ಎಂಟರ್ ದಿ ಡ್ರಾಗನ್

ಎಂಟರ್ ದಿ ಡ್ರಾಗನ್

ಪುಸ್ತಕದ ಲೇಖಕ/ಕವಿಯ ಹೆಸರು
ಕುಂ. ವೀರಭದ್ರಪ್ಪ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೫೦.೦೦ , ಮುದ್ರಣ: ಜೂನ್ ೨೦೧೮

‘ಎಂಟರ್ ದಿ ಡ್ರಾಗನ್’ ಇದು ಕುಂ.ವೀ. ಎಂದೇ ಖ್ಯಾತರಾದ ಕುಂ.ವೀರಭದ್ರಪ್ಪ ಅವರ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಎಂಟರ್ ದಿ ಡ್ರಾಗನ್, ಪಂಪಣ್ಣನ ಗರ್ವಭಂಗ, ಬಟ್ಟೆಹೀನನ ಮನೆಯ..., ಮಸ್ತಾನ್ ಎಂಬ ‘ಆಂಧ್ರ ಫುಲ್ ಮೀಲ್ಸ್', ರತ್ನಳೆಂಬೋ ಬಾಲಕಿಯೂ..., ರಾಧಮ್ಮನ ಪ್ರಣಯ ಪ್ರಸಂಗ, ಅವನು ಮತ್ತು ಅವಳು, ವಿದುಷಿ, ನಂಜು, ತೇಲಲರಿಯರು, ಮುಳುಗಲೂ ಅರಿಯರು, ಎಣ್ಣೆ ಎಣ್ಣೇನೆ...ತುಪ್ಪ ತುಪ್ಪಾನೆ!, ಅಪಸ್ಮಾರ, ಸುಪಾರಿ, ಒತ್ತುವರಿ, ಕರುಳಿನ ಕರೆ, ಸಂಬಂಧ, ಸಿದ್ಧಾರೂಢ ಪುರಾಣವು, ನ್ಯೂ ಭಾರತ್ ಟಾಕೀಸ್, ಶ್ರೀ ಶೈಲ ಮಲ್ಲಿಕಾರ್ಜುನ ಹೇರ್ ಕಟ್ಟಿಂಗ್ ಸಲೂನ್ ಎಂಬ ೧೯ ಪುಟ್ಟ ಕಥೆಗಳಿವೆ. 

ಕುಂ.ವೀ. ಅವರು ತಮ್ಮ ಮಾತಿನಲ್ಲಿ ಈ ಪುಸ್ತಕವನ್ನು ಹೊರ ತರಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಈ ಕಥೆಗಳನ್ನು ‘ಅವಧಿ’ ಎಂಬ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟಿಸಿದ ಜಿ.ಎನ್. ಮೋಹನ್ ಅವರು ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. 

‘ಕುಂವೀ ಎಂಬ ಕಣ್ಣೋಟಕ್ಕೆ ಸಲಾಂ’ ಎಂಬ ತಮ್ಮ ಬೆನ್ನುಡಿಯಲ್ಲಿ “ಒಂದೇ ಮಾತಿನಲ್ಲಿ ನನ್ನ ತಲೆಮಾರಿಗೆ ಕುಂವೀ ಏನು ಎಂದು ಬಣ್ಣಿಸುವುದಾದರೆ ಅವರು ನಮ್ಮ ಯೌವ್ವನ, ಅವರ ಕಥೆ, ಕಾದಂಬರಿ, ಕವಿತೆ ನಮ್ಮನ್ನು ಆವರಿಸಿದೆ. ಸಂಭ್ರಮಿಸುವಂತೆ ಮಾಡಿದೆ, ನಿಟ್ಟುಸಿರನ್ನು ಬೆಸುಗೆ ಹಾಕಿದೆ.

ಅವರ ದೋಮ ಮತ್ತಿತರ ಕಥೆಗಳು, ಭಗವತಿ ಕಾಡು, ಕಪ್ಪು, ಬೇಲಿ ಮತ್ತು ಹೊಲ, ಕೆಂಡದ ಮಳೆ, ಕೊಟ್ರ ಹೈಸ್ಕೂಲ್ ಗೆ ಸೇರಿದ್ದು ನನ್ನೊಳಗೆ ಹುಟ್ಟು ಹಾಕಿದ ತಲ್ಲಣಗಳನ್ನು ಮರೆಯಲಾರೆ. ಅವರ ಕಥೆ, ಕಾದಂಬರಿ ನಮ್ಮ ಬದುಕಿಗೊಂದು ನೋಟವನ್ನು ಕೊಟ್ಟಿದೆ.ಅವರ ಕವಿತೆಯ ಸಾಲುಗಳಂತೆ ಅವರ ಬರಹದ ಪ್ರಾಕಾರ ಯಾವುದೇ ಇರಲಿ ಅದು ಒಡಲ ಗುಗ್ಗುಳದೊಳಗೆ ನಿಟ್ಟುಸಿರು ಚೆಲ್ಲುವಂತೆ ಮಾಡುತ್ತದೆ.

ಕನ್ನಡ ಸಾಹಿತ್ಯ ಲೋಕ ಕಾಣದ ಒಂದು ಜಗತ್ತು ಕುಂವೀ ಬರಹಗಳಲ್ಲಿದೆ. ಕುಂವೀ ಅವರು ನನಗೆ ಮುಖ್ಯವಾಗುವುದು ಅವರು ನಮ್ಮ ಮುಂದೆ ಇಡುತ್ತಿರುವ ಭಾರತ ಯಾವುದು ಎನ್ನುವ ಕಾರಣಕ್ಕಾಗಿ ಸಹಾ. ಒಂದು ಅರ್ಥದಲ್ಲಿ ಇವರು ಕನ್ನಡ ಸಾಹಿತ್ಯಲೋಕದ ಪಿ.ಸಾಯಿನಾಥ್, ಅಧೋ ಜಗತ್ತಿನ ಅಕಾವ್ಯವನ್ನು ಮುಂದಿಡಲು ಪಿ.ಸಾಯಿನಾಥ್ ಪತ್ರಿಕೋದ್ಯಮವನ್ನು ಪ್ರವೇಶಿಸಿದರೆ, ಕುಂವೀ ಸಾಹಿತ್ಯವನ್ನು ಆಶ್ರಯಿಸಿದ್ದಾರೆ. ‘ಎಂಟರ್ ದಿ ಡ್ರಾಗನ್' ನಮ್ಮೊಳಗೆ ಮತ್ತೊಮ್ಮೆ ನಾವು ಕಾಣದ ಜಗತ್ತಿನ ದರ್ಶನ ಮಾಡಿಸುತ್ತಿದೆ. ಕುಂವೀ ಎಂಬ ಕಣ್ಣೋಟಕ್ಕೆ ಸಲಾಂ." ಎಂದಿದ್ದಾರೆ. 

ಕುಂವೀ ಅವರು ೨೦೨ ಪುಟಗಳ ಈ ಪುಸ್ತಕವನ್ನು ಕೂಡ್ಲಿಗಿ ತಾಲೂಕಿನ ಜನಪರ ತಹಶೀಲ್ದಾರರಾದ ಶ್ರೀ ಶಿವಮೊಗ್ಗ ಜವರೇಗೌಡ ಇವರಿಗೆ ಅರ್ಪಿಸಿದ್ದಾರೆ. ಕಥೆಗಳು ಪುಟ್ಟ ಪುಟ್ಟದಾಗಿರುವುದರಿಂದ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.