ಅಮ್ಮಾ, ನಿಮ್ಮ ಮಕ್ಕಳು ಪಕ್ಷವನ್ನು ಪಾತಾಳಕ್ಕೆ ತಳ್ಳಿದ್ದಾರೆ!(ಸುಷ್ಮಾ ಸ್ವರಾಜ್‌ಗೆ ಬಹಿರಂಗ ಪತ್ರ)
(’ಉದಯವಾಣಿ’ಯಲ್ಲಿ ಪ್ರಕಟಣೆಗಾಗಿ)
---------------------------------
ಅಮ್ಮಾ, ಸುಷ್ಮಮ್ಮಾ,
ಅರ್ಥವರಿತೋ ಅರಿಯದೆಯೋ ಒಂದಷ್ಟು ಕನ್ನಡ ಒದರುವ ಚಾಲಾಕಿಯಾದ ನಿಮಗೆ ನಿಮ್ಮ ಪಕ್ಷದ ಯಾರಾದರೊಬ್ಬರು ಈ ಪತ್ರದ ಅರ್ಥವನ್ನು ನಿಮ್ಮ ಭಾಷೆಯಲ್ಲಿ ವಿವರಿಸಿಯಾರು ಎಂಬ ನಂಬಿಕೆಯಿಂದ ಈ ಬಹಿರಂಗ ಪತ್ರ ಬರೆಯುತ್ತಿದ್ದೇನೆ.
ಇದೇ ದಿನಾಂಕ ೧೮ರಂದು ಬೆಂಗಳೂರಿಗೆ ದಯಮಾಡಿಸಿದ ನೀವು ಗಣಿಲೂಟಿಗಾರರಾದ ಬಳ್ಳಾರಿ ರೆಡ್ಡಿ ಸಹೋದರರನ್ನು ಹೊಗಳುವ ಭರದಲ್ಲಿ, ’ನನ್ನ ಮಕ್ಕಳು ಪಕ್ಷವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ’, ಎಂದೊಂದು ಆಣಿಮುತ್ತು ಉದುರಿಸಿಹೋಗಿದ್ದೀರಿ! ರೆಡ್ಡಿ ಸಹೋದರರ ವಿಷಯದಲ್ಲಿ ನಿಮ್ಮನ್ನು ಅಷ್ಟೂ ಕತ್ತಲಲ್ಲಿ ಇಡಲಾಗಿದೆಯೇ ಅಥವಾ ನಿಮಗೆ ಆ ಪಾಟಿ ಮಂಕು ಕವಿದಿದೆಯೇ ನನಗೆ ಅರ್ಥವಾಗುತ್ತಿಲ್ಲ. ನಿಮ್ಮನ್ನು ಬುದ್ಧಿವಂತೆ ಎಂದು ತಿಳಿದುಕೊಂಡಿದ್ದ ನನಗೆ ಆಶ್ಚರ್ಯವಂತೂ ಖಂಡಿತ ಆಗಿದೆ. ಅಥವಾ....ಚಾಲಾಕಿತನದ ಉತ್ತುಂಗವೇ ನಿಮ್ಮ ಈ ಹೇಳಿಕೆ?!
ಯೇನಕೇನ ಪ್ರಕಾರೇಣ ಒಂದಷ್ಟು ಸೀಟುಗಳನ್ನು ಗೆದ್ದುಕೊಡುವುದು ಮತ್ತು ಅನ್ಯರ ಪಕ್ಷಾಂತರ ಮಾಡಿಸುವುದು ಇವು ಪಕ್ಷವನ್ನು ಎತ್ತರಕ್ಕೇರಿಸಿದಂತೆ ಎಂದು ನೀವು ತಿಳಿದಿದ್ದರೆ ಅದು ಪಕ್ಷಕ್ಕೆ ನೀವು ಮಾಡುವ ಅವಮಾನವೆಂದೇ ಹೇಳಬೇಕಾಗುತ್ತದೆ. ಏಕೆಂದರೆ, ನೀವೂ ಸೇರಿದಂತೆ ನಿಮ್ಮ ಪಕ್ಷದ ಧುರೀಣರೆಲ್ಲ ದಶಕಗಳಿಂದ ಹೇಳಿಕೊಂಡು ಬಂದಿರುವುದೇನೆಂದರೆ, ನಿಮ್ಮದು ತತ್ತ್ವ ಮತ್ತು ಸಿದ್ಧಾಂತಗಳಿಗೆ ಬದ್ಧವಾಗಿರುವ ಪಕ್ಷ.
ಆದರೆ, ಕರ್ನಾಟಕದಲ್ಲಿ ನಡೆದದ್ದೇನು? ನೀವು ಬಾಯ್ತುಂಬ ಬಯ್ಯುವ ಇತರ ಪಕ್ಷಗಳಂತೆ ನಿಮ್ಮ ಪಕ್ಷವೂ ಕೂಡ ಚುನಾವಳೆ ವೇಳೆ ಗಣಿರೆಡ್ಡಿಗಳ ವಿಶೇಷ ಕೃಪೆಯಿಂದ ಭರ್ಜರಿಯಾಗಿ ವೋಟುಗಳನ್ನು ಕೊಂಡುಕೊಂಡಿತು. ಇದೇ ನಿಮ್ಮ ಪಕ್ಷದ ತತ್ತ್ವವೇ? ಚುನಾವಣೆ ನಂತರ ಮತ್ತೆ ಇದೇ ಗಣಿರೆಡ್ಡಿಗಳ ದಯೆಯಿಂದ ನಿಮ್ಮ ಪಕ್ಷವು ಭಾರಿ ಪ್ರಮಾಣದಲ್ಲಿ ಶಾಸಕರನ್ನು ಖರೀದಿಸಿತು. ಇದು ನಿಮ್ಮ ಪಕ್ಷದ ಸಿದ್ಧಾಂತವೇ?
’ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು’ ಎಂಬ ಕವಿವಾಣಿಗೆ ವ್ಯತಿರಿಕ್ತವಾಗಿ ಕೇವಲ ಮೂರ್‍ನಾಲ್ಕು ಮಂದಿ ದೋಚಿದ ನೂರಾರು ಕೋಟಿ ರೂಪಾಯಿಗಳಲ್ಲವೆ ಖರೀದಿಗಳಿಗಾಗಿ ನಿಮ್ಮ ಪಕ್ಷವು ಬಳಸಿದ ಆ ಹಣ? ದೋಚಿದ್ದಾದರೂ ಯಾವ ರೀತಿ? ಎಲ್ಲ ಪ್ರಜೆಗಳಿಗೂ ಸೇರಬೇಕಾದ ಭೂಮಿಯನ್ನು ಬಗಿದು ಮಾರಿ ಗಳಿಸಿದ್ದಲ್ಲವೆ? ಸರ್ಕಾರಕ್ಕೆ ಕಿಂಚಿತ್ ತೆರಿಗೆ ಕಟ್ಟಿದಾಕ್ಷಣ, ಆ ಪಾಟಿ ಅದಿರನ್ನು ಬಗಿದು ಮಾರಿ ಕೋಟ್ಯಂತರ ರೂಪಾಯಿ ಜೇಬಿಗಿಳಿಸುವುದು ಲೂಟಿಯಲ್ಲದೆ ಮತ್ತೇನು? ಲೂಟಿಕೋರರ ಈ ಹಣದ ಒಂದು ಭಾಗ ವೋಟು ಗಳಿಕೆಗೆ ಮತ್ತು ಅವಕಾಶವಾದಿ ಶಾಸಕರ ಖರೀದಿಗೆ ವಿನಿಯೋಗವಾದಾಗ ಅದು ನಿಮಗೆ ಆದರ್ಶವಾಗಿ ಕಂಡುಬರುತ್ತದೆ! ಪಕ್ಷವು ಎತ್ತರಕ್ಕೇರಿತೆಂದು ಘೋಷಿಸುತ್ತೀರಿ. ನಿಮ್ಮ ಪಕ್ಷವು ನ್ಯಾಯಬದ್ಧವಾಗಿ ಮತ್ತು ನೀತಿಯುತವಾಗಿ ಎತ್ತರಕ್ಕೇರಿದಂತಾಯಿತೇನು?
ಬದುಕಿದ್ದರೆ ಶ್ಯಾಮಪ್ರಸಾದ ಮುಖರ್ಜಿ ಮತ್ತು ದೀನದಯಾಳ್ ಉಪಾಧ್ಯಾಯ ಇವರಿಗೆ, ಮತ್ತು, ನಮ್ಮ ನಡುವೆಯೇ ಇರುವ ಅಟಲಬಿಹಾರಿ ವಾಜಪೇಯಿಯವರಿಗೆ, ಈ ತ್ರಿಮೂರ್ತಿಗಳಿಗೂ ಹೆಮ್ಮೆಯುಂಟಾಗುವಂಥ ಔನ್ನತ್ಯವೇ ಈ ರೆಡ್ಡಿ ಸಹೋದರರ ’ಮತಖರೀದಿ’ ಮತ್ತು ’ಕುದುರೆ ವ್ಯಾಪಾರ’?
ಅಥವಾ.....ಈ ತ್ರಿಮೂರ್ತಿಗಳಿಗಿಂತ ಈಗ ನೀವೇ ದೊಡ್ಡ ಲೀಡರೇ?
ಮುಖ್ಯಮಂತ್ರಿ ಪ್ರಕರಣ
--------------
ರೆಡ್ಡಿ ಸಹೋದರರ ಖರ್ಚಿನಲ್ಲಿ ತಮ್ಮ ಕುರ್ಚಿ ಭದ್ರಪಡಿಸಿಕೊಂಡ ಯಡಿಯೂರಪ್ಪ ಅದನ್ನು ಮರೆತವರಂತೆ ಆಡತೊಡಗಿದರು ನಿಜ. ಶಾಸಕರಿಗೆ ಸೂಕ್ತ ಪ್ರಾಮುಖ್ಯ ನೀಡದೆ ಏಕಚಕ್ರಾಧಿಪತಿಯಂತೆ ಮೆರೆಯತೊಡಗಿದ್ದೂ ನಿಜ. ಆದರೆ ರೆಡ್ಡಿ ಸಹೋದರರು ಈ ಸಮಸ್ಯೆಯ ಬಗ್ಗೆ, ನೀವೂ ಸೇರಿದಂತೆ ಹೈಕಮಾಂಡ್ ಪ್ರಭೃತಿಗಳೇನಿದ್ದೀರಿ ನಿಮ್ಮ ಬಳಿ ಚರ್ಚಿಸಿ ಪರಿಹರಿಸಿಕೊಳ್ಳುವುದನ್ನು ಬಿಟ್ಟು, ಅತೃಪ್ತ ಶಾಸಕರ ಗ್ಯಾಂಗ್ ಕಟ್ಟಿಕೊಂಡು, ಯಡಿಯೂರಪ್ಪನವರ ನಾಯಕತ್ವವನ್ನೇ ಕಿತ್ತುಹಾಕಬೇಕೆಂದು ಹಠ ಹಿಡಿದರಲ್ಲಾ, ಇದು ಪಕ್ಷವನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸವೇ?
ಅತೃಪ್ತ ಶಾಸಕರನ್ನು ಸೆಳೆದುಕೊಂಡದ್ದು, ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ತರು ಅನ್ನವಿಲ್ಲದೆ ಸೂರಿಲ್ಲದೆ ಪರಿತಪಿಸುತ್ತಿದ್ದಾಗ ಸಂಬಂಧಿತ ಶಾಸಕರನ್ನು ಮತ್ತು ಮಂತ್ರಿಗಳನ್ನು ರೆಸಾರ್ಟ್‌ಗಳಲ್ಲಿ ದಿನಗಟ್ಟಲೆ ಕೂಡಿಹಾಕಿದ್ದು, ನೆರೆ ಪ್ರಕೋಪದ ವಿಷಮ ಸಂದರ್ಭದಲ್ಲಿ ಮುಖ್ಯಮಂತ್ರಿಯ ತಲೆಗೆ ಸಲ್ಲದ ಚಿಂತೆ ಹಚ್ಚಿದ್ದು ಇವೆಲ್ಲ ನಿಮ್ಮ ಪಕ್ಷವನ್ನು ಅದ್ಯಾವ ಎತ್ತರಕ್ಕೆ ಕೊಂಡೊಯ್ಯುತ್ತವೆ ಹೇಳಿ ಸುಷ್ಮಾ ತಾಯಿ?
ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿ.ಪಿ.ಬಳಿಗಾರ್ ಅವರು ನಿಮ್ಮ ಮಕ್ಕಳಿಗೆ ಮಗ್ಗುಲ ಮುಳ್ಳಾದರು. ದಕ್ಷ ಅಧಿಕಾರಿ ಮದನಗೋಪಾಲ್ ಅವರು ನಿಮ್ಮ ಮಕ್ಕಳಿಗೆ ಬೇಡವಾದರು. ಆದರೆ ಬಳ್ಳಾರಿಯಲ್ಲಿ ಬೇರುಬಿಟ್ಟು ನಿಮ್ಮ ಮಕ್ಕಳ ಬೇರು ಭದ್ರಪಡಿಸತೊಡಗಿದ್ದ ’ಅಡ್ಜಸ್ಟಿಂಗ್’ ಅಧಿಕಾರಿಗಳು ಮಾತ್ರ ವರ್ಗವಾಗಿಹೋಗಿದ್ದರೂ ಮತ್ತೆ ಬಳ್ಳಾರಿಗೆ ವಾಪಸ್ ಬಂದರು. ಪಕ್ಷದ ಘನತೆ ಇನ್ನಷ್ಟು ಹೆಚ್ಚಿತು ಅಲ್ಲವೆ? ನಿಮ್ಮ ಯೋಚನಾಕ್ರಮವೇ ದೋಷಪೂರ್ಣ ಕಣಮ್ಮಾ!
ನಿಮ್ಮ ಮಕ್ಕಳ ಪ್ರತಾಪದಿಂದಾಗಿ, ಈ ರಾಜ್ಯದ ಮುಖ್ಯಮಂತ್ರಿಯು ಅಧಿಕಾರಿಗಳ ವರ್ಗಾವಣೆಯಂಥ ಯಃಕಶ್ಚಿತ್ ಕೆಲಸವನ್ನೂ ಮಾಡಲಾಗದಂತಹ ಅಸಹಾಯಕ ಪರಿಸ್ಥಿತಿಗೆ ಬಂದು ತಲುಪಿದನಲ್ಲಾ, ಇದರಿಂದಾಗಿ ನಿಮ್ಮ ಪಕ್ಷವು ಎಷ್ಟು ಎತ್ತರಕ್ಕೆ ಏರಿದಂತಾಯಿತು? ನಿಮಗೆ ದೃಷ್ಟಿದೋಷ ಕೂಡ, ಪಾಪ!
ಮುಖ್ಯಮಂತ್ರಿಯ ಇಂದಿನ ದೈನೇಸಿ ಸ್ಥಿತಿ ಮತ್ತು ಆತನ ಮುಖದಮೇಲಿನ ರಾವುಕಳೆ ಇವು ಪಕ್ಷದ ಔನ್ನತ್ಯವನ್ನು ಸಾರುತ್ತವೆಯೇ? ನಿಮಗೆ ದೃಷ್ಟಿದೋಷವಲ್ಲದೆ ಮತ್ತೇನು?
ಸಮನ್ವಯ ಸಮಿತಿಯ ರಚನೆಯಾಗಿದೆಯೆಂದರೆ ಅದರರ್ಥ ಕರ್ನಾಟಕದಲ್ಲಿ ನಿಮ್ಮ ಪಕ್ಷದಲ್ಲಿ ಸಮನ್ವಯವೇ ಇಲ್ಲ! ಇದು ಪಕ್ಷವು ಎತ್ತರಕ್ಕೇರಿರುವುದರ ಕುರುಹೇ? ಇಂಥ ಶೋಚನೀಯ ಸ್ಥಿತಿಗೆ ಪಕ್ಷವನ್ನು ತಂದಿಟ್ಟ ರೆಡ್ಡಿ ಸಹೋದರರನ್ನು ನೀವು ಹೊಗಳುತ್ತಿದ್ದೀರಲ್ಲಾ, ಇದಕ್ಕೇನೆನ್ನಬೇಕು?
ನಾಳೆಯೇನಾದರೂ ನೀವು ಪಕ್ಷದ ರಾಷ್ಟ್ರಾಧ್ಯಕ್ಷೆಯಾದರೆ ಆಗ ಇದೇ ಮಾದರಿಯಲ್ಲಿ ಪಕ್ಷವನ್ನು ಎತ್ತರಕ್ಕೇರಿಸಲು ಯತ್ನಿಸುತ್ತೀರಾ ಹೇಗೆ?!
ಇನ್ನು ಶೋಭಾ ಕರಂದ್ಲಾಜೆ ವಿಷಯ. ಎಲ್ಲೆಡೆಯೂ ತಾನು ಮಿಂಚಬೇಕೆಂಬ ಹಂಬಲ ಶೋಭಾಗೆ ಇರಬಹುದು. ಆದರೆ ಅವರು ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದುದಂತೂ ಸತ್ಯ. ಅಂಥ ದಕ್ಷ ಹೆಣ್ಣುಮಗಳನ್ನು ಈ ರೆಡ್ಡಿಗಳು ಅಧಿಕಾರದಿಂದ ಕೆಳಗಿಳಿಸಿದರಲ್ಲಾ, ಓರ್ವ ಹೆಂಗಸಾಗಿ ಕೂಡ ನಿಮಗೆ ಏನೂ ವಿಷಾದವೆನ್ನಿಸುತ್ತಿಲ್ಲವೆ? ಪಕ್ಷದ ಕಾರ್ಯಕರ್ತೆಯಾಗಿ ದುಡಿದು ಮತ್ತು ಸಚಿವೆಯಾಗಿ ಕಾರ್ಯ ನಿರ್ವಹಿಸಿ ಸಾಕಷ್ಟು ಅನುಭವಹೊಂದಿರುವ ಶೋಭಾ ಕರಂದ್ಲಾಜೆಗೆ, ಪಕ್ಷ, ರಾಜಕಾರಣ, ನಾಡು, ನುಡಿಗಳ ಸೂಕ್ತ ಪರಿಜ್ಞಾನವೇ ಇಲ್ಲದಿರುವ ಸಂಸದೆ (!) ಶಾಂತಾ, ’ಆಯಮ್ಮ, ಈಯಮ್ಮ’, ಎಂದು ಟಿವಿ ಕ್ಯಾಮೆರಾಗಳೆದುರು ಬೈದಾಡಿದರಲ್ಲಾ, ಈ ಘನಂದಾರಿ ಪ್ರಸಂಗ ನಿಮ್ಮ ಪಕ್ಷವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದಿರಬೇಕು ಅಲ್ಲವೆ?
ಬಿದ್ದುಹೋಗಿದೆ
---------
ಬಿದ್ದುಹೋಗಿದೆಯಮ್ಮಾ, ಬಿದ್ದುಹೋಗಿದೆ. ಸುಷ್ಮಮ್ಮಾ, ಕರ್ನಾಟಕದಲ್ಲೀಗ ನಿಮ್ಮ ಪಕ್ಷದ ಘನತೆ ಬಿದ್ದುಹೋಗಿದೆ. ಬೀದಿಬೀದಿಯಲ್ಲಿ ಜನ ಆಡಿಕೊಂಡು ನಗುತ್ತಿದ್ದಾರೆ.
ನಿನ್ನೆತನಕ ಮುಖ್ಯಮಂತ್ರಿಯಮೇಲೆ ಹರಿಹಾಯ್ದ ಕೆಲ ಶಾಸಕರು ಇಂದು ಹಲ್ಲು ಕಿರಿದುಕೊಂಡು ಅದೇ ಮುಖ್ಯಮಂತ್ರಿಯ ಸುತ್ತ ಠಳಾಯಿಸುತ್ತಿರುವುದನ್ನು ಕಂಡು ಜನರು ಹೇಸಿಗೆಪಟ್ಟುಕೊಳ್ಳುತ್ತಿದ್ದಾರೆ.
ಈ ಎಲ್ಲ ಚೋದ್ಯಗಳಿಗೂ ಮೂಲ ಕಾರಣರು ರೆಡ್ಡಿ ಸಹೋದರರೆಂಬ ನಿಮ್ಮ ಈ ಮಕ್ಕಳೇ ಅಲ್ವಾ ತಾಯೀ?
ವರಮಹಾಲಕ್ಷ್ಮಿ ಪೂಜೆ, ಸಾಮೂಹಿಕ ಮದುವೆಯ ಸಾರಥ್ಯ, ಸಾಷ್ಟಾಂಗ ನಮಸ್ಕಾರಮರ್ಯಾದೆ ಇಂತಹ ’ಬಳ್ಳಾರಿ ಸ್ಪೆಷಲ್’ಗಳಿಗೆ ಮರುಳಾಗಿ ನೀವು ರೆಡ್ಡಿ ಸಹೋದರರನ್ನು ಕೊಂಡಾಡುತ್ತಿದ್ದೀರಿ. ಎಷ್ಟು ಮರುಳಾಗಿಬಿಟ್ಟಿದ್ದೀರೆಂದರೆ, ಜನಮನದಲ್ಲಿ ಪಾತಾಳಕ್ಕೆ ಬಿದ್ದಿರುವ ನಿಮ್ಮ ಪಕ್ಷವು ನಿಮಗೆ ಮಾತ್ರ ಆಕಾಶಕ್ಕೇರಿದಂತೆ ಕಾಣುತ್ತಿದೆ! ಕರ್ನಾಟಕದ ಮತದಾರರು ನಿಮ್ಮ ಪಕ್ಷದ ತತ್ತ್ವಾದರ್ಶಗಳನ್ನು ಪಾತಾಳದಲ್ಲಿ ಹುಡುಕುತ್ತಿರುವಾಗ ನೀವು ಆಕಾಶ ನೋಡಿ ಸಂಭ್ರಮಿಸುತ್ತಿದ್ದೀರಿ!
ಇದು ತಮಾಷೆಯಯ ವಿಷಯವಲ್ಲ ಸುಷ್ಮಾ ಸ್ವರಾಜ್ ಅವರೇ.
ರೆಡ್ಡಿ ಸಹೋದರರು ಪಕ್ಷವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆಂದು ಹೇಳುವ ಮೂಲಕ ನೀವು ನಿಮ್ಮ ಪಕ್ಷದ ಘನತೆಗೇ ಚ್ಯುತಿಯುಂಟುಮಾಡುತ್ತಿದ್ದೀರಿ, ಮಾತ್ರವಲ್ಲ, ಕರ್ನಾಟಕದ ಮತದಾರರನ್ನು ಹಗುರವಾಗಿ ಕಾಣುತ್ತಿದ್ದೀರಿ. ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ.
Comments
ಉ: ಅಮ್ಮಾ, ನಿಮ್ಮ ಮಕ್ಕಳು ಪಕ್ಷವನ್ನು ಪಾತಾಳಕ್ಕೆ ...
In reply to ಉ: ಅಮ್ಮಾ, ನಿಮ್ಮ ಮಕ್ಕಳು ಪಕ್ಷವನ್ನು ಪಾತಾಳಕ್ಕೆ ... by vidya shetty
ಉ: ಅಮ್ಮಾ, ನಿಮ್ಮ ಮಕ್ಕಳು ಪಕ್ಷವನ್ನು ಪಾತಾಳಕ್ಕೆ ...
ಉ: ಅಮ್ಮಾ, ನಿಮ್ಮ ಮಕ್ಕಳು ಪಕ್ಷವನ್ನು ಪಾತಾಳಕ್ಕೆ ...