ಉತ್ತಮ ಕವಿಯಾಗಲು ಪಂಚ ಸೂತ್ರಗಳು!

ಉತ್ತಮ ಕವಿಯಾಗಲು ಪಂಚ ಸೂತ್ರಗಳು!

ಬರಹ

(ನಗೆ ನಗಾರಿ ಸಾಹಿತ್ಯ ಬ್ಯೂರೋ)

 

ಜಗತ್ತಿನ
ಎಲ್ಲಾ ವೃತ್ತಿಗಳನ್ನು ಯಶಸ್ವಿಯಾಗಿ ಮಾಡುವುದಕ್ಕೆ ಆವಶ್ಯಕವಾದ ಸೂತ್ರಗಳನ್ನು
ರೂಪಿಸುತ್ತಾ ಅವುಗಳನ್ನು ಜಗತ್ತಿನಾದ್ಯಂತ ಹೇಳಿಕೊಡುತ್ತಾ ಹೆಸರುವಾಸಿಯಾದ ಸಾಮ್ರಾಟರು
ನಗೆ ನಗಾರಿಯ ಕಛೇರಿಗೆ ಭೇಟಿಯಿತ್ತಾಗ ಅವರಿಗೆ
ಉತ್ತಮ ಕವಿಯಾಗುವುದಕ್ಕೆ ನಿಮ್ಮ ಸಲಹೆ ಏನು?’ ಎಂದು ಒಬ್ಬ ಉದಯೋನ್ಮುಖ ಕವಿ ಹಾಗೂ ಹಿರಿಯ ಪತ್ರಕರ್ತರು ಕೇಳಿದರು. ಕೆಲ ಸಮಯ ಗಾಢವಾದ ಆಲೋಚನೆಯಲ್ಲಿ ಮುಳುಗಿ ಎದ್ದ ಸಾಮ್ರಾಟರು ಉತ್ತಮ ಕವಿಗೆ ಆವಶ್ಯಕವಾದ ಪಂಚ ಸೂತ್ರಗಳನ್ನು ನೀಡಿದರು.


 

poet

 

. ಮುಖವೇ ಪ್ರತಿಭೆಯ ಕನ್ನಡಿ

 

ನಮ್ಮೊಳಗಿನ ಪ್ರತಿಭೆಯು ಎಂಥದ್ದು ಎಂಬುದು ನಮ್ಮ ಮುಖ್ವಾನ್ನು ನೋಡಿದ ಕ್ಷಣವೇ ಎಲ್ಲರಿಗೂ ಅರಿವಿಗೆ ಬಂದುಬಿಡಬೇಕು. ಹೀಗಾಗಿ ಕವಿಯಾಗಲು ಬಯಸುವ ಪ್ರತಿಯೊಬ್ಬರು ತಮ್ಮ ವೇಷಭೂಷಣ, ಕೇಶವಿನ್ಯಾಸ, ಭಾಷೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಕವಿಗಳಿಗೊಪ್ಪುವ ಕುರುಚಲು ಗಡ್ಡ, ಮೂಗಿನ ಮೇಲೊಂದು ಕನ್ನಡಕ, ದೊಗಲೆ ಜುಬ್ಬ, ಕೆಳಗೆ ಅಂತಸ್ಥಿಗೆ ತಕ್ಕ ಹಾಗೆ ಜೀನ್ಸ್ ಪ್ಯಾಂಟು ಇಲ್ಲವೇ ಸಾಧಾರಣ ಪ್ಯಾಂಟು, ಕಟಿಂಗಿನ ಮುಖ ಕಾಣದ ಪೊದೆ ಕೂದಲು, ಹೆಗಲ ಮೇಲೊಂದು ಜೋಳಿಗೆಯಂತಹ ಚೀಲ ಅದರೊಳಗೆ ಯಾರಿಗೂ ಅರ್ಥವಾಗದ ಗಹನವಾದ ವಿಷಯದ ಬಗೆಗಿನ ಪುಸ್ತಕಗಳು. ಬೆರಳುಗಳ ನಡುವೆ ಸಿಗರೇಟು ಇಲ್ಲವೇ ನಶ್ಯಈ ರೀತಿಯ ವೇಷ ಭೂಷಣ ಅಭ್ಯಾಸ ಮಾಡಿಕೊಳ್ಳಬೇಕು. ನಿಜ, ಹೀಗೆ ತಯಾರಾಗಿ ನಿಂತ ತಕ್ಷಣ ಕವಿತೆ ಹುಟ್ಟಿಬಿಡುವುದಿಲ್ಲ. ಆದರೆ ನೀವು ಒಬ್ಬ ಉತ್ತಮ ಕವಿಯಾಗಿ ಕಾಣಿಸಿಕೊಳ್ಳುತ್ತೀರಿ. ಕಾಲಿಗೆ ಪ್ಯಾಡು,ಕೈಗೆ ಗ್ಲೌಸು ಹಾಕಿಕೊಂಡು ನಿಂತವನನ್ನು ಕ್ರಿಕೆಟ್ ಪ್ಲೇಯರ್ ಎಂದು ಗುರುತಿಸಿಬಿಡುವ ಹಾಗೆ ನಿಮ್ಮನ್ನು ಕವಿ ಎಂದು ಕರೆಯತೊಡಗುತ್ತಾರೆ.

 

. ಸುಲಿದ ಬಾಳೆ ಹಣ್ಣು ವರ್ಜ್ಯ

 

ನಿಮ್ಮ ವೇಷ ಭೂಷಣದ ಮೂಲಕ ಒಮ್ಮೆ ನಿಮ್ಮನ್ನು ಕವಿ ಎಂದು ಜನರು ಒಪ್ಪಿಕೊಂಡು ಬಿಟ್ಟ ನಂತರ ನೀವು ನುಡಿದದ್ದೆಲ್ಲವೂ ಮಹಾಕಾವ್ಯವಾಗುತ್ತದೆ. ನೀವು ಕನವರಿಸಿದ್ದೆಲ್ಲವೂ ಕವನ ಸಂಕಲನಗಳಾಗುತ್ತವೆ. ಆದರೆ ಇಲ್ಲಿ ಒಂದು ರಹಸ್ಯಮಯವಾದ ಸೂತ್ರವನ್ನು ಗಮನಿಸಬೇಕು. ಒಮ್ಮೆ ನಿಮಗೆ ಕವಿ ಎಂಬ ಮನ್ನಣೆ ಸಿಕ್ಕ ನಂತರ ನೀವು ಎಲ್ಲರಿಗೂ ಅರ್ಥವಾಗುವಂತಹ, ಎಲ್ಲರೂ ಅರ್ಥ ಮಾಡಿಕೊಂಡು ಸವಿದು ಮೆಚ್ಚಬಹುದಾದಂತಹ ಕವನಗಳನ್ನು ಬರೆದುಬಿಡಬಾರದು.ಇದರಿಂದ ನೀವು ಕೇವಲ ಕ್ಯಾಸೆಟ್ ಕವಿಯಾಗಿಬಿಡುವಿರಿ ಇಲ್ಲವೇ ಹನಿ-ಮಿನಿ ಕವಿಯಾಗುವಿರಿ. ಯಾರಿಗೂ ಅರ್ಥವಾಗದ, ಭಾಷೆಗೊತ್ತಿದ್ದರೂ ಅರ್ಥ ತಿಳಿಯಲು ಶೀರ್ಷಾಸನ ಹಾಕಿ ಓದಬೇಕಾದ ಸಾಲುಗಳನ್ನು ರಚಿಸಬೇಕು. ಈ ಸೂತ್ರದನ್ವಯ ರಚಿತವಾದ ನಮ್ಮ ಇತ್ತೀಚಿನ ಕವನದ ತುಣುಕೊಂದನ್ನು ಗಮನಿಸಬಹುದು...

 

ಅಂಡಾಂಡ ಪಿಂಡಾಂಡ ಬ್ರಹ್ಮಾಂಡ ಒಡೆದೊಡೆದು

ಹೊಡೆದೊಡೆದು, ಉರುಳುರುಳಿ

ಹಬೆಯ ಕಾವು ಏರಿ, ಎಲೆಯ ನಡುವೆ ಜಾರಿ

ಸುರಿವ ಮಳೆಯ ಮೋಹ,

ಬಿಸಿಲ ಬಯಲು ನಿರ್ಮೋಹ, ಜಾಣ

ಕಾಜಾಣ, ಸಚಿನ್ನನ ನಲವತ್ತನೆ ಶತಕ

 

. ಗಾತ್ರಮುಖ್ಯವಲ್ಲ

 

ಹನಿ
ಮಿನಿ ಕವನಗಳನ್ನು ಗೀಚಿದವರು ಎಂದಿಗೂ ಕವಿಯಾಗುವುದಕ್ಕೆ ಸಾಧ್ಯವಿಲ್ಲ ಎಂದು ಹಿರಿಯ
ಕವಿಗಳು ಆಗಾಗ ಪೇಚಾಡುವುದನ್ನು ನೀವು ಪತ್ರಿಕೆಗಳವರದಿಗಳಲ್ಲಿ ಗಮನಿಸಿರಬಹುದು
. ಅದು ಶುದ್ಧ ಭ್ರಮೆ. ಈಗಿನ ವೇಗದ ಯುಗದಲ್ಲಿ ಓದುಗರ ಸಮಯ ಬಹಳ ಮುಖ್ಯವಾದದ್ದು. ಹೀಗಾಗಿ ಪೇಜುಗಟ್ಟಲೆ ಬರೆದು(ಕೊರೆದು) ಓದುಗರ ಒತ್ತಡ ನಿರ್ವಹಣಾ ಕೌಶಲವನ್ನು ಪರೀಕ್ಷಿಸುವುದಕ್ಕಿಂತ, ಎರಡು ಮೂರು ನಾಲ್ಕು ಸಾಲುಗಳಲ್ಲಿ ಕವನಕ್ಕೆ ಅಂತ್ಯ ಹಾಡುವುದು ಸೂಕ್ತ. ನೀವು ಬರೆದದ್ದು ಯಾವುದೂ ಭೂಮಿಯ ಮೇಲಿನ ಯಾರಿಗೂ ಅರ್ಥವಾಗುವುದಿಲ್ಲ ಎಂದ ಮೇಲೆ ನಲವತ್ತು ಸಾಲು ಬರೆಯುವ ಶ್ರಮವೇಕೆ?

 

 

ಹ್ಹಾ! ಲಕ್ಷ್ನಣ ಸೀತಾ

ಧೋನಿ ಟಾಸ್ ಸೋತಾ!

 

 

ಎಂಬ ನಮ್ಮ ಸರಳವಾದ ಕವಿತೆಯನ್ನೇ ಗಮನಿಸಿ.

ವಿಮರ್ಶಕರು ಇದನ್ನು ಕಂಡ ಬಗೆ ನೋಡಿ... ಮೇಲ್ನೋಟಕ್ಕೆ ಇದು ಅತ್ಯಂತ ಬಾಲಿಶವಾಗಿ ಸರಳವಾಗಿ ಕಂಡುಬಂದರೂ ಇದರ ಅರ್ಥವ್ಯಾಪ್ತಿ, ಬೀಸು ಬಹುದೊಡ್ಡದು. ಕವಿಯು ಇಲ್ಲಿ ಪೌರಾಣಿಕ ಪ್ರಜ್ಞೆಯನ್ನು ವರ್ತಮಾನಕ್ಕೆ ಎಳೆದುತರುವ ಪ್ರಯತ್ನ ಮಾಡಿದ್ದಾರೆ. ಮಾಯಾಮೃಗದ ಬೆನ್ನಟ್ಟಿದ ಶ್ರೀರಾಮ ಇಂದಿನ ದಿನಗಳಲ್ಲಿ ಯಶಸ್ಸಿನ ಬೆನ್ನುಹತ್ತಿದ ಯಾವುದೇ ವ್ಯಕ್ತಿಯ ಪ್ರತಿನಿಧಿಯಾಗಬಹುದು. ಇನ್ನೇನು ಬಾಣ ಚಿಮ್ಮಿ ಮಾಯಾಮೃಗದ ಎದೆ ಹೊಕ್ಕು ಅದು ಕೈವಶವಾಗಬೇಕು ಎನ್ನುವಷ್ಟರಲ್ಲಿ ಅದು ರಾಮನ ಪರಿವಾರವನ್ನು ಆತಂಕದಲ್ಲಿ ಕೆಡವುದಕ್ಕೆ ಹೀಗೆ ಕೂಗುತ್ತದೆ. ಇಲ್ಲಿ ಕವಿಯ ಸೃಜನಶೀಲತೆಯ ಸತ್ವ ಪರೀಕ್ಷೆ ಅಡಗಿದೆ. ಮಾನ್ಯರು ಅದನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಧೋನಿ ಟಾಸ್ ಸೋತ ಎಂದು ಕೂಗುವ ಮಾಯಾಮೃಗವು ಮನೆಯಲ್ಲಿರುವ ಲಕ್ಷಣ ಹಾಗೂ ಸೀತೆಯರಲ್ಲಿ ಎಷ್ಟು ಆತಂಕ ಹುಟ್ಟಿಸಬಹುದು ಎಂಬ ರೂಪಕ ಈ ಕಾಲಕ್ಕೆ ತಕ್ಕನಾದದ್ದು.

 

 

. ಉತ್ತಮ ಸಾಂಘಿಕ ಜೀವನ

 

ನಮ್ಮ
ಕವನಗಳಿಗೆಲ್ಲಾ ವಿಮರ್ಶಕರು ಇರುವ ಇಲ್ಲದಿರುವ ಅರ್ಥಗಳನ್ನೆಲ್ಲಾ ಆರೋಪಿಸಿ ಲೈಟ್
ಪದ್ಯಗಳನ್ನೂ ಹೆವಿ ಮಾಡುವುದರ ಹಿಂದಿರುವ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು
. ಮನುಷ್ಯ ಸಂಘ ಜೀವಿ. ಆತ ಏಕಾಂಗಿಯಾಗಿ ಬದುಕುವುದು ಸಮಾಜ ವಿರೋಧಿ. ಹೀಗಾಗಿ ಕವಿ ತಾನೊಬ್ಬನೇ ತಿಂದು, ಕವನ ಬರೆಯುತ್ತಾ ಅದನ್ನು ಇತರರ ಮುಂದೆ ಕೊರೆಯುತ್ತಾ ಕೂರುವುದು ಅಪರಾಧ. ಕವಿಯಾದವನು ತನ್ನ ಸುತ್ತ ಯಾವಾಗಲೂ ಒಂದು ಸಂಘವನ್ನು ಪಾಲಿಸುತ್ತಿರಬೇಕು. ಮಾಧ್ಯಮಗಳಲ್ಲಿ  ಕೆಲಸಮಾಡುವವರು, ಈ ಮುಂಚೆ ವಿಮರ್ಶಕರು ಎಂದು ಹೆಸರು ಮಾಡಿದವರು, ಶಾಲಾ ಕಾಲೇಜುಗಳ ಉಪನ್ಯಾಸಕರು ಇಂಥವರು ಹೆಚ್ಚುಮಂದಿ ಗುಂಪಿನಲ್ಲಿದ್ದಷ್ಟೂ ಚೆನ್ನ. ಈ ಗುಂಪನ್ನು ನಿಮ್ಮ ಪ್ರತಿಭೆ, ಪಾಂಡಿತ್ಯ, ಸಹೃದಯತೆಯಿಂದಲೇ ಬೆಳೆಸಬೇಕು ಎಂದೇನಿಲ್ಲ. ಯಥಾಶಕ್ತಿ ದ್ರವ್ಯ, ಪಾನೀಯ ಖರ್ಚು ಮಾಡಿಯೂ ಉಳಿಸಿಕೊಳ್ಳಬಹುದು.

ಹೀಗೆ ಸಂಘ ಜೀವನದಲ್ಲಿ ಹುಟ್ಟಿದ ಕವನಗಳನ್ನು ಇವರು ನಾಲ್ಕೂ ದಿಕ್ಕಿಗೆ ವ್ಯಾಪಿಸುವಂತೆ ಪ್ರಚುರ ಪಡಿಸುತ್ತಾರೆ.

 

. ಹೊಟ್ಟೆ ಪಾಡಿಗೆ ಅನ್ಯವೃತ್ತಿ

 

ಈ ಐದನೆಯ ಸೂತ್ರವು ಬಹುಮುಖ್ಯವಾದದ್ದು ಹಾಗೂ ಸಾಹಿತ್ಯ ಲೋಕದಲ್ಲಿ ದೀರ್ಘ ಕಾಲ ತಳವೂರಲು ಅತ್ಯವಶ್ಯಕವು. ನೀವು ಅದೆಷ್ಟೋ ಪ್ರಸಿದ್ಧ ಕವಿಯಾಗಿರಿ, ಎಷ್ಟೇ ಬಹುಮಾನಗಳನ್ನು ಗೆದ್ದು ಗುಡ್ಡೆ ಹಾಕಿಕೊಂಡಿರಿ, ಅದೆಷ್ಟೇ ಕವನ ಸಂಕಲನಗಳನ್ನು ಪ್ರಕಟಿಸಿರಿ, ನಿಮ್ಮ ಹೊಟ್ಟೆ ಪಾಡಿಗಾಗಿ ಬೇರೊಂದು ಸುಭದ್ರವಾದ ಉದ್ಯೋಗವನ್ನು ಮಾಡಿ. ಬ್ಯಾಂಕ್ ಮೇನೇಜರ್ ಆಗಿ, ಕಾಲೇಜಿನಲ್ಲಿ ಉಪನ್ಯಾಸಕರಾಗಿ ಏನಾದರೂ ಆಗಿ. ಸರಕಾರಿ ನೌಕರಿ ಮಾಡುವುದು ಎಲ್ಲಕ್ಕಿಂತ ಉತ್ತಮ. ನಿಮ್ಮ ಭವಿಷ್ಯ ಭದ್ರವಾಗಿರುತ್ತದೆ ಎಂಬುದು ಒಂದು ಫಾಯಿದೆಯಾದರೆ, ನಿಮ್ಮ ಸಾಹಿತ್ಯ ಕೃಷಿಗೆ ಕಛೇರಿ ಸಮಯದಲ್ಲೂ ಭಂಗ ಬರುವುದಿಲ್ಲ ಎಂಬುದು ಮತ್ತೊಂದು ಫಾಯಿದೆ.