ಅನುವಾದ ಕಾರ್ಯ
ಅನುವಾದ ಕಾರ್ಯದಲ್ಲಿ ನಿಘಂಟುಗಳ ಮರೆಹೊಗುವುದು (ಮರೆಹೊಗು = ಪುಟ್ಟಮಗು ಬೆದರಿದಾಗ ತಾಯಿಯ ನಿರಿಗೆಯ ಮರೆ ಹೊಕ್ಕು ಅಲ್ಲಿಂದ ಇಣುಕಿ ನೋಡುತ್ತದೆ) ಅನಿವಾರ್ಯ. ಪದಶಃ ಅನುವಾದಗಳು ಹಾಗೂ ನಮ್ಮ ಪರಿಕಲ್ಪನೆಯ ಇತಿಮಿತಿಗಳು ಅನುವಾದಕ್ಕೆ ನ್ಯಾಯ ಒದಗಿಸುವುದಿಲ್ಲ. ಜನಪ್ರಿಯ ಪತ್ರಿಕೆಯೊಂದರಲ್ಲಿ ವಿದೇಶದ ಪ್ರಸಿದ್ಧ ಕ್ರಿಕೆಟಿಗನೊಬ್ಬ (ಲಕ್ನೋ ಬಳಿ) ತಾನು ಹುಟ್ಟಿದ ಆಸ್ಪತ್ರೆಯನ್ನೂ ಅದರಲ್ಲಿನ ಕಾರ್ಮಿಕರ ಕೋಣೆಯನ್ನೂ ಸಂದರ್ಶಿಸಿದನೆಂದು ವರದಿಯಾಗಿತ್ತು. ಈ ಕಾರ್ಮಿಕರ ಕೋಣೆಯೆಂಬುದು Labour Ward ಎಂಬುದರ ಪದಶಃ ಅನುವಾದ. ವಾಸ್ತವವಾಗಿ ಲೇಬರ್ ವಾರ್ಡನ್ನು ಕನ್ನಡದಲ್ಲಿ ಹೆರಿಗೆ ಕೋಣೆ ಅಥವಾ ಸಂಸ್ಕೃತದಲ್ಲಿ ಪ್ರಸೂತಿಗೃಹ ಎನ್ನಲಾಗುತ್ತದೆ.
ಈ ಪ್ರಸೂತಿಗೃಹವೆಂಬುದು ಕನ್ನಡದ್ದೇ ಎನ್ನುವಷ್ಟು ಬಳಕೆಯಲ್ಲಿ ಬಂದುಬಿಟ್ಟಿದೆ. ಮೂಡಣ ಪಡುವಣವೆಂಬ ಕನ್ನಡ ಪದಗಳು ಇಂದು ಮಾಯವಾಗಿ ಪೂರ್ವ ಪಶ್ಚಿಮವೆಂಬ ಸಂಸ್ಕೃತ ಪದಗಳು ರಾರಾಜಿಸುತ್ತಿವೆ. ಪದಾರ್ಥ (ಪದ + ಅರ್ಥ) ತೋಚದಾಗ ಹಿಂದೀಯಿಂದಲೋ ಸಂಸ್ಕೃತದಿಂದಲೋ ಅನಾಮತ್ತಾಗಿ ಎತ್ತಿಕೊಂಡುಬಿಡುವುದು ಅನುವಾದ ಕಾರ್ಯದ ಒಂದು ದೋಷ. ಇಂಜಿನಿಯರ್ ಎಂಬ ಪದಕ್ಕೆ ಸಂಸ್ಕೃತದಲ್ಲಿ ಅಭಿಯಂತಾ ಎಂಬ ಪದವಿದೆ. ಕನ್ನಡದಲ್ಲಿ ಅದು ಅಪರಿಚಿತ ಮಾತ್ರವಲ್ಲ ಅದೇ ಅಪಭ್ರಂಶವನ್ನು ಅಭಿಯಂತರು / ಅಭಿಯಂತರರು ಎಂದು ಬಳಸುವ ಪರಿಪಾಠವಿತ್ತು. ಅದೇ ರೀತಿ ಪೊಲೀಸ್ ಎಂಬ ಪದವನ್ನು ಆರಕ್ಷಕ / ಅರಕ್ಷಕ ಇತ್ಯಾದಿಯಾಗಿ ಬಳಸಿದ ಉದಾಹರಣೆಯಿದೆ.
ನಾನು ಕೆಲಸ ಮಾಡುವ ಎಚ್ ಎ ಎಲ್ ಕಾರ್ಖಾನೆಯಲ್ಲಿ Test Bed ಎಂಬ ಪದವನ್ನು ಒಬ್ಬರು ಪರೀಕ್ಷಾ ತಲ್ಪ ಎಂಬುದಾಗಿ ತರ್ಜುಮೆ ಮಾಡಿದ್ದರು. ವಿಮಾನದ ಇಂಜಿನ್ ಅನ್ನು ವಿಮಾನಕ್ಕೆ ಅಳವಡಿಸುವ ಮುನ್ನ ನೆಲದ ಮೇಲೆಯೇ ಅದನ್ನು ಪರೀಕ್ಷಿಸಿ ಎಲ್ಲ ಮಾನಕ ಅಂಶಗಳನ್ನೂ ಅದು ಪೂರೈಸುತ್ತಿದೆಯೇ ಎಂದು ಒರೆಗೆ ಹಚ್ಚಿ ನೋಡಲು ಒಂದು ವೇದಿಕೆ ಸ್ಥಾಪಿಸಿ ಉಡ್ಡಯನ, ಹಾರಾಟ, ಏರಿಳಿತಗಳ ಸಹಜ ಸನ್ನಿವೇಶದಲ್ಲಿ ಇಂಜಿನ್ ಹೇಗೆ ಪ್ರವರ್ತಿಸುತ್ತದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅಂದರೆ ಚಿನ್ನ ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು ಒರೆಗೆ ಹಚ್ಚಿ ನೋಡುವುದಿಲ್ಲವೇ ಹಾಗೆ. ಅಂತೆಯೇ ಟೆಸ್ಟ್ ಬೆಡ್ ಅನ್ನು ಒರೆಗೆ ಹಚ್ಚುವ ವೇದಿಕೆ ಅರ್ಥಾತ್ ಒರೆಪೀಠ ಎನ್ನಬಹುದಲ್ಲದೆ ಪರೀಕ್ಷಾತಲ್ಪ ಅರ್ಥಾತ್ ಪರೀಕ್ಷಾ ಹಾಸಿಗೆ ಎನ್ನುವುದು ಎಷ್ಟು ಸರಿ?
ನಮ್ಮ ಸಾಮಾನ್ಯ ಆಡುಭಾಷೆಯಲ್ಲಿಯೇ ನಾವು ಹಲವಾರು ಸಲ ಕನ್ನಡವನ್ನು ಬಿಟ್ಟು ಸಂಸ್ಕೃತ ಇಂಗ್ಲಿಷ್ ಇತ್ಯಾದಿಗಳತ್ತ ಒಲೆದಿರುತ್ತೇವೆ. ಯಾರಾದರೂ ತಮ್ಮ ಹೆಂಡತಿಯನ್ನು ಪರಿಚಯಿಸುವಾಗ ಈಕೆ ನನ್ನ ಪತ್ನಿ ಎನ್ನುತ್ತಾರಾಗಲೀ ನನ್ನ ಹೆಂಡತಿ ಎಂದು ಹೇಳುವುದುಂಟೇ? ಈಗೀಗ ನನ್ನ ವೈಫ್ ಎನ್ನಲಾಗುತ್ತದೆ. ಹೆಂಡತಿಯನ್ನು ಹೆಂಡತಿ ಎಂದು ಕರೆಯಲು ಹೆಂಡತಿಯದೇ ಭಯವಿದ್ದರೂ ಇದ್ದೀತು! ಹಳ್ಳಿಗರೂ ತಮ್ಮ ಹೆಂಡತಿಯ ಬಗ್ಗೆ ಹೇಳುವಾಗ ನಮ್ ಹೆಂಗುಸ್ರು ಅನ್ತಾರೆ. ಅದು ಬಹುಶಃ ಅವರು ತಮ್ಮ ಹೆಂಡತಿಗೆ ಕೊಡುವ ಗೌರವ.
ಇರಲಿ ಇನ್ನು ನಮ್ಮ ಅನುವಾದದ ಕಥೆಗೆ ಬರೋಣ. Aeroplane ಬರುವ ಮುನ್ನ ನಮ್ಮಲ್ಲಿ ವಿಮಾನ ಇತ್ತಲ್ಲವೇ, ಆದರೆ ನಮ್ಮಲ್ಲಿ ಬಸ್ ಅನ್ನೋದು ಇರಲಿಲ್ಲ, ಅದಕ್ಕೇ ಬಸ್ಸು ಅನ್ತೀವಿ, ಅಂತೆಯೇ ಕಾರು ರೈಲು ಇತ್ಯಾದಿಗಳಿವೆ. ಇಂಗ್ಲಿಷಿನ ಟೇಬಲ್ ನಮ್ಮ ಕನ್ನಡದಲ್ಲಿ ಮೇಜು ಆಗುತ್ತೆ ಎಂದು ಯಾರಾದರೂ ಹೇಳುತ್ತಾರೆ ಆದರೆ ವಾಸ್ತವವಾಗಿ ಈ ಮೇಜು ಅನ್ನೋದು ಪೋರ್ಚುಗೀಸ್ ಪದ. ಪೋರ್ಚುಗೀಸರು ಇಂಡಿಯಾಕ್ಕೆ ಬಂದಾಗ ಅವರ ಮೇಜನ್ನು ನಮಗೆ ಪರಿಚಯಿಸಿದರು.
ಅಂದಹಾಗೇ ನಮ್ಮ ಚಿತ್ರಾನ್ನವನ್ನು ಇಂಗ್ಲಿಷಿನಲ್ಲಿ ಏನಂತಾರೆ? ಕನ್ನಡದ ಉಪ್ಪಿಟ್ಟು ತಮಿಳಿನಲ್ಲಿ ಉಪ್ಪುಮಾವ್ ಆಗುತ್ತೆ. ಅದನ್ನೇ ಇಂಗ್ಲಿಷಿನಲ್ಲಿ Upma ಎಂದು ಬರೆಯುತ್ತಾರೆ. ಅಂದರೆ ಇತರ ಭಾಷೆಗಳ ಸತ್ವಗಳನ್ನೂ ಮೈಗೂಡಿಸಿಕೊಂಡು ಅಂದರೆ ಅವುಗಳ ಪದಸಂಪತ್ತನ್ನೂ ತನ್ನದಾಗಿಸಿಕೊಂಡು ಇಂಗ್ಲಿಷು ಜನಪ್ರಿಯವಾಗಿದೆ.
ನಾನು ನಮ್ಮ ಕಾರ್ಖಾನೆಯ ನಾಮಫಲಕಗಳನ್ನು ಕನ್ನಡೀಕರಿಸುವ ಪ್ರಕ್ರಿಯೆಯಲ್ಲಿ Blade Shop ಎಂಬುದನ್ನು ಅಲಗುಶಾಲೆ ಎಂದು ಬಳಸಿದೆ. ಶಾಲೆ ಎಂಬ ಪದ ನೋಡಿದಾಕ್ಷಣ ಹಲವರು ಅದನ್ನು ಸೀಮಿತಾರ್ಥದಲ್ಲಿ school ಎಂದು ಪರಿಭಾವಿಸಿಕೊಂಡರು. ಹಾಗೆ ನೋಡಿದರೆ ಶಾಲೆ ಎಂದರೆ ಆವರಣ ಎಂದರ್ಥ. ಉದಾಹರಣೆಗೆ ಭೋಜನಶಾಲೆ, ಗೋಶಾಲೆ, ಗಜಶಾಲೆ, ಆಯುಷ್ಕರ್ಮಶಾಲೆ, ಆಯುಧಶಾಲೆ, ಪಾಠಶಾಲೆ ಇತ್ಯಾದಿಗಳಲ್ಲಿ ಶಾಲೆ ಎಂದರೆ ಆವರಣ ಎಂದೇ ಅರ್ಥ.
ಅದೇ ರೀತಿ ಪೊಲೀಸ್ ಕಾರ, ಗಂಗಡಕಾರ, ಚರ್ಮಗಾರ>ಸಮಗಾರ, ಬಳೆಗಾರ ಇತ್ಯಾದಿಗಳನ್ನು ಗಮನಿಸಿದಾಗ ‘ಕಾರ’ ಎಂಬ ಪ್ರತ್ಯಯವು ವ್ಯಕ್ತಿಯನ್ನು ಸೂಚಿಸುವುದನ್ನು ನೋಡುತ್ತೇವೆ. ಆದರೆ Machine Shop ಎನ್ನುವುದನ್ನು ಯಂತ್ರಗಾರ ಎನ್ನುವುದು ಸರಿಯಲ್ಲ. ಯಂತ್ರಗಳಿರುವ ಆಗರ / ಆಗಾರ (ಸ್ಥಳ) ವು ಯಂತ್ರಾಗಾರ (ಸವರ್ಣದೀರ್ಘ ಸಂಧಿ) ಆಗುವುದೇ ಸರಿ. ಇನ್ನು ಕೆಲವರು ಉಪ+ಆಹಾರ = ಉಪಾಹಾರವನ್ನು ಉಪಹಾರ ಎನ್ನುತ್ತಾರೆ.
ನಾಮಫಲಕಗಳು ಎದ್ದು ಕಾಣುವಂತಿದ್ದು ದೂರದಿಂದಲೇ ಸುಲಭವಾಗಿ ಓದಲು ಸಾಧ್ಯವಾಗುವಂತಿರಬೇಕು. ಅಕ್ಷರಗಳು ಕಡಿಮೆಯಿದ್ದು ದೊಡ್ಡವಾಗಿದ್ದರೆ ಓದಲು ಸುಲಭ. ಉದಾಹರಣೆಗೆ ‘ಗೆಳೆಯರು’ ಎಂಬ ನಾಲ್ಕು ಅಕ್ಷರಗಳ ಪದಕ್ಕಿಂತ ‘ಮಿತ್ರರು’ ಎಂಬ ಮೂರಕ್ಷರದ ಪದ ಸೂಕ್ತವೆನಿಸುತ್ತದೆ. ‘ನೋಟುಮುದ್ರಣಕೇಂದ್ರ’ ಎಂಬುದಕ್ಕಿಂತ ‘ಟಂಕಸಾಲೆ’ ಅತ್ಯಂತ ಸೂಕ್ತವಾಗಿ ಒಪ್ಪುತ್ತದೆ. Workshop ಗೆ ಕಾರ್ಯಾಗಾರ ಎನ್ನುವುದಕ್ಕಿಂತ ‘ಕಮ್ಮಟ’ ಎನ್ನುವುದು ಉಚಿತ. ಹಾಗೆಯೇ Heat Treatment Shop ಎನ್ನುವುದನ್ನು ಉಷ್ಣ ಸಂಸ್ಕರಣ ಕಾರ್ಯಾಗಾರ ಎನ್ನುವುದಕ್ಕಿಂತ ‘ತಾಪಸಂಸ್ಕಾರ’ ಎನ್ನುವುದೇ ಸರಿಯೇನೋ?
ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಅಥವಾ ಆಯಾ ಕ್ಷೇತ್ರದ ನಿಕಟ ಪರಿಚಯ ಇರುವವರಿಗೆ ಮಾತ್ರವೇ ತಮ್ಮ ಪರಿಧಿಯ ವಸ್ತುವೊಂದರ ಅಥವಾ ಪದವೊಂದರ ನಿರ್ದುಷ್ಟ ಪರಿಕಲ್ಪನೆಯಿರುತ್ತದೆ. ಆದ್ದರಿಂದ ಅನುವಾದ ಕಮ್ಮಟಗಳಲ್ಲಿ ನಿಘಂಟು ತಜ್ಞರೊಂದಿಗೆ ಆಯಾ ಕ್ಷೇತ್ರಗಳನ್ನು ಪ್ರತಿನಿಧಿಸುವವರೂ ಇದ್ದರೆ ಒಳ್ಳೆಯದು.
Comments
ಉ: ಅನುವಾದ ಕಾರ್ಯ