯಾಯಾಲಯದಲ್ಲಿ ನಡೆದಿವೆ. ಕರ್ನಾಟಕ ಸರ್ಕಾರ ಸ್ಪಷ್ಟವಾಗಿ ಗಣಿಗಾರಿಕೆಯನ್ನು ಮುಂದುವರೆಸದಂತೆ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯವೂ ಕೂಡ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಗಣಿಗಾರಿಕೆಯನ್ನು ನಿಲ್ಲಿಸುವ ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿದೆ. ಹೀಗೆ ಈ ನಾಡಿನ ಕೋಟ್ಯಾಂತರ ಜನರ ಬದುಕಿಗೆ ಆಸರೆಯಾದ ತುಂಗಾ - ಭದ್ರಾ ನದಿಗಳ ಉಳಿವಿನ ಹೋರಾಟ ಯಶಸ್ಸನ್ನು ಪಡೆದಿದೆ. ಇದು ನಿಜಕ್ಕೂ ಅಹಿಂಸಾತ್ಮಕವಾದ ಜನತೆಯ ಹೋರಾಟದ ಜಯ. ಈ ಹೋರಾಟಕ್ಕೆ ಜನಸಾಗರದ ಬೆಂಬಲ ಸಿಗುವಂತೆ ಮಾಡಿದ ಅನಂತಮೂರ್ತಿಯವರ ನಾಯಕತ್ವ ಮತ್ತು ಅವರ ಮಾರ್ಗದರ್ಶನವನ್ನು ನಾವು ನೆನಪಿಸಿಕೊಳ್ಳಲೇ ಬೇಕು. ಬಹಳ ಆಶ್ಚರ್ಯಕರವಾಗಿ ನ್ಯಾಯಾಂಗದ ಮೂಲಕವಾಗಿ ಮತ್ತು ಜನರ ನಡುವಿನಿಂದ ಮೂಡಿಬಂದ ಎರಡೂ ಬಗೆಯ ಹೋರಾಟಗಳು ಅಂತಿಮವಾಗಿ ಪರಸ್ಪರ ಪೂರಕವಾಗಿ ಗಣಿಗಾರಿಕೆಯನ್ನು ನಿಲ್ಲಿಸಲು ಸಾರ್ಥಕವಾದವು.
ವಿ.ಕ. ದಲ್ಲಿ ಬಲ್ಲವ ಎಂಬ ನಾಮಾಂಕಿತದಿಂದ ಬರೆದವರು ಅನಂತಮೂರ್ತಿ ನೋಬೆಲ್ ಪ್ರ್ಐಜ಼್ ಗಾಗಿ ಇಲ್ಲಿ ಮುಖ ತೋರಿಸಿ ವಿದೇಶಕ್ಕೆ ಹಾರಿದರು ಎಂದು ಬರೆದಿದ್ದಾರೆ. ನಿಜಕ್ಕೂ ಅವರು ಚಳುವಳಿ ಮಧ್ಯದಲ್ಲಿ ಬೇರೆಲ್ಲೂ ಹೋಗಿರಲಿಲ್ಲ. ನಿಜವಾಗಿ ಅವರಿಗೆ ಈ ಸಮಯದಲ್ಲಿಯೇ ಬೈಪಾಸ್ ಸರ್ಜರಿಗೆ ಅವರು ಒಳಗಾದರು. ಚಿಕಿತ್ಸೆಯ ನಂತರ ನಾವು ಪುನಃ ಸೇರಿಕೊಂಡು ಕೆಒಸಿಎಲ್ ಕಂಪನಿಯ ಕಾರ್ಮಿಕರ ಬಗೆಗೆ ಮತ್ತು ಈಗ ಅಲ್ಲಿ ಹಾಳಾಗಿರುವ ಪರಿಸರವನ್ನು ಹೇಗೆ ಪುನರ್ ರೂಪಿಸಬಹುದೆಂಬ ಕುರಿತು ಚಿಂತಿಸಿದ್ದೇವೆ. ಅಲ್ಲದೇ ಕುದುರೇಮುಖ ರಾಷ್ಟ್ರ್ಈಯ ಉದ್ಯಾನ ಯೋಜನೆಯಿಂದ ನೆಲೆ ಕಳೆದುಕೊಳ್ಳುತ್ತಿದ್ದ ಗಿರಿಜನರನ್ನು ಅಲ್ಲಿಗೇ ಹೋಗಿ ಅವರೊಡನೆ ಅಭಿಪ್ರಾಯವನ್ನು ಹಂಚಿಕೊಂಡು ಬಂದಿದ್ದಾರೆ. ನಂತರ ಬೆಂಗಳೂರಿನಲ್ಲಿ ಅಂದಿನ ಸಮಾಜಕಲ್ಯಾಣ ಸಚಿವ ಕಾಗೋಡು ತಿಮಪ್ಪ ಅವರೊಂದಿಗೆ ಗಿರಿಜನರು ಅಲ್ಲಿಯೇ ಇರಲು ಸಾದ್ಯವಾಗುವಹಾಗೆ ಮಾರ್ಗೋಪಾಯಗಳ ಕುರಿತು ಚರ್ಚಿಸಿದ್ದಾರೆ. ಜನತಾಂತ್ರಿಕ ವಿಧಾನದಿಂದ ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗುವ ಕುರಿತಾಗಿ ಆಸಕ್ತಿ ವಹಿಸಿದ್ದಾರೆ. ನಮ್ಮ ಜನತಂತ್ರ ಮಾನವೀಯ ಮುಖವನ್ನು ಇಟ್ಟುಕೊಂಡಿದೆ ಎಂದು ನಂಬಿ ಆ ಭರವಸೆಯಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಲು ತಮ್ಮೆಲ್ಲಾ ಸಂಪರ್ಕಗಳನ್ನು ಬಳಸಿಕೊಂಡಿದ್ದಾರೆ. ಇದನ್ನೆಲ್ಲಾ ನಾನು ಅವರನ್ನು ಕೇವಲ ಹೊಗಳಲು ಹೇಳುತ್ತಿಲ್ಲ. ಅವರೊಂದಿಗೆ ಈ ಎಲ್ಲಾ ಕೆಲಸಗಳಲ್ಲಿ ಭಾಗಿಯಾಗಿದ್ದುಕೊಂಡು ಇದನ್ನು ದಾಖಲಿಸುತ್ತಿದ್ದೇನೆ.
ಬಾಯಿಗೆ ಬಂದಂತೆ, ಮನಸ್ಸಿಗೆ ತೋಚಿದಂತೆ ಮಾತನಾಡುವ ಜನ ತಾವು ಈ ಹೋರಾಟಗಳಲ್ಲಿ ಭಾಗವಹಿಸದಿದ್ದರೂ ಹೋರಾಟದ ವಿಚಾರಗಳನ್ನು ತಿಳಿದುಕೊಳ್ಳುವ ಮನಸ್ಸು ಮಾಡಲಿ ಎಂದು ಈ ವಿವರಣೆಗಳಿಂದ ಆಶಿಸುತ್ತೇವೆ.
ಕೆ.ಜಿ.ಶ್ರೀಧರ್,ವಾಸ್ತುಶಿಲ್ಪಿ.
kgsdhar@gmail.com
ತುಂಗಾ ಮೂಲ ಉಳಿಸಿ ಹೋರಾಟ ಸಮಿತಿಯ ಪರವಾಗಿ.
ತೀರ್ಥಹಳ್ಳಿ.