ಆಶ್ಚರ್ಯದ ವಿಷಯವಾಗಿಯೇ ಕಾಡುತ್ತಿದೆ!
ವರ್ಷಕ್ಕೊಂದೂ ಕಾಲ್ ಮಾಡದವರು, ವರ್ಷಕ್ಕೊಮ್ಮೆಯೂ ಮನೆಗೆ ತಾವಾಗಿ ಬಂದು ಪ್ರೀತಿ ಮಾತಾಡಿ ಯೋಗಕ್ಷೇಮ ವಿಚಾರಿಸದವರು, ವರ್ಷಕ್ಕೊಮ್ಮೆಯೂ ಹಬ್ಬ ಹರಿದಿನ ಹೊಸ ವರ್ಷ ಅಂತ ಶುಭಕೋರಿ ಒಳ್ಳೆಯದು - ಕೆಟ್ಟದ್ದು, ಕಷ್ಟ - ಸುಖ ಅಂತ ಭಾವನೆಗಳನ್ನು ಹಂಚಿಕೊಳ್ಳದವರು, ಹತ್ತು ಮಿಸ್ಡ್ ಕಾಲ್ ನೋಡಿಯೂ ವಾಪಾಸು ಕಾಲ್ ಮಾಡದವರು, ಮೆಸೇಜ್ ನೋಡಿಯೂ ಮೌನಮುರಿಯದವರು, ತಾವಾಗಿ ಏನನ್ನೂ ಹಂಚಿಕೊಳ್ಳದವರು, ಬುದ್ದಿ ಮಾತುಗಳನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಡುವವರು, ಹಿರಿತನವನ್ನೂ ಗೌರವಿಸದವರು, ತಾನು ಅವರ ಮಾತು ಕೇಳಿಲ್ಲ, ಅವರ ಭಾವನೆಗಳನ್ನ ಗೌರವಿಸಿಲ್ಲ ಅಂತ ಒಂದಿಷ್ಟೂ ಮುಖದಲ್ಲಿ ತೋರಿದಸಿಕೊಳ್ಳದಿರುವವರು...
ಗೃಹಪ್ರವೇಶ, ಮದುವೆ, ಸಂತೋಷದ ಸಭೆ ಸಮಾರಂಭಗಳು.....ಇತ್ಯಾದಿ ಇತ್ಯಾದಿ ಒಳ್ಳೆಯ ಕೆಲಸಗಳು ಮನೆಯಲ್ಲಿ ಸಾಕಷ್ಟು ನಡೆದಾಗ ಸಂತೋಷಪಟ್ಟು ಒಂದು ಒಳ್ಳೆಯ ಮಾತುಣ ಆಡಿರದವರು....ಯಾವುದಕ್ಕೂ ಬಾರದವರು....
ಅದೇ ಮನೆಯಲ್ಲಿ ಒಂದು ಸಾವು ಸಂಭವಿಸಿದಾಗ ಬಿಸಿಲಿಗೆ ಎಸೆದ ಬಸಳೆಯ ಬಳ್ಳಿಯಂತೆ ದೇಹವನ್ನು ಕುಗ್ಗಿಸಿಕೊಂಡು ಮೈ, ಮನಸ್ಸು ಮುಖವನ್ನೆಲ್ಲಾ ಒಳಗೆ ಎಳೆದುಕೊಂಡು ಹಾವಿನಂತೆ ಮೈಯ್ಯನ್ನು ನೆಲಕ್ಕಾನಿಕೊಂಡು ಹೇಗೇಗೂ ಮನೆಗೆ ಓಡೋಡಿ ಬರುತ್ತಾರಲ್ಲಾ?! ಬಂದು ತಮಗೆ ಎಲ್ಲಿಲ್ಲದ ನೋವಾಗಿದೆ ಅಂತ ತೋರಿಸಿಕೊಳ್ಳುತ್ತಾರಲ್ಲಾ?! ಆ ಮೊದಲು ಅವರ ಆ ಮನಸ್ಸು ಹೃದಯ ಎಲ್ಲಾ ಎಲ್ಲಿ ಪ್ರವಾಸ ಹೋಗಿರುತ್ತವೆ?! ಇವೆಲ್ಲಾ ವಾಸ್ತವ ವಿಚಾರಗಳೇ ಆದರೂ ಇವು ನನ್ನನ್ನು ತುಂಬಾ ಸಮಯದಿಂದ ಕೊರೆಯುವ ವಿಷಯಗಳು! ತುಂಬಾ ದಿವಸಗಳಿಂದ ನನ್ನನ್ನು ಕಾಡುವ ಸಂಗತಿಗಳು! ನಿಜವಾಗಿಯೂ ನನ್ನೊಳಗಿನ ಈ ಎಲ್ಲಾ ಪ್ರಶ್ನೆಗಳಿಗೆ, ನನಗೆ ನಾನೇ ನಿರುತ್ತರನಾಗಿದ್ದೇನೆ!
ಇಂತವವರು ಒಂದು ಮನೆಯಲ್ಲಿ ಸಾವು ಸಂಭವಿಸಿದಾಗ, ಯಾರಾದರೂ ವಿಶೇಷವಾಗಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ, ಏನಾದರೂ ಅವಘಡ ಸಂಭವಿಸಿದಾಗ, ಆಪತ್ತು-ವಿಪತ್ತು ಕಾಡಿದಾಗ, ಅಂದರೆ ಮಾತನಾಡುವುದಕ್ಕೆ ಬಲವಿಲ್ಲ ಅಂತ ಖಾತ್ರಿಯಾದಾಗ ಮಾತ್ರ ವೈರಿಯ ಮನೆಗೂ ತಲೆಯೆತ್ತಿಕೊಂಡೇ ಬರುತ್ತಾರೆ! ಕಣ್ಣಲ್ಲಿ ಕಣ್ಣಿಟ್ಟು ಏನೂ ತಿಳಿಯದ ಮುಗ್ದರಂತೆ ಮಾತನಾಡುತ್ತಾರೆ!! ಇದು ಯಾವ ಪುರುಷಾರ್ಥಕ್ಕೆ ಅಂತ ನನಗಿನ್ನೂ ಅರ್ಥವಾಗಿಲ್ಲ! ಅರ್ಥವಾಗುತ್ತಿಲ್ಲ!
ವರ್ಷದ ಯಾವ ಕಾಲದಲ್ಲಿಯೂ, ಎಲ್ಲಿಯೂ ಕಾಣ ಸಿಗದಿರುವ ಗರುಡಗಳು ಒಂದು ನಾಯಿ, ಜಾನುವಾರು ಸತ್ತುದನ್ನು ಎತ್ತಿ ಗುಡ್ಡದ ಬುಡಕ್ಕೆ ಎಸೆದು ಬಂದ ಒಂದು ಗಂಟೆಯೊಳಗೆ ಪ್ರತ್ಯಕ್ಷವಾಗಿ ತಮ್ಮ ಕೆಲಸ ಆರಂಭಿಸುತ್ತವೆ! ಆದರೆ ಅವುಗಳು ಹೊಟ್ಟೆ ತುಂಬಿಸುವುದಕ್ಕೆ ಬರುತ್ತವೆ! ಎಲ್ಲಿಂದ ಬರುತ್ತವೋ ಆ ದೇವರಿಗೇ ಗೊತ್ತು! ಅಂತೂ ಹಸಿವಿನಿಂದ ಬರುತ್ತವೆ! ಪ್ರಕೃತಿ ಸಹಜ ಕ್ರಿಯೆ!
ಆದರೆ ನಾನು ಮೇಲೆ ಹೇಳಿದಂತಹ ವ್ಯಕ್ತಿಗಳು ತಮ್ಮ ಯಾವ ಹಸಿವಿನ ನಿವಾರಣೆಗಾಗಿ ಬರುತ್ತಾರೆಂಬುದು ನನಗಂತೂ ನಿಗೂಢವಾಗಿಯೇ ಇದೆ ಹಾಗೂ ನನಗೆ ಸದ್ಯದ ಆಶ್ಚರ್ಯದ ವಿಷಯವಾಗಿಯೇ ಕಾಡುತ್ತಿದೆ! ನಿಮಗೇನಾದರು ಈ ಬಗ್ಗೆ ವಿಶೇಷ ಅನುಭವವಾಗಿ ಉತ್ತರ ತಿಳಿದಿದ್ದರೆ ತಿಳಿಸುವಿರಾ?!
- ‘ಮೌನಮುಖಿ’ ಅತ್ರಾಡಿ, ಉಡುಪಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ