ಆನ್ ಲೈನ್ ಆಟ - ಸಂಸಾರಕ್ಕೆ ಕಾಟ !
ಪತ್ರಿಕೆ ತಿರುವಿದಾಗ ಕಣ್ಣ ಮುಂದೆ ಸುಳಿದ ಸುದ್ದಿಯೊಂದು ಮನಸ್ಸನ್ನು ತಳಮಳಗೊಳಿಸಿತು. ಆ ಸುದ್ದಿಯೇ ಈ ಬರಹದ ತಿರುಳು. ನಂದಿನಿ(ಹೆಸರು ಬದಲಿಸಿದೆ)ಗಿನ್ನೂ 26ರ ಹರೆಯ. ತುಂಬು ಯೌವ್ವನದ ಯುವತಿ. ಗಂಡ ಅಭಿಷೇಕ್ (ಹೆಸರು ಬದಲಿಸಿದೆ) ಮತ್ತು ಇಬ್ಬರು ಮುದ್ದು ಮಕ್ಕಳಾದ ಸನ್ಮತಿ(ಹೆಸರು ಬದಲಿಸಿದೆ) ಮತ್ತು ಶರ್ವಕ್ (ಹೆಸರು ಬದಲಿಸಿದೆ)ಗಳೊಂದಿಗಿನ ಸುಖೀ ಕುಟುಂಬ. ಊಟಕ್ಕೇನು ಬರವಿಲ್ಲ. ಖರ್ಚಿಗೆ ಯಾವುದೇ ಕೊರತೆಯಿರಲಿಲ್ಲ. ಪ್ರೀತಿಸುವ ಗಂಡ ಯಾವುದಕ್ಕೂ ಕೊರತೆ ಮಾಡಿರಲಿಲ್ಲ. ಆದರೆ ಅದೊಂದು ದಿನ ಪ್ರೀತಿಯ ಮಡದಿಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸುತ್ತಿಲ್ಲ. ಭಯಗೊಂಡ ಅವಿನಾಶ ಮನೆಕಡೆ ಓಡಿ ಬಂದರೆ ಮನೆಗೆ ಬೀಗ. ಬೀಗ ತೆಗೆದು ಆತಂಕದಿಂದ ಒಳನುಗ್ಗಿದರೆ, ಟೇಬಲ್ ಮೇಲೊಂದು ಚೀಟಿ. ಸುಂದರವಾದ ಅಕ್ಷರಗಳಲ್ಲಿ ಮಡದಿ ಬರೆದ ಪತ್ರ. ಬಿಡಿಸಿ ಓದುತ್ತಿದ್ದಂತೆ ಅವಿನಾಶನಿಗೆ ತಲೆ ಸುತ್ತು ಬರುತ್ತಿದೆ. ನಂದಿನಿ ತನ್ನಿಬ್ಬರು ಮಕ್ಕಳೊಂದಿಗೆ, ಕ್ಷಮಾಪಣಾ ಪತ್ರ ಬರೆದಿಟ್ಟು ಮನೆಬಿಟ್ಟು ಹೊರಟು ಹೋಗಿದ್ದಾಳೆ. ಎಲ್ಲಿಗೆ ಎಂದು ತಿಳಿಯದು. ಕನಿಷ್ಠ ಪಕ್ಷ ಜೀವ ಉಳಿಸಿಕೊಂಡಿದ್ದರೆ ಸಾಕಿತ್ತು.
ಇದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದ ಘಟನೆ. ಅಷ್ಟಕ್ಕೂ ನಂದಿನಿ ಮನೆ ಬಿಡಲು ಕಾರಣವೇನು? ಅದು ಆಕೆಯ ಸ್ವಯಂಕೃತ ಅಪರಾಧ. ಆನ್ ಲೈನ್ ಆಟಕ್ಕೆ ಆಕೆ ಬಲಿಯಾಗಿದ್ದಳು. ಆಕೆ ಆಡಿದ್ದು ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟವಾದ ಲೂಡಾ. ಲೂಡಾ ಮನೋರಂಜನೆಗಾಗಿ ಆಡಿದ್ದರೆ ಪರ್ವಾಗಿರಲಿಲ್ಲ. ಆಕೆಗೆ ಹಣದ ಮೋಹ ಉಂಟಾಯಿತು. ತನ್ನ ಸುಖೀ ಬದುಕಿನಲ್ಲೂ ಆಕೆಗೆ ಕೊರತೆ ಗೋಚರಿಸತೊಡಗಿತು. ಬಹುಶಃ ದಿನದ ಎರಡು ಹೊತ್ತು ಹೊಟ್ಟೆಗೆ ಅನ್ನವಿಲ್ಲದೆ ಪರದಾಡುವ ಮಂದಿಯ ಬಗ್ಗೆ ಆಕೆ ಯೋಚಿಸಬಹುದಿತ್ತು. ಸಮಾರಂಭದಲ್ಲಿ ಎಸೆದ ಅಳಿದುಳಿದ ಅನ್ನಕ್ಕಾಗಿ ಮುಗಿಬೀಳುವವರನ್ನು ಸ್ಮರಿಸಬಹುದಿತ್ತು. ಆಸ್ಪತ್ರೆಯ ವಾರ್ಡ್ ಗಳಲ್ಲಿ ಚಿಕಿತ್ಸೆಗೆ ಗತಿಯಿಲ್ಲದೆ ನರಳಾಡುತ್ತಿರುವ ಜೀವಗಳ ಬಗ್ಗೆ ನೆನಪಿಸಿಕೊಳ್ಳ ಬಹುದಿತ್ತು. ಆ ರೀತಿ ಮಾಡುತ್ತಿದ್ದರೆ ಆಕೆಗೆ ದೇವರು ತನಗಿತ್ತ ಅನುಗ್ರಹದ ಬಗ್ಗೆ ಮನವರಿಕೆಯಾಗುತ್ತಿತ್ತೋ ಏನೋ?...
ಪಂಥಕ್ಕಿಳಿದು ಆಟವಾಡಿದ ಆಕೆಗೆ ಗೆಲ್ಲಲಾಗಲೇ ಇಲ್ಲ. ಅದೊಂದು ಬಗೆಯ ಜುಗಾರಿ ತಾನೇ?. ಹಿಂದೆಲ್ಲಾ ಜುಗಾರಿ ಆಟಕ್ಕೆ ಅಡ್ಡೆಗಳನ್ನು ಹುಡುಕಬೇಕಿತ್ತು. ಆದರೆ ಇಂದು ಬೆಡ್ ರೂಮಿನಲ್ಲೇ ಕುಳಿತು ಕೈ ಬೆರಳಿನ ತುದಿಯಲ್ಲೇ ಜುಗಾರಿ ಆಡಬಹುದು. ಸೋಲೊಪ್ಪಿಕೊಳ್ಳಲು ಆಕೆ ತಯಾರಿಲ್ಲ. ಗೆಲ್ಲಲೇ ಬೇಕೆಂಬ ಹಟ. ಆಟ ಮುಂದುವರಿಸುತ್ತಾ ಹೋದಂತೆ ಇದ್ದ ಹಣವೆಲ್ಲಾ ಕರಗಿ ಹೋಯಿತು. ಗಂಡ ಅಭಿಷೇಕ್ ನಿಗೆ ಚಿಕ್ಕ ಸಂಶಯವೊಂದು ಸುಳಿದಾಗ ಎಚ್ಚರಿಕೆಯನ್ನೂ ಕೊಟ್ಟಿದ್ದ. ಆತನ ಎಚ್ಚರಿಕೆ ನಿಷ್ಪಲವಾಗಿತ್ತು. ಹಣ ಖಾಲಿಯಾದಾಗ ಮನೆಯಲ್ಲಿದ್ದ ಒಡವೆ ಮಾರಿ ಆಟ ಮುಂದುವರಿಸಿದಳು. ಆಟವೇನೂ ಕಷ್ಟದ್ದಲ್ಲ. ಲೂಡ ಆಟದಲ್ಲಿ ಆಕೆ ಪರಿಣಿತಳು. ಅದೆಷ್ಟೇ ಪರಿಣಿತಿ ಹೊಂದಿದ್ದರೂ, ಆನ್ ಲೈನ್ ಅಡ್ಡೆಯೊಳಗೆ ಬಿದ್ದವರು ಎದ್ದು ಬಂದ ಇತಿಹಾಸವಿಲ್ಲ. ಎಲ್ಲವನ್ನೂ ಕಳೆದುಕೊಂಡ ಆಕೆ ಹೊಳೆದದ್ದೇ ಮನೆ ಬಿಟ್ಟು ಓಡಿಹೋಗುವ ದಾರಿ. ಜೊತೆಗೆ ಪುಟ್ಟ ಮಕ್ಕಳನ್ನೂ ಬಿಟ್ಟು ಹೋಗಲಿಲ್ಲ. ಸಾಯುತ್ತಾಳೋ, ಬದುಕುತ್ತಾಳೋ ಗೊತ್ತಿಲ್ಲ. ಪುಟ್ಟ ಮಕ್ಕಳನ್ನು ಊಹಿಸುವಾಗ ಕರುಳು ಕಿತ್ತು ಬರುತ್ತದೆ. ಬದುಕಿ, ಮರಳಿ ಬರಲೆಂದು ಹಾರೈಸೋಣ...
ಇದು ನಂದಿನಿ ಒಬ್ಬಾಕೆಯ ಕತೆಯಲ್ಲ. ಈ ರೀತಿಯ ಆನ್ ಲೈನ್ ಗೀಳು ತಲೆಗೆ ಹತ್ತಿ ದಿವಾಳಿಯಾದವರು ಅಗಣಿತ. ಅದೆಷ್ಟೋ ಮಂದಿ ಪ್ರಾಣವನ್ನೂ ಕಳೆದುಕೊಂಡದ್ದಿದೆ. ಅಂಕಿಅಂಶದ ಪ್ರಕಾರ ನಮ್ಮ ದೇಶದಲ್ಲಿ 2021 ರಲ್ಲಿ ಆನ್ ಲೈನ್ ಆಡುವವರ ಸಂಖ್ಯೆ 422 ಬಿಲಿಯನ್ ದಾಟಿದೆ. ಅವರಲ್ಲಿ ಬಹುತೇಕ ಯುವ ಜನಾಂಗ. ಅದರಲ್ಲೂ ಹೆಚ್ಚಿನವರು ವಿದ್ಯಾರ್ಥಿಗಳು. ಇನ್ನೂ ಜೀವನದಲ್ಲಿ ನೆಲೆ ಕಂಡುಕೊಳ್ಳದ ಯುವ ಸಮುದಾಯ ಆನ್ ಲೈನ್ ಆಟದ ಮೂಲಕ ಹೆತ್ತವರ ಪಾಲಿಗೆ ಸಿಂಹ ಸ್ವಪ್ನರಾಗುತ್ತಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ಮಾದಕ ವಸ್ತುಗಳ ದಾಸರಾಗಿ ಸಂಸಾರಕ್ಕೆ ಇಲ್ಲವೇ ಸಮಾಜಕ್ಕೆ ಹೊರೆಯಾಗುತ್ತಿದ್ದಾರೆ.
ಇಂತಹದ್ದೇ ಒಂದು ಘಟನೆಗೆ ನಮ್ಮ ಶಾಲೆಯೂ ಸಾಕ್ಷಿಯಾಗಿತ್ತು. ವಿದ್ಯಾರ್ಥಿಯೊಬ್ಬನ ತಂದೆಯ ಖಾತೆಯಲ್ಲಿ ಸುಮಾರು ಇಪ್ಪತ್ತು ಸಾವಿರವಿತ್ತು. ಅವರದ್ದು ಕಷ್ಟದ ಬದುಕು. ತುರ್ತು ಸಮಯಕ್ಕೆ ಉಪಯೋಗಿಸಲು ಆ ಹಣವನ್ನು ಖಾತೆಯಲ್ಲಿ ಉಳಿಸಿದ್ದರು. ಅದೊಂದು ದಿನ ಅವರಿಗೆ ಅರ್ಜೆಂಟಾಗಿ ಹಣ ಬೇಕಿತ್ತು. ಬ್ಯಾಂಕ್ ಗೆ ತೆರಳಿ ಹಣ ಪಡೆಯಲು ನೋಡಿದರೆ, ಖಾತೆ ಖಾಲಿ. ಆತಂಕದಿಂದ ಮನೆಗೆ ಬಂದು, ದಬಾಯಿಸಿದಾಗಲೇ ಒಂಭತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದ ಮಗನ ನಿಜ ಸ್ವಭಾವ ಅರಿವಾದದ್ದು. ಆತ ಅಷ್ಟೂ ಹಣವನ್ನು ಆನ್ ಲೈನಲ್ಲಿ ಕಳೆದುಕೊಂಡಿದ್ದ. ಇಲ್ಲಿ ಇನ್ನೂ ಒಂದು ವಿಚಿತ್ರವಿತ್ತು. ಅದೆಂದರೆ ಅಪ್ಪನ ಖಾತೆಯಲ್ಲಿದ್ದ ಅಷ್ಟೂ ಹಣವನ್ನು ಈತ ತನ್ನ ಆನ್ ಲೈನ್ ಗೇಮ್ ಖಾತೆಗೆ ವರ್ಗಾಯಿಸಿದ್ದ. "ಅದು ಹೇಗೆ ಸಾಧ್ಯವಾಯಿತು?" ಎಂದು ಕೇಳಿದಾಗ ಉತ್ತರ ಇನ್ನೂ ಬೆರಗುಗೊಳಿತು. ಆತನಿಗೆ ಅಪ್ಪನ ಖಾತೆಯಿಂದ ಹಣ ವರ್ಗಾಯಿಸುವ ವಿಧಾನವನ್ನು ಎದುರಾಳಿ ಹೇಳಿಕೊಟ್ಟಿದ್ದ. ಈ ರೀತಿಯ ಆನ್ ಲೈನ್ ದಂಧೆಗೆ ಬಲಿಯಾದ ವಿದ್ಯಾರ್ಥಿಗಳಿಗೆ ಲೆಕ್ಕವಿದೆಯೇ?
ಮೊಬೈಲ್ ಬೆರಳ ತುದಿಯಲ್ಲಿ ಆಟವಾಡಿಸುತ್ತದೆ. ಹಾಗಂತ ಮೊಬೈಲನ್ನು ನಿಷೇಧಿಸಲಾದೀತೇ?... ಕಾಲದ ಅಗತ್ಯವಾಗಿರುವ ಅದು ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಶವಾಗುತ್ತಿದೆ. ಪ್ರತಿದಿನ ಸಾವಿರಾರು ವಂಚನೆಗಳು ನಡೆಯುತ್ತಿದ್ದರೂ ಅಸಹಾಯಕ ಪರಿಸ್ಥಿತಿ. ಮಕ್ಕಳ ಕೈಯಿಂದ ಮೊಬೈಲ್ ಬೇರ್ಪಡಿಸುವುದು ಅಷ್ಟೊಂದು ಸುಲಭವಾಗದು. ನಂದಿನಿಯಂತಹ ಸಾವಿರಾರು ಮಂದಿ ಮೋಸ ಹೋಗುತ್ತಿದ್ದರೂ ನಿಯಂತ್ರಿಸಲಾಗದು. ಕೈಯೊಳಗೆ ಮೊಬೈಲ್ ಇದ್ದೂ ಮೋಸಹೋಗದಿರುವ ಬಗ್ಗೆ ಅರಿವು ಮೂಡಿಸಬಹುದಷ್ಟೇ? ಎಲ್ಲರನ್ನೂ ಬದಲಾಯಿಸಲಾಗದಿದ್ದರೂ, ಬದಲಾದವರ ಸಂಸಾರವನ್ನು ಉಳಿಸಿದ ಪುಣ್ಯವಾದರೂ ದೊರೆತೀತು.
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ