ಇನ್‍ಸ್ಟೆಂಟ್ ಪುಸ್ತಕ ಮುದ್ರಿಸುವ ಯಂತ್ರ

ಇನ್‍ಸ್ಟೆಂಟ್ ಪುಸ್ತಕ ಮುದ್ರಿಸುವ ಯಂತ್ರ

ಬರಹ

(ಇ-ಲೋಕ-35)(14/8/2007)
ಸೌರಶಕ್ತಿ ಬಳಸಿಕೊಳ್ಳುವ ಮನೆ ನಿರ್ಮಿಸಲು ವಿದ್ಯಾರ್ಥಿಗಳಿಗೆ ಸ್ಪರ್ಧೆ

ಸೌರಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಎಂಟುನೂರು ಚದರ ಅಡಿ ಮನೆ ನಿರ್ಮಿಸುವ ಸ್ಪರ್ಧೆಯನ್ನು ನ್ಯೂಯಾರ್ಕಿನಲ್ಲಿ ನಡೆಸಲಾಗುತ್ತಿದೆ.ನ್ಯೂಯಾರ್ಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆಸಲಾಗುತ್ತಿರುವ ಈ ಸ್ಪರ್ಧೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.ವಿದ್ಯಾರ್ಥಿಗಳು ಸ್ವತಹ ಮನೆಯನ್ನು ನಿರ್ಮಿಸುತ್ತಿದ್ದಾರೆ.ಅಮೆರಿಕಾದಲ್ಲಿ ಮನೆಗಳನ್ನು ಮರದಿಂದ ನಿರ್ಮಿಸುವುದೇ ಹೆಚ್ಚು ತಾನೇ? ನಮ್ಮಂತೆ ಇಟ್ಟಿಗೆ,ಕಾಂಕ್ರೀಟು ಬಳಕೆ ಅಲ್ಲಿ ಕಡಿಮೆ. ಸೌರಶಕ್ತಿಯನ್ನು ಬಳಸಿಕೊಳ್ಳಲು ಮನೆಗಳಲ್ಲಿ ಸೌರಫಲಕವನ್ನು ಅಳವಡಿಸಿರಬಹುದು ಎಂದು ನೀವು ಆಲೋಚಿಸಿದ್ದರೆ,ಅದು ಸರಿ. ಇಲ್ಲಿ ಕಂಡುಬರುವ ನಿರ್ಮಾಣವಾಗುತ್ತಿರುವ ಮನೆಗಳಲ್ಲಿ ಸೌರಫಲಕಗಳಿವೆ.ಅದರಲ್ಲಿ ತಯಾರಾದ ವಿದ್ಯುತ್ತನ್ನು ಹಿಡಿದಿಡಲು ಬ್ಯಾಟರಿಯನ್ನು ಬಳಸುತ್ತಿದ್ದಾರೆ.ಅಲ್ಲಿನ ವಿದ್ಯುತ್ ಮಂಡಳಿಗಳು ತಯಾರಾದ ವಿದ್ಯುತ್ತನ್ನು ಖರೀದಿಸಲು ಆಸಕ್ತಿ ತೋರುವುದರಿಂದ,ಬೇಕೆಂದರೆ ಅದನ್ನು ನೇರ ಗ್ರಿಡ್‍ಗೆ ಸೇರಿಸಿ,ಮನೆಗೆ ಅವಶ್ಯಕವಾದ ಸಮಯದಲ್ಲಿ ವಿದ್ಯುತ್ತನ್ನು ಮಂಡಳಿಯ ಗ್ರಿಡ್‍ನಿಂದ ಪಡೆದುಕೊಳ್ಳಬಹುದು. ಹೀಗಾಗಿ ಬ್ಯಾಟರಿಯ ಖರ್ಚನ್ನು ಉಳಿತಾಯ ಮಾಡುವುದು ಸಾಧ್ಯ.ಅಲ್ಲಿ ತಯಾರಾದ ವಿದ್ಯುತ್ತಿನಲ್ಲೇ ಸುಧಾರಿಸಲೋಸಗ ಮನೆಯ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವತ್ತ ವಿದ್ಯಾರ್ಥಿಗಳು ಹೆಚ್ಚಿನ ಗಮನ ಕೊಟ್ಟಿದ್ದಾರೆ. ಅದಕ್ಕಾಗಿ ವಿಶಾಲ ಕಿಟಿಕಿ,ಬಾಗಿಲುಗಳನ್ನು ಒದಗಿಸಿ,ಬೇಕಿದ್ದರೆ-ಮನೆಯನ್ನು ಹೊರಗಿನ ಗಾಳಿಗೆ ತೆರೆದುಕೊಂಡು,ಏಸಿಯ ವಿದ್ಯುತ್ ಬೇಡಿಕೆ ಮಿತಗೊಳಿಸುವತ್ತ ಹೆಚ್ಚಿನವರು ಗಮನ ನೀಡಿದ್ದಾರೆ. ಮನೆಯ ಸಂಪೂರ್ಣ ನಿಯಂತ್ರಣವನ್ನು ಕಂಪ್ಯೂಟರೀಕರಣಗೊಳಿಸಲು ಹೆಚ್ಚಿನವರು ಒತ್ತು ನೀಡಿದ್ದಾರೆ.ಹಾಗಾಗಿ ಕಚೇರಿಯಿಂದಲೇ ಮನೆಯ ವಿದ್ಯುದ್ದೀಪಗಳು ಉರಿಯುತ್ತಿವೆಯೇ,ಏಸಿ ಚಾಲೂ ಇದೆಯೇ ಎಂದು ಪರೀಕ್ಷಿಸಿ,ಅದನ್ನು ನಿಯಂತ್ರಿಸಲು ಬರುತ್ತದೆ.ಮನೆಗೆ ಬರುವ ಮೊದಲು ಏಸಿ ಚಾಲೂ ಮಾಡಿ,ಮನೆ ಮುಟ್ಟುವಷ್ಟರಲ್ಲಿ ಮನೆ ತಂಪಾಗಿರುವಂತೆ ಮಾಡಲು ಬರುತ್ತದೆ.

ಇನ್‍ಸ್ಟೆಂಟ್ ಪುಸ್ತಕ ಮುದ್ರಿಸುವ ಯಂತ್ರ

ಕಾಫಿ,ಟೀ ತಯಾರಿಸುವ ಯಂತ್ರವನ್ನು ಜನಸಂದಣಿಯಿರುವೆಡೆ ಸ್ಥಾಪಿಸಿರುವುದನ್ನು ನೋಡಿದ್ದೀರ್‍ಇ ತಾನೇ? ಇದೀಗ ಪುಸ್ತಕ ಮುದ್ರಿಸಿ ಕೊಡುವ ಯಂತ್ರಗಳೂ ಬಂದಿವೆ.ಮುದ್ರಿಸ ಬೇಕಾದ ಪುಸ್ತಕದ ಪಿಡಿಎಫ್ ಕಂಪ್ಯೂಟರ್ ಕಡತ ಇದ್ದರೆ,ಅದನ್ನು ಯಂತ್ರವೊಂದು ಗರಿ ಗರಿಯಾಗಿ ಮುದ್ರಿಸಿ,ಬೈಂಡ್ ಮಾಡಿ ಕೊಡುತ್ತದೆ.ಈ ಯಂತ್ರ ಫೊಟೋ ಕಾಪಿ ಮಾಡುವ ಯಂತ್ರದಂತೆ ಕಾಣಿಸುತ್ತದೆ. ಗಾತ್ರ ಎರಡು ಫ್ರೀಜರ್ ಯಂತ್ರದ ಗಾತ್ರ ಇದೆಯಂತೆ.ಪುಸ್ತಕ ಭಾರೀ ದುಬಾರಿಯಾದೀತು ಎಂದು ಮೂಗು ಮುರಿಯಬೇಡಿ-ಮುನ್ನೂರು ಪುಟದ ಪುಸ್ತಕಕ್ಕೆ ನೂರೈವತ್ತು ರುಪಾಯಿ ಖರ್ಚು ಬರುತ್ತದೆ.ಮಾರಾಟ ಬೆಲೆ ಜಾಸ್ತಿ ಇದ್ದೀತು ಬಿಡಿ. ಇಂತಹ ಪುಸ್ತಕ ಮುದ್ರಿಸುವ ಯಂತ್ರದ ಉದ್ದೇಶ ಹೊಸ ಪುಸ್ತಕಗಳನ್ನು ಮುದ್ರಿಸುವುದಲ್ಲ. ಹಳೆಯ,ಮುದ್ರಿತ ಪ್ರತಿ ಲಭ್ಯವಿಲ್ಲದ ಪುಸ್ತಕಗಳನ್ನು ಮುದ್ರಿಸುವುದಕ್ಕೆ ಇದರ ಬಳಕೆ ಸೂಕ್ತ.ಕೃತಿಯ ಹಕ್ಕುಸ್ವಾಮ್ಯವಾಗದಂತಿದ್ದರೆ ಮಾತ್ರ ಈ ಯಂತ್ರದಲ್ಲಿ ಪುಸ್ತಕ ಮುದ್ರಿಸಿ ಕೊಡಲಾಗುತ್ತದೆ.ಹತ್ತು ಲಕ್ಷ ಬೆಲೆಯ ಯಂತ್ರವಿದು.ಸದ್ಯ ಈ ಯಂತ್ರದ ಮೂರು ಕಡೆ ಇದೆಯಂತೆ.ವಾಷಿಂಗ್ಟನ್‍ನ ವಿಶ್ವಬ್ಯಾಂಕಿನ ಪುಸ್ತಕ ಮಳಿಗೆಯಲ್ಲಿ,ನ್ಯೂಯರ್ಕ್‍ನ ಸಾರ್ವಜನಿಕ ಗ್ರಂಥಾಲಯದಲ್ಲಿ ಮತ್ತು ಈಜಿಪ್ಟಿನ ಅಲೆಕ್ಸಾಂಡ್ರಿಯಾದಲ್ಲಿ ಯಂತ್ರಗಳಿವೆಯಂತೆ.ಮುಂದಿನ ದಿನಗಳಲ್ಲಿ ಇಂತಹ ಯಂತ್ರವನ್ನು ಪ್ರಸಿದ್ಧ ಗ್ರಂಥಾಲಯಗಳಲ್ಲಿ ಕಾಣುವ ಅದೃಷ್ಟ ನಮ್ಮದಾಗಬಹುದು.

< ಸೇತುವೆ ಮೇಲೆ ಕಣ್ಣಿಡಲು ಸೆನ್ಸರುಗಳು

ಮಿನ್ನಿಯಪೊಲೀಸ್‍ನಲ್ಲಿ ಇತ್ತೀಚೆಗೆ ಸೇತುವೆಯೊಂದು ಕುಸಿದು ಅನಾಹುತವಾಯಿತಲ್ಲ.ಅಂತಹ ಸೇತುವೆ ಕುಸಿತವನ್ನು ತಡೆಯಲು ಸಂವೇದಕಗಳನ್ನು ಬಳಸಬಹುದೇ ಎಂದು ಸಂಶೋಧಕರು ಯೋಚಿಸುತ್ತಿದ್ದಾರೆ.ಕ್ರೆಡಿಟ್ ಕಾರ್ಡ್‍ನ ಗಾತ್ರದ ವಿದ್ಯುನ್ಮಾನ ಮಂಡಲಗಳುಳ್ಳ ಸಾಧನ,ಸೇತುವೆಯ ಕಬ್ಬಿಣದ ರಾಡುಗಳು ಹೊರ ಸೂಸುವ ವಿಕಿರಣಗಳನ್ನು ಗ್ರಹಿಸಬಲ್ಲವು.ಇವುಗಳಿಗೆ ಶಕ್ತಿಯನ್ನು ಮೈಕ್ರೊವೇವ್ ಕಿರಣಗಳ ಮೂಲಕ ಅಥವ ಬೆಳಕಿನ ಮೂಲಕ ನೀಡಬಹುದು. ಒಂದು ಸೇತುವೆಗೆ ಹಲವು ಸೆನ್ಸರುಗಳನ್ನು ಅಳವಡಿಸಬೇಕಾಗುತ್ತದೆ.ಹೆಲಿಕಾಪ್ಟರ್ ಒಂದು ಸೇತುವೆಯ ಮೇಲೆ ಹಾರಿ,ಮೈಕ್ರೋವೇವ್ ಕಿರಣಗಳನ್ನು ಹೊರಸೂಸಿ,ಸೆನ್ಸರುಗಳ ಸಂಕೇತವನ್ನು ಗ್ರಹಿಸುತ್ತದೆ. ಈ ಮಾಹಿತಿಯ ವಿಶ್ಲೇಷಣೆಯನ್ನು ಕಂಪ್ಯೂಟರುಗಳು ಮಾಡಿ,ಸೇತುವೆ ಬಲವಾಗಿದೆಯೇ ಅಥವಾ ದುರ್ಬಲಗೊಂಡಿದೆಯೇ ಎಂದು ತಿಳಿಸಬಲ್ಲುವು.ದುರ್ಬಲ ಸೇತುವೆಯಾದರೆ,ಸಾರಿಗೆಯನ್ನು ನಿಯಂತ್ರಿಸಿ ಅಥವಾ ನಿಷೇಧಿಸಿ,ಅಗತ್ಯ ಕ್ರಮ ಕೈಗೊಳ್ಳಬಹುದು. ನಿಸ್ಸಾನ್ ಕಂಪೆನಿಯಿಂದಲೂ ಕುಡುಕನೊಲ್ಲದ ಕಾರು

ಜಪಾನೀ ಕಾರು ತಯಾರಕ ಕಂಪೆನಿ ನಿಸ್ಸಾನ್ ಕೂಡಾ ತನ್ನ ಕಾರಿನಲಿ ಕುಡಿದ ಚಾಲಕ ಚಲಾಯಿಸದಂತೆ ಸ್ವಯಂ ಪ್ರತಿಬಂಧಿಸುವ ವ್ಯವಸ್ಥೆಯನ್ನು ಅಳವಡಿಸುವತ್ತ ಹೆಜ್ಜೆಯಿಟ್ಟಿದೆ.ಚಾಲಕನ ಉಸಿರನ್ನು ಪರೀಕ್ಷಿಸಿ,ಆತ ಲೆಕ್ಕಕ್ಕಿಂತ ಹೆಚ್ಚು ಕುಡಿದಿದ್ದರೆ,ಕಾರು ಚಾಲೂ ಆಗಲು ನಿರಾಕರಿಸುತ್ತದೆ.ಎಷ್ಟು ಕುಡಿತ ಓಕೆ ಎನ್ನುವುದನು ಕಂಪೆನಿಯಿನ್ನೂ ತೀರ್ಮಾನಿಸಿಲ್ಲವಂತೆ.ಹಾಗೆಯೇ ಕಾರನ್ನು ಮಾರುಕಟ್ಟೆಗೆ ಯಾವಾಗ ಬಿಡುಗಡೆ ಮಾಡಬೇಕು ಎನ್ನುವ ವೇಳಾಪಟ್ಟಿಯನ್ನು ಕಂಪೆನಿಯು ಹೊಂದಿಲ್ಲ.

*ಅಶೋಕ್‍ಕುಮಾರ್ ಎ