ಅಪ್ರತಿಮ ಸಾಧಕಿ: ಕಲರಿಪಯಟ್ಟು ಗುರು ಮೀನಾಕ್ಷಿ ಅಮ್ಮ
ಬಂಗಾರದ ಅಂಚಿನ ಕೆಂಪು ಸೀರೆಯುಟ್ಟು, ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಗುರಾಣಿ ಹಿಡಿದು ಕಲರಿಪಯಟ್ಟು ಗುರು ಮೀನಾಕ್ಷಿ ಅಮ್ಮನವರ ಚಾಕಚಕ್ಯತೆ ಹಾಗೂ ಆತ್ಮವಿಶ್ವಾಸಗಳನ್ನು ಕಣ್ಣಾರೆ ಕಂಡರೆ ಮಾತ್ರ ನಂಬಲು ಸಾಧ್ಯ. ಯಾಕೆಂದರೆ, ತನ್ನ ಇಮ್ಮಡಿ ಗಾತ್ರದ ಮತ್ತು ಅರ್ಧ ವಯಸ್ಸಿನ ಎದುರಾಳಿಗಳನ್ನು ಕೇರಳದ ವಡಕರದ “ಕಲರಿ"ಯಲ್ಲಿ ಪ್ರತಿಯೊಂದು ಹೊಡೆತಕ್ಕೆ ತಕ್ಕ ಹೊಡೆತ ನೀಡುತ್ತಾ ಸಮರ್ಥವಾಗಿ ಎದುರಿಸುವ ಅವರ ವಯಸ್ಸು 82 ವರುಷ!
ಮೀನಾಕ್ಷಿ ರಾಘವನ್ ಅವರನ್ನು ಕುಟುಂಬದವರೂ ಶಿಷ್ಯರೂ ಪ್ರೀತಿ-ಅಭಿಮಾನಗಳಿಂದ ಕರೆಯುವುದು ಮೀನಾಕ್ಷಿ ಅಮ್ಮ ಎಂಬುದಾಗಿ. ಕಲರಿಪಯಟ್ಟು ಎಂಬ ಪಾರಂಪರಿಕ ಕದನಕಲೆಯನ್ನು ಕಲಿಸುತ್ತಿರುವ ಅತಿ ವೃದ್ಧ ಮಹಿಳಾ ಗುರು ಎಂಬ ಹೆಗ್ಗಳಿಕೆ ಅವರದು. ಜೊತೆಗೆ, ಅಂದೊಮ್ಮೆ ನಿಷೇಧಿಸಲಾಗಿದ್ದ ಈ ಕದನಕಲೆಯನ್ನು ಜನಪ್ರಿಯಗೊಳಿಸುವ ದಿಟ್ಟತನ ಅವರದು. ಅದಲ್ಲದೆ, ಇದಕ್ಕೆ “ಪ್ರವೇಶವೇ ಇಲ್ಲದಿದ್ದ” ಹೆಣ್ಣುಮಕ್ಕಳು ಆತ್ಮರಕ್ಷಣೆಗಾಗಿ ಈ ಕದನಕಲೆ ಕಲಿಯಲು ಅವರೇ ಪ್ರೇರಣೆ.
ಸಂಸ್ಕೃತದಲ್ಲಿ “ಕಲುರಿಕಾ" ಎಂದರೆ ಯುದ್ಧರಂಗ ಎಂದರ್ಥ. ಅದರಿಂದ ಉತ್ಪತ್ತಿಯದ ಪದವೇ “ಕಲರಿಪಯಟ್ಟು". ಸಾವಿರಾರು ವರುಷಗಳ ಪರಂಪರೆ ಹೊಂದಿರುವ ಕಲರಿಪಯಟ್ಟುವನ್ನು ಕೇರಳದ ಯುದ್ಧ ಸಮುದಾಯವಾದ ನಾಯರ್ ಸಮುದಾಯದವರು ಅಭ್ಯಾಸ ಮಾಡುತ್ತಿದ್ದರು. ಯೋಗಾಸನದ ಭಂಗಿಗಳು ಮತ್ತು ಮರದ ದೊಣ್ಣೆಗಳು, ಲೋಹದ ಆಯುಧಗಳು ಮತ್ತು ಬರಿಗೈ ಹೋರಾಟಗಳನ್ನು ಒಳಗೊಂಡಿರುವ ಕಲರಿಪಯಟ್ಟು ಒಂದು ಕ್ಲಿಷ್ಟ ಕದನಕಲೆ. “ಕಲರಿಪಯಟ್ಟು ನೃತ್ಯಗಾತಿಯೊಬ್ಬಳ ನಯ ಮತ್ತು ಯುದ್ಧವೀರನ ಪ್ರಾಣಾಂತಿಕ ಚಲನೆಗಳ ಸಹಿತವಾದ ಪರಿಪೂರ್ಣ ಕಲೆ. ಇದು ದೇಹ ಮತ್ತು ಮನಸ್ಸಿನ ತಾಕತ್ತನ್ನು ಸಮ್ಮಿಳನಗೊಳಿಸುತ್ತದೆ ಮತ್ತು ದೈಹಿಕ ಹಾಗೂ ಮಾನಸಿಕ ಶಕ್ತಿಯ ಮಿತಿಗಳನ್ನು ಪರೀಕ್ಷಿಸುತ್ತದೆ" ಎನ್ನುತ್ತಾರೆ ಮೀನಾಕ್ಷಿ ಅಮ್ಮ.
ಬ್ರಿಟಿಷರು ನಿಷೇಧ ಹೇರುವ ತನಕ ಕಲರಿಪಯಟ್ಟು ಕೇರಳದ ಸಾಂಸ್ಕತಿಕ ಬದುಕಿನ ಭಾಗವಾಗಿತ್ತು. "ಅದಕ್ಕಿಂತ ಮುಂಚೆ ಕೇರಳದ ಸಂಸ್ಕೃತಿಯಲ್ಲಿ ಕಲರಿಪಯಟ್ಟು ಆಳವಾಗಿ ಬೇರೂರಿತ್ತು” ಎನ್ನುತ್ತಾರೆ ಚರಿತ್ರಕಾರ ಮತ್ತು ಕಲರಿಪಯಟ್ಟು ಗುರು ದಿವಂಗತ ಚಿರಕ್ಕಲ್ ಶ್ರೀಧರನ್ ನಾಯರ್. ಯುದ್ಧಗಳಲ್ಲಿ ಮಾತ್ರವಲ್ಲ, ಕುಟುಂಬಗಳ ನಡುವಣ ವಿವಾದಗಳನ್ನು ಪರಿಹರಿಸಲಿಕ್ಕೂ ಕಲರಿಪಯಟ್ಟುವನ್ನು ಬಳಸಲಾಗುತ್ತಿತ್ತು. ಆಗಿನ ಕಾಲದಲ್ಲಿ ಗಂಡಸರು ಮತ್ತು ಹೆಂಗಸರು ಉತ್ಸಾಹದಿಂದ ಕಲರಿಪಯಟ್ಟು ಕಲಿಯುತ್ತಿದ್ದರು.16ನೇ ಶತಮಾನದ ಉನ್ನಿಯಾರ್ಚ ಎಂಬ ಯುದ್ಧವನಿತೆಯಂತೂ ಕೇರಳದ ಜಾನಪದದ ಭಾಗವಾಗಿದ್ದಾಳೆ.
ಆದರೆ, 15ನೇ ಶತಮಾನದಲ್ಲಿ ಕೇರಳದ ಸಮುದ್ರ ತೀರಕ್ಕೆ ಯುರೋಪಿನರ ಆಗಮನದೊಂದಿಗೆ ಕಲರಿಪಯಟ್ಟುವಿನ ಇಳಿಗಾಲ ಶುರುವಾಯಿತು. ಪೋರ್ಚುಗೀಸರ ಬಂದೂಕುಗಳನ್ನು ಕೇರಳದ ಪಾರಂಪರಿಕ ಆಯುಧಗಳು ಸರಿಗಟ್ಟಲು ಸಾಧ್ಯವಿರಲಿಲ್ಲ. ಬ್ರಿಟಿಷರ ಆಳ್ವಿಕೆಯಂತೂ ಕಲರಿಪಯಟ್ಟು ಜನಸಾಮಾನ್ಯರ ಕದನಕಲೆಯಾಗದಂತೆ ನಿಷೇಧ ಹೇರಿತು. ಪಜಾಸ್ಸಿ ರಾಜಾ ಮತ್ತು ನಾಯರ್ ಯುದ್ಧಕಲಿಗಳು ಮತ್ತು ವಯನಾಡಿನ ಕುರ್ಚಿಯ ಬುಡಕಟ್ಟಿನ ಹೋರಾಟಗಾರರು - ಇವರ ಸಂಯುಕ್ತ ದಳಗಳು 1796ರಿಂದ 1805 ಅವಧಿಯಲ್ಲಿ ನಡೆಸಿದ ದಂಗೆಯ ಪರಿಣಾಮವಾಗಿ ಬ್ರಿಟಿಷ್ ಅಧಿಕಾರಿ ವಿಲಿಯಂ ಬೆಂಟಿಕ್ ಒಂದು ಸರಕಾರಿ ಆದೇಶ ಜ್ಯಾರಿಗೊಳಿಸಿದ; ಅದರ ಅನುಸಾರ ಆಯುಧಗಳನ್ನು ಹೊಂದಿರುವುದನ್ನು ಮತ್ತು ಆಯುಧಗಳ ತರಬೇತಿಯನ್ನು ಶಾಶ್ವತವಾಗಿ ನಿಷೇಧಿಸಲಾಯಿತು. ಇದರಿಂದಾಗಿ, ಮುಂದಿನ 150 ವರುಷಗಳಲ್ಲಿ ಕೇರಳದ ಯುವಕರು ಮತ್ತು ಯುವತಿಯರು ಕಲರಿಪಯಟ್ಟು ಕಲಿಯಲು ಮತ್ತು ಸಾಧನೆ ಮಾಡಲು ಸಾಧ್ಯವಾಗಲಿಲ್ಲ.
ಅನಂತರ, 20ನೇ ಶತಮಾನದ ಆರಂಭದಲ್ಲಿ ಸ್ವದೇಶೀ ಆಂದೋಲನ ಶುರುವಾದಾಗ, ಕಲರಿಪಯಟ್ಟುವಿಗೆ ಮರುಜೀವ ಬಂತು. ಕೆಲವು ಹಿರಿಯ ಕಲರಿಪಯಟ್ಟು ಗುರುಗಳು ಹಳ್ಳಿಗಳಲ್ಲಿ ಗುಟ್ಟಾಗಿ ಕಲರಿಪಯಟ್ಟು ತರಬೇತಿ ನೀಡಲು ಆರಂಭಿಸಿದರು. ಸ್ವಾತಂತ್ರ್ಯ ಗಳಿಸಿ ಸುಮಾರು ಒಂದು ದಶಕದ ನಂತರ, 1958ರಲ್ಲಿ ಕೇರಳ ರಾಜ್ಯ ಕಲರಿಪಯಟ್ಟು ಅಸೋಸಿಯೇಷನಿನ ಸ್ಥಾಪನೆಯೊಂದಿಗೆ, ಪುನಃ ಕಲರಿಪಯಟ್ಟು ಜನಪ್ರಿಯವಾಯಿತು.
ಮೀನಾಕ್ಷಿ ಅಮ್ಮ ಕಲರಿಪಯಟ್ಟು ಕಲಿಯಲು ಶುರುವಿಟ್ಟಾಗ ಅವರ ವಯಸ್ಸು ಏಳು ವರುಷ (ಅದು ಮಕ್ಕಳಿಗೆ ಕಲರಿಪಯಟ್ಟು
ತರಬೇತಿ ಆರಂಭಿಸುವ ವಯಸ್ಸು.) ಅವರ ಭರತನಾಟ್ಯ ಗುರುವಿನ ಸಲಹೆಯಂತೆ, ಅವರ ತಂದೆ ಮೀನಾಕ್ಷಿಯನ್ನು ಕಲರಿಪಯಟ್ಟು ತರಬೇತಿಗೆ ಸೇರಿಸಿದರು. ಹಾಗೆ ಕಲರಿಪಯಟ್ಟು ದಂತಕತೆಯಾದ ವಿ.ಪಿ. ರಾಘವನ್ ಗುರುಗಳ “ಕಡತನಾಡು ಕಲರಿ ಸಂಘ”ನ ಶಿಷ್ಯಳಾಗಿ ಸೇರಿಕೊಂಡದ್ದು 1949ರಲ್ಲಿ. ಮುಂದೆ, ತನ್ನ ಗುರುವನ್ನೇ ಮದುವೆಯಾದರು ಮೀನಾಕ್ಷಿ. "ಈಗ ಇದು ಉಸಿರಾಟದಂತೆ ನನ್ನ ಭಾಗವೇ ಆಗಿದೆ" ಎನ್ನುತ್ತಾರೆ ಮೀನಾಕ್ಷಿ ಅಮ್ಮ.
ಕಲರಿಪಯಟ್ಟು ತರಬೇತಿ ಪಡೆದ ಹೆಣ್ಣುಮಕ್ಕಳು ಮದುವೆಯಾದ ನಂತರ ಹಾಗೂ ಮಕ್ಕಳನ್ನು ಹೆತ್ತ ನಂತರ ಅದರ ಅಭ್ಯಾಸ ಬಿಟ್ಟು ಬಿಡುತ್ತಾರೆ. ಆದರೆ, ಮದುವೆಯಾಗ ನಂತರವೂ ಕಲರಿಪಯಟ್ಟು ಸಾಧನೆ ಮುಂದುವರಿಸಿದ್ದು ಮೀನಾಕ್ಷಿ ಅಮ್ಮನ ಹೆಗ್ಗಳಿಕೆ. "ನಾನೂ ಗರ್ಭಿಣಿಯಾಗಿದ್ದಾಗ ಮತ್ತು ಮಕ್ಕಳು ಸಣ್ಣವರಾಗಿದ್ದಾಗ ಇದರ ಅಭ್ಯಾಸ ತಾತ್ಕಾಲಿಕವಾಗಿ ನಿಲ್ಲಿಸಿದ್ದೆ. ಆದರೆ, ನಾನು ಯಾವಾಗಲೂ ಕಲರಿಪಯಟ್ಟು ಕಲಿಕಾ ವೇದಿಕೆಯಾದ ಕಲರಿಯಲ್ಲಿ ನನ್ನ ಗಂಡನ ಜೊತೆಗೆ ಇರುತ್ತಿದ್ದೆ. ಆ ಸಮಯದಲ್ಲಿ ನಾನು ಮರ್ಮಾಂಗಗಳು, ಗಾಯಗಳು, ಬಾವುಗಳು ಮತ್ತು ನೋವುಗಳ ಚಿಕಿತ್ಸೆಗೆ ಅಗತ್ಯವಾದ ಮದ್ದಿನ ಎಣ್ಣೆಗಳನ್ನು ಹಾಗೂ ಆಯುರ್ವೇದ ಔಷಧಿಗಳನ್ನು ತಯಾರಿಸುತ್ತಿದ್ದೆ” ಎಂದು ನೆನಪು ಮಾಡಿಕೊಳ್ಳುತ್ತಾರೆ ಮೀನಾಕ್ಷಿ ಅಮ್ಮ.
2009ರಲ್ಲಿ ಪತಿಯ ಮರಣಾ ನಂತರ ಕಲರಿಯಲ್ಲಿ ತಾನೇ ಕಲರಿಪಯಟ್ಟು ಗುರುವಾಗಿ ಶಿಷ್ಯರಿಗೆ ಕಲಿಸಲು ಶುರುವಿಟ್ಟರು ಮೀನಾಕ್ಷಿ ಅಮ್ಮ. ಅಂದಿನಿಂದ ಇಂದಿನ ವರೆಗೆ ಯುವಜನರಿಗೆ ಹಾಗೂ ವಯಸ್ಕರಿಗೆ ಅವರು ಕಲರಿಪಯಟ್ಟು ಕಲಿಸುತ್ತಿದ್ದಾರೆ. “ಶಿಷ್ಯರಿಗೆ ಅವರು ಅಮ್ಮನಂತಿದ್ದಾರೆ" ಎನ್ನುತ್ತಾರೆ ಕುನ್ನತ್ತಕುಡಿ ಫ್ರಾನ್ಸಿಸ್ ಥೋಮಸ್ ಗುರು; ಇವರೀಗ ವಯನಾಡಿನಲ್ಲಿ ತನ್ನದೇ ಕಲರಿಪಯಟ್ಟು ಶಾಲೆ ನಡೆಸುತ್ತಿದ್ದಾರೆ.
2017ರಲ್ಲಿ ಭಾರತ ಸರಕಾರವು ಮೀನಾಕ್ಷಿ ಅಮ್ಮನಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಿತು. ಇದರಿಂದಾಗಿ ಮೀನಾಕ್ಷಿ ಅಮ್ಮ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದರು. ಮುದ್ರಣ ಹಾಗೂ ದೃಶ್ಯ ಮಾಧ್ಯಮದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಿದ ಪ್ರಚಾರದಿಂದಾಗಿ ಮೀನಾಕ್ಷಿ ಅಮ್ಮ ಮನೆಮನೆಗಳಲ್ಲಿ ಸುದ್ದಿಯಾದರು.
ಖಡ್ಗ, ಗುರಾಣಿ, ಈಟಿ, ದೊಣ್ಣೆಗಳನ್ನು ಲೀಲಾಜಾಲವಾಗಿ ಬಳಸುವ ಮತ್ತು ಅವುಗಳೊಂದಿಗೆ ಬಲಿಷ್ಠ ಗಂಡಸರೊಂದಿಗೂ ಕಲರಿಪಯಟ್ಟು ಹೋರಾಟದಲ್ಲಿ ಸಮರೋತ್ಸಾಹದಿಂದ ಹೋರಾಡುವ ಮೀನಾಕ್ಷಿ ಅಮ್ಮ ಸಾವಿರಾರು ಹೆಣ್ಣುಮಕ್ಕಳು ಮತ್ತು ಮಹಿಳೆಯರು ಕಲರಿಪಯಟ್ಟು ಕಲಿಯಲು ಪ್ರೇರಣೆಯಾದರು. "ತಮ್ಮ ಸಬಲೀಕರಣಕ್ಕಾಗಿ ಮಹಿಳೆಯರು ಕಲರಿಪಯಟ್ಟು ಕಲಿಯಬೇಕು. ಇದು ಮಹಿಳೆಯರ ಶರೀರವನ್ನು ಶಕ್ತಿಶಾಲಿಯಾಗಿಸುತ್ತದೆ; ಜೊತೆಗೆ ತಾಕತ್ತು, ಏಕಾಗ್ರತೆ ಮತ್ತು ಚಲನೆಗಳ ಮೇಲೆ ಅದ್ಭುತ ನಿಯಂತ್ರಣ ಒದಗಿಸುತ್ತದೆ" ಎನ್ನುತ್ತಾರೆ ಅವರು. ಹೆಣ್ಣುಮಕ್ಕಳಿಗೆ ಕಲರಿಪಟ್ಟುವಿನ ಅಸಾಧಾರಣ ಗುರು ಮೀನಾಕ್ಷಿ ಅಮ್ಮನ ಸಂದೇಶ, “ಕದನಕಲೆಯ ಕಲಿಕೆ ಮಹಿಳೆಯರನ್ನು ನಿರ್ಭೀತರನ್ನಾಗಿಸುತ್ತದೆ.”
ಫೋಟೋ 1 ಮತ್ತು 2: ಕಲರಿಪಯಟ್ಟು ಕಲಿಕಾ ವೇದಿಕೆಯಲ್ಲಿ ಕದನಕಲೆ ಕಲಿಸುತ್ತಿರುವ ಗುರು ಮೀನಾಕ್ಷಿ ಅಮ್ಮ
ಫೋಟೋ 3: ಗುರು ಮೀನಾಕ್ಷಿ ಅಮ್ಮನಿಂದ ಕಲರಿಪಯಟ್ಟು ಕಲಿಯುತ್ತಿರುವ ಮಕ್ಕಳು
ಫೋಟೋ ಕೃಪೆ: ಗೆಟ್ಟಿ ಇಮೇಜಸ್