ಇತಿಹಾಸದಿಂದ ಕಲಿಯಬಹುದಾದ ಪಾಠಗಳೇ ನಮಗೆ ಮಾರ್ಗದರ್ಶಕ !
ಯೂರೋಪ್ ನ ಹಂಗೇರಿ ದೇಶದ ಹಣ್ಣಿನ ಅಂಗಡಿಯ ಯುವತಿಯ ದೃಷ್ಟಿಯಲ್ಲಿ ಕಮ್ಯುನಿಸಮ್ ಮತ್ತು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಯಾವುದು ಉತ್ತಮ ಎಂಬ ಅಭಿಪ್ರಾಯ.
ಯೂರೋಪ್ ನ ಹಂಗೇರಿ ದೇಶದ ರಾಜಧಾನಿ ಬುಡಾಪೆಸ್ಟ್ ನ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದೆ. 2 ಗಂಟೆಯ ಪ್ರಯಾಣದ ನಂತರ ಬಸ್ಸನ್ನು ಒಂದು ವಿಶ್ರಾಂತ ಸ್ಥಳದಲ್ಲಿ ಊಟಕ್ಕಾಗಿ ನಿಲ್ಲಿಸಲಾಗಿತ್ತು. ಅದು ಮಧ್ಯಾಹ್ನದ ಸಮಯ. ನಾನು ಊಟ ಮಾಡದೆ ಅಲ್ಲಿಯೇ ಇದ್ದ ಹಣ್ಣಿನಂಗಡಿಯಲ್ಲಿ ಆಗ ಅಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಲಿಚ್ಚಿ ಮತ್ತು ಕಿವಿ ಹಣ್ಣುಗಳನ್ನು ಕೊಂಡು ಅಲ್ಲಿಯೇ ತಿನ್ನುತ್ತಿದ್ದೆ. ನನ್ನ ಗಮನ ಅಂಗಡಿಯ ಮಾಲೀಕ ಮಹಿಳೆಯ ಮೇಲೆ ಹರಿಯಿತು.
ಸುಮಾರು 30-35 ರ ಆಕೆಯೂ ಬುತ್ತಿ ಬಿಚ್ಚಿ ಬ್ರೆಡ್ಡಿನ ತರಹದ ತಿಂಡಿ ತಿನ್ನುತ್ತಿದ್ದಳು. ಕುತೂಹಲಕ್ಕಾಗಿ ನಾನು ಆಕೆಯನ್ನು ಮಾತಿಗೆಳೆದೆ. ಮೊದಲು ಕಮ್ಯುನಿಸ್ಟ್ ಆಡಳಿತವಿದ್ದ ಹಂಗೇರಿ ಈಗ ಪ್ರಜಾಪ್ರಭುತ್ವದ ಆಡಳಿತವಾಗಿ ಬದಲಾಗಿದೆ. ನಾನು ಆ ಬಗ್ಗೆಯೇ ಆಕೆಯನ್ನು ಪ್ರಶ್ನಿಸಿದೆ. ಆಕೆ ಸ್ವಲ್ಪ ಯೋಚಿಸಿ ಹೇಳಿದಳು.
" ಕಮ್ಯುನಿಸಂನ ಆಡಳಿತದಲ್ಲಿ ನಮಗೆ ಶಿಕ್ಷಣ, ಆರೋಗ್ಯ ಮುಂತಾದ ಜೀವನಾವಶ್ಯಕ ಸೇವೆಗಳು ಉಚಿತವಾಗಿದ್ದವು. ನಮ್ಮ ಬಹುತೇಕ ಜವಾಬ್ದಾರಿ ಸರ್ಕಾರವೇ ನಿಭಾಯಿಸುತ್ತಿತ್ತು. ನಾವು ದಿನದ 8 ಗಂಟೆ ಕೆಲಸ ಮಾಡಿದ್ದರೆ ಸಾಕಿತ್ತು. ಬದುಕಿನಲ್ಲಿ ಅಂತಹ ವ್ಯತ್ಯಾಸಗಳೇನೂ ಇರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಬದಲಾದ ಮೇಲೆ ನಾನು ಕೆಲಸ ಕಳೆದುಕೊಂಡೆ. ಈಗ ನನ್ನ ಎಲ್ಲಾ ಖರ್ಚುವೆಚ್ಚ ನನ್ನ ಇಬ್ಬರು ಮಕ್ಕಳ ಪಾಲನೆ ಪೋಷಣೆ ನಾನೇ ನಿಭಾಯಿಸಬೇಕಿದೆ. ಈ ಮಧ್ಯೆ ನನ್ನ ಗಂಡನೂ ನನ್ನನ್ನು ತೊರೆದ. ಈ ಅಂಗಡಿಯ ಆದಾಯವೇ ನನಗೆ ಆಧಾರ. ಹೇಗೋ ಬದುಕು ಸಾಗುತ್ತಿದೆ. "
ನನ್ನ ಪ್ರಶ್ನೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಯಾವುದು ಉತ್ತಮ? ಆಕೆ," ಕಮ್ಯುನಿಸ್ಟ್ ಆಡಳಿತದಲ್ಲಿ ಜೀವನ ಭದ್ರತೆ ಮತ್ತು ಸಮಾನತೆಯಿತ್ತು. ಅದು ಈಗ ಅಷ್ಟಾಗಿ ಇಲ್ಲ. ಆದರೆ ಈಗ ನನಗೆ ಸ್ವಾತಂತ್ರ್ಯವಿದೆ. ನನ್ನ ಸ್ವಂತ ಯೋಚನಾಶಕ್ತಿಯಿಂದ ಕನಸು ಕಾಣಬಹುದಾಗಿದೆ. ನನ್ನ ಮಕ್ಕಳಿಗೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬಹುದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹಣ ಗಳಿಸಬಹುದಾಗಿದೆ. ಆದ್ದರಿಂದ ಪ್ರಜಾಪ್ರಭುತ್ವವೇ ಉತ್ತಮ."
ಆಕೆಯ ಉತ್ತರ ಸರಿ ಎನಿಸಿತು. ಸ್ವಾತಂತ್ರ್ಯವಿಲ್ಲದ ಬದುಕು ಬದುಕೇ ಅಲ್ಲ. ಭಾರತೀಯರಾದ ನಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಮತ್ತು ಅಧಿಕೃತವಾಗಿ ಸಂವಿಧಾನದ ಮೂಲಕ ಕಮ್ಯುನಿಸಂನ ಭದ್ರತೆ ಮತ್ತು ಸಮಾನತೆಯೂ ಇದೆ. ಆದರೆ ಅನಧಿಕೃತವಾಗಿ ಮತ್ತು ಆಚರಣೆಯಲ್ಲಿ ಈ ಮೂರು ಸರಿಯಾಗಿ ಸಾಧ್ಯವಾಗಿಲ್ಲ. ಇವುಗಳ ಸಮ್ಮಿಲನದ ಅತ್ಯದ್ಭುತ ಭಾರತೀಯತೆಯನ್ನು ನಡುವಳಿಕೆಗಳಲ್ಲಿ ಅಳವಡಿಸಿಕೊಂಡರೆ ಅದೊಂದು ಸುಂದರ ಅನುಭವವಾಗುವುದರಲ್ಲಿ ಸಂದೇಹವೇ ಇಲ್ಲ. ಇತಿಹಾಸದಿಂದ ಕಲಿಯಬಹುದಾದ ಒಳ್ಳೆಯ ಪಾಠಗಳೇ ನಮಗೆ ಮಾರ್ಗದರ್ಶನವಾಗಬಹುದು....
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ