ಆ ಫೋಟೋಗ್ರಾಫರ್

ಆ ಫೋಟೋಗ್ರಾಫರ್

ಬರಹ

“ನಾನೊಂದು ಫೋಟೋ ತೆಗಿಸಬೇಕಾಗಿದೆ” ಹೇಳಿದೆ. ಆ ಫೋಟೋಗ್ರಾಫರ್ ಆಸಕ್ತಿಯಿಲ್ಲದೆ ಸುಮ್ಮನೆ ಒಮ್ಮೆ ನನ್ನ ನೋಡಿದ. ಅವನಿಗೆ ವಿಜ್ಞಾನಿಗಳಿಗಿರುವಂತೆ ಗುಳಿಬಿದ್ದ ಕಣ್ಣುಗಳಿದ್ದವಾದ್ದರಿಂದ ಆ ಬೂದು ಬಣ್ಣದ ಸೂಟಿನಲ್ಲಿ ಮತ್ತಷ್ಟು ಇಳಿಬಿದ್ದಂತೆ ಕಾಣುತ್ತಿದ್ದ. ಇಷ್ಟು ಬಿಟ್ಟರೆ ಅವನ ಬಗ್ಗೆ ಹೆಚ್ಚಿಗೆ ಏನು ಹೇಳಬೇಕಾಗಿಲ್ಲ. ಏಕೆಂದರೆ ಒಬ್ಬ ಫೋಟೊಗ್ರಾಫರ್ ಹೇಗೆ ಇರುತ್ತಾನೆಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂಥದ್ದೇ!

“ಸ್ವಲ್ಪ ಹೊತ್ತು ಕಾಯಿರಿ” ಎಂದು ಹೇಳುತ್ತಾ ಕುರ್ಚಿಯೊಂದನ್ನು ತೋರಿಸಿದ. ನಾನಲ್ಲಿ ಕುಳಿತುಕೊಂಡು ಸುಮಾರು ಒಂದು ಗಂಟೆಯಷ್ಟು ಕಾಯ್ದೆ. ಅಷ್ಟರಲ್ಲಿ ಅಲ್ಲೇ ಟೇಬಲ್ ಮೇಲಿದ್ದ ಮೂರು ಬೇರೆ ಬೇರೆ ಮ್ಯಾಗಜೀನ್ಗನಳನ್ನು ತಿರುವಿ ಹಾಕಿದ್ದೆ.

ಒಂದು ಗಂಟೆಯ ನಂತರ ಆ ಫೋಟೋಗ್ರಾಫರ್ ತನ್ನ ಒಳಕೋಣೆಯ ಬಾಗಿಲನ್ನು ತೆರೆದು “ಒಳಗೆ ಬನ್ನಿ” ಎಂದು ಹೇಳಿದ. ಧ್ವನಿ ಒರಟಾಗಿತ್ತು.

ನಾನು ಎದ್ದುಹೋಗಿ ಆ ಕೋಣೆಯಲ್ಲಿ ಕುಳಿತುಕೊಂಡೆ. ನನ್ನ ಪಕ್ಕದಲ್ಲಿಯೇ ಇದ್ದ ಹಿಮಾವೃತ ಕಿಟಕಿಯಿಂದ ಅದ್ಹೇಗೋ ಬಿಸಿಲು ಕೋಲೊಂದು ಒಳಗೆ ನುಸಳಿ ಬಂದು ನನ್ನ ಬಳಿ ಬಿದ್ದಿತ್ತು.

ಆ ಫೋಟೋಗ್ರಾಫರ್ ಕ್ಯಾಮರಾ ಯಂತ್ರವೊಂದನ್ನು ಕೋಣೆಯ ಮಧ್ಯಭಾಗಕ್ಕೆ ತಳ್ಳಿ ತಾನು ಅದರ ಹಿಂದೆ ಹೋಗಿ ನಿಂತುಕೊಂಡ. ಆತ ಅದರಲ್ಲಿ ಮುಖ ತೂರಿ ನನ್ನತ್ತ ಒಮ್ಮೆ ನೋಡಿದ. ಒಂದೇ ಒಂದು ಕ್ಷಣ ಆಮೇಲೆ ಏನನ್ನಿಸಿತೋ ಪುನಃ ಮುಖವನ್ನು ಹೊರತೆಗೆದವನೆ ಉದ್ದನೆಯ ಕೊಕ್ಕೆಯಿಂದ ಕಿಟಕಿಯ ಬಾಗಿಲನ್ನು ಹಾಗೂ ಇಳಿಬಿಟ್ಟ ಬಿಳಿ ಪರದೆಯನ್ನು ಒಳಗೆ ಸಾಕಷ್ಟು ಗಾಳಿ, ಬೆಳಕು ಬರಲೆಂಬಂತೆ ಅವನ್ನು ಸ್ವಲ್ಪ ಹಿಂದೆ ಸರಿಸಿದ.

ಪುನಃ ಯಂತ್ರದ ಹಿಂದುಗಡೆ ಹೋಗಿ ಅಲ್ಲಿ ತೂಗಿಬಿಟ್ಟ ಕಪ್ಪನೆಯ ಬಟ್ಟೆಯೊಂದನ್ನು ತನ್ನ ಹತ್ತಿರಕ್ಕೆ ಎಳೆದುಕೊಂಡು ಏನನ್ನೋ ಯೋಚಿಸುತ್ತಾ ನಿಂತುಕೊಂಡ. ನಾನು ಅವನು ನಿಂತಿರುವ ಭಂಗಿಯನ್ನು ನೋಡಿ ಪ್ರಾರ್ಥಿಸುತ್ತಿರಬಹುದೆಂದುಕೊಂಡು ಸುಮ್ಮನೆ ನೋಡುತ್ತಾ ಕುಳಿತೆ.

ಮತ್ತೆ ತನ್ನ ಮುಖವನ್ನು ಹೊರತೆಗೆದು ತುಂಬಾ ನಿರಾಶೆಗೊಂಡವನ ತರ ತನ್ನ ತಲೆಯನ್ನೊಮ್ಮೆ ಅಲ್ಲಾಡಿಸಿ “ಈ ಮುಖ ತುಂಬಾ ಕೆಟ್ಟದಾಗಿದೆ” ಎಂದು ನೇರವಾಗಿ ಹೇಳಿದ.

ನಾನು ಹೌದೆಂದು ತಲೆಯಲ್ಲಾಡಿಸುತ್ತಾ “ಆ ವಿಷಯ ನನಗೆ ಮುಂಚಿನಿಂದಲೂ ಗೊತ್ತು!” ಎಂದು ಪ್ರಶಾಂತವಾಗಿ ಹೇಳಿದೆ.
ಅವನು ಮತ್ತೊಮ್ಮೆ ನನ್ನ ನೋಡಿ ನಿಟ್ಟುಸಿರೊಂದನ್ನು ಬಿಡುತ್ತಾ “ನನಗನಿಸುತ್ತೆ ನಿಮ್ಮ ಮುಖ ಇನ್ನೂ ಸ್ವಲ್ಪ ದೊಡ್ಡದಾಗಿದ್ದರೆ ಚನ್ನಾಗಿತ್ತು.” ಎಂದು ಹೇಳಿದ. ನಾನು “ಹೌದಾ? ಅಂದರೆ ನಿಮ್ಮಷ್ಟು ದೊಡ್ಡದಾಗಿರಬೇಕಿತ್ತೆ?” ಎಂದು ಕೇಳಿದೆ.

ಅವನು ನನ್ನ ಮಾತುಗಳನ್ನು ಕೇಳಿಸಿಕೊಂಡಂತೆ ಕಾಣಲಿಲ್ಲ.

ಈಗ ಹತ್ತಿರ ಬಂದು ನನ್ನ ತಲೆಯನ್ನು ಅವನ ಕೈಗಳಲ್ಲಿ ತೆಗೆದುಕೊಳ್ಳುತ್ತಾ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ತಿರುತಿರುಗಿಸಿ ನೋಡತೊಡಗಿದ. ಹಾಗೆ ಮಾಡುತ್ತಿರುವದನ್ನು ನೋಡಿ ಬಹುಶಃ ಅವನು ನನಗೆ ಮುತ್ತಿಕ್ಕಬಹುದೆಂದು ನಾನು ಉನ್ಮತ್ತನಾಗಿ ಕಣ್ಣು ಮುಚ್ಚಿದೆ.

ಆದರೆ ನನ್ನ ಊಹೆ ತಪ್ಪಾಗಿತ್ತು!

ಮತ್ತೊಮ್ಮೆ ನನ್ನ ಮುಖವನ್ನು ಎಷ್ಟು ಸಾಧ್ಯವೋ ಅಷ್ಟು ಕಡೆ ತಿರುತಿರುಗಿಸಿ ಅದನ್ನೇ ನೋಡುತ್ತಾ ನಿಂತುಕೊಂಡ.

ಪುನಃ ನಿಟ್ಟುಸಿರೊಂದನ್ನು ಬಿಡುತ್ತಾ “ನನಗೆ ಈ ತಲೆ ಇಷ್ಟವಾಗಲಿಲ್ಲ!” ಎಂದು ಟೀಕಿಸಿದ.

ನಾನು ತುಟಿಪಿಟ್ಟೆನ್ನಲಿಲ್ಲ.

ಪುನಃ ಯಂತ್ರದ ಹಿಂದೆ ಹೋಗಿ ನಿಂತುಕೊಳ್ಳುತ್ತಾ ಮತ್ತೊಮ್ಮೆ ನನ್ನ ನೋಡಿ “ಎಲ್ಲಿ, ಸ್ವಲ್ಪ ಸಣ್ಣದಾಗಿ ಮುಗುಳು ನಗಿ” ಎಂದು ಹೇಳಿದ.

ನಾನು ನಗತೊಡಗಿದೆ.

“ನಿಲ್ಲಿಸಿ” ತಕ್ಷಣ ಕಿರುಚಿದ.

ಪುನಃ ನನ್ನೊಮ್ಮೆ ನೋಡುತ್ತಾ “ಈ ಕಿವಿಗಳು ನಿಮ್ಮ ಮುಖಕ್ಕೆ ಸ್ವಲ್ಪವೂ ಹೊಂದಿಕೆಯಾಗುತ್ತಿಲ್ಲ” ಎಂದು ಮತ್ತೆ ಟೀಕಿಸಿದ.

ನಾನು ಸುಮ್ಮನೆ ಕುಳಿತಿದ್ದೆ.

ಸ್ವಲ್ಪ ತಡೆದು “ಅವುಗಳನ್ನು ಸ್ವಲ್ಪ ಕೆಳಗಿಳಿಸಿದರೆ ಚನ್ನಾಗಿರುತ್ತೆ! ಎಲ್ಲಿ, ಇಳಿಸಿ ನೋಡೋಣ? ಹಾಂ...ಹಾಗೆ! ಕಣ್ಣುಗಳು......ಆ ಗುಡ್ಡೆಗಳನ್ನು ಮಧ್ಯಭಾಗಕ್ಕೆ ತಂದು ನಿಲ್ಲಿಸಿದರೆ ಒಳ್ಳೆಯದು.......ವೇರಿ ಗುಡ್! ಎಲ್ಲಿ ಈಗ ಶ್ವಾಸಕೋಶಗಳನ್ನು ಸ್ವಲ್ಪ ಅಗಲಿಸಿ ನೋಡೋಣ? ಹಾಂ....ಹಾಗೆ! ನಿಮ್ಮ ಕೊರಳನ್ನು ಸ್ವಲ್ಪ ಉಬ್ಬಿಸಿ.....ಗುಡ್! ಈಗ ಉಸಿರು ಬಿಗಿಹಿಡಿದುಕೊಂಡು ನಿಮ್ಮ ಸೊಂಟವನ್ನು ಕಿರಿದುಗೊಳಿಸಿ.........ಹಾಂ.....ಹಾಗೆ! ಈಗ ಮೊಳಕೈಗೆ ಹತ್ತಿರವಾಗುವಂತೆ ನಿಮ್ಮ ಕುಂಡಿಯನ್ನು ಸ್ವಲ್ಪ ಮೇಲೆತ್ತಿ......ಗುಡ್, ವೇರಿ ಗುಡ್, ವೇರಿ ವೇರಿ ಗುಡ್! ಈಗ ಎಲ್ಲವೂ ಸರಿಯಾಗಿದೆ!” ಎಂದು ಹೇಳಿ ಮತ್ತೊಮ್ಮೆ ನನ್ನ ಮುಖವನ್ನು ನೋಡಿದ.

ನಾನು ಅವನು ಅಷ್ಟೆಲ್ಲಾ ತಯಾರಿ ಮಾಡಿದ್ದನ್ನು ನೋಡಿ ಇನ್ನೇನು ಫೋಟೊ ತೆಗಿಯಬಹುದೆಂದುಕೊಂಡೆ. ಆದರೆ ನನ್ನ ಮುಖವನ್ನೇ ದಿಟ್ಟಿಸುತ್ತಾ ಮತ್ತೆ ಗೊಣಗಿದ “ನಿಮ್ಮ ಮುಖ ಫೋಟೋಯೋಗ್ಯವಲ್ಲ!”

ನಾನು ಆ ಸ್ಟೂಲಿನ ಮೇಲೆ ಅತ್ತ ಇತ್ತ ಓಲಾಡತೊಡಗಿದ್ದೆ.

“ನಿಲ್ಲಿಸಿ” ಭಾವುಕನಾದರೂ ಕೊಂಚ ಗಂಭೀರವಾಗಿ ಹೇಳಿದೆ. ನನ್ನ ಸಹನೆಯ ಕಟ್ಟೆಯೊಡೆದಿತ್ತು.

“ಇದು ನನ್ನ ಮುಖ! ನಿನ್ನದಲ್ಲ! ನಲವತ್ತು ವರ್ಷಗಳ ಕಾಲ ಈ ಮುಖದೊಟ್ಟಿಗೆ ಜೀವನ ಮಾಡಿದ್ದೇನೆ! ಅದರ ಹುಳುಕುಗಳೇನೆಂಬುದು ನಿನಗಿಂತ ಚನ್ನಾಗಿ ನನಗೆ ಗೊತ್ತು! ಅದು ಫೋಟೋಯೋಗ್ಯವಲ್ಲ ಎಂಬುದು ಗೊತ್ತು! ನನಗೆ ಹೇಳಿ ಮಾಡಿಸಿದುದಲ್ಲ ಎಂಬುದು ಸಹ ಗೊತ್ತು! ಆದರೂ ಇದು ನನ್ನ ಮುಖ! ನನಗಿರುವ ಒಂದೇ ಒಂದು ಮುಖ!” ನನ್ನ ಗಂಟಲು ಕಟ್ಟಿ ಬರುತ್ತಿತ್ತು. ಆದರೂ ಬಿಡದೆ ಮತ್ತೆ ಹೇಳಿದೆ “ಈ ಮುಖವನ್ನು ಅದರೆಲ್ಲಾ ಹುಳುಕುಗಳ ಸಮೇತ ಒಪ್ಪಿಕೊಂಡು ಬದುಕಿತ್ತಿದ್ದೇನೆ! ಅದಿರುವಂತೆ ಪ್ರೀತಿಸುವದನ್ನು ಕಲಿತಿದ್ದೇನೆ! ನೀನದನ್ನು ಎತ್ತಿ ಆಡಬೇಕಾಗಿಲ್ಲ! ಈ ಬಾಯಿ, ಕಣ್ಣು. ಕಿವಿ ಎಲ್ಲವೂ ನನ್ನವೇ! ನಿನ್ನದಲ್ಲ! ದೋಷವಿರುವದು ನಿನ್ನ ಕ್ಯಾಮರಾದಲ್ಲಿ! ನನ್ನ ಮುಖದಲ್ಲಲ್ಲ!” ಎಂದು ಖಾರವಾಗಿ ಹೇಳುತ್ತಾ ನಾನು ಕುಳಿತಲ್ಲಿಂದ ಮೇಲೇಳಲು ಪ್ರಯತ್ನಿಸಿದೆ.

ಟಕ್!!

ಅವನು ಅದಾಗಲೆ ಕ್ಯಾಮರಾದ ಗುಂಡಿಯನ್ನು ಒತ್ತಿಬಿಟ್ಟಿದ್ದ! ಫೋಟೋ ತೆಗೆದಾಗಿತ್ತು! ವಿದ್ಯುತ್ತಿನ ರಭಸಕ್ಕೆ ಆ ಯಂತ್ರ ಇನ್ನೂ ಗಡಗಡನೆ ನಡುಗತ್ತಲೇ ಇತ್ತು.

ಆ ಫೋಟೊಗ್ರಾಫರ್ ಮುಗುಳುನಗುತ್ತಾ “ನಿಮ್ಮೆಲ್ಲ ಭಾವಗಳಿಗೆ ಜೀವ ತುಂಬಿ ಸೆರೆ ಹಿಡಿದಿದ್ದೇನೆ” ಎಂದು ಹೇಳಿದ.

ನಾನು “ಜೀವ ತುಂಬಿ.......? ಎಲ್ಲಿ ನೊಡೋಣ......?” ಎಂದು ಕೇಳಿದೆ.

“ಓ! ಈಗಲೇ ನೋಡಲಾಗದು. ಮೊದಲು ನೆಗಟಿವ್ನ್ನು. ಡೆವಲಪ್ ಮಾಡಬೇಕು. ಸ್ವಲ್ಪ ಸಮಯ ಹಿಡಿಯುತ್ತೆ. ಒಂದು ಕೆಲ್ಸ ಮಾಡಿ, ಈ ಶನಿವಾರ ಬಂದುಬಿಡಿ. ನೋಡುವಿರಂತೆ”

ನಾನು ಆ ಶನಿವಾರ ಮತ್ತೆ ಅವನಲ್ಲಿಗೆ ಹೋದೆ.

ಈ ಸಾರಿ ಮುಂಚಿಗಿಂತಲೂ ನಿರಾಸಕ್ತಿಯಿಂದ ಕಾಣುತ್ತಿದ್ದ. ಆದರೂ ಮುಖದಲ್ಲಿ ಯಾವುದೋ ಒಂದು ಗಂಭೀರ ಕಳೆ ಸೂಸುತ್ತಿತ್ತು.

ಅವನು ನೆಗಟಿವ್ನ್ನುನ ಹೊರತೆಗೆದು ತೋರಿಸಿದ. ನಾವಿಬ್ಬರೂ ಸ್ವಲ್ಪಹೊತ್ತು ಸುಮ್ಮನೆ ಆ ನೆಗಟಿವ್ನ್ನುಯ ನೋಡುತ್ತಾ ಹೋದೆವು.

“ಇದು ನಾನಾ?” ಸ್ವಲ್ಪ ಗಲಿಬಿಲಿಗೊಂಡವನ ತರ ಕೇಳಿದೆ.

“ಹೌದು, ನೀವೇನೇ!” ಅವನು ಸಮಾಧಾನವಾಗಿ ಉತ್ತರಿಸಿದ.

ಮತ್ತೆ ಇಬ್ಬರೂ ನೆಗಟಿವ್ನ್ನುು ನೋಡುತ್ತಾ ಹೋದೆವು.

ನಾನು ಸ್ವಲ್ಪ ಹಿಂದೆ ಮುಂದೆ ನೋಡುತ್ತಾ “ಈ ಕಣ್ಣುಗಳು ನನ್ನ ಕಣ್ಣುಗಳ ತರ ಇಲ್ಲ” ಎಂದು ಹೇಳಿದೆ.

“ಓ. ಅವಾ! ಅವುಗಳಿಗೆ ಹೊಸ ರೂಪ ಕೊಡಲಾಗಿದೆ. ಇನ್ನೊಮ್ಮೆ ಸರಿಯಾಗಿ ನೋಡಿ. ಅದ್ಭುತವಾಗಿ ಬಂದಿವೆಯಲ್ಲವೆ?” ತನ್ನ ಕೆಲಸದ ಬಗ್ಗೆ ತಾನೆ ಹೆಮ್ಮೆಯಿಂದ ಹೇಳಿಕೊಂಡ.

“ಗುಡ್, ಆದರೆ ಈ ಹುಬ್ಬುಗಳು ಖಂಡಿತ ನನ್ನವಲ್ಲ”

“ಹೌದು” ಒಂದು ಕ್ಷಣ ನನ್ನ ದಿಟ್ಟಿಸಿ “ಅವನ್ನು ತೆಗೆದು ಹೊಸದನ್ನು ಜೋಡಿಸಲಾಗಿದೆ. ಇದು ಈಗ ಚಾಲ್ತಿಯಲ್ಲಿರುವ ಹೊಸವಿಧಾನ. ನೀವಿಲ್ಲಿ ನೋಡಿದರೆ ನಾವೆಲ್ಲಿ ಬದಲಾಯಿಸಿದ್ದೇವೆಂದು ಬಹುಶಃ ನಿಮಗೆ ಗೊತ್ತಾಗಬಹುದು. ನನಗೆ ಸಣ್ಣ ಹುಬ್ಬುಗಳನ್ನು ಕಂಡರೆ ಆಗುವದಿಲ್ಲ” ಎಂದು ಹೇಳಿದ.

“ಓ! ನಿಮಗೆ ಆಗುವದಿಲ್ಲವೆ?”

“ಊಹೂಂ, ಇಲ್ಲ” ಅವನು ಹೇಳುತ್ತಾ ಹೋದ “ಹುಬ್ಬಿನ ಮೇಲೆ ದಪ್ಪನೆಯ ಕೂದಲಿದ್ದರನೇ ಚೆಂದ. ಅದಕೆಂದೇ ಕಪ್ಪು ಕಡ್ಡಿಯನ್ನು ಬಳಸಿ ಅವನ್ನು ದಪ್ಪನಾಗಿ ತೀಡಿದ್ದೇನೆ”

“ಸರಿ, ಬಾಯಿ...?”

“ಅದನ್ನು ಸ್ವಲ್ಪ ಅಡ್ಜೆಸ್ಟ್ ಮಾಡಲಾಗಿದೆ. ನಿಮ್ಮದು ತುಂಬಾ ಕೆಳಗಡೆ ಇದೆ. ಆದರೆ ಫೋಟೋದಲ್ಲಿ ಅದನ್ನು ಸ್ವಲ್ಪ ಮೇಲೆತ್ತಲಾಗಿದೆ”

“ಕಿವಿಗಳು ಮಾತ್ರ ನನ್ನ ತರಾನೆ ಇವೆ”

“ಹೌದು, ಅದೊಂದು ಇದ್ದ ಹಾಗೆ ಬಂದಿದೆ. ಪ್ರಿಂಟ್ ಹಾಕುವಾಗ ಅದನ್ನು ಬದಲಾಯಿಸಲು ನೋಡುತ್ತೇನೆ. ಈ ಸಲ್ಫೈಡ್ ವಿಧಾನದಿಂದ ಕಿವಿಗಳನ್ನು ತೆಗೆಯಬಹುದು. ನೀವು ಹೇಳಿದರೆ..........”

“ನೋಡಿ!” ನಾನು ನನ್ನೆಲ್ಲ ಮುಖಭಾವಗಳನ್ನು ಸೂಸುತ್ತಾ ಅತ್ಯಂತ ತಿರಸ್ಕಾರದಿಂದ ಹೇಳಿದೆ “ನನಗೆ ನನ್ನದೇ ಒಂದು ಪೋಟೊ ಬೇಕಾಗಿತ್ತು! ಸೊಟ್ಟಗೆಯೋ, ನೆಟ್ಟಗೆಯೋ ಹೇಗಾದರು ಸರಿ ನನ್ನ ತರಾನೆ ಕಾಣುವ ಒಂದೇ ಒಂದು ಫೋಟೊ! ಕಡೆಗೆ ಹುಚ್ಚನ ತರ ಕಂಡಿದ್ದರೂ ಪರ್ವಾಗಿಲ್ಲ! ಆದರೆ ನನ್ನನ್ನೇ ಹೋಲುವ, ಆ ದೇವರು ಕೊಟ್ಟ ಮುಖದಂತೆ ಕಾಣುವ ಒಂದೇ ಒಂದು ಫೋಟೋ ಬೇಕಾಗಿತ್ತು! ನಾನು ಸತ್ತ ಮೇಲೆ ನನ್ನ ನೆನಪಿಗಾಗಿ ಗೆಳೆಯರೆಲ್ಲ ಇಟ್ಟುಕೊಳ್ಳುವಂಥ ಫೋಟೋ ಬೇಕಿತ್ತು! ಆದರೆ ಇದು ನಾನಂದುಕೊಂಡ ಹಾಗೆ ಬಂದಿಲ್ಲ..... ನನ್ನ ಕಲ್ಪನೆ ತಪ್ಪಾಗಿದೆ...... ನಿನ್ನ ನೆಗಟಿವ್ನ್ನುು ನೀನೇ ಇಟ್ಟುಕೊ...... ಸಲ್ಫೈಡ್, ಬ್ರೋಮೈಡ್, ಆಕ್ಷೈಡ್ ಕೊನೆಗೆ ಸಗಣಿಯಲ್ಲಾದರು ಅದ್ದಿ ತೆಗಿ...... ಕಣ್ಣುಗಳನ್ನಾದರು ತೆಗಿ, ಕಿವಿಗಳನ್ನಾದರು ಕತ್ತರಿಸು, ಬಾಯಿಯನ್ನಾದರು ತೀಡು....ಥಳ ಥಳ ಹೊಳೆಯುವಂತೆ ಲೇಪಿಸಾದರು ಲೇಪಿಸು, ಉಬ್ಬಿಸು, ತಗ್ಗಿಸು ಕೊನೆಗೆ ಮುಖವನ್ನಾದರು ಬದಲಾಯಿಸು......ನೀನು ಏನೇನು ಮಾಡಬೇಕೆಂದಿರುವೆಯೋ ಅದನ್ನೆಲ್ಲ ಮಾಡು. ಮಾಡಿಯಾದ ಮೇಲೆ ನೀನಾದರೂ ಇಟ್ಟುಕೊ, ನಿನ್ನ ಸ್ನೇಹಿತರಿಗಾದರೂ ಕೊಡು..........ಅವರು ಅದನ್ನು ನೋಡಿ ಖುಶಿಪಡಬಹುದು. ಆದರೆ....ಆದರೆ... ನನಗೆ ಇದು ಕೆಲಸಕ್ಕೆ ಬಾರದ್ದು!” ಹೇಳುತ್ತಾ ಹೋದಂತೆ ನನ್ನ ಗಂಟಲು ಕಟ್ಟಿ ಬಂತು.

ಕಂಗಳು ತುಂಬಿ ಬಂದವು. ಅತ್ಯಂತ ನಿರಾಶನಾಗಿ ಅಲ್ಲಿಂದ ಹೊರಟೆ.

ಇಂಗ್ಲೀಷ ಮೂಲ: ಸ್ಟೀಫನ್ ಲೀಕಾಕ್
ಕನ್ನಡಕ್ಕೆ: ಉದಯ ಇಟಗಿ
ಚಿತ್ರ ಕೃಪೆ:www.flickr.com kansasexplorer 3128