ಆಧುನಿಕ ಸಂತೆ ಸಿಂಗಪುರ

ಆಧುನಿಕ ಸಂತೆ ಸಿಂಗಪುರ

ಬರಹ

ಮೂರು ದಿನ, ಕೇವಲ ಮೂರೇ ಮೂರು ದಿನ ಒಂದು ಊರು, ಊರಲ್ಲ, ಉರೇ ದೇಶವಾಗಿರುವ ಊರು ನೋಡಿ ಬಂದು ಅದರ ಬಗ್ಗೆ ಬರೆಯುವುದು ಉದ್ಧಟತನ. ನಿಜ. ಆದರೆ ಆ ಮೂರು ದಿನಗಳ ಹಿಂದೆ ನನ್ನ ಐವತ್ತೆರಡು ವರ್ಷಗಳಿವೆ. ಆ ವರ್ಷಗಳು ತಿದ್ದಿ ರೂಪಿಸಿರುವ ಮನಸ್ಸು ಇದೆ. ಆದ್ದರಿಂದಲೇ ಸಿಂಗಪುರ ಎಂಬ ನಗರ ರಾಷ್ಟ್ರ ನನ್ನಲ್ಲಿ ಪ್ರೇರಿಸಿದ ಸಂಗತಿಗಳನ್ನು , ನೀವೂ ನನ್ನಂಥವರೇ ಎಂದು ನಂಬಿ, ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
ಒಂದು ಮಾತಿನಲ್ಲಿ ಹೇಳುವುದಾದರೆ
ಇಡೀ ಮೈಸೂರನ್ನು ಒಂದು ಸಂತೆ ಎಂದು ಕಲ್ಪಿಸಿಕೊಳ್ಳಿ. ಆ ಇಡೀ ಸಂತೆ ಏರ್ ಕಂಡೀಶನ್ ಆದ ಬಿಲ್ಡಿಂಗಿನಲ್ಲಿದೆ ಅಂದುಕೊಳ್ಳಿ. ಜನ ಎಲ್ಲೆಲ್ಲಿ ರಸ್ತೆ ದಾಟಬೇಕೋ ಅಲ್ಲೆಲ್ಲ ಮೇಲು ಸೇತುವೆಗಳು, ಸ್ಥಾವರ ಮೆಟ್ಟಿಲುಗಳು; ಎಲ್ಲಲ್ಲಿ ಇಳಿಯಬೇಕೋ ಅಲ್ಲೆಲ್ಲ ಎಸ್ಕಲೇಟರ್ ಎಂಬ ಜಂಗಮ ಮೆಟ್ಟಿಲುಗಳು; ಉಬ್ಬಿಲ್ಲದ, ತಗ್ಗಿಲ್ಲದ, ಹಳ್ಳಗಳಿಲ್ಲದ ರಸ್ತೆಗಳು; ಎಲ್ಲೂ ತಿಪ್ಪೆಗುಂಡಿ ಹೋಗಲಿ ಕಸ ಕೂಡ ಇರದ, ರಸ್ತೆಯ ಎರಡೂ ಬದಿ ಬೆಳೆಸಿದ ಹುಲ್ಲು ಹಾಸು, ಬಳ್ಳಿ ಪೊದೆಗಳನ್ನು ಸೇರಿಸಿಕೊಳ್ಳಿ. ರಾತ್ರಿಯ ಹೊತ್ತು ಬೆಳಕಿನ ವೈಭವ ಸೇರಿಸಿ. ಕೊನೆಯೇ ಇರದ ಅಂಗಡಿ ಸಾಲುಗಳ ನೆಲದೊಳಗಿನ, ನೆಲದ ಮೇಲಿನ ಅಂತಸ್ತುಗಳು, ಕೊಳ್ಳುವ, ಮಾರುವ, ಚೌಕಾಸಿ ಮಾಡುವ, ಸುಮ್ಮನೆ ಸುತ್ತುವ ದೇಶವಿದೇಶಗಳ ಜನರನ್ನು ಇಲ್ಲಿ ತಂದು ಕೂಡಿ. ನನಗೆ ಕಂಡದ್ದು ಎರಡೇ ಚಟುವಟಿಕೆ: ಶಾಪಿಂಗ್ ಅಂತ ಸುತ್ತುವುದು, ಅಥವ ತಿನ್ನುವುದು. ಅಮೆರಿಕಾ ನೋಡಿಲ್ಲ, ಇದು ಅಮೆರಿಕಾ ಆಗಲು ಯತ್ನಿಸುತ್ತಿರುವ ಏಶಿಯಾದ ಊರು-ದೇಶ, ದ್ವೀಪರಾಷ್ಟ್ರ. ನಮ್ಮ ಬೆಂಗಳೂರಿಗೆ ಮಾದರಿ ಎಂದು ಕೆಲವು ರಾಜಕಾರಣಿಗಳು ಭ್ರಮಿಸಿರುವ ಪುರ. ಈಗೇನಾದರೂ ಮಹಾ ಕಾವ್ಯ ಬರೆಯುವುದಿದ್ದರೆ ಪುರವರ್ಣನೆಗೆ ಹೇಳಿ ಮಾಡಿಸಿದ ತಾಣ. ಆದರೇನು, ಮಹಾಕಾವ್ಯಕ್ಕೆ ತಕ್ಕ ನಾಯಕರಿಲ್ಲ, ಅಷ್ಟೆ.
ಅಲ್ಲಿಗೆ ಹೋಗುವ ಮುನ್ನ
ನಾನು ವಿದೇಶಕ್ಕೆ ಹೋಗಿಲ್ಲ, ಪಿಎಚ್‌ಡಿ ಮಾಡಿಲ್ಲ ಎಂದು ಹೇಳಿಕೊಳ್ಳುತ್ತಿದ್ದೆ. ಈಗ ವಿದೇಶಕ್ಕೆ ಹೋಗುತ್ತಿದ್ದೇನೆ. ಇದೇ ತಿಂಗಳು ೨೯ರಂದು ನಾವು ಮೂವರು ಸಿಂಗಪುರಕ್ಕೆ ಹೋಗುತ್ತಿದ್ದೇವೆ. ಕಳೆದ ತಿಂಗಳು ಋತ ಸಿಂಗಪುರಕ್ಕೆ ಹೋಗೋಣವಾ ಎಂದು ಕೇಳಿದಾಗ ಓಹೋ ಎಂದಿದ್ದೆ. ಉದ್ಯೋಗದ ಸಲುವಾಗಿ ವಿದೇಶಕ್ಕೆ ಹೋಗುವುದು, ಯಾವುದೋ ಸೆಮಿನಾರು ಎಂದೋ ಸಭೆ ಎಂದೋ ಆಹ್ವಾನಿತರಾಗಿ ಹೋಗುವುದು ಒಂದು ಥರ. ಸುಮ್ಮನೆ ಹೋಗುವುದಿದೆಯಲ್ಲ ಅದು ಒಂದು ಥರ ದುಡ್ಡಸ್ತಿಕೆಯ ಜಂಬ ಅನ್ನುವ ಭಾವನೆ ಹೋಗಿಲ್ಲ. ಮೂವರು ಹೋಗಿಬರುವುದಕ್ಕೆ ನನ್ನ ಉಳಿತಾಯದ ಬಹು ಭಾಗ ಖರ್ಚಾಗುತ್ತಲ್ಲ ಅಂತ ಒಂದು ಮನಸ್ಸು ಹೇಳಿದರೆ, ಆದರೆ ಆಯಿತು, ಅದೂ ಒಂದು ಅನುಭವ ಯಾಕೆ ಆಗಬಾರದು ಎಂದು ಇನ್ನೊಂದು ಮನಸ್ಸು. ಹಾಗೆ ಅನುಭವವನ್ನು ಪಡೆಯುವ ಸಾಮರ್ಥ್ಯ ಇದೆಯೇ ಎಂದು ಅನುಮಾನ. ಬೇರೊಂದು ಜಾಗದಲ್ಲಿ, ಬೇರೊಂದು ಮನೆಯಲ್ಲಿ, ಬೇರೆ ಥರ ಜನದ ಜೊತೆ ಇರಬೇಕಿತ್ತು ಎಂಬ ಆಸೆ ಚಿಕ್ಕಂದಿನಲ್ಲಿ ಮೂಡುತ್ತಿತ್ತು. ಅದು ಇನ್ನೂ ಹೋಗಿಲ್ಲವೋ ಏನೋ. ಎಲ್ಲೋ ಏನೋ ತಾಗಿ ಹೊತ್ತಿ ಉರಿವುದು ಬೇಸರ. ಅದನ್ನು ಮರೆಮಾಡಲು, ಬೇಸರ ಎಂಬುದು ಇದೆ ಎಂದೇ ಗೊತ್ತಾಗದಂತಿರಲು ಏನೇನೋ ಮಾಡುತ್ತಿರುತ್ತೇನೆ. ಅದರಲ್ಲಿ ಇದೂ ಒಂದು ಇದ್ದೀತು. ಗೃಹಭಂಗ ಮತ್ತೊಮ್ಮೆ ಓದುತ್ತಿದ್ದೆ. ಅಲ್ಲಿನ ಜನಗಳಿಗೆ ಒಂದಿಷ್ಟು ದುಡ್ಡಿದ್ದಿದ್ದರೆ ಬೇರೆ ಥರ ಇರುತ್ತಿದ್ದರಾ ಅನ್ನುವ ಪ್ರಶ್ನೆ ಮೂಡಿತು. ಇಲ್ಲ ಅನ್ನಿಸಿತು. ಆದರೂ ನಮ್ಮ ಸುತ್ತಲ ಬಹಳ ಮಂದಿ ಹಾಗೇ ಬದುಕಿದ್ದಾರಲ್ಲವಾ? ಬೇಸರ ಪಡುವುದಕ್ಕೂ ವ್ಯವಧಾನವಿಲ್ಲದಂತೆ ಬದುಕಿನ ಹೋರಾಟದಲ್ಲಿ ಮುಳುಗಿದ್ದಾರೆ. ನಾನೇನೂ ಬಹಳ ಶ್ರೀಮಂತನಲ್ಲದಿದ್ದರೂ ಅಂಥ ಜನ ಆಸೆ ಪಡುವಷ್ಟು ಮಟ್ಟಿಗೆ ಉಳ್ಳವನು. ಸುಮ್ಮ ಸುಮ್ಮನೆ ಸಿಂಗಪುರಕ್ಕೆ ಹೋಗಿ ಬರುವುದು ಯಾಕೋ ನಾಚಿಕೆ ಅನ್ನಿಸುತ್ತಿದೆ. ಆದರೂ ಇನ್ನೊಂದೆಡೆ ಸಂಭ್ರಮವೂ ಇದೆ. ಇದೀಗ ಅರ್ಚನಾ, ಚಂದ್ರಾ ಜೊತೆಯಲ್ಲಿ ಜೀನ್ಸು, ಟೀ ಶರಟು ಕೊಳ್ಳಲು ಹೊರಟಿರುವೆ. ನಾನೂ ವಿದೇಶಕ್ಕೆ ಹೋಗಬಲ್ಲೆ ಎಂದು ಯಾರಿಗೆ ಪ್ರೂವ್ ಮಾಡಲು ಬಯಸಿರುವೆ? ಅಯ್ಯೋ ಹೋಗುತ್ತಿದ್ದೇನಲ್ಲ ಎಂದು ನಾಚಿಕೆಪಟ್ಟುಕೊಂಡು ಯಾರ ಮೆಚ್ಚುಗೆ ಪಡೆಯಲು ಬಯಸಿರುವೆ? ನನ್ನೊಳಗೇ ಇರುವ ಸಾಮಾಜಿಕ ಜವಾಬ್ದಾರಿಯ ವಿಚಾರಧಾರೆ ಮತ್ತು ಸುಖದ ಅಭಿಲಾಷೆಗಳು ಹೀಗೆ ಗೋಳಾಡಿಸುತ್ತಿವೆಯಾ? (ಅಕ್ಟೋಬರ್ ೧೬, ೨೦೦೫)
“ನೀನೇ ಹೋಗ್ತಿರೋದೋ, ಯಾರಾದರೂ ಕರೆದಿರೋದೋ?”
“ನಾನೇ.”
“ಬೇರೆ ಯಾವುದಾದರೂ ದೇಶಕ್ಕೆ ಹೋಗಬಹುದಿತ್ತು. ಅದೇನು ಬೆಂಗಳೂರಿನ ಕಮರ್ಶಿಯಲ್ ಸ್ಟ್ರೀಟ್ ಇನ್ನೂ ದೊಡ್ಡದಾಗಿರೋದನ್ನ ನೋಡಿಕೊಂಡು ಬಂದಹಾಗೆ.” ರಾಮು ಜೊತೆ ಮೊನ್ನೆ ಮಾತು ಕತೆ.
“ನೀವು ಥಾಯ್ಲಾಂಡ್ ಗೆ ಹೋಗ್ತಿಲ್ಲವಾ?” In fact that is more interesting. ಶೈಲಾ ಹೇಳಿದ್ದು.
೨೨ ಅಕ್ಟೋಬರ್ ೨೦೦೫
ಇವತ್ತು ಹಿಂದೂ ಪೇಪರಿನಲ್ಲಿ ಸಾನಿಯಾ ಮಿರ್ಜಾ ಬಗ್ಗೆ ನಿರ್ಮಲ್ ಶೇಖರ್ ಬರೆದ ಒಂದು ಲೇಖನ ಓದುತ್ತಿದ್ದೆ. ಅದರಲ್ಲಿ ಒಂದು ಅದ್ಬುತವಾದ ಉಪಮೆ ಕಣ್ಣಿಗೆ ಬಿತ್ತು: “ನಕ್ಷತ್ರ ಮುಟ್ಟಲು ಮರ ಹತ್ತಿದಂತೆ”. ನಿಜವಲ್ಲವೇ? ನಾವು ಮಾಡುವ ಎಲ್ಲ “ಸಾಧನೆ”ಗಳೂ ನಕ್ಷತ್ರವನ್ನು ಮುಟ್ಟಲೆಂದು ಮರ ಹತ್ತುವ ಕೆಲಸಗಳೇ! ನನ್ನ ವಯಸ್ಸಿನ ಒಂದೊಂದು ಕಾಲದಲ್ಲೂ ಬಹಳ ಮುಖ್ಯ, ಬಹಳ ದೊಡ್ಡದು ಅಂದುಕೊಂಡಿದ್ದವೆಲ್ಲ ಈಗ ತೀರ ಸಾಮಾನ್ಯವಾಗಿ, ಕ್ಷುಲ್ಲಕವಾಗಿ ಕಾಣುತ್ತಿವೆ. ನಕ್ಷತ್ರಗಳೇ ಕಾಣದಿದ್ದರೆ, ಅಥವ ಮರಗಳೇ ಇಲ್ಲದಿದ್ದರೆ ಹೇಗಿರುತ್ತಿತ್ತೋ! ಸಿಂಗಪುರದ ಪ್ರವಾಸವೂ ಹೀಗೇ ಇನ್ನೊಂದು ಮರಹತ್ತುವ ಪ್ರಯತ್ನವಾಗಿದೆ ಅನ್ನಿಸುತ್ತಿದೆ. (೧೯ ಅಕ್ಟೋಬರ್ ೨೦೦೫)
ಹೋಗಿ ಬಂದಮೇಲೆ ಹೀಗನ್ನಿಸಿತು
ಹೀಗೆ ಅನ್ನಿಸುವುದಕ್ಕೆ ಕಾರಣ ನಾನು ನೋಡಿದ್ದು ಮಾತ್ರವಲ್ಲ, ಈಗ ಅಲ್ಲೇ ಹತ್ತಿರ ಹತ್ತಿರ ಎರಡು ವರ್ಷದಿಂದ ಇರುವ ಗೆಳೆಯ ಶ್ರೀನಿವಾಸಮೂರ್ತಿ ಮತ್ತು ಅವರ ಹೆಂಡತಿ ವಿದ್ಯಾ ಹೇಳಿದ ಸಂಗತಿಗಳೂ ಕಾರಣವಾಗಿವೆ.
ಸುಮಾತ್ರಾದ ರಾಜಕುಮಾರನೊಬ್ಬ ಈ ದ್ವೀಪದಲ್ಲಿ ಸಿಂಹವನ್ನು ಕಂಡು ಇದು ನಗರವನ್ನು ಸ್ಥಾಪಿಸಲು ಸೂಕ್ತ ಸ್ಥಳ ಎಂದುಕೊಂಡ ಅನ್ನುವುದು ಮಲಯಾ ಪುರಾಣದ ಕಥೆ. ಕುಡಿಯುವ ನೀರು ಕೂಡ ಆಮದುಮಾಡಿಕೊಳ್ಳುವ, ವ್ಯವಸಾಯಕ್ಕೆ ಅವಕಾಶವಿಲ್ಲದ, ಗಣಿ ಇತ್ಯಾದಿಗಳು ಇಲ್ಲದ, ಕಾರ್ಖಾನೆ ಇತ್ಯಾದಿಗಳು ಇಲ್ಲದ, ಕೇವಲ ವಾಣಿಜ್ಯ ಮಾತ್ರದಿಂದಲೇ, ಹಣಕಾಸಿನ ಲೇವಾದೇವಿಯಿಂದಲೇ, ಪ್ರವಾಸೋದ್ಯಮದಿಂದಲೇ, ಎಲೆಕ್ಟ್ರಾನಿಕ್ಸ್‌ನಿಂದಲೇ ಸಂಪದ್ಭರಿತವಾದ ಊರೆಂಬ ದೇಶ ಇದು. ಸೆಂಟೋಸಾದಲ್ಲಿರುವ ನೀರುಗುಳುವ ಸಿಂಹದ ಹಿನ್ನೆಲೆಗೆ ಇರುವ ಕಟ್ಟಡಗಳನ್ನೇ ನೋಡಿ. ಪುರಾಣ ಅಲಂಕಾರಕ್ಕೆ, ವ್ಯಾಪಾರ ಜೀವನೋಪಾಯಕ್ಕೆ, ದೇಶ ಕಟ್ಟುವುದಕ್ಕೆ. ಮಲಯಾ ಪೆನಿನ್ಸುಲಾದಲ್ಲಿದ್ದ ಈ ತಾಣ ಯುದ್ಧ, ವ್ಯಾಪಾರ ಎರಡಕ್ಕೂ ಹೇಳಿ ಮಾಡಿಸಿದಂಥ ಆಯಕಟ್ಟಿನ ಜಾಗದಲ್ಲಿತ್ತು. ಸರ್ ಸ್ಟಾಮ್‌ಫರ್ಡ್ ರಾಫೆಲ್ಸ್ ಈ ಊರನ್ನು ಈಸ್ಟ್ ಇಂಡಿಯಾ ಕಂಪೆನಿಯ ವಶವಾಗುವಂತೆ ಮಾಡಿ ಆಧುನಿಕ ಸಿಂಗಪುರದ ತಂದೆ ಎಂದು ಕರೆಸಿಕೊಂಡ. ಚೀನೀಯರು, ಮಲಾಯ್‌ಗಳು ಮತ್ತು ಭಾರತೀಯರು ಸೇರಿ ಇಲ್ಲಿನ ಜನಪದ ರೂಪುಗೊಂಡಿತು. ಈಗ ರಾಫೆಲ್ಸ್ ಕೂಡ ಒಂದು ಹೋಟೆಲಿನ ಹೆಸರು. ಅದು ಅವನಿದ್ದ ಮನೆಯೂ ಹೌದು. ಆದರೆ ಅಲ್ಲಿ ಉಳಿಯುವುದಿದ್ದರೆ ನಮಗೆ ಅಮಿತಾಭ್ ಬಚ್ಚನ್ ಗೆ ಇರುವಷ್ಟು ಆದಾಯ ಇರಬೇಕು ಅಷ್ಟೆ. ನದಿಯ ಪಕ್ಕದಲ್ಲಿ ರಾಫೆಲ್ಸ್‌ನ ಪ್ರತಿಮೆ ಇದೆ. ಮೂಲ ಕಂಚಿನ ಪ್ರತಿಮೆ ಕೊಂಚ ದೂರದಲ್ಲಿ. ಆ ಮೂಲ ಪ್ರತಿಮೆಗಿಂತ ನಕಲು ಮಾಡಿರುವ ಬೆಳ್ಳನೆ ಬೊಂಬೆಯೇ ಹೆಚ್ಚಿನ ಚಿತ್ರಗಳಲ್ಲಿ ಕಾಣುತ್ತದೆ.
ಬಹು ಸಂಸಕ್ರುತಿ?
ಇಲ್ಲಿ ಒಂದು ಲಿಟಲ್ ಇಂಡಿಯಾ ಇದೆ, ಒಂದು ಲಿಟಲ್ ಚೈನಾ ಇದೆ. ಮಲಯಾ ಮೂಲದವರು ಇದ್ದಾರೆ. ಅರಬ್ ಸ್ಟ್ರೀಟ್ ಇದೆ. ಜಗತ್ತಿನ ಎಲ್ಲ ಪ್ರಮುಖ ಉದ್ದಿಮೆಗಳ ಕಚೇರಿಗಳು ಇವೆ. ಬೌದ್ಧರು, ಮುಸ್ಲಿಮರು, ಹಿಂದೂಗಳು, ಕ್ರಿಶ್ಚಿಯನ್ನರು, ತಾವೋ ವಾದಿಗಳು, ಝರತುಷಟ್ರನ ಧರ್ಮ ಪಾಲಿಸುವವರು, ಅವರು ಮಾಡುವ ಹಬ್ಬಗಳು ಇವೆ. ಇಂಡೋನೇಸಿಯಾದವರು, ಥಾಯ್‌ಲ್ಯಾಂಡಿನವರು, ಯೂರೋಪಿನವರು, ಸ್ಪೇನಿನವರು ಇತ್ಯಾದಿ ಇದ್ದಾರೆ. ಇವರೆಲ್ಲ ಸೇರಿ ಸಿಂಗಪುರೀಯರು. ಹಾಗೆಯೇ ಜಗತ್ತಿನ ಬಹುತೇಕ ಪ್ರದೇಶಗಳ ಊಟ ಉಪಚಾರಗಳು ಹೆಜ್ಜೆ ಮೈಸೂರಿಗಿಂತ ದೊಡ್ಡದಾದ, ಬೆಂಗಳೂರಿಗಿಂತ ಚಿಕ್ಕದಾದ, ಈ ಊರು-ದೇಶದಲ್ಲಿ ಎದುರಾಗುತ್ತವೆ.
ಆದ್ದರಿಂದಲೇ ಈ ಊರು-ದೇಶವನ್ನು ಬಹುಸಂಸ್ಕೃತಿಗಳ ನಾಡು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇದೊಂದು ವಿಚಿತ್ರ. ಜಗತ್ತಿನ ಎಲ್ಲ ದೇಶಗಳೂ, ನಮ್ಮ ಭಾರತವೂ ಸೇರಿದಂತೆ, ತಮ್ಮ ದೇಶ ಮಾತ್ರ ಬಹು ಸಂಸ್ಕೃತಿಗಳ ನಾಡು ಎಂದು ಹೆಮ್ಮೆ ಪಡುತ್ತವೆ. ನೋಡಿ, ಹಾಗೆ ಬಹು ಸಂಸ್ಕೃತಿಗಳಿಲ್ಲದ ದೇಶ, ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ, ಊರು, ಬೀದಿ, ಮನೆ ಯಾವುದಾದರೂ ಇವೆಯೇ? ಹಾಗೆ ನೋಡಿದರೆ ಒಬ್ಬೊಬ್ಬರಲ್ಲೂ ಬಹುಸಂಸ್ಕೃತಿ ಇದ್ದೇ ಇದೆಯಲ್ಲವೆ. ಅದರದೇನು ಹೆಚ್ಚುಗಾರಿಕೆ? ನಾವು ಒಬ್ಬೊಬ್ಬರೂ, ಒಂದೊಂದು ಊರೂ ಅನೇಕ ನದಿಗಳು ಸೇರಿ ಆದ ಸಮುದ್ರದಂತೆಯೇ ಅಲ್ಲವೆ?
ಆದರೂ ನೂರು ವರ್ಷಗಳ ಹಿಂದೆ ಇಲ್ಲಿ ಬಂದ ಜನ ತಮ್ಮ ಹಬ್ಬಗಳನ್ನೂ ಆಚರಣೆಗಳನ್ನೂ ನೆನಪಿಟ್ಟುಕೊಂಡು ಉಳಿಸಿಕೊಂಡಿರುವುದು ಹೊರಗಿನಿಂದ ಹೋದವರಿಗೆ ಒಂದಷ್ಟು ಬೆರಗು ಹುಟ್ಟಿಸುವುದು ನಿಜ. ಹರಿರಾಯ ಪೌಸಾ ಎಂದು ಕರೆಯುವ ರಮ್ಜಾನ್, ಭಾರತೀಯರು ಆಚರಿಸುವ ವೈಶಾಖಿ, ಚೀನೀಯರ ಡ್ರಾಗನ್ ಬೋಟ್ ಹಬ್ಬ, ಅವರದ್ದೇ ಆದ ಪಿತೃಗಳಿಗೆ ತರ್ಪಣ ಕೊಡುವ “ಹಸಿದ ಭೂತಗಳ ಹಬ್ಬ”, ತಮಿಳರು ಮಾಡುವ ತಾಯ್ ಪೂಸನ್ ಅಥವ ನಮ್ಮಲ್ಲಿ ಆಚರಣೆಯಲ್ಲಿರುವ ಸಿಡಿ, ಇವು ಧಾರ್ಮಿಕ ಆಚರಣೆಗಳಾಗಿರುವಂತೆಯೇ ಪ್ರವಾಸೀ ಆಕರ್ಷಣೆಗಳೂ ಹೌದು. ಈ ಹಬ್ಬದ ದಿನಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚು.
ಜನ ಎಲ್ಲಿದ್ದಾರೆ?
ಇದೋ ನಿನ್ನೆ ತಾನೇ ಪೇಟಿಂಗ್ ಮಾಡಿಸಿಕೊಂಡಂತೆ ನಳನಳಿಸುವ ಬಹು ಬಹುಮಹಡಿ ಕಟ್ಟಡಗಳು; ನಗರದಲ್ಲಿ ಕೂಡ ಗಂಟೆಗೆ ೮೦ ಮೈಲಿ ವೇಗದಲ್ಲಿ ಚಲಿಸುವ ಕಾರುಗಳು; ನಡೆದಾಡಲು ಹಿತವೆನ್ನಿಸುವ ಫುಟ್‌ ಪಾತುಗಳು, ಆದರೂ ಜನ ಮಾತ್ರ ಎಲ್ಲೂ ಕಾಣುತ್ತಿಲ್ಲವಲ್ಲ ಎಂದು ಮೊದಲ ಕೆಲವು ಗಂಟೆಗಳು ಆಶ್ಚರ್ಯಪಟ್ಟಿದ್ದೆವು. ಜನ ಸಂಖ್ಯೆ ಕಡಮೆಯೇ. ಬೆಂಗಳೂರಿನ ಜನಸಂಖ್ಯೆಯ ಅರ್ಧದಷ್ಟೂ ಇಲ್ಲ ಇಡೀ ದೇಶದಲ್ಲಿ. ಪ್ರವಾಸಿಗರೂ ಪ್ರತಿದಿನ ಒಂದೋ ಎರಡೋ ಲಕ್ಷ ಇರುತ್ತಾರೆ. ಆದರೂ ಮಹಾ ನಗರದಲ್ಲಿ ಕಾಣುವ ಜನ ದಟ್ಟಣೆ ಇಲ್ಲವಲ್ಲ ಅಂದುಕೊಂಡಿದ್ದೆವು. ಆಮೇಲೆ ತಿಳಿಯಿತು. ನೆಲದೊಳಗೆ ಸಾಗುವ ಮೆಟ್ರೋ ರೈಲು ಮಾರ್ಗದುದ್ದಕ್ಕೂ ಕೆಳಕ್ಕೇಳು ಮಡಿ, ಮತ್ತೆ ರಸ್ತೆ ಮೇಲೆ ಎದ್ದಿರುವ ಮತ್ತೇಳು ಇಂಟು ಮೂರು ಮಡಿ ಅಂತಸ್ತುಗಳಲ್ಲಿ ಹರಡಿಕೊಂಡಿರುವ ಷಾಪಿಂಗ್ ಮಾಲುಗಳಲ್ಲಿ ಸೇರಿಕೊಂಡಿದ್ದಾರೆ; ಕಾರುಗಳೊಳಗೆ ಸೇರಿಕೊಂಡಿದ್ದಾರೆ; ಚಲಿಸುವ ಮೆಟ್ಟಿಲ ಮೇಲೆ ನಿಶ್ಚಲವಾಗಿ ನಿಂತು ಹೋಗಬೇಕಾದಲ್ಲಿಗೆ ಹೋಗುತ್ತಿದ್ದಾರೆ; ರಸ್ತೆಬದಿಯಲ್ಲಿ ಅಥವ ಹೋಟೆಲುಗಳಲ್ಲಿ ತಿನ್ನುತ್ತಿದ್ದಾರೆ. ಹೋಟೆಲು, ಮನೆ, ಆಫೀಸು, ಕಾರು, ಬಸ್ಸು, ವ್ಯಾನು, ಅಂಗಡಿ, ಷಾಪಿಂಗ್ ಮಾಲು ಎಲ್ಲವೂ ಏರ್ ಕಂಡೀಶನ್. ನಳನಳಿಸುವ ತಲೆಗೂದಲ, ಹೊಳಪು ಕಣ್ಣಿನ, ಆಧುನಿಕ ಫ್ಯಾಶನ್ನಿನ ಉಡುಗೆ ತೊಟ್ಟು ಇದು ರಸ್ತೆಯಲ್ಲ, ಟಿವಿ ಸಕ್ರೀನು ಎಂಬ ಭ್ರಮೆ ಹುಟ್ಟಿಸುವಂತೆ ಅಡ್ಡಾಡುವ, ಮೂರು ತಿಂಗಳ ಮಗುವನ್ನೂ ಹೊತ್ತು ತಂದು ಶಾಪಿಂಗ್ ದೀಕ್ಷೆಕೊಡುವ ತಾಯಂದಿರು; ಕಂಡರಿಯದ, ಕೇಳರಿಯದ ರುಚಿಗಳ ತಿನಿಸು-ನಮ್ಮೊಡನೆ ಇದ್ದ ಹೈದರಾಬಾದಿನ ವೃದ್ಧ “ಇದಿ ಸ್ವರ್ಗಮು” ಅಂತ ಹಲವು ಬಾರಿ ಉದ್ಗರಿಸಿದ್ದುಂಟು.
ಬುದ್ಧಿ ಚಾತುರ್ಯ ಬಳಸಿಕೊಂಡು ತಿಂಗಳಿಗೆ ಲಕ್ಷ ಸಂಪಾದಿಸುವ, ನಾಲ್ಕು ಲಕ್ಷ ಖರ್ಚು ಮಾಡುವ ಜನ ಇರಲಿ. ನಾವು “ಜನಪದ” “ಜನಪರ” ಅಂತೆಲ್ಲ ಅನ್ನುವಾಗ ಮನಸ್ಸಿನಲ್ಲಿರುವ “ಜನ” ಎಲ್ಲಿ ಹೋದರು? ಇಗೋ, ಇಲ್ಲಿ, ಲಿಟಲ್ ಇಂಡಿಯಾದ ಅಂಚಿನಲ್ಲಿ ಸಂಜೆ ಏಳು ಗಂಟೆಯ ಹೊತ್ತಿನಲ್ಲಿ, ಇಂಡಿಯಾದ ತಮ್ಮ ಮನೆಗೆ ಫೋನು ಮಾಡಲು ಕಾಯುತ್ತಿದ್ದಾರೆ. ಕಟ್ಟಡದ ಕೆಲಸಗಾರರು. ಟ್ಯಾಕ್ಸಿ ಓಡಿಸುತ್ತಿದ್ದಾರೆ. ಚಾಲಕರು. ಹೋಟೆಲಿನಲ್ಲಿ ತಿಂಡಿ ತಿನಿಸು ಸಪ್ಲೈ ಮಾಡುತ್ತಿದ್ದಾರೆ. ಆದರೆ ಯಾರೂ “ನಮ್ಮ” ದುಡಿಮೆಗಾರರಂತೆ, ಬೇಸತ್ತ ಮುಖದ, ಮಲಿನ ವಸ್ತ್ರದ “ಜನ” ಅಲ್ಲ. ರಸ್ತೆಯ ಎರಡೂ ಬದಿ ಮತ್ತು ಕೆಲವು ಬಡಾವಣೆಗಳಲ್ಲಿ ಈ ಕೆಲಸಗಾರರಿಗೇ ಸರ್ಕಾರ ಬಹು ಅಂತಸ್ತುಗಳ ಮನೆ ಕಟ್ಟಿಸಿಕೊಟ್ಟಿದೆ. ಬದುಕಿನ ಸೌಲಭ್ಯಗಳಿಗೆ ಮೋಸವಿಲ್ಲ.
ಮೋಸವಿಲ್ಲ!
ಬ್ರಿಟಿಶ್ ವಸಾಹತುವಾಗಿ, ವಲಸೆಗಾರರಿಂದ ತುಂಬಿಕೊಂಡಿದ್ದ ಸಿಂಗಪುರ, ಮಹಾಯುದ್ಧದ ಕಾಲದಲ್ಲಿ ವರ್ತಕರ ವಾಣಿಜ್ಯದ ಪ್ರಾಬಲ್ಯಕ್ಕೆ ಒಳಗಾಗಿ, ಜಪಾನಿನ, ಚೀನಾದ ಪ್ರಭಾವಕ್ಕೆ ಸಿಕ್ಕಿ, ಐವತ್ತರ ದಶಕದಲ್ಲಿ ಪೀಪಲ್ಸ್ ಆಕ್ಷನ್ ಪಾರ್ಟಿಯ ಲೀ ಕುಆನ್ ಯೂ ನ ಸುಭದ್ರ (ಅಥವಾ ಕಠಿಣ) ಆಳ್ವಿಕೆಯಿಂದ ಆಧುನಿಕ ಮೆಟ್ರೊಪಾಲಿಟನ್ ನಗರ ರಾಷ್ಟ್ರವಾಯಿತು. ರಸ್ತೆ ನಿಯಮ ಉಲ್ಲಂಘಿಸುವ ಚಾಲಕರಿಲ್ಲ. ಕಳ್ಳತನ ಅಪರೂಪವೆಂಬಷ್ಟು ಕಡಮೆ. ವಿಮಾನ ನಿಲ್ದಾಣದಲ್ಲಿ, ಆಫೀಸುಗಳಲ್ಲಿ ಸೌಜನ್ಯ ತುಂಬಿದ ವರ್ತನೆಯ ಅಧಿಕಾರಿಗಳು. ನಮ್ಮೊಡನೆ ಇದ್ದ ಶ್ರೀನಿವಾಸ ರಾಜು ಅವರ ಪೆಟ್ಟಿಗೆ ನಮ್ಮ ವಿಮಾನದಲ್ಲಿ ಬರದೆ ಇದ್ದಾಗ ತಾವಾಗಿಯೇ ಬಂದು ಏನು ಎಂದು ವಿಚಾರಿಸಿ, ನಾವು ಇಳಿದು ಕೊಳ್ಳುವ ಹೋಟೆಲಿನ ವಿಳಾಸ ಕೇಳಿ, ನಾವು ಹೋಟೆಲಿಗೆ ಹೋಗಿ ವಿಶ್ರಾಂತಿ ಪಡೆಯುವಷ್ಟರಲ್ಲಿ ಮತ್ತೊಂದು ವಿಮಾನದಲ್ಲಿ ಬಂದ ಲಗೇಜನ್ನು ಜತನವಾಗಿ ತಲುಪಿಸಿದ ಅಧಿಕಾರಿಗಳು ನಾವು ಕಂಡವರೇ. ಅಯ್ಯಾ, ಜನರಲ್ಲಿ ಈ ಸದ್ವರ್ತನೆ ಹೇಗೆ ಬಂತು? ಎಂದು ಕೇಳಿದರೆ ಅಲ್ಲಿನ ಜನ ಹೇಳುವುದು ಶಿಕ್ಷೆಯ ಭಯವನ್ನು ಕುರಿತೇ. ನಮ್ಮ ಗೆಳೆಯ ಶ್ರೀನಿವಾಸ ಮೂರ್ತಿ ಹೇಳಿದ್ದು ಸ್ವಲ್ಪ ಬೇರೆ. ಇಲ್ಲಿ ಕಳ್ಳತನ ಇಲ್ಲ, ದರೋಡೆ ಇಲ್ಲ, ಸಟ್ರೈಕು ಇಲ್ಲ. ಆದರೆ ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಇಲ್ಲ. ಆದರೆ ಆಗಾಗ ರೇಪು ಮೊದಲಾದವು ಆಗುತ್ತವೆ. ಸರ್ಕಾರಕ್ಕೆ ವಿರೋಧ ತೋರುವುದು ಸಾಧ್ಯವಿಲ್ಲ. ಎಲ್ಲ ಪ್ರತಿರೋಧವನ್ನೂ ಬಲವಾಗಿ ಹತ್ತಿಕ್ಕಿದ್ದಾರೆ. ಕೆಲಸ, ಸುಖ, ಕಾನೂನು ಪಾಲನೆ ಇಷ್ಟೇ ಇಲ್ಲಿನ ಬದುಕು. ಇಲ್ಲಿರುವುದು ಒಂದೇ ಪೇಪರು. ಅದೂ ಸರ್ಕಾರದ್ದು. ಬೇರೆ ದೇಶಗಳಿಂದ ಬರುವ ಪೇಪರು ಬೆಲೆ ಜಾಸ್ತಿ. ಸೆನ್ಸಾರ್‌ಶಿಪ್ ಬಲವಾಗಿದೆ, ಅನ್ನುತ್ತಾರೆ. ಇಲ್ಲಿ ಎಲ್ಲ ಇದೆ. ಎಲ್ಲ ಸಮಯಕ್ಕೆ ಸರಿಯಾಗಿ ನಡೆಯುತ್ತದೆ. ರೈಲು ಓಡುತ್ತದೆ, ಬಾಡಿಗೆ ಮನೆಯಾದರೆ ಎಲ್ಲ ಪೀಠೋಪಕರಣ ಓನರನೇ ಒದಗಿಸುತ್ತಾನೆ, ಏನಾದರೂ ರಿಪೇರಿ ಇದ್ದರೆ ತಕ್ಷಣ ನಡೆದುಹೋಗುತ್ತದೆ. ಯಾವುದೂ ಅನಿರೀಕ್ಷಿತವಲ್ಲ. ಅದಕ್ಕೆಂದೇ ಇಲ್ಲಿ ಯಾರೂ ಕಲಾವಿದರು, ದೊಡ್ಡ ಲೇಖಕರು ಹುಟ್ಟಿಲ್ಲ ಅನ್ನುತ್ತಾರೆ.
ಮೂರು ದಿನ
ಸೆಂಟೋಸಾ ಎಂಬ ದ್ವೀಪಕ್ಕೆ ಹಗ್ಗತೊಟ್ಟಿಲಲ್ಲಿ ಹೋಗುತ್ತ ಸಿಂಗಪುರ ಬಲು ಸುಂದರವಾಗಿ ಕಾಣುತ್ತದೆ. ಅಲ್ಲಿ ಇರುವ ಒಂದು ಶೋ ಡಾಲ್ಫಿನ್ ಮೀನುಗಳದ್ದು. ಹತ್ತೆಂಟು ಡಾಲ್ಫಿನ್‌ಗಳು ಹಿನ್ನೆಲೆ ಸಂಗೀತಕ್ಕೆ ಅನುಗುಣವಾಗಿ ಕಾಣಿಸಿಕೊಳ್ಳುತ್ತ, ಹಾರುತ್ತ, ಚೆಂಡಾಡುತ್ತ, ರೆಕ್ಕೆಗೈ ಬೀಸುತ್ತ ರಂಜಿಸುತ್ತವೆ. ತಮ್ಮ ಶಿಕ್ಷಕರು ಹೇಳಿದಂತೆ ಕೇಳುತ್ತವೆ. ಬುಟಾಂಗ್ ಬರ್ಡ್‌ ಪಾರ್ಕಿನಲ್ಲಿ ಹಾಕ್ ಶೋ ಇತ್ತು. ರಣ ಹದ್ದುಗಳೂ ಅಷ್ಟೆ. ಹಾರು ಎಂದಾಗ ಹಾರಿ, ಇಳಿ ಎಂದಾಗ ಇಳಿದು, ಓಡುವ ರಬ್ಬರ್ ಮೊಲದ ಮೇಲೆ ದಾಳಿ ಮಾಡು ಎಂದಾಗ ಮಾಡಿ ರಂಜಿಸುತ್ತವೆ. ಅವುಗಳ ಕಲಿಕೆಯ ಸಾಮರ್ಥ್ಯಕ್ಕಿಂತ ಅವನ್ನು ಹೇಳಿದಂತೆ ಕೇಳುವ ಹಾಗೆ ಮಾಡಿಕೊಂಡಿರುವ ಮನುಷ್ಯ ಆಶ್ಚರ್ಯ ಹುಟ್ಟಿಸುತ್ತಾನೆ. ಭೂಮಧ್ಯ ರೇಖೆಯ ಸಮೀಪದ ನಿತ್ಯ ಹರಿದ್ವರ್ಣ ಕಾಡಿನ ಹಲವು ನೂರು ಎಕರೆ ವಿಸ್ತಾರದಲ್ಲಿಅಕ್ಷರಶಃ ಸಾವಿರಾರು ಜಾತಿಯ ಪಕ್ಷಿಗಳ ಲೋಕ ಅದು. ಅಲ್ಲಿನವರು ಹೇಳುವಂತೆ ಜಗತ್ತಿನಲ್ಲೇ ಎತ್ತರದ ಕೃತಕ ಜಲಪಾತ ಒಂದಿದೆ. ಅಲ್ಲಿ ಕ್ರುತಕವಾಗಿ ಸ್ರುಷ್ಟಿಸಿದ ಇಬ್ಬನಿ ಇದೆ. ನಾವು ಮನುಷ್ಯರೆಂಬ ಅಂಜಿಕೆ ಇಲ್ಲದೆ ಹೆಜ್ಜೆ ಹೆಜ್ಜೆಗೆ ಎದುರಾಗುವ ಹಕ್ಕಿಗಳಿವೆ. ಅಲ್ಲಿ ಮೇಲೆ, ನೂರಾರು ಅಡಿ ಎತ್ತರದಲ್ಲಿ, ಹಕ್ಕಿಗಳು ಹಾರಿ ಹೋಗದಂತೆ, ತಲೆ ಎತ್ತಿ ನೋಡಿದರೆ ಮಾತ್ರ ಕಾಣುವ ಬಲೆ ಇದೆ. ವಿಸ್ತಾರವಾದ ಪಕ್ಷಿ ಲೋಕ ಅಲೆಯಲು ನಿಧಾನ ಸಾಗುವ ರೈಲಿನ ವ್ಯವಸ್ಥೆ ಇದೆ. ಇಡೀ ಸಿಂಗಪುರದ ರೂಪಕ ಅದು ಅನ್ನಿಸಿತು.
ಆ ಪಕ್ಷಿವನದ ಬಾಗಿಲಲ್ಲೇ ಒಂದು ಹಕ್ಕಿ ಇದೆ. ಗಂಟಲು ಕಟ್ಟಿದ ಕತ್ತೆಯ ಧ್ವನಿಯಲ್ಲಿ ಜೋರಾಗಿ ಕಿರುಚಿ ಬೆಚ್ಚಿ ಬೀಳಿಸುತ್ತದೆ. ನೂರಾರು ಗಿಳಿಗಳ ಪ್ರಭೇದಗಳು ಕಾಣಸಿಗುತ್ತವೆ. ನೀರು ಹಕ್ಕಿಗಳು, ಹದ್ದುಗಳು, ಹೆಸರು ಗೊತ್ತಿಲ್ಲದ ಚಿಲಿ ಪಿಲಿ, ಕಿಚಿಪಿಚಿ ಹಕ್ಕಿಗಳು.
ಜನರೂ ಅಷ್ಟೆ. ಚೀನೀ ಭಾಷೆಯ ಕೊನೆಯ ಪಕ್ಷ ಹತ್ತು ಪ್ರಭೇದಗಳು, ಮಲಾಯ್ ಭಾಷೆಯ ಮೂರು ನಾಲ್ಕು ಬಗೆಗಳು, ತಮಿಳು, ಇಂಗ್ಲಿಷ್, ಸಿಂಹಳೀ ಇವೆಲ್ಲ ಎದ್ದು ಕೇಳಿಸುವ ಭಾಷೆಯ ರೂಪಗಳು. ಆದರೆ ಈಗೀಗ ಮಾಂಡ್ರಿಯನ್ ಎಂದು ಕರೆಯಲಾಗುವ ಚೀನೀ, ಮತ್ತು ವ್ಯಾಕರಣ ಬದ್ಧ ಇಂಗ್ಲಿಶ್ ಹಾಗೂ ತಮಿಳು ಮಾತ್ರ ಕಲಿಸಬೇಕೆಂದು ಸರ್ಕಾರ ಆಜ್ಞೆ ಮಾಡಿದೆಯಂತೆ. ಅಲ್ಲಿನ ಇಂಗ್ಲಿಷ್ ಬಳಕೆ ನಮಗೆ ಒಂದು ಮಾದರಿಯಾಗಬೇಕು. ವ್ಯಾಕರಣದ ಗೊಡವೆ ಇಲ್ಲದೆ, ಉಚ್ಚಾರಣೆಯಲ್ಲಿ ಇಂಗ್ಲಿಷರಂತೆ ನುಡಿಯಬೇಕೆಂಬ ಹಟವಿಲ್ಲದೆ, ತಮಗೆ ಬೇಕಾದಂತೆ ಇಂಗ್ಲಿಷನ್ನು ಅಕ್ಷರಶಃ ಕೊರಳುಪಟ್ಟಿ ಹಿಡಿದು ದುಡಿಸಿಕೊಳ್ಳುತ್ತಾರೆ. ಅಲ್ಲಿನ ಇಂಗ್ಲಿಷ್ ಅಲ್ಲಿನವರ ಅಗತ್ಯಕ್ಕೆ ತಕ್ಕಂತೆ ಸೊಂಟಬಗ್ಗಿಸಿಕೊಂಡಿದೆ. ಆದರೆ ಈ ವೈವಿಧ್ಯ ಇನ್ನು ಕೆಲವು ದಶಕಗಳಲ್ಲಿ ಇಲ್ಲವಾಗಬಹುದು. ಡಾಲ್ಫಿನ್ನುಗಳು ಮತ್ತು ಹಕ್ಕಿಗಳು ಮನುಷ್ಯರ ಮಾತು ಕೇಳಬೇಕಷ್ಟೆ!
ಕಮ್ಯುನಿಸಮ್ಮಿನ ನಿಷ್ಠುರತೆ, ಮುಕ್ತವಾಣಿಜ್ಯದ ದೌಲತ್ತು, ವೆಲ್‌ಫೇರ್ ಸ್ಟೇಟಿನ ಆದರ್ಶ, ಅಧುನಿಕ ವಾಸ್ತು ಶಿಲ್ಪದ ರೋಮಾಂಚನ, ಹಳೆಯ ವಾಸ್ತುವನ್ನು ಅದೇರೀತಿಯಲ್ಲಿ ಉಳಿಸಿಕೊಳ್ಳುವ ವ್ರತ, ಇರುವುದೇನನ್ನು ಬಿಡಲಾರದೆ ಯಾವ ಬೃಂದಾವನದ ಕನಸೂ ಇಲ್ಲದ ಯೌವನ, ಏಶಿಯಾದಲ್ಲಿ ಅಮೇರಿಕದ ಅವತಾರ ಸಿಂಗಪುರ ಅನ್ನಿಸಿತು.
ಓ.ಎಲ್.ಎನ್.