ಇರಾನ್ ಜತೆ ಮೈತ್ರಿಗೆ ಯುಟ್ಯೂಬ್ ಬಳಸುತ್ತಿರುವ ಒಬಾಮಾ!

ಇರಾನ್ ಜತೆ ಮೈತ್ರಿಗೆ ಯುಟ್ಯೂಬ್ ಬಳಸುತ್ತಿರುವ ಒಬಾಮಾ!

ಬರಹ

ಇರಾನ್ ಜತೆ ಮೈತ್ರಿಗೆ ಯುಟ್ಯೂಬ್ ಬಳಸುತ್ತಿರುವ ಒಬಾಮಾ!
ಅಮೆರಿಕನ್ ಅಧ್ಯಕ್ಷ ಅಂತರ್ಜಾಲವನ್ನು ಸಮರ್ಥವಾಗಿ ಬಳಸುವಲ್ಲಿ ಹೆಸರು ಮಾಡಿದ್ದಾರೆ. ಈಗ ತಮ್ಮ ಇರಾನ್-ಅಮೆರಿಕನ್ ಸಂಬಂಧ ಸುಧಾರಣೆಯ ಮಹತ್ವಾಕಾಂಕ್ಷೆಯ ಯೋಜನೆಗೂ ಯುಟ್ಯೂಬ್ ವಿಡಿಯೋ ಸೇವೆಯನ್ನು ಬಳಸುತ್ತಿದ್ದಾರೆ. ಇರಾನ್ ಜತೆ ಅಮೆರಿಕ ಮೈತ್ರಿ ಬಯಸುತ್ತಿದೆ ಎನ್ನುವುದನ್ನು ಮನಗಾಣಿಸಲು,ಒಬಾಮ ಇರಾನ್ ಜನತೆಗೆ ಮೈತ್ರಿ ಸಂದೇಶವನ್ನು ವಿಡಿಯೋ ರೆಕಾರ್ಡ್ ಮಾಡಿ ಯುಟ್ಯೂಬ್ ತಾಣದಲ್ಲಿ ಹಾಕಿದ್ದಾರೆ.ಜನಪ್ರಿಯ ತಾಣವಾಗಿರುವ ಯುಟ್ಯೂಬಿನಲ್ಲಿ ಮೊದಲ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ತುಣುಕನ್ನು ಹದಿನೈದು ಸಾವಿರ ಸಲ ವೀಕ್ಷಿಸಲಾಗಿದೆ. ಟಿವಿಯಲ್ಲಿಯೂ ಇಂತಹ ತುಣುಕನ್ನು ಪ್ರದರ್ಶಿಸ ಬಹುದಾದರೂ, ಪ್ರಸಾರದ ಸಮಯ ಮಿತಿಯಿಂದಾಗಿ ಚಾನೆಲ್‌ಗಳು ಕತ್ತರಿ ಪ್ರಯೋಗ ಮಾಡಿ ಪ್ರದರ್ಶಿಸಿ,ಸಂದೇಶ ಕುಲಗೆಡುವ ಅಪಾಯ ಇದೆ. ಯುಟ್ಯೂಬಿನಲ್ಲಿ ಅಂತಹ ಅಪಾಯ ಇಲ್ಲ ಎನ್ನುವುದು ಬಹಳ ಅನುಕೂಲ.
---------------------------------------------------
ವಿದ್ಯಾರ್ಥಿ ನಿರ್ಮಿತ ಅಣುಸ್ಯಾಟ್ ಉಪಗ್ರಹ ಗಗನಕ್ಕೆ
ಏಪಿಜೆ ಅಬ್ದುಲ್ ಕಲಾಂ ಅವರು ಕಲಿತ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸಿದ ಮೈಕ್ರೋಉಪಗ್ರಹ ಎಪ್ರಿಲ್ ಮೊದಲ ವಾರ ಉಡಾವಣೆಯಾಗುವ ನಿರೀಕ್ಷೆಯಿದೆ. ಇಸ್ರೋ ಜತೆ ಕೈಗೂಡಿಸಿ,ಕೆಲಸ ಮಾಡಿ,ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದ ಮೂವತ್ತೇಳು ಏರೋಸ್ಪೇಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಹತ್ತು ಶಿಕ್ಷಕರುಗಳ ಜತೆಗೂಡಿ ನಿರ್ಮಿಸಿದ ಉಪಗ್ರಹ ಇದಾಗಿದೆ.ಆರುನೂರರಿಂದ ಎಂಟುನೂರು ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿ ಭೂಮಿಯನ್ನು ಈ ಮೈಕ್ರೋಉಪಗ್ರಹ ಸುತ್ತಲಿದೆ.ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಅಗತ್ಯವಾದ ಪ್ರತಿಭೆಯನ್ನು ಹುಟ್ಟು ಹಾಕುವುದು ಈ ಉಪಗ್ರಹ ನಿರ್ಮಾಣ ಯೋಜನೆಯ ಗುರಿ.
-----------------------------------------------------------
ಮಂತ್ರ ಪಠಿಸುವ ವೆಬ್‌ಸೈಟ್!
ನಿಮ್ಮ ಪ್ರಾರ್ಥನೆಯನ್ನು ಪಠಿಸುವ ಸೇವೆ ನೀಡುವ Informationageprayer.com ತಾಣದಲ್ಲಿ ಸಿಗುತ್ತದೆ.ಇದಕ್ಕೆ ನಿಗದಿತ ದರ ತೆರಬೇಕಾಗುತ್ತದೆ.ವಿವಿಧ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಪ್ರಾರ್ಥನೆ ಸಲ್ಲಿಸುವ ಸೇವೆಯ ಆಯ್ಕೆ ಇಲ್ಲಿದೆ.ಸದ್ಯ ನಿಗದಿತ ನಮೂನೆಯ ಪ್ರಾರ್ಥನೆಯನ್ನು ಮಾತ್ರ ಸಲ್ಲಿಸಲು ಅವಕಾಶ ಇದೆಯಾದರೂ,ಮುಂದೆ ನೀವು ಕೇಳಿದ ನಮೂನೆಯ ಪ್ರಾರ್ಥನೆಯನ್ನು ಸಲ್ಲಿಸುವ ಆಯ್ಕೆ ಲಭ್ಯವಾಗಲಿದೆಯಂತೆ.ಪ್ರಾರ್ಥನೆ ಸಲ್ಲಿಸಿದವರ ಹೆಸರಿನ ಜತೆ ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ವೈಶಿಷ್ಟ್ಯ.
-------------------------------------------------------------------------
ಜಿಮೇಲಿನಲ್ಲಿ ಮಿಂಚಂಚೆ ರದ್ದು ಮಾಡುವ ಸೌಲಭ್ಯblog
ಮಿಂಚಂಚೆ ಕಳುಹಿಸಿದೊಡನೆ,ಅದರಲ್ಲಿ ಏನೋ ತಪ್ಪಾಗಿದೆ,ಮಿಂಚಂಚೆ ಕಳುಹಿಸ ಬಾರದಿತ್ತು ಅನಿಸುವುದಿದೆ.ಹಾಗನಿಸಿದಾಗ,ಕಳುಹಿಸಿದ ಮಿಂಚಂಚೆಯನ್ನು ರದ್ದು ಪಡಿಸುವ ಸೌಲಭ್ಯ ಈಗ ಲಭ್ಯವಿದೆ.ಈ ಹೊಸ ಪ್ರಯೋಗಾತ್ಮಕ ಸೌಲಭ್ಯ ಬೇಕಿದ್ದರೆ,ಗೂಗಲ್ ಲ್ಯಾಬಿನ ಸೌಕರ್ಯಗಳ ಪೈಕಿ, ಈ ಸೌಕರ್ಯವನ್ನು ಆಯ್ದು ಕೊಳ್ಳಬೇಕು.ಮಿಂಚಂಚೆ ಕಳುಹಿಸಿದೊಡನೆ,ಮಿಂಚಂಚೆ ರದ್ದು ಮಾಡು ಎನ್ನುವ ಆಯ್ಕೆಯೂ ಕಾಣಿಸಿಕೊಳ್ಳುತ್ತದೆ. ಒಡನೆಯೇ ಅದನ್ನು ಅದುಮಿದರೆ,ಮಿಂಚಂಚೆ ರದ್ದಾದರೂ ಆಗಬಹುದು. ಅದುಮುವುದು ತುಸು ತಡವಾದರೂ,ಅದು ಬಟವಾಡೆಯಾದೀತು.ನಂತರ ಮಿಂಚಂಚೆ ರದ್ದು ಮಾಡಲು ಅಸಾಧ್ಯ. ನಿಧಾನ ಗತಿಯ ಜಾಲವಿದ್ದರೆ,ಇದರ ಪ್ರಯೋಜನ ಸಿಗುವ ಸಾಧ್ಯತೆ ಹೆಚ್ಚು.
--------------------------------------------
ಜನಪ್ರಿಯ ಪಾಸ್‌ವರ್ಡ್ ಯಾವುದು?
ಈಗ ಅಂತರ್ಜಾಲದ ಖಾತೆಗಳ ಬಳಕೆ ಹೆಚ್ಚುತ್ತಿದೆ. ಪ್ರತಿ ಖಾತೆಯನ್ನು ನೋಂದಾಯಿಸುವಾಗ,ಗುಪ್ತಪದವನ್ನು ನೀಡಿ, ಖಾತೆಯ ಬಳಕೆಯನ್ನು ಸುಭದ್ರಗೊಳಿಸುವ ಪ್ರಯತ್ನ ನಡೆಯುತ್ತದೆ. ಆದರೆ ಬಳಕೆದಾರರಿಗೆ ಈ ಗುಪ್ತಪದಗಳನ್ನು ನೆನಪಿಡುವುದೇ ತಲೆನೋವಿನ ಕೆಲಸ.ಅದಕ್ಕಾಗಿ ಹೆಚ್ಚಿನ ಬಳಕೆದಾರರು ಸುಲಭವಾಗಿ ನೆನಪಿಡುವ ಗುಪ್ತಪದಗಳನ್ನು ನೀಡುವುದೇ ಹೆಚ್ಚು.whatismypass.com ನಡೆಸಿದ ಸಮೀಕ್ಷೆಯ ಪ್ರಕಾರ,123456 ಅತ್ಯಂತ ಹೆಚ್ಚು ಬಳಕೆಯಾಗುವ ಗುಪ್ತಪದ.ನಂತರದ ಸ್ಥಾನದಲ್ಲಿ ಪಾಸ್‌ವರ್ಡ್ ಎನ್ನುವ ಪದವೇ ಬಳಕೆಯಾಗುತ್ತದಂತೆ. ಜನರು ತಮ್ಮ ಹೆಸರನ್ನೇ ಗುಪ್ತಪದವಾಗಿ ಬಳಸುವ ಚಾಳಿಯೂ ಇದೆಯೆನ್ನುವುದು ಸಮೀಕ್ಷೆಯಿಂದ ವ್ಯಕ್ತವಾಗಿದೆ.
--------------------------------------------
ಟ್ವಿಟರ್‌ನಲ್ಲಿ  ಬಿಜೆಪಿ,ಕೃಷ್ಣ
ಟ್ವಿಟರಿನಲ್ಲಿ ಖಾತೆ ಹೊಂದಿ, ತಮ್ಮ ಚುನಾವಣಾ ಪ್ರಚಾರದಲ್ಲಿ ಲಾಭ ಪಡೆಯುವುದು ಸುಲಭವೆಂದು ಅಮೆರಿಕನ್ ಅಧ್ಯಕ್ಷೀಯ ಚುನಾವಣೆ ವೇಳೆ ಗೊತ್ತಾಯಿತು.ಬರಾಕ್ ಒಬಾಮಾ ಅವರಿಗೆ ಲಕ್ಷಗಟ್ಟಲೆ ಅಭಿಮಾನಿ ಹಿಂಬಾಲಕರಿದ್ದರು.ಇದರಿಂದ ಅವರು ನೀಡುವ ಟ್ವಿಟ್‌ಗಳು ಕ್ಷಣಮಾತ್ರದಲ್ಲಿ ಹಿಂಬಾಲಕರಿಗೆ ತಲುಪುತ್ತಿದ್ದುವು.ಮೊಬೈಲ್ ಸಾಧನದ ಮೂಲಕವೂ ಟ್ವಿಟರ್ ಸಂದೇಶಗಳನ್ನು ಸಾಧ್ಯವೆನ್ನುವುದು,ಇದರ ಜನಪ್ರಿಯತೆಗೆ ಮತ್ತೊಂದು ಕಾರಣ.ಭಾರತದ ಸಂಸತ್ತಿನ ಮಹಾಚುನಾವಣೆಯಲ್ಲೂ ಈ ಪ್ರಯೋಗ ಮರುಕಳಿಸುವ ಲಕ್ಷಣ ಕಾಣುತ್ತಿದೆ.ಬಿಜೆಪಿ ಪಕ್ಷದ(http://twitter.com/bjp_) ಟ್ವಿಟರ್ ಖಾತೆಯೀಗ ಟ್ವಿಟರಿನಲ್ಲಿ ತೆರೆದಿದೆ.ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ(http://twitter.com/SMKrishnaCong) ಅವರ ಹೆಸರು ಹೊತ್ತ ಟ್ವಿಟರ್ ಖಾತೆಯೂ ಚಲಾವಣೆಯಲ್ಲಿದೆ.ಅಂದ ಹಾಗೆ ಟ್ವಿಟರ್ ಈಗ ಮೂರು ವರ್ಷ ಕಳೆದು ನಾಲ್ಕನೇ ವರ್ಷಕ್ಕೆ ಕಾಲಿರಿಸಿದೆ.

ashokworld
udayavani

-------------------------------------------------------
*ಅಶೋಕ್‌ಕುಮಾರ್ ಎ