ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?

ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?

ಬರಹ

ತಿಂಗಳಿಗೊಮ್ಮೆ ಸಸೂತ್ರವಾಗಿ ಪಗಾರ ಎಣಿಸುವ ನನ್ನಂತಹ ಮಂದಿಯ ದೃಷ್ಟಿಯಲ್ಲಿ ‘ಅಭಿವೃದ್ಧಿ’ ಎಂಬುದರ ಪರಿಭಾಷೆ ಬೇರೆಯೇ ಇದೆ. ಪರಿಸರ ಪ್ರೇಮಿಗಳ ನಿಲುವು ಈ ಕುರಿತಂತೆ ಸಾಮಾನ್ಯರಿಗೆ ಅರಗಿಸಿಕೊಳ್ಳುವ ರೀತಿಯಲ್ಲಿ ಇಲ್ಲ. ವರ್ಷಪೂರ್ತಿ ಹೊಲದಲ್ಲಿ ಬೆವರು ಹರಿಸಿ ದುಡಿಯುವ, ವರ್ಷದ ಕೊನೆಗೆ ಮಾನ್ಸೂನ್ ಗಳೊಂದಿಗೆ ಜೂಜಾಡುತ್ತ, ಕೃಷಿ ಸಂಸ್ಕೃತಿಯ ಈ ನಾಡಿನಲ್ಲಿ ಬದುಕುವ ನೇಗಿಲಯೋಗಿಯ ದೃಷ್ಟಿಯಲ್ಲಿ ‘ಅಭಿವೃದ್ಧಿ’ ಪದದ ವ್ಯಾಖ್ಯೆ ಬೇರೆಯೇ. ಹಾಗೆಯೇ ನಮ್ಮ ಪಿತ್ಥ ಏರಿಸುವ ವಿತ್ತಮಂತ್ರಿಗಳು, ಅರ್ಥಶಾಸ್ತ್ರಜ್ಞರ ದೃಷ್ಟಿಯಲ್ಲಿ ಅಭಿವೃದ್ಧಿ ಎಂಬುದೇ ವಿಚಿತ್ರ ಕಲ್ಪನೆ!

ಇತ್ತೀಚೆಗೆ ಗುರುಗಳಾದ ಬಕ್ಕೇಮನೆ ನಾಗೇಶ್ ಹೆಗಡೆ ತಮ್ಮ ಲೇಖನದಲ್ಲಿ ಒಂದೆಡೆ ಸೂಚ್ಯವಾದ ಪ್ರಶ್ನೆ ಕೇಳಿದ್ದರು. ನಮ್ಮ ನಾಡಿನ ಅರಣ್ಯದಲ್ಲಿ ಯಾವುದೋ ಮೂಲೆಯಲ್ಲಿ ಒಂದು ಗಿಡ ಹುಟ್ಟಿ ಬೆಳೆದರೆ ಅದರಿಂದ ರಾಷ್ಟ್ರೀಯ ವರಮಾನಕ್ಕೆ ಏನೂ ಕೊಡುಗೆ ಇಲ್ಲ. ಅದನ್ನು ಕತ್ತರಿಸಿ, ಮಾರುಕಟ್ಟೆಗೆ ಸಾಗಿಸಿ, ಗಿರಾಕಿಗೆ ಮಾರಿ ಹಣ ಪಡೆದರೆ ಅದು ರಾಷ್ಟ್ರದ ಸಂಪತ್ತಿಗೆ ಜೋಡಣೆಯಾಗುತ್ತದೆ!

ಹಾಗೆಯೇ ನದಿಯೊಂದು ತನ್ನ ಪಾಡಿಗೆ ತಾನು ಪರಿಶುದ್ಧವಾಗಿ ಹರಿದುಕೊಂಡಿದ್ದರೆ, ಜನಗಳ, ಜಾನುವಾರುಗಳ ಬಾಯಾರಿಕೆ ತೀರಿಸುತ್ತಿದ್ದರೆ ರಾಷ್ಟ್ರೀಯ ಆದಾಯಕ್ಕೆ ಅದು ಸೇರ್ಪಡೆಯಾಗಲಾರದು. ಹಾಗೆ ಹರಿಯುತ್ತಿರುವ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿ, ವಿದ್ಯುತ್ ಉತ್ಪಾದನೆಗೆ ಅಣಿಗೊಳಿಸಿ; ಸಾಲದ್ದಕ್ಕೆ ಆ ನೀರನ್ನು ಕೈಗಾರಿಕೆಗಳು ಸೇರಿದಂತೆ ವಿವಿಧೋದ್ದೇಶ ಯೋಜನೆಗಳಿಗೆ ಬಳಸುವಂತೆ ಯೋಜನೆ ರೂಪಿಸಿದರೆ ಆ ಲಾಭ ಮಾತ್ರ ‘ಅಭಿವೃದ್ಧಿ’ ದರಕ್ಕೆ ಸೇರ್ಪಡೆಯಾಗುತ್ತದೆ. ಹಾಗಾದರೆ ಎಲ್ಲವನ್ನೂ ಕೇವಲ ಹಣದ ಮಾನದಂಡದಲ್ಲಿ ಅಳೆಯುವಂತಾದರೆ, ಮೌಲ್ಯ ಗುರುತಿಸುವಂತಾದರೆ ಮಾತ್ರ ಅದು ‘ಹೌದು’, ಇಲ್ಲದಿದ್ದರೆ ‘ವೇಸ್ಟ್’ ಎಂದು ತೀರ್ಮಾನಿಸುವುದೇ..?

ಈ ಪರಿಯ ಅಭಿವೃದ್ಧಿಯ ಫಲ ತಟ್ಟುವುದಾದರೂ ಯಾರಿಗೆ?

ಧಾರವಾಡ ಸಮೀಪದ (೭ ಕಿ.ಮೀ ದೂರ) ಮುಮ್ಮಿಗಟ್ಟಿ ಗ್ರಾಮದ ಕಥೆ ಕೇಳಿ. ಇಲ್ಲಿನ ಜನ-ಜಾನುವಾರು ಕುಡಿಯಲು ಬಳಸುವ ನೀರಿನಲ್ಲಿ ಫ್ಲೋರೈಡ್ ಇರುವುದು ಪತ್ತೆಯಾಗಿದೆ. ಈಗ ೬ ವರ್ಷಗಳ ಬಳಿಕ ಅಲ್ಲಿನ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ನೀವು ಊಹಿಸಿ. ಅಲ್ಲಿನ ೧ ಲೀಟರ ಕುಡಿಯುವ ನೀರಿನಲ್ಲಿ ೬.೫ ಮಿಲಿ ಗ್ರಾಂ ಫ್ಲೋರೈಡ್ ಅಂಶ ಕಂಡು ಬಂದಿದೆ. ನಿರ್ಧಾರಿತ ಗುಣ ಮಟ್ಟ ೧ ಲೀಟರ್ ಗೆ ೧.೫ ಮಿಲಿಗ್ರಾಂ ಗರಿಷ್ಟ!
ಈ ಗ್ರಾಮದ ಬಹುತೇಕ ಜನರ ಹಲ್ಲುಗಳು ಹಳದಿ. ವಯಸ್ಸಾದವರಿಗೆ ಸಂಧಿವಾತ ಆಪ್ತ. ಊರಿನ ಯುವಕರೆಲ್ಲ ಇಲ್ಲಿಗೆ ಸಮೀಪದ ಬೇಲೂರು ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ, ಈಗೋ-ಆಗೋ ಮುಚ್ಚುವ ಹಂತದಲ್ಲಿರುವ ಸಣ್ಣ ಕಾರ್ಖಾನೆಗಳಿಗೆ ದುಡಿಯಲು ಹೋಗುತ್ತಾರೆ.

ಗ್ರಾಮದ ಕೃಷಿ ಭೂಮಿಯ ಬಹುಭಾಗ ಕೈಗಾರಿಕೆಗಳಿಗೆ ಹೋಗಲಿದೆ (ಎಸ್.ಇ.ಝಡ್ ಮಾದರಿಯಲ್ಲಿ) ಎಂಬ ಪುಕಾರಿನಲ್ಲಿ, ಕೃಷಿಕಾಯಕ ತಕ್ಕ ಮಟ್ಟಿಗೆ ಸ್ಥಗಿತಗೊಳಿಸಿ, ಪರಿಹಾರಕ್ಕಾಗಿ ಬಕಪಕ್ಷಿಯಂತೆ ಕಾಯುತ್ತ ಕಾಲ ನೂಕುತ್ತಿದ್ದಾರೆ. ಸದ್ಯ ಗ್ರಾಮದ ಮುಂದೆ ಪ್ರಧಾನಮಂತ್ರಿಗಳ ಚತುಷ್ಪಥ ರಸ್ತೆ ಭವ್ಯವಾಗಿ ನಿಂತಿದೆ. ಬಿ.ಜೆ.ಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್.ಡಿ.ಎ.) ಕೇಂದ್ರದಲ್ಲಿದ್ದಾಗ ಪ್ರಧಾನಮಂತ್ರಿ ವಾಜಪೇಯಿ ಚತುಷ್ಪಥ ರಸ್ತೆ ಯೋಜನೆ ಜಾರಿಯಾಗಿತ್ತು. ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರಕಾರ ಅಧಿಕಾರ ಗದ್ದುಗೆ ಏರುತ್ತಲೇ, ವಾಜಪೇಯಿ ಅವರ ಭಾವಚಿತ್ರಗಳನ್ನು ಈ ಹೆದ್ದಾರಿಯ ಮಾರ್ಗಸೂಚಕಗಳ ಮೇಲಿನಿಂದ ತೆಗೆಸಿ ಹಾಕುವ ಕೆಲಸ ಮೊದಲು ಮಾಡಿತು!

ಅದೇನೆ ಇರಲಿ. ಸ್ಥಳೀಯರ ಪರಿಸ್ಥಿತಿ ನೋಡಿ. ಆ ರಸ್ತೆ ಮುಮ್ಮಿಗಟ್ಟಿ ಗ್ರಾಮಸ್ಥರು ಬಳಸುವಂತಿಲ್ಲ. ಟ್ರ್ಯಾಕ್ಟರ್, ಚಕ್ಕಡಿ ಮೊದಲಾದ ವಾಹನಗಳು ಈ ಚತುಷ್ಪಥ ರಸ್ತೆ ಏರುವಂತಿಲ್ಲ. ದನ-ಕರುಗಳನ್ನು ಮೇಯಿಸಲು ಒಯ್ಯುವವರು ಈ ರಸ್ತೆ ದಾಟುವಂತಿಲ್ಲ. ಪಾದಚಾರಿಗಳು ಈ ರಾಜಮಾರ್ಗದ ಕೆಳಗೆ ನಿರ್ಮಿಸಲಾದ ‘ಸಬ್ ವೇ’ ಮಾತ್ರ ಬಳಸಬೇಕು..ಅದು ಕಡ್ಡಾಯವಾಗಿ! ಹಾಗೇನಾದರೂ ಒಂದು ವೇಳೆ ಈ ಹೆದ್ದಾರಿ ನಿಯಮಗಳನ್ನು ಉಲ್ಲಂಘಿಸಿದರೆ ಗಾಯದ ಮೇಲೆ ಬರೆ ಎಳೆದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಾಂಟ್ರ್ಯಾಕ್ಟರ್ ಅಥವಾ ಹೈ ವೇ ಪೆಟ್ರೋಲ್ ಪಾರ್ಟಿ ‘ಸಂಚಾರಿ ಪೊಲೀಸ್’ ರಿಂದ ದಂಡನೆಗೆ ಒಳಗಾಗಬೇಕು. ಈ ಅಭಿವೃದ್ಧಿ ನಮಗಾಗಿ ಎಂದು ಅಂದುಕೊಂಡಿದ್ದ ನೇಗಿಲಯೋಗಿಗೆ ಬೇರು ಕತ್ತರಿಸಿ, ಚಿಗುರು ಕಸಿದುಕೊಂಡ ಅನುಭವ. ತಮ್ಮ ಹಾಗು ಗ್ರಾಮದ ಸ್ವಾತಂತ್ರ್ಯವೇ ಹರಣವಾದಂತಹ ಮನೋಕ್ಷೋಭೆ.

ಇನ್ನಾದರೂ ಈ ಹೆದ್ದಾರಿ ಬಳಸೋಣ ಎಂದರೆ..ಧಾರವಾಡ ಬೆಳಗಾವಿ ಮಧ್ಯೆ ಸಂಚರಿಸುವ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಧಿಸುವ ಕರ ದಂಗು ಬಡಿಸುತ್ತದೆ. ಇಷ್ಟು ಹಣ ನಮ್ಮ ಮುಮ್ಮಿಗಟ್ಟಿಯ ನೇಗಿಲಯೋಗಿ ಎಲ್ಲಿಂದ ನೀಡಬಲ್ಲ. ಈ ರಸ್ತೆ ನಿರ್ಮಾಣವಾಗುವ ಮೊದಲು ಸಹ ಇಲ್ಲಿ ಎನ್.ಎಚ್.೪ ಪೂಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಇತ್ತು. ರಸ್ತೆಯ ಇಕ್ಕೆಲಗಳಲ್ಲಿ ಧಾರವಾಡದಿಂದ ಬೆಳಗಾವಿಯ ವರೆಗೆ ಇಕ್ಕೆಲಗಳಲ್ಲಿ ಸುಮಾರು ೧೦೦ ವರ್ಷಗಳಷ್ಟು ಹಳೆಯದಾದ ಮರಗಳಿದ್ದವು. ಈಗ ಎರಡೂ ಬದಿಗಳಲ್ಲಿನ ನೂರಾರು ಗಿಡಗಳನ್ನು ಕಡಿದು ಗ್ರಾಮದ ನೆಮ್ಮದಿಯ ನೆರಳನ್ನು ಸಹ ಕಸಿಯಲಾಗಿದೆ. ಈಗ ಅರಣ್ಯ ಇಲಾಖೆ ಚತುಷ್ಪಥ ರಸ್ತೆಯ ಮದ್ಯೆ ದಾಸವಾಳ ಹೂವಿನ ಗಿಡಗಳನ್ನು ನೆಟ್ಟಿದೆ. ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದೆ. ಕೊನೆ ಪಕ್ಷ ಒಂದು ಬದಿಯ ಗಿಡಗಳನ್ನಾದರೂ ಉಳಿಸಿಕೊಳ್ಳಬಹುದಾಗಿತ್ತು. ಪರಿಸರವಾದಿಗಳು ತಮ್ಮ ಕೂಗು ಎಬ್ಬಿಸಿದ್ದರು..ಆದರೆ ಅಧಿಕಾರಶಾಹಿಯ ವ್ಯವಸ್ಥಿತ ತಾಂತ್ರಿಕ ಕಾರಣಗಳು ಅವರ ಬಲ ಉಡುಗಿಸುವಲ್ಲಿ ಯಶಸ್ವಿಯಾದವು. ಈಗ ಆ ೪ ಟಾರ್ ರಸ್ತೆಗಳು ಬಿಸಿಲಿಗೆ ಭರಪೂರ್ ಕಾಯ್ದು ರಸ್ತೆಯ ಪಕ್ಕದಲ್ಲಿಯೇ ಇರುವ ಗ್ರಾಮ ಅರೆಬೆಂದ ಸ್ಥಿತಿಗೆ ತಲುಪಿದೆ. ಹೆದ್ದಾರಿಯ ಇಕ್ಕೆಲಗಳಲ್ಲಿ ಜಾಗೆ ಕಳೆದುಕೊಂಡವರು ಇವರು..ಲಾಭ ಮಾತ್ರ ಶಹರವಾಸಿಗಳಿಗೆ! ಘೋಷಣೆ ಮಾತ್ರ ‘ಗ್ರಾಮ ಸಬಲೀಕರಣದಿಂದ ಭಾರತದ ಸಬಲೀಕರಣ ಸಾಧ್ಯ’ ಎಂದು!

ಮೊದಲು ಈ ರಸ್ತೆಯ ಮೇಲೆ ಬಿದ್ದ ಮಳೆಯ ನೀರು ಹರಿದು ಬಂದು ಗ್ರಾಮದ ಮುಂದಿನ ಕೆರೆ ತುಂಬಿಸುತ್ತಿತ್ತು. ಆ ಮಳೆಯ ನೀರು ಸುಮಾರು ೮ ತಿಂಗಳು ಆ ಕೆರೆಯಲ್ಲಿ ತುಂಬಿರುತ್ತಿತ್ತು. ರಸ್ತೆಯ ಈ ಮಳೆಯ ನೀರಿನಿಂದ ತಕ್ಕ ಮಟ್ಟಿಗೆ ಮಸ್ತ್ ಬೆಳೆ ಕೂಡ ಅಲ್ಲಿನ ಜನ ತೆಗೆಯುತ್ತಿದ್ದರು. ಈಗ ಆ ಚತುಷ್ಪಥ ರಸ್ತೆಯ ಮೇಲೆ ಮಳೆ ನೀರು ಬಿದ್ದರೂ ಅದು ಈ ಕೆರೆಯ ನೀರಿನ ಒಳ ಹರಿವಿನ ವ್ಯಾಪ್ತಿ ಪ್ರದೇಶ ‘ಕ್ಯಾಚ್ ಮೆಂಟ್ ಏರಿಯಾ’ ದಾಟಿ ಹೋಗಿ ಮುಂದೆ ಬೀಳುತ್ತದೆ. ಅರ್ಥಾತ್ ಪೋಲಾಗುತ್ತಿದೆ. ಏಕೆಂದರೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ಮಳೆ ನೀರು ಬಿದ್ದರೂ ಅದು ನಿಲ್ಲಬಾರದು. ಕಾರಣ ರಭಸವಾಗಿ ಓಡುವ ವಾಹನಗಳು ಸ್ಕಿಡ್ ಆಗಿ ಆಯತಪ್ಪುವ ಸಾಧ್ಯತೆ ಇರುವುದರಿಂದ; ಎರಡೂ ಬದಿಯಲ್ಲಿ ಕಾಲುವೆಯ ತರಹ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿರುತ್ತಾರೆ. ಹಾಗಾಗಿ ಈ ನೀರಿನ ‘ಔಟ್ ಲೆಟ್’ ಎಲ್ಲೋ ದೂರದಲ್ಲಿರುವುದರಿಂದ ಕೆರೆ ಬತ್ತಿದೆ. ಈಗ ಜನ-ಜಾನುವಾರು ಮತ್ತೆ ಜಿಲ್ಲಾ ಪಂಚಾಯ್ತಿ ಕೊಡ ಮಾಡುವ ನೀರಿಗೆ ಬಾಯಿ ತೆರೆದು ಪರಾವಲಂಬಿ ಸ್ಥಿತಿಗೆ ತಲುಪಿದ್ದಾರೆ.

ಅಭಿವೃದ್ಧಿಯನ್ನು ಸೂಚಿಸುವ ಈ ಬೃಹತ್ ಹೆದ್ದಾರಿಗಳು ಸ್ವಾವಲಂಬಿಯಾದ್ದ ಮುಮ್ಮಿಗಟ್ಟಿಯಂತಹ ಗ್ರಾಮಗಳನ್ನು ಈ ರೀತಿ ಪರಾವಲಂಬಿ ಸ್ಥಿತಿಗೆ ತಲುಪಿಸುವಂತಾದರೆ! ಅಭ್ಯುದಯ ಚಿಂತಕರು ಇದನ್ನು ಹೇಗೆ ವಿಶ್ಲೇಷಿಸುತ್ತಾರೆ? ಇದನ್ನು ‘ಅಧೋಮುಖ ಪ್ರಗತಿ’ ಎಂದು ನಾವು ಅಭಿವೃದ್ಧಿಯ ಮಾನದಂಡದಲ್ಲಿ ಗುರುತು ಹಾಕಿಕೊಳ್ಳಬಹುದೇನೋ? ಹಾಗೆಯೇ ಕಣ್ಣಿಗೆ ಕಾಣದ ಐ.ಟಿ.-ಬಿ.ಟಿ., ಎಚ್.ಟಿ.-ನ್ಯಾನೋ ಇತ್ಯಾದಿ ಹೆದ್ದಾರಿಗಳು ಗ್ರಾಮದ ಎಷ್ಟೋ ಕಾಲುದಾರಿಗಳನ್ನು ಅದೆಷ್ಟು ವ್ಯವಸ್ಥಿತವಾಗಿ ಅಳಿಸಿ ಹಾಕುತ್ತಿವೆಯೋ?

ಗ್ರಾಮೀಣ ಭಾರತದ ಗ್ರಾಮ್ಯ ಸಂಸ್ಕೃತಿ, ನೆಲಮೂಲ ಜ್ಞಾನ, ನೆಲಮೂಲ ಸಂಸ್ಕೃತಿ, ಕೃಷಿ ಸಂಸ್ಕೃತಿ ಹೀಗೆ ಹತ್ತು ಹಲವಾರು ವಿಶೇಷತೆಗಳೆಲ್ಲ ಈ ನಗರಿಕರಣದ ಭರಾಟೆಯಲ್ಲಿ ಒಟ್ಟು ಸಂಸ್ಕೃತಿ ಹಾಗು ದೇಶದ ‘ಐಡೆಂಟಿಟಿ’ ವೃಂದಾವನಸ್ಥ! ಆಗುವತ್ತ ದಾಪುಗಾಲು ಇಡುತ್ತಿವೆ. ಗ್ರಾಮ ನೆಮ್ಮದಿ ಹಾಗು ಗ್ರಾಮಗಳನ್ನೆಲ್ಲ ಅಳಿಸಿ ಹಾಕಿ ಭರಾಟೆಯ ನಗರಗಳನ್ನು ಸೃಷ್ಟಿಸುವತ್ತ ನಮ್ಮ ಮುಂದಾಳುಗಳು ತುದಿಗಾಲ ಮೇಲೆ ನಿಂತಂತೆ ಕಾಣುತ್ತದೆ. ದೇಶದ ಬೆನ್ನೆಲುಬೇ ಮುರಿದ ಮೇಲೆ..‘ಕ್ಯಾಲಿಪರ್ಸ್’ ಹಾಗು ಊರುಗೋಲಿನ ಸಹಾಯದಿಂದ ಸದೃಢವಾಗಿ ನಿಂತು ಮೊದಲಿನಂತೆ ಈ ಮುಂದುವರೆದ ದೇಶಗಳನ್ನು ಸಮರ್ಥವಾಗಿ ಎದುರಿಸಬಲ್ಲುದೇ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ಇತಿಹಾಸದಿಂದ ಪಾಠ ಕಲಿಯದವ ಭವಿಷ್ಯತ್ತಿನಲ್ಲಿ ಇತಿಹಾಸ ನಿರ್ಮಿಸಲಾರ!