ಅನಾರ್ಕಲಿಯ ಸೇಫ್ಟಿಪಿನ್

ಅನಾರ್ಕಲಿಯ ಸೇಫ್ಟಿಪಿನ್

ಪುಸ್ತಕದ ಲೇಖಕ/ಕವಿಯ ಹೆಸರು
ಜಯಂತ ಕಾಯ್ಕಿಣಿ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ಬೆಲೆ: ರೂ.೧೭೫.೦೦, ಮುದ್ರಣ: ೨೦೨೧

ಜಯಂತ್ ಕಾಯ್ಕಿಣಿ ಕತೆಗಳೆಂದರೆ ಒಂಥರಾ ಮುದ್ದು ಮುದ್ದಾಗಿರುತ್ತದೆ. ಕತೆಗಳನ್ನು ಓದುತ್ತಾ ಓದುತ್ತಾ ಆ ಊರು, ಜನರು, ಸನ್ನಿವೇಶಗಳಲ್ಲಿ ನಾವು ಕಳೆದೇ ಹೋಗುತ್ತೇವೆ ಎಂದೇನೋ ಅನಿಸಿಬಿಡುತ್ತದೆ. ಅದೇ ರೀತಿಯ ೯ ಕತೆಗಳನ್ನು ಜಯಂತ್ ಕಾಯ್ಕಿಣಿಯವರು ‘ಅನಾರ್ಕಲಿಯ ಸೇಫ್ಟಿಪಿನ್' ಕಥಾಸಂಕಲನದಲ್ಲಿ ನೀಡಿದ್ದಾರೆ.

ತಮ್ಮ ಮುನ್ನುಡಿಯಾದ ‘ಅರಿಕೆ’ಯಲ್ಲಿ ಅವರು ಬರೆದದ್ದು ಹೀಗೆ “ಸುಗ್ಗಿ ಹಬ್ಬದ ‘ಹಗರಣ'ದ ಹುಣ್ಣಿಮೆಯ ದಿನ. ರಥಬೀದಿಯಲ್ಲಿ ಮರಕಾಲು ಕಟ್ಟಿಕೊಂಡ ವೇಷಗಳು ಮೆರವಣಿಗೆಯಲ್ಲಿ ಬರುತ್ತಿದ್ದವು. ವಾಲದಂತೆ ಬೀಳದಂತೆ ಸಮತೋಲ ಕಾಯ್ದುಕೊಳ್ಳಲೆಂದೇ ಅವು ಮರದ ಮೊಂಡು ಹೆಜ್ಜೆಗಳನ್ನು ಅತ್ತ ಇತ್ತ ಹಿಂದೆ ಮುಂದೆ ಲಯಬದ್ಧವಾಗಿಯೇ ಊರುತ್ತ ಕೈಗಳನ್ನೂ ಆಡಿಸುತ್ತ ಕುಣಿಯುತ್ತ ಚಲಿಸುತ್ತಿದ್ದವು. ಬಚಾವಿನ ಉಪಾಯವೇ ಒಂದು ಚಲನಶೀಲ ಲಾಸ್ಯವಾಗಿ ಅಲ್ಲಲ್ಲೆ ರೂಪುಗೊಳ್ಳುವ ಹೃದ್ಯವಾದ ವಿದ್ಯಮಾನ ಅದು. ಕಥನಕಲೆಯೂ ಈ ಬಗೆಯ ಬಚಾವಿನ ಲಾಸ್ಯವೇ ಇದ್ದೀತು.”

ಈ ಪುಸ್ತಕದಲ್ಲಿರುವ ೯ ಕಥೆಗಳೆಂದರೆ ಕುತನಿ ಕುಲಾವಿ, ಭಾಮೆ ಕೇಳೊಂದು ದಿನ, ಬೆಳಕಿನ ಬಿಡಾರ, ವಾಯಾ ಚಿನ್ನದ ಕೇರಿ, ಎವರ್ ಗ್ರೀನ್, ಕಾಗದದ ಚೂರು, ಹಲೋ..ಮೈಕ್ ಟೆಸ್ಟಿಂಗ್, ಅನಾರ್ಕಲಿಯ ಸೇಫ್ಟಿಪಿನ್ ಮತ್ತು ಮೃಗನಯನಾ. 

ಕಾಯ್ಕಿಣಿಯವರ ಕಥೆಗಳಲ್ಲಿ ಆಯಾ ಊರಿನ, ಪರಿಸರದ ವಿವರಣೆ ಯಥೇಚ್ಛವಾಗಿ ಕಂಡುಬರುತ್ತದೆ. ‘ಭಾಮೆ ಕೇಳೊಂದು ದಿನ' ಕಥೆಯಲ್ಲಿ ಒಂದೆಡೆ ಬರೆಯುತ್ತಾರೆ “ಧೂಳಿನ ದಟ್ಟ ಮೋಡವೇ ಎಲ್ಲ ಕಡೆ ಕವಿದಂತಿತ್ತು. ಯಾವ ಗುಡ್ಡಗಳೂ ಕಾಣುತ್ತಿರಲಿಲ್ಲ. ಅರೆ, ಹಿಚ್ ಕಡ್ ಕ್ರಾಸು ಎಲ್ಲಿ? ಎಂದಿನ ಪರಿಚಿತ ಮರ, ತಂಗುದಾಣ ಏನೂ ತೋರುತ್ತಿಲ್ಲ. ಧೂಳು ತಿಳಿಯಾದರೂ ಪ್ರದೇಶಕ್ಕೆ ಪ್ರದೇಶವೇ ಬದಲಾಗಿ ಹೋಗಿದೆ. ಅಕ್ಕಪಕ್ಕದ ಗುಡ್ಡಗಳೆಲ್ಲ ಧ್ವಂಸಗೊಂಡಿವೆ. ಓಹೋ ಚತುಷ್ಪಥ ಕಾಮಕಾರಿ! ಗುಡ್ಡಕ್ಕೆ ಗುಡ್ಡವನ್ನೇ ಎಳನೀರು ಕೆತ್ತಿದಂತೆ ಕೆತ್ತಿ ಕೆತ್ತಿ ಎಸೆಯಲಾಗಿದೆ. ಸಹಸ್ರಾರು ವರ್ಷಗಳಿಂದ ನಿಂತು ಜೀವಗಳಿಗೆ ತಂಪೆರೆದ ಗುಡ್ಡಗಳು ಅವು. ಯುದ್ಧಭೂಮಿಯಂತೆ ಕಾಣುತಿದೆ ಎಲ್ಲಾ. ಒಂದೇ ದಾರಿ ಇದ್ದೆಡೆಯಲ್ಲಿ ಈಗ ನಾಲ್ಕು ಪಥಗಳು. ಯಾವುದು ಹೋಗುವುದು ಯಾವುದು ಬರುವುದು ಪತ್ತೆಯೇ ಹತ್ತುತ್ತಿಲ್ಲ. ಎಲ್ಲಿ ದಾಟಿ ಯಾವ ದಿಕ್ಕಿಗೆ ಹಿಚಕಡ್ ರಸ್ತೆಯ ಬಿಂದು ಎಂಬುದೂ ತೋಚುತ್ತಿಲ್ಲ. ಯುದ್ಧ ನೌಕೆಗಳಂತೆ ತೋರುವ ಚಿತ್ರವಿಚಿತ್ರ ಯಂತ್ರಗಳು, ಲಾರಿಗಳು ಧೂಳಿನ ಮಹಾಸಾಗರದಲ್ಲಿ ಈಸುತ್ತಿವೆ. ದಢೂತಿ ಲಾರಿಗಳ ಗಾಜಿನ ಕಣ್ತುಂಬ ಧೂಳು ಕವಿದು ಒಳಗೆ ಚಾಲಕನೇ ಇಲ್ಲದೆ ಅವು ಚಲಿಸುತ್ತಿರುವಂಥ ವಿಷಣ್ಣ ಭಾಸ. ‘ರಸ್ತೆಗೆ ಅಡ್ಡ ಬಂತು ಅಂತ ತೆಗಿತಾರಂತೆ. ಅರೇ.. ರಸ್ತೆ ತಂದವರು ಇವರು. ಗುಡ್ಡಾ ನಡಕೊಂಡು ಬಂದು ನಿಂತಿದೆಯೇ, ಅಡ್ಡ ಬಂತು ಹೇಳಲಿಕ್ಕೆ? ಅಡ್ಡದಾರಿ ಹಿಡಿದವರು ಇವರು..' ಎಂದು ಕರವಸ್ತ್ರದಿಂದ ಮುಖ ಮುಚ್ಚಿಕೊಂಡು ಎಡಕ್ಕೆ ಹೊರಳಿದರೆ ದೂರದಲ್ಲಿ ಶಾಂತಣ್ಣನ ಮಗ ಕಾರು ನಿಲ್ಲಿಸಿಕೊಂಡು ‘ಕೊಯ್' ಹಾಕುತ್ತಿದ್ದ. ಅವನೂ ಕರವಸ್ತ್ರ ಮುಖಕ್ಕೆ ಕಟ್ಟಿಕೊಂಡೇ ‘ಕೊಯ್' ಹಾಕುತ್ತಿದ್ದರಿಂದ ಅದು ಕ್ಷೀಣವಾದ ರೋದನದಂತೆ ಕೇಳುತ್ತಿತ್ತು. ಅವನು ಬಾಯ್ ಬಿಟ್ಟು ಕೂಗಿದರೆ ಬಾಯಿಗೆ ಅಭಿವೃದ್ಧಿಯ ಮಣ್ಣು ಬೀಳುವಂತಿತ್ತು.” ಇದು ಇಂದಿನ ಅಭಿವೃದ್ಧಿಯ ವಿಡಂಬನಾ ಸಾಲುಗಳು.

ಸುಮಾರು ೧೭೪ ಪುಟಗಳ ಈ ಪುಸ್ತಕದ ಅರ್ಪಣೆಯು ಬಹಳ ಸೊಗಸಾಗಿದೆ. “ಮೀನು ಹಿಡಿಯಲು ಕೂತವರು ಮಾತನಾಡಬಾರದು, ಮಾತಿನ ಹಂಗಿಲ್ಲದ ಅಂಥ ನಿಡುಗಾಲದ ಒಡನಾಡಿಗಳು : ರಾಜೇಂದ್ರ ರಮಾನಂದ ವಿವೇಕ ಶ್ರೀರಾಮ ಮತ್ತು ‘ತಗಡಿ' ಈ ದೋಸ್ತಿ ಖಾತೆಗೆ ಈ ಪುಸ್ತಕ ಜಮಾ” ಎಂದು ತಮ್ಮದೇ ಶೈಲಿಯಲ್ಲಿ ಪುಸ್ತಕವನ್ನು ಅರ್ಪಿಸಿದ್ದಾರೆ. ಖ್ಯಾತ ಕಲಾವಿದ ರಾವ್ ಬೈಲ್ ಅವರ ರೇಖಾಚಿತ್ರವನ್ನು ಮುಖಪುಟಕ್ಕೆ ‘ಅಪಾರ' ಇವರು ಬಳಸಿ ವಿನ್ಯಾಸ ಮಾಡಿದ್ದಾರೆ.