ಅವರಿತ್ತ ಜೀವನ ಭಿಕ್ಷೆ

ಅವರಿತ್ತ ಜೀವನ ಭಿಕ್ಷೆ

ಜೀವನದಲ್ಲಿ ಬಾಲ್ಯದ ಅರಿವಿಲ್ಲದ ವಯಸ್ಸಿನಲ್ಲಿ ಪೋಷಕರ ಜತೆ ಹೆಣಗುತ ವ್ಯಕ್ತಿತ್ವ ರೂಪಿಸುವ ಶಿಕ್ಷಕರ ಪಾತ್ರ ಅಗಾಧವಾದದ್ದು. ವಿಪರ್ಯಾಸವೆಂದರೆ, ಆ ಕಾಣಿಕೆಯ ಪ್ರಯೋಜನವುಂಡು ಬೆಳೆಯುವ ಮಕ್ಕಳಿಗೆ ಅದರ ಮಹತ್ವ ಅರಿವಾಗುವಂತಹ ವಯಸಲ್ಲ; ಅರಿಯುವ ವಯಸಲ್ಲಿ ಆ ಬೆಳವಣಿಗೆಯ ಹಂತಗಳೆ ಮಸುಕಾಗಿ ಹೊಸ ಚಿತ್ತಾರಗಳು ಮೂಡಿ, ಹಳತೆಲ್ಲ ಮಾಯವಾಗಿಬಿಟ್ಟಿರುತ್ತವೆ. ಜೀವನ ಚಕ್ರದ ಜಂಜಾಟದಲ್ಲಿ ಪ್ರಾಯಶಃ ಮತ್ತೆ ಆ ಮಹತ್ವದ ನೆನಪಾಗುವುದು ಅವರ ಮಕ್ಕಳು ಅದೆ ಕಲಿಕೆಯ ಹಾದಿಯಲ್ಲಿ ಸಾಗುವುದನ್ನು ನೋಡುವಾಗ ಮತ್ತು ಆ ಬುನಾದಿ ಎಷ್ಟು ಕಠಿಣ ತರದ ಹಾದಿ ಎಂದರಿವಾಗುವಾಗ. ಮೊನ್ನೆ ರಾತ್ರಿ ಮಗನೊಡನೆ 'ಟೀಚರ್ಸ್ ಡೇ' ಕಾಣಿಕೆಗಳನ್ನು ಸಿದ್ದ ಮಾಡುತ್ತ, ಬಣ್ಣದ ಕಾಗದ ಸುತ್ತುತ್ತಿದ್ದಾಗ ಈ ಲಹರಿಯ ಹೊಳಹು ಮನದಲ್ಲಿ ಪದೆ ಪದೆ ಹೊಳೆದು ಮಾಯವಾಗುತ್ತಿತ್ತು. ಅದಕ್ಕೊಂದು ಕಾವ್ಯ ರೂಪ ಕೊಟ್ಟು ತನ್ಮೂಲಕ ಇಡಿ ಶಿಕ್ಷಕ ಸಮುದಾಯಕ್ಕೆ ವಿನಮ್ರವಾಗಿ ನಮಿಸುವ ಸಾಂಕೇತಿಕ ಯತ್ನ - "ಅವರಿತ್ತ ಜೀವನ ಭಿಕ್ಷೆ"

ಅವರಿತ್ತ ಜೀವನ ಭಿಕ್ಷೆ
___________________________

ಗುರುಮುಖೇನ ಜೀವನ ದರ್ಶನ
ಬಾಲ್ಯದಿಂದ ಕಾಪಾಡುವ ಚರಣ
ಅರಿತರಿಯದಿರುವ ವಯಸಿನಲೆ
ಅರಿವಿಲ್ಲದೆ ಕಟ್ಟುವ ವ್ಯಕ್ತಿತ್ವ ಸೆಲೆ!

ಹಿಡಿದರೊ ಕೋಲಲಿ ಬಡಿದರೊ
ಬೈಯ್ದಾಡಿ ರೇಗಿದ ಒಗರೊಗರೊ
ಏಗಿದ ಹೆಣಗಿದ ಪೋಷಕದೂತ
ಕಲಿಕೆಗೆಲ್ಲ ಪೋಷಾಕು ಹಾಕುತ!

ಬುನಾದಿ ಬಿದ್ದರೆ ತಾನೆ ಸನಾದಿ
ಸರಿಯಡಿಪಾಯ ಹಾಕೊ ದಾದಿ
ಶಿಸ್ತಿನ ಪೌರುಷ ಮಮತಾ ವೇಷ
ಏಕಿಭವಿಸಿ ಕಟ್ಟೇ ಪೀಳಿಗೆ ಭವಿಷ್ಯ!

ಜಗ ಬದಲಾದಂತೆ ಬದಲಾಗುತ
ನಡೆದ ಮಾಸ್ತರ ಮೇಡಮ್ಮರ ಗತ
ಬದಲಾಗಿದೆಯೆ ಸ್ಥಿತಿಗತಿ ದುರ್ಗತಿ
ತಪ್ಪಿ ಸ್ಕೂಲ್ಮಾಸ್ತರಿಕೆಯಾ ಅವನತಿ!

ಸಂಬಳ ಪೂರಾ ಕೊಟ್ಟರೊ ಬಿಟ್ಟರೊ
ಅರೆಕಾಸರೆಕಾಲಿಕಾ ಕಣ್ಣೀರ ತೇರೊ
ತಿದ್ದಿಸಕ್ಷರ ಸಹನೆ ಶಿಶುವಿನಸಹನೆ
ತಾಳ್ಮೆಯ ಬರಹ  ಆಜೀವ ಸ್ಮರಣೆ!

ಕಾಲಯಾನದಲೆಲ್ಲ ಮೌನ ಮರೆವು
ನಮ್ಮನಾಗಿಸಿ ತಲುಪಿಸಿದ ಎತ್ತರವು
ಕಾಣಿಸದಲ್ಲ ದೂರಕೆ ಇರುವೆ ಗಾತ್ರ
ಗೊತ್ತಾಗೊ ವಯಸಲ್ಲ ಅವರ ಪಾತ್ರ!

ತಿಳಿವ ವಯಸು ತರುವ ಜೀವನಚಕ್ರ
ನಮ್ಮ ಕುಡಿಗಳಿಗು ಬೇಕು ಅದೆ ಮಿತ್ರ
ಕನಿಷ್ಠತೆಯಲಿ ನಮನ ಶಿಕ್ಷಕರಿಗೀದಿನ
ಅವರಿತ್ತ ಜೀವನ ಭಿಕ್ಷೆಗೆ ವಂದಿಸೋಣ!
 

- ನಾಗೇಶ ಮೈಸೂರು

 

Comments

Submitted by makara Thu, 09/05/2013 - 05:20

ನಾಗೇಶರೆ, ಶಿಕ್ಷಕರ ದಿನಾಚರಣೆಗೆ ಸೂಕ್ತ ನಮಸ್ಸುಮಾಂಜಲಿ. ಚೀನಾದಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೆಪ್ಟಂಬರ್ ೧೨ರಂದು ಆಚರಿಸುತ್ತಾರೆಂದು ಕೇಳಿದ್ದೆ. ಸಿಂಗಪುರದಲ್ಲಿ ೫ರಂದೇ ನಡೆಸುತ್ತಾರೋ ಹೇಗೆ? ವಿವರಗಳಿದ್ದರೆ ತಿಳಿಸಿ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by nageshamysore Thu, 09/05/2013 - 05:55

In reply to by makara

ಶ್ರೀಧರರೆ, ಸಿಂಗಾಪುರದಲ್ಲಿ ನಾಳೆ (6ನೆ ಸೆಪ್ಟಂಬರಿಗೆ) ಆಚರಿಸುತ್ತಿದ್ದಾರೆ. ಅದಕ್ಕೆ ನಾಳೆ ಸ್ಕೂಲಿಗೆ ರಜೆ. ಹಾಗೆಯೆ ಇಂದು ನನ್ನ ಮಗನ ಸ್ಕೂಲಿನಲ್ಲಿ 'ಟೀಚರ್ಸ್ ಅಪ್ರಿಸಿಯೇಷನ್ ಡೇ' ಆಚರಿಸುವುದರಿಂದ ಈ ದಿನವೂ ಸ್ಕೂಲಿಗೆ ರಜೆ!
Submitted by nageshamysore Sat, 09/07/2013 - 12:12

In reply to by makara

ಶ್ರೀಧರರೆ, ತೀರಾ ಈಚಿನ ಸುದ್ದಿ, ಚೀನಾದಿಂದ ಗೆಳೆಯನೊಬ್ಬ ರವಾನಿಸಿದ್ದು - ಅಲ್ಲಿ ಸೆಪ್ಟಂಬರ್ 10ಕ್ಕೆ (12 ಅಲ್ಲ) ಟೀಚರ್ಸ್ ಡೇ ಆಚರಣೆಯಂತೆ. ಆದರೆ ಈ ಬಾರಿಯಿಂದ ಅದನ್ನು ಸೆಪ್ಟಂಬರ್ 28ಕ್ಕೆ ಬದಲಾಯಿ 'ಕನ್ಫೂಷಿಯಸ್ ಡೆ' ಎಂದು ಆಚರಿಸಲಿದ್ದಾರೆಂದು ಸುದ್ದಿ. (ಆತನ ಪುರಾತನ  ವಿದ್ಯಾಕ್ಷೇತ್ರದ ಕಾಣಿಕೆಯನ್ನು ಗೌರವಿಸಲು)
Submitted by nageshamysore Thu, 09/05/2013 - 17:41

In reply to by partha1059

ಪಾರ್ಥಾ ಸಾರ್, ನಾನು ಅಷ್ಟುದ್ದ ಪದ್ಯ ಬರೆದರೆ, ನೀವು ಒಂದೆ ಸಾಲಿನಲ್ಲಿ ಮುಗಿಸಿಬಿಟ್ಟಿರಲ್ಲ :-)   ಧನ್ಯವಾದಗಳೊಂದಿಗೆ, ನಾಗೇಶ ಮೈಸೂರು
Submitted by Deekshitha Vorkady Fri, 09/06/2013 - 17:11

ಗುರು ಎಂದರೆ ಗುರ್...ಎಂದು ದಿಟ್ಟಿಸುವ‌ ಈ ಕಾಲಘಟ್ಟದಲ್ಲಿ ಈ ಕವಿತೆ ಪ್ರಸ್ತುತ‌.....................,...ಹಾಗೇನೇ ವೃತ್ತಿಯನ್ನು ಗೌರವಿಸದ‌ ಶಿಕ್ಷಕರಿಂದ‌ ಶಿಕ್ಷಕ‌ ವೃತ್ತಿಗೇ ಅವಮಾನವಾಗುತ್ತಿದೆ...
Submitted by nageshamysore Sat, 09/07/2013 - 12:06

In reply to by Deekshitha Vorkady

ಧನ್ಯವಾದಗಳು ದೀಕ್ಷಿತಾರವರೆ. ಶಿಕ್ಷಕರಾಗಿ ನೈತಿಕ ಮೌಲ್ಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಬೇಕಾದ ಜವಾಬ್ದಾರಿ ತಮ್ಮ ಮೇಲಿದೆಯೆಂಬ ಅರಿವಿರುವವರು ಆ ಹುದ್ದೆಯನ್ನು ಆಯ್ದುಕೊಳ್ಳಬೇಕು. ಅಲ್ಲೂ ವಾಣಿಜ್ಯೀಕರಣ ರಾಜ್ಯವಾಳಿದರೆ ಗುಣಮಟ್ಟಕ್ಕೆ ಹೊಡೆತ.
Submitted by ಗಣೇಶ Sat, 09/07/2013 - 00:08

ಅವರಿತ್ತ ಜೀವನ ಭಿಕ್ಷೆ! ನನ್ನ ಪ್ರೈಮರಿ ಸ್ಕೂಲ್ ನಲ್ಲಿ ನನ್ನ ತಾಯಿ ಟೀಚರ್,ಹೈಸ್ಕೂಲ್ ನಲ್ಲಿ ತಂದೆಯವರ ಶಿಷ್ಯನಾಗಿದ್ದೆ. ಕಾಲಯಾನದಲೆಲ್ಲ ಮೌನ ಮರೆವು ನಮ್ಮನಾಗಿಸಿ ತಲುಪಿಸಿದ ಎತ್ತರವು ಕಾಣಿಸದಲ್ಲ ದೂರಕೆ ಇರುವೆ ಗಾತ್ರ ಗೊತ್ತಾಗೊ ವಯಸಲ್ಲ ಅವರ ಪಾತ್ರ! ನಾಗೇಶರೆ, ಕವನ ಮನ ತಟ್ಟಿತು.
Submitted by kavinagaraj Mon, 09/09/2013 - 13:25

ಸಾಮಾನ್ಯವಾಗಿ ಉತ್ತಮ ಶಿಕ್ಷಕರು ಎಂದು ನಾವು ನೆನೆಸಿಕೊಳ್ಳುವವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರುಗಳನ್ನು!! ಏಕೆಂದರೆ ನಮ್ಮ ನಡವಳಿಕೆಯ ತಳಪಾಯ ಅವರುಗಳು!!
Submitted by nageshamysore Tue, 09/10/2013 - 19:53

In reply to by kavinagaraj

ಹೌದು ಕವಿನಾಗರಾಜರೆ, ಬುನಾದಿ ಮೊದಲ ಹಂತಗಳಲ್ಲಿ ಸರಿಯಾಗಿ ಬಿದ್ದರೆ, ಮೇಲೇಳುವ ಕಟ್ಟಡ ಗಟ್ಟಿಮುಟ್ಟಾಗುವುದು. ಅದಾಗುವುದು ಏನಿದ್ದರೂ ಪ್ರೈಮರಿ, ಪ್ರೌಢಶಾಲಾ ಮಟ್ಟದಲ್ಲಿ ಮಾತ್ರ.