ಅಪಘಾತವಾದಾಗ ಏನಾಯಿತು ಎನ್ನುವುದನ್ನು ಪ್ರೇಷಿಸುವ ವ್ಯವಸ್ಥೆ ಇ-ಲೋಕ-15(22/3/2007)

ಅಪಘಾತವಾದಾಗ ಏನಾಯಿತು ಎನ್ನುವುದನ್ನು ಪ್ರೇಷಿಸುವ ವ್ಯವಸ್ಥೆ ಇ-ಲೋಕ-15(22/3/2007)

ಬರಹ

ಅಪಘಾತವಾದಾಗ ಏನಾಯಿತು ಎನ್ನುವುದನ್ನು ಪ್ರೇಷಿಸುವ ವ್ಯವಸ್ಥೆ
ಜನರಲ್ ಮೋಟರ್ಸ್‌ರವರ ಕಾರುಗಳಲ್ಲಿ ಕಾರು ಅಪಘಾತವಾದಾಗ ಅದರಲ್ಲಿ ಪ್ರಯಾಣಿಸುತ್ತಿರುವರಿಗೆ ಮತ್ತು ಚಾಲಕನಿಗೆ ಹೆಚ್ಚು ಜಖಂ ಆಗದಂತೆ ಮಾಡುವ ವ್ಯವಸ್ಥೆಗಳಿವೆ.ಅಪಘಾತವಾದೊಡನೆ,ಚಾಲಕನು ಸ್ಟಿಯರಿಂಗ್ ವೀಲ್‌ಗೆ ಹೊಡೆದು ಅಪ್ಪಚ್ಚಿಯಾಗದಂತೆ,ಅದರಲ್ಲಿರುವ ಚೀಲ ಗಾಳಿ ತುಂಬಿಸಿಕೊಂಡು ರಕ್ಷಣೆ ಒದಗಿಸುತ್ತದೆ.ಕಾರಿನಲ್ಲಿ ಆನ್‌ಸ್ಟಾರ್‍ ವ್ಯವಸ್ಥೆ ಅಪಘಾತವಾದ ಬಗೆಯನ್ನು,ಯಾವ ಭಾಗಕ್ಕೆ ಜಖಂ ಆಗಿದೆಯೆನ್ನುವ ಮಾಹಿತಿಯನ್ನು ಪ್ರೇಷಿಸುತ್ತದೆ. ಚಾಲನ ಚಕ್ರವೂ ಸೇರಿ ವಿವಿಧೆಡೆ ಅಳವಡಿಸಲಾದ ಸಂವೇದಕಗಳು ಈ ಮಾಹಿತಿಯನ್ನು ಸಂಗ್ರಹಿಸುತ್ತವೆ.ತುರ್ತು ಚಿಕಿತ್ಸಾ ಘಟಕಗಳಿಗೆ ಈ ಮಾಹಿತಿಯು ರವಾನೆಯಾಗುತ್ತದೆ.ಅಪಘಾತದ ತೀವ್ರತೆ, ಪ್ರಯಾಣಿಕರಿಗೆ ಯಾವ ನಮೂನೆಯ ಚಿಕಿತ್ಸೆ ಅಗತ್ಯವೆನ್ನುವುದನ್ನು ನಿರ್ಧರಿಸಲು ಈ ಮಾಹಿತಿ ಸಹಾಯವಾಗುತ್ತವೆ. ಸಾಮಾನ್ಯ ಪೆಟ್ಟು ಬಿದ್ದರೆ, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಿದರೆ ಸಾಕು. ತೀವ್ರ ಅಪಘಾತಗಳಿಗೆ ಅಗತ್ಯ ಚಿಕಿತ್ಸೆ ಲಭ್ಯವಿರುವ ಅಸ್ಪತ್ರೆಗೆ ಗಾಯಾಳುಗಳನ್ನು ಒಯ್ಯಬೇಕಾಗುತ್ತದೆ.ಸೂಕ್ತ ನಿರ್ಧಾರಕ್ಕೆ ಬರಲು ಕಡಿಮೆ ಸಮಯದಲ್ಲಿ ಸಾಧ್ಯವಾಗುವುದು ಅನುಕೂಲವೇ ಸರಿ.ಇತರ ಸಂದರ್ಭಗಳಲ್ಲಿ ಚಾಲಕನಿಗೆ ಚಾಲನೆಯ ಬಗ್ಗೆ ನೆರವು ನೀಡುವ ಆನ್‌ಸ್ಟಾರ್‌ ವ್ಯವಸ್ಥೆ ಆರಂಭದಲ್ಲಿ ಏಳುನೂರು ಡಾಲರ್‍,ನಂತರ ತಿಂಗಳಿಗೆ ಹದಿನೆಂಟು ಡಾಲರ್‍ ಖರ್ಚಿನ ಬಾಬತ್ತು.

ಡೆಸ್ಕ್‌ಟಾಪ್ ಹಿಂದಿಕ್ಕುತ್ತಿರುವ ಲ್ಯಾಪ್‌ಟಾಪ್
2011ರ ವೇಳೆ ಮಾರಾಟಸಂಖ್ಯೆಯಲ್ಲಿ ಲ್ಯಾಪ್‌ಟಾಪ್‌ನಂತಹ ಅತ್ತಿತ್ತ ಒಯ್ಯಬಲ್ಲ ಕಂಪ್ಯೂಟರ್‌ಗಳೇ ಸ್ಥಾಯೀಯಾಗಿ ಮೇಜಿನ ಮೇಲಿಟ್ಟು ಬಳಸುವ ಕಂಪ್ಯೂಟರ್‌ಗಳನ್ನು ಮೀರಿಸಬಹುದೆಂದು ತಜ್ಞರ ಅಂದಾಜು.ಕಳೆದ ವರ್ಷ ವಿಶ್ವದಲ್ಲಿ ಎಂಭತ್ತು ದಶಲಕ್ಷ ಲ್ಯಾಪ್‌ಟಾಪ್‌ಗಳು ಮಾರಾಟವಾಗಿದ್ದರೆ,ನೂರನಲುವತ್ತು ದಶಲಕ್ಷ ಡೆಸ್ಕ್‌ಟಾಪ್‌ಗಳು ಮಾರಾಟವಾಗಿವೆ.ವರ್ಷದಿಂದ ವರ್ಷಕ್ಕೆ ಲ್ಯಾಪ್‌ಟಾಪ್‌ಗಳ ಬಳಕೆ ಹದಿನಾರು ಶೇಕಡಾ ಏರಿದರೆ,ಡೆಸ್ಕ್‌ಟಾಪ್‌ಗಳು ಬರೇ ನಾಲ್ಕು ಶೇಕಡಾ ಏರುತ್ತಿದೆ.ಇನ್ನೊಂದು ಗಮನಾರ್ಹ ಅಂಶವೆಂದರೆ,ಲ್ಯಾಪ್‌ಟಾಪ್‌ಗಳಲ್ಲಿ ಶೇಕಡಾ ಎಂಭತ್ತು ಭಾಗ ನಿಸ್ತಂತು ಅಂತರ್ಜಾಲ ಸೌಲಭ್ಯ ಹೊಂದಿರುತ್ತವೆ.ಮೊಬೈಲ್ ದೂರವಾಣಿಗಳು ಬಂದ ಮೇಲೆ ಸ್ಥಾಯೀ ದೂರವಾಣಿಗಳಿಗಿಂತ ಅವೇ ಜನಪ್ರಿಯವಾದದ್ದು ಗೊತ್ತೇ ಇದೆ.ಈ ವರ್ಷ ಮೈಕ್ರೋಸಾಫ್ಟ್‌ನ ಹೊಸ ವಿಸ್ತಾ ಕಾರ್ಯನಿರ್ವಹಣಾ ತಂತ್ರಾಂಶ ಲಭ್ಯವಾಗಿರುವ ಕಾರಣ ಹಳೆ ಡೆಸ್ಕ್‌ಟಾಪ್‌ಗಳ ಸ್ಥಾನ ತುಂಬಲು ಹೊಸ ಕಂಪ್ಯೂಟರ್‌ಗಳ ಖರೀದಿ ಹೆಚ್ಚಲಿರುವ ಕಾರಣ ಈ ವರ್ಷ ಡೆಸ್ಕ್‌ಟಾಪ್‌ಗಳ ಖರೀದಿ ತುಸು ಏರಿದರೂ ಅಚ್ಚರಿಯಿಲ್ಲ.

"ತಂತ್ರಾಂಶ ಪಿತಾಮಹ" ಜಾನ್‌ ಬ್ಯಾಕಸ್ ಇನ್ನಿಲ್ಲ
ಫೋರ್‌ಟ್ರಾನ್ ಎಂಬ ಕಂಪ್ಯೂಟರ್‍ ಭಾಷೆಯ ಉಗಮಕ್ಕೆ ಕಾರಣಕರ್ತನಾದ ಜಾನ್‌ ಬ್ಯಾಕಸ್ ಎಂಬ ತಂತ್ರಜ್ಞ ಇನ್ನಿಲ್ಲ.ಮರಣ ಕಾಲಕ್ಕೆ ಆತನಿಗೆ ಎಂಭತ್ತೆರಡು ವರ್ಷ ವಯಸ್ಸಾಗಿತ್ತು.ಫೋರ್‌ಟ್ರಾನ್ ಭಾಷೆ ಉಗಮವಾಗುವರೆಗೆ ಕಂಪ್ಯೂಟರ್‍ ಕ್ರಮವಿಧಿಯನ್ನು ಕೆಲವೇ ಕೆಲವು ಆದೇಶಗಳನ್ನು ಬಳಸಿ ಮಾಡಬೇಕಿತ್ತು. ಇದು ಬಹಳ ತಾಳ್ಮೆ ಬೇಡುವ ಕೆಲಸವಾಗಿತ್ತು. ಇಂತಹ ಕೆಲಸ ಮಾಡಲು ಸೋಮಾರಿತನವೇ ಇಂಗ್ಲಿಷ್‌ನ್ನು ಹೋಲುವ ಫೊರ್‌ಟ್ರಾನ್‌ ಭಾಷೆಯ ಅಭಿವೃದ್ಧಿಗೆ ಕಾರಣವಾಯಿತು ಎಂದು ಬ್ಯಾಕಸ್ ಹೇಳಿಕೊಂಡಿದ್ದಾನೆ.ಐವತ್ತರ ದಶಕದಲ್ಲೇ ಈ ಉನ್ನತ ಮಟ್ಟದ ಕಂಪ್ಯೂಟರ್‌ ಭಾಷೆಯು ಬಳಕೆಗೆ ಬಂತು.ಈ ಸಾಧನೆಗೆ ಎಪ್ಪತ್ತರ ದಶಕದಲ್ಲಿ ಟ್ಯೂರಿಂಗ್ ಪ್ರಶಸ್ತಿಯನ್ನು ಬ್ಯಾಕಸ್‌ಗೆ ಪ್ರದಾನ ಮಾಡಲಾಯಿತು.ಈಗಲೂ ಈ ಭಾಷೆಯು ಸುಧಾರಿತ ರೂಪದಲ್ಲಿ ಬಳಕೆಯಾಗುತ್ತಿದ್ದರೂ, ಸಿ,ಸಿ++,ಜಾವಾ,ಸಿ# ಮುಂತಾದ ಹೊಸ ತಲೆಮಾರಿನ ಕಂಪ್ಯೂಟರ್‌ ಭಾಷೆಗಳಷ್ಟು ಜನಪ್ರಿಯವಾಗಿಲ್ಲ.

ನೂರಿಪ್ಪತ್ತು ವರ್ಷ ಹಳೆಯ ಗಣಿತ ಸಮಸ್ಯೆಗೆ ಈಗ ಪರಿಹಾರ
(ಚಿತ್ರ:http://news.wired.com/photos/2/2aa09411-b718-45aa-be20-29a6049024ec-big.jpg)
ಹತ್ತೊಂಭತ್ತನೆಯ ಶತಮಾನದ ನಾರ್ವೆಯ ಗಣಿತಜ್ಞ ಸೋಫಸ್ ಲೀಯ ಸಮಸ್ಯೆಗೆ ಉತ್ತರ ಕಂಡು ಹಿಡಿಯಲು ಗಣಿತಜ್ಞರ ತಂಡಕ್ಕೆ ನಾಲ್ಕು ವರ್ಷಗಳು ಬೇಕಾಯಿತು. ಇದರ ಉತ್ತರವನ್ನು ಕೈಬರಹದಲ್ಲಿ ಬರೆದರೆ ಅದನ್ನು ಬರೆದ ಕಾಗದವನ್ನು ಮ್ಯಾನ್‌ಹಟನ್ ದ್ವೀಪವಿಡೀ ತುಂಬಿಸಬಹುದಂತೆ.ಕಂಪ್ಯೂಟರ್‌ ಸ್ಮರಣಕೋಶದಲ್ಲಿ ಅದನ್ನು ಕುಗ್ಗಿಸಿ ಶೇಖರಿಸಿದರೂ, ಅದು ಬಳಸುವ ಸಾಮರ್ಥ್ಯದ ಸ್ಮರಣಕೋಶದಲ್ಲಿ ನಲುವತ್ತೈದು ದಿನಗಳ ಕಾಲ ನುಡಿಸಲು ಸಾಕಾಗುವಷ್ಟು ಸಂಗೀತ ಮುದ್ರಿಕೆಗಳನ್ನು ಶೇಖರಿಸಬಹುದಂತೆ!ಅದೆಲ್ಲಾ ಸರಿ-ಆ ಸಮಸ್ಯೆ ಏನು ಎಂದಿರಾ?ಇದೊಂದು ಸಮರೂಪದ 248 ಆಯಾಮದ ಆಕೃತಿ ಎಂದು ಮಾತ್ರಾ ಪ್ರಕಟಿಸಲಾಗಿದೆ. ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಗಣಿತಜ್ಞರಿಗೂ ಕಠಿನವಾಗುತ್ತದೆ ಎನ್ನುವುದೇ ನಮಗೆ ಸಮಾಧಾನದ ವಿಷಯ!
*ಅಶೋಕ್‌ಕುಮಾರ್‍ ಎ