ಉಗ್ರರಿಂದ ಹೊಸ ಕಾರ್ಯತಂತ್ರ : ದೇಶದೆಲ್ಲೆಡೆ ಕಟ್ಟೆಚ್ಚರ ಅಗತ್ಯ

ಉಗ್ರರಿಂದ ಹೊಸ ಕಾರ್ಯತಂತ್ರ : ದೇಶದೆಲ್ಲೆಡೆ ಕಟ್ಟೆಚ್ಚರ ಅಗತ್ಯ

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ಹಿಂಪಡೆದು ಅಲ್ಲಿನ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಯ ಹೊಣೆಯನ್ನು ಕೇಂದ್ರೀಯ ಪಡೆಗಳ ಸುಪರ್ದಿಗೆ ಒಪ್ಪಿಸಿದಾಗಿನಿಂದ ಅಲ್ಲಿನ ಒಟ್ಟಾರೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಇದರ ಹೊರತಾಗಿಯೂ ಅಲ್ಲೊಂದು ಇಲ್ಲೊಂದು ಎಂಬಂತೆ ಉಗ್ರರು ದುಷ್ಕೃತ್ಯಗಳನ್ನು ನಡೆಸಿ ಶಾಂತಿಯನ್ನು ಕದಡುವ ಪ್ರಯತ್ನ ನಡೆಸುತ್ತಲೇ ಬಂದಿದ್ದರೂ ಉಗ್ರರನ್ನು ಮಟ್ಟ ಹಾಕುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದೆ.

ಈ ಎಲ್ಲ ಕ್ರಮಗಳಿಂದಾಗಿ ಜಮ್ಮು-ಕಾಶ್ಮೀರ ಈಗ ದೇಶ ಮಾತ್ರವಲ್ಲದೆ ಜಾಗತಿಕ ವ್ಯವಹಾರಗಳಿಗೆ ತೆರೆಯಲ್ಫಟ್ಟಿದ್ದು ಈ ಪ್ರದೇಶದ ಬಗೆಗೆ ಜನತೆಯಲ್ಲಿದ್ದ ಆತಂಕವೆಲ್ಲ ದೂರವಾಗಿದೆ. ಈ ಬೆಳವಣಿಗೆಗಳಿಂದ ಭಯೋತ್ಪಾದಕ ಸಂಘಟನೆಗಳು ಮತ್ತು ಉಗ್ರರಿಗೆ ಸದಾ ಆಶ್ರಯ ನೀಡುವ ಮೂಲಕ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರಣೆ ಮತ್ತು ಆರ್ಥಿಕ ನೆರವು ನೀಡುತ್ತಾ ಬಂದಿರುವ ಪಾಕಿಸ್ತಾನ ವಿಚಲಿತವಾಗಿದೆ. ಈ ಕಾರಣದಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಲೇ ಬಂದಿರುವ ಪಾಕಿಸ್ತಾನದ ಐ ಎಸ್ ಐ ಮತ್ತು ಇನ್ನಿತರ ಭಯೋತ್ಪಾದಕ ಸಂಘಟನೆಗಳು ತಮ್ಮ ತಂತ್ರಗಾರಿಕೆಯನ್ನು ಸದಾ ಬದಲಾಯಿಸುತ್ತಿವೆ. ಆದರೆ ಭಾರತೀಯ ಸೇನೆ, ಭಯೋತ್ಪಾದಕರ ಎಲ್ಲ ಸಂಚು ಷಡ್ಯಂತ್ರಗಳನ್ನು ಬಯಲು ಮಾಡಿ, ಯಶಸ್ವಿಯಾಗಿ ಎದುರಿಸಿದೆ.

ಈಗ ಐ ಎಸ್ ಐ ಮತ್ತು ಭಯೋತ್ಪಾದಕ ಸಂಘಟನೆಗಳು ತಮ್ಮ ಜಾಲವನ್ನು ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿಸಲು ಮತ್ತು ವಿಸ್ತರಿಸುವ ಕಾರ್ಯತಂತ್ರದ ಭಾಗವಾಗಿ ಮಹಿಳೆಯರು ಅದರಲ್ಲೂ ಮುಖ್ಯವಾಗಿ ಬಾಲಕಿಯರು ಮತ್ತು ಬಾಲಾಪರಾಧಿಗಳನ್ನು ಬಳಸಿಕೊಳ್ಳುತ್ತಿರುವುದು ಬಂಧಿತರ ವಿಚಾರಣೆ ವೇಳೆ ಬಯಲಾಗಿದೆ. ಇದು ಭದ್ರತಾ ಪಡೆಗಳಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ. ಮಕ್ಕಳನ್ನು ಭಯೋತ್ಪಾದನಾ ಜಾಲದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅವರ ಭವಿಷ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಭಯೋತ್ಪಾದಕ ಸಂಘಟನೆಗಳ ಈ ಷಡ್ಯಂತ್ರವನ್ನು ಗಂಭೀರವಾಗಿ ಪರಿಗಣಿಸಲೇ ಬೇಕಿದೆ ಎಂದು ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿಗಳು ಕಿವಿಮಾತು ಹೇಳಿದ್ದಾರೆ. 

ಕಾಶ್ಮೀರ ಕಣಿವೆ ಮತ್ತು ಗಡಿ ಭಾಗಗಳಲ್ಲಿ ಭದ್ರತಾ ಕಾರ್ಯದಲ್ಲಿ ತೊಡಗಿಕೊಂಡಿರುವ ಭಾರತೀಯ ಸೇನೆಯ ವಿವಿಧ ಪಡೆಗಳ ಹಿರಿಯ ಅಧಿಕಾರಿಗಳ ಪ್ರಕಾರ ಐ ಎಸ್ ಐ ಮತ್ತು ಉಗ್ರರು ಸಂದೇಶ, ಶಸ್ತ್ರಾಸ್ತ್ರ ರವಾನೆ, ಮಾದಕ ಪದಾರ್ಥಗಳ ಸಾಗಣೆಗೆ ಈ ಹಿಂದೆ ಅನುಸರಿಸುತ್ತಿದ್ದ ಸಾಂಪ್ರದಾಯಿಕ ಪದ್ಧತಿಗಳಾದ ಮೊಬೈಲ್ ಮೂಲಕ ಸಂವಹನ, ತಂತ್ರಜ್ಞಾನ ಆಧಾರಿತ ಗೂಢಾಚಾರಿಕೆ ಮತ್ತು ಸ್ಥಳೀಯವಾಗಿ ಸಂದೇಶ ವಾಹಕರ ಬಳಕೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ. ಈ ಉಗ್ರರು ಮಹಿಳೆಯರು ಮತ್ತು ಬಾಲಾಪರಾಧಿಗಳನ್ನು ಈ ಎಲ್ಲ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾರಂಭಿಸಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ತೀವ್ರ ನಿಗಾ ಇಡುವ ಜತೆಯಲ್ಲಿ ಮಕ್ಕಳು ಹಾದಿತಪ್ಪದಂತೆ ಎಚ್ಚರ ವಹಿಸಬೇಕಿದೆ. ರಂಗೋಲಿಯೆಡೆಗೆ ತೂರುವ ಉಗ್ರರ ಈ ಪ್ರಯತ್ನವನ್ನು ಭದ್ರತಾ ಪಡೆಗಳು ಪ್ರಾಥಮಿಕ ಹಂತದಲ್ಲೇ ವಿಫಲಗೊಳಿಸಿ, ಜಮ್ಮು-ಕಾಶ್ಮೀರದಲ್ಲಿ ಶಾಂತಿಗೆ ಭಂಗ ಬಾರದಂತೆ ಎಚ್ಚರ ವಹಿಸಬೇಕು. ಅಲ್ಲದೆ ಇದೇ ಕಾರ್ಯತಂತ್ರವನ್ನು ಇತರ ಉಗ್ರ ಸಂಘಟನೆಗಳು ಅನುಸರಿಸುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ದೇಶದೆಲ್ಲಡೆ ಕಟ್ಟೆಚ್ಚರ ವಹಿಸಬೇಕಿದೆ. 

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೨-೦೬-೨೦೨೩  

ಚಿತ್ರ ಕೃಪೆ: ಅಂತರ್ಜಾಲ ತಾಣ