ಇಂದಿನ ಸುದ್ದಿ...!
ಇವತ್ತು ಬೆಳಗ್ಗೆ ಗಂಟೆ ಎಂಟು ಕಾಲಾದರೂ ನ್ಯೂಸ್ ಪೇಪರ್ ಬಂದಿರಲಿಲ್ಲಾ. ಈ ಮೊದಲು ಒಂದೆರಡು ಬಾರಿ ಹೀಗೆಯೆ ಪೇಪರ್ ತಪ್ಪಿಸಿದ್ದರಿಂದ ಈ ಮನುಷ್ಯ ಎಲ್ಲಿ ಹೋದನಪ್ಪಾ ಅಂದು ಕೊಳ್ಳುತ್ತಾ ಆತನ ನಂಬರಿಗೆ ಫೋನಾಯಿಸಿದೆ. ಅತ್ತಕಡೆಯಿಂದ ಚಿಕ್ಕ ಹುಡುಗನೊಬ್ಬನ "ಹಲೋ" ಕೇಳಿಸಿತು. "ಲೋಂಡೆ(ಪೇಪರ್ ಹಾಕುವವನು) ಇದ್ದಾರ? " ಎಂದು ಸ್ವಲ್ಪ ಜೋರಿನಲ್ಲಿ ಕೇಳಿದೆ, ಆತ ಸ್ವಲ್ಪ ಅನುಮಾನಿಸಿ, "ಹೂಂ ಹೇಳಿ, ಏನಾಗಬೇಕಿತ್ತು" ಅಂದ. "ನನ್ನ ಹೆಸರು ಶಂಕರ್ ಅಂತಾ, ನನ್ನ ಮನೆಗಿನ್ನೂ ಪೇಪರ್ ಬಂದಿಲ್ಲಾ, ಎಷ್ಟೊತ್ತಿಗ್ರೀ ಪೇಪರ್ ಹಾಕೋದು, ಇವತ್ತು ಬರುತ್ತೋ ಇಲ್ವೋ" ಎಂದು ದಬಾಯಿಸಿದೆ. ಆ ಕಡೆಯಿಂದ ಇನ್ನಷ್ಟು ಕ್ಷೀಣ ಸ್ವರದಲ್ಲಿ "ಇವತ್ತು ಮತ್ತೆ ನಾಳೆ ಪೇಪರ್ ಬರೋದಿಲ್ಲ" ಎಂದ. ನಾನು ಇನ್ನೂ ಸ್ವಲ್ಪ ಏರಿದ ಸ್ವರದಲ್ಲಿ "ಅದೇ ಯಾಕೋ ಬರೋಲ್ಲ ಅಂತಾ" ಎಂದು ಕೇಳಿದೆ. ಆಗ ಆತ ನಿಸ್ತೇಜವಾದ ಧ್ವನಿಯಲ್ಲಿ"ನನ್ನ ಅಪ್ಪ ಇವತ್ತು ತೀರಿ ಹೋದರು" ಎಂದ. ಮುಂದೆ ನನಗೆ ಮಾತೇ ಹೊರಡಲಿಲ್ಲ. "ಓಹ್ ಐ ಯಾಮ್ ಸಾರಿ!" ಎಂದು ಹೇಳಿ ಮುಂದೆ ಏನು ಹೇಳಬೇಕೆಂದು ತೋಚದೆ ಫೋನ್ ಕಟ್ ಮಾಡಿದೆ.
ಪೇಪರ್ ಬಂದಿರಲಿಲ್ಲಾ ಆದರೆ ಸುದ್ದಿ ಬಂದಿತ್ತು...!