ಅಮ್ಮಾ ನನ್ನನ್ನು ಯಾಕೇ ಕೊಂದೆ?

ಅಮ್ಮಾ ನನ್ನನ್ನು ಯಾಕೇ ಕೊಂದೆ?

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ: ೧೫೦.೦೦, ಮುದ್ರಣ: ಫೆಬ್ರವರಿ, ೨೦೨೧

ರವಿ ಬೆಳಗೆರೆಯವರು ಬರೆದ ನಿಜ ಜೀವನದ ಮರ್ಡರ್ ಮಿಸ್ಟರಿ ಕಾದಂಬರಿಯೇ ‘ಅಮ್ಮಾ ನನ್ನನ್ನು ಯಾಕೇ ಕೊಂದೆ?’ ಒಂದು ಸಮಯದಲ್ಲಿ ಎಲ್ಲರಿಗೂ ತಲೆನೋವಾಗಿದ್ದ ಶೀನಾ ಬೋರಾ ಎಂಬ ಯುವತಿಯ ಕೊಲೆ ರಹಸ್ಯ ಬಯಲಾದದ್ದು ಹೇಗೆ? ಎನ್ನುವುದೇ ಈ ಪುಸ್ತಕದ ತಿರುಳು. 

ರವಿ ಬೆಳಗೆರೆಯವರು ತಮ್ಮ ಬೆನ್ನುಡಿಯಲ್ಲಿ ಈ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ ‘ಆಸ್ತಿಗಾಗಿ ಕೊಲೆಗಳಾಗುವುದು ಹೊಸದೇನಲ್ಲ. ಆದರೆ ಇಂದ್ರಾಣಿ ಎಂಬ ಮೂರು ಗಂಡಂದಿರ ಹೆಂಗಸು ಮಾಡಿದ ಕೊಲೆ ಇದೆಯಲ್ಲಾ? ಅದು ನಿಜಕ್ಕೂ ಘೋರ. ಆಕೆಯಲ್ಲಿ ಮನುಷ್ಯತ್ವದ ಲವಲೇಶವೂ ನಿಮಗೆ ಕಾಣಸಿಗುವುದಿಲ್ಲ. ಹೆತ್ತ ಮಗಳು ಆಸ್ತಿ ವಿಚಾರದಲ್ಲಿ ತಿರುಗಿ ಬಿದ್ದಾಳು ಎಂಬ ಒಂದೇ ಒಂದು ಕಾರಣಕ್ಕೆ ಆಕೆಯನ್ನು ಅತ್ಯಂತ ನಿರ್ದಯವಾಗಿ ಕೊಂದು ಸುಟ್ಟು ಹಾಕುವ ಈ ಹೆಂಗಸು ತನ್ನ ಮಗನನ್ನೂ ಕೊಲ್ಲಲು ಸಂಚು ರೂಪಿಸುತ್ತಾಳೆ. ಮೂರು ವರ್ಷಗಳ ಕಾಲ ಜಗತ್ತಿನ ಎದುರಿಗೆ ಮಗಳು ಬದುಕಿದ್ದಾಳೆ ಅಂತಲೇ ಬಿಂಬಿಸುತ್ತಾಳೆ. ಯಾವುದೇ ಕಾರಣಕ್ಕೂ ಯಾರಿಗೂ ಅನುಮಾನ ಬಾರದಂತೆ ಹೆಜ್ಜೆ ಹೆಜ್ಜೆಗೂ ಎಚ್ಚರ ವಹಿಸುತ್ತಾಳೆ. ಕಡೆಗೂ ಆಕೆಯ ಪಾಪದ ಕೊಡ ತುಂಬುತ್ತದೆ. ಪಾತಕದ ಕಥೆ ಇಂಟರೆಸ್ಟಿಂಗ್ ಆಗಿದೆ.” 

ತಮ್ಮ ಮುನ್ನುಡಿಯಲ್ಲಿ ಲೇಖಕರು ಈ ವಿಚಾರದ ಮೇಲೆ ಇನ್ನಷ್ಟು ಬೆಳಕು ಚೆಲ್ಲುತ್ತಾರೆ. ‘ಅದೊಂದು ದಿನ ಎಬಿಪಿ ನ್ಯೂಸ್ ಶೀನಾ ಬೋರಾಳ ಭೀಕರ ಕೊಲೆಯ ಕುರಿತು ಸುದ್ದಿ ಬಿತ್ತರಿಸತೊಡಗಿತು. ಇಡೀ ಮೀಡಿಯಾ ವಲಯವೇ ಬೆಚ್ಚಿಬಿದ್ದಿತ್ತು. ತಕ್ಷಣವೇ ಸುದ್ದಿಯ ಬೇಟೆಗೆ ಬೆನ್ನು ಬಿದ್ದವಲ್ಲ ನ್ಯೂಸ್ ಛಾನಲ್ ಗಳು. ದಿನದಿಂದ ದಿನಕ್ಕೆ ಶೀನಾ ಬೋರಾಳ ಹತ್ಯಾ ಪ್ರಕರಣವು ತಿರುವುಗಳನ್ನು ಪಡೆದುಕೊಳ್ಳುತ್ತಾ ಹೋಯಿತು. ಯಾವ ನ್ಯೂಸ್ ಛಾನಲ್ ಹಾಕಿದರೂ ಅದೇ ಸುದ್ದಿ. ಪ್ರಕರಣ ಬಗೆದಷ್ಟು ಇನ್ನಷ್ಟು ಮತ್ತಷ್ಟು ಆಳಕ್ಕೆ ಹೋಗತೊಡಗಿತು. ಇದರ ಹಿಂದೆ ಇಂದ್ರಾಣಿ ಮುಖರ್ಜಿಯ ಕೈವಾಡ ಇದೆ ಅಂತ ಯಾವಾಗ ಟೀವಿಗಳಲ್ಲಿ ಬರತೊಡಗಿತೋ ಆಗ ರೋಷನಿಗೆ (ಟೈಮ್ಸ್ ಆಫ್ ಇಂಡಿಯಾದ ಪತ್ರಕರ್ತೆ) ಒಂದು ಕ್ಷಣ ನಂಬಲಾಗಲಿಲ್ಲ. ಶಾಕ್ ಆಯಿತು. ಆಕೆಗೆ ನಂಬಲಿಕ್ಕೆ ಆಗಲಿಲ್ಲ. ಕೂಡಲೇ ರೋಷನಿ ತನ್ನ ವಾಟ್ಸಾಪ್ ತೆಗೆದು ಇಂದ್ರಾಣಿಯ ಡಿಪಿಯನ್ನು ನೋಡಿದರು. ಅದರಲ್ಲಿ ಇಂದ್ರಾಣಿ ತನ್ನ ಮಗಳು ವಿಧೀ ಜೊತೆಗೆ ತೆಗೆಸಿಕೊಂಡಿದ್ದ ಮುದ್ದಾದ ಫೋಟೋ ಇತ್ತು.

ಶೀನಾ ಬೋರಾ ೨೦೧೨ರಲ್ಲೇ ಕೊಲೆಯಾಗಿ ಹೋಗಿದ್ದಳು. ಆದರೆ ಅದು ಬೆಳಕಿಗೆ ಬಂದಿದ್ದು ಇಂದ್ರಾಣಿಯ ಡ್ರೈವರ್ ಶ್ಯಾಮ್ವರ್ ರೈ ೨೦೧೫ರ ಆಗಸ್ಟ್ ೨೧ ರಂದು ಶಸ್ತ್ರಾಸ್ತ್ರ ಪ್ರಕರಣದಲ್ಲಿ ಅರೆಸ್ಟ್ ಆದಾಗ. ವಿಚಾರಣೆ ವೇಳೆ ಆತ ಎಲ್ಲ ವಿಚಾರಗಳನ್ನು ಬಾಯಿಬಿಟ್ಟಿದ್ದ. ಶೀನಾ ಬೋರಾ ಕೊಲೆ ಪ್ರಕರಣ ಬೆಳಕಿಗೆ ಬಂದದ್ದು ಹೀಗೆಯೇ ಅಂತ ಅಧಿಕೃತವಾಗಿ ಪೋಲೀಸ್ ರೆಕಾರ್ಡ್ ಗಳಲ್ಲಿ ದಾಖಲಾಯಿತಾದರೂ ಅಸಲಿಗೆ ಅದು ಇಂದ್ರಾಣಿಗೆ ತುಂಬಾನೇ ಕ್ಲೋಸ್ ಆಗಿದ್ದವರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಶೀನಾ ಬೋರಾ ಅಮೇರಿಕಾದಲ್ಲಿ ಇಲ್ಲ ಆಕೆ ಮೂರು ವರ್ಷಗಳಿಂದ ಕಾಣೆಯಾಗಿದ್ದಾಳೆ ಅಂತ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದಕ್ಕೂ ಇಂದ್ರಾಣಿ ಮುಖರ್ಜಿಯ ಕಾರ್ ಡ್ರೈವರ್ ಶಸ್ತ್ರಾಸ್ತ್ರ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಕ್ಕೂ ಸಂಬಂಧ ಸೂತ್ರವಿರಲಿಲ್ಲ. ಅದು ಕಾಕತಾಳೀಯ ಮಾತ್ರ. ಆದರೆ ಮುಂಬೈ ಪೋಲೀಸರು ಮತ್ತು ಅವರಿಂದ ಪ್ರಕರಣವನ್ನು ಕೈಗೆತ್ತಿಕೊಂಡ ಸಿಬಿಐ ಅಧಿಕಾರಿಗಳು ಕೆಲ ದಿನಗಳ ಬಳಿಕ ಗಪ್ ಚುಪ್ ಅಂತ ಇದ್ದುಬಿಟ್ಟರು. ಹಣಕಾಸಿನ ವಿಚಾರವಾಗಿ ಉಂಟಾದ ವೈಮನಸ್ಸಿನಿಂದ ಇಂದ್ರಾಣಿಗೆ ಅತ್ಯಂತ ಆಪ್ತನಾಗಿದ್ದಂತಹ ವ್ಯಕ್ತಿಯೇ ಈ ವಿಷಯವನ್ನು ಲೀಕ್ ಮಾಡಿದ್ದಾನೆ ಅಂತ ಹೇಳಲಾಯಿತು.

ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ನಿಮಗೆ ಶ್ರೀಮಂತ ಕುಟುಂಬವೊಂದರ ರಹಸ್ಯಗಳು, ಸ್ಕ್ಯಾಂಡಲ್ಲುಗಳು, ಭಾವುಕತೆಗಳು, ಅವರ ಹೈಡ್ರಾಮಾಗಳು ಕಾಣಿಸುತ್ತವೆ. ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗುವ ಈ ಪ್ರಕರಣ ಜನರ ಬಾಯಲ್ಲಿ ಹೊಸ ಹೊಸ ರೂಪ ತಾಳುತ್ತದೆ. ಮಗಳನ್ನು ‘ಸಹೋದರಿ' ಎಂದು ಬಿಂಬಿಸಿದ ತಾಯಿಯೊಬ್ಬಳ ಕ್ರೌರ್ಯವನ್ನು ಜಗತ್ತಿನ ಎದುರು ಢಾಳಾಗಿ ತೆರೆದಿಡುತ್ತದೆ. ಬಂಧನವಾದ ಮೇಲೂ ಇಂದ್ರಾಣಿಯ ಕ್ರೂರ ಮನಸ್ಸು ಇದರಲ್ಲಿ ತನ್ನದೇನೂ ತಪ್ಪಿಲ್ಲ ಅಂತ ಇನ್ನೊಬ್ಬರ ತಲೆ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತದೆ. ಭಾರತದ ಅಪರಾಧ ಜಗತ್ತಿನಲ್ಲಿ ಇದೊಂದು ಮರೆಯಲಾಗದ ಘಟನೆಯಾಗಿ ದಾಖಲಾಗಿ ಬಿಡುತ್ತದೆ. ಮುಂದಿನ ದಿನಗಳಲ್ಲಿ ನಡೆಯುವ ಹೀನಾತಿಹೀನ ಅಪರಾಧ ಪ್ರಕರಣಗಳ ವಿಚಾರಣೆಗೆ ಉಲ್ಲೇಖವಾಗಿ ಉಳಿಯುತ್ತದೆ. ಶ್ರೀಮಂತರ ದುರಾಸೆ ಎಂಬುದು ಜೀವಗಳನ್ನು ಹೇಗೆ ಬಲಿ ಪಡೆಯುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿ ನಿಲ್ಲುತ್ತದೆ.”

ಲೇಖಕರು ೧೧೪ ಪುಟಗಳ ಈ ಪುಸ್ತಕವನ್ನು ‘ಶೀನಾ ಬೋರಾ’ ಳಿಗೆ ಅರ್ಪಿಸಿದ್ದಾರೆ. ಪುಸ್ತಕದ ತುಂಬೆಲ್ಲಾ ಪೂರಕ ಛಾಯಾಚಿತ್ರಗಳಿವೆ. ಇದೊಂದು ವಿಲಕ್ಷಣ ಮರ್ಡರ್ ಸ್ಟೋರಿ ಎಂದು ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ.