ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)

ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ನಿಜಕ್ಕೂ ಒಂದು ಕಾಲವಿತ್ತು.

ಆಗ ಮಳೆ ಸರಿಯಾಗಿ ಬರುತ್ತಿತ್ತು. ಅಂದರೆ ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ, ನಾವು ಹೇಗೆ ಇಷ್ಟಪಡುತ್ತೇವೆಯೋ ಹಾಗೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಮಳೆ ನಕ್ಷತ್ರಗಳು, ತಿಥಿಗಳು ರೂಪಿತವಾದವು. ಇಂತಿಂಥ ಮಳೆ ಇಂತಿಂಥ ದಿನದಲ್ಲಿ ಪ್ರಾರಂಭವಾಗಿ ಇಷ್ಟು ದಿನಗಳವರೆಗೆ ಬರುತ್ತದೆ. ನಂತರ ಇಂತಹ ಮಳೆ ಪ್ರವೇಶ ಮಾಡುತ್ತದೆ ಎಂದು ಪಂಚಾಂಗ ನೋಡದೇ ಹೇಳುವಷ್ಟು ಕರಾರುವಾಕ್ಕಾಗಿ ಮಳೆಯ ದಿನಚರಿ ಇರುತ್ತಿತ್ತು. ನಮ್ಮ ಇಡೀ ಒಕ್ಕಲುತನ ರೂಪಿತವಾಗಿದ್ದೇ ಇಂತಹ ಕರಾರುವಾಕ್ಕಾದ ವ್ಯವಸ್ಥೆಯಿಂದ. ಒಂದೆರಡು ಬಾರಿ ದಿನಚರಿಯಲ್ಲಿ ಏರುಪೇರಾದರೂ ಮುಂದಿನ ಮಳೆ ಅದನ್ನು ಸರಿಪಡಿಸುತ್ತಿತ್ತು.

ಆದರೆ ಕ್ರಮೇಣ ಮಳೆ ಕಣ್ಣಾಮುಚ್ಚಾಲೆ ಶುರು ಮಾಡಿತು.

ಜೂನ್ ಒಂದಕ್ಕೆ ಮುಂಗಾರು ಮಳೆ ಭಾರತದ ಗಡಿ ಪ್ರವೇಶಿಸುತ್ತದೆ ಎನ್ನುತ್ತಾರೆ ಹವಾಮಾನತಜ್ಞರು. ಆದರೆ ಅದಕ್ಕಿಂತ ಸಾಕಷ್ಟು ಮುಂಚೆಯೇ ಮುಂಗಾರು ಮುಂಚಿನ ಮಳೆ ನಮ್ಮ ಕೆಟ್ಟ ಬೇಸಿಗೆಯನ್ನು ತಣಿಸಿರುತ್ತಿತ್ತು. ಭೂಮಿ ಹದಗೊಳಿಸಲು ರೈತರಿಗೆ ಸೂಚನೆ ನೀಡಿರುತ್ತಿತ್ತು. ಈ ಸಲದ ಮಳೆಗಾಲ ಹೇಗಿರುತ್ತದೆ ಎಂಬ ಬಗ್ಗೆ ರೈತರಲ್ಲಿ ಚರ್ಚೆ ಹುಟ್ಟಿಸಿ, ಬಿತ್ತನೆಗೆ ಸಿದ್ಧವಾಗಲು ಅವರಿಗೆ ಅವಕಾಶ ಕೊಡುತ್ತಿತ್ತು.

ಆಗ ರೈತ ನಿಜಕ್ಕೂ ಕೆಲಸಗಾರನಾಗಿದ್ದ. ಬಿತ್ತನೆಗೆ ಮುಂಚಿತವಾಗಿಯೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿರುತ್ತಿದ್ದ. ಯಾವ ವಿಜ್ಞಾನಿ ಹೇಳಿರದಿದ್ದರೂ ಭೂಮಿಗೆ ಅಗತ್ಯವಾಗಿ ಬೇಕಾದ ಗೊಬ್ಬರ ಹಾಕಿರುತ್ತಿದ್ದ. ಬೀಜಕ್ಕೆ ಉಪಚಾರ ಮಾಡುತ್ತಿದ್ದ. ಭೂಮಿಗಾಗಲಿ ಬೀಜಗಳಿಗಾಗಲಿ ವಿಷ ಸುರಿಯುವ ಪದ್ಧತಿ ಇರದ್ದರಿಂದ ಆಗ ನಡೆಯುತ್ತಿದ್ದುದು ಅಪ್ಪಟ ನೈಸರ್ಗಿಕ ಕೃಷಿ.

ಹದವಾಗಿ ಮಳೆ ಬೀಳುತ್ತಿದ್ದಂತೆ ಬಿತ್ತನೆ ಶುರುವಾಗುತ್ತಿತ್ತು. ಆಗ ಇದ್ದ ಒಂದೇ ಒಂದು ಯಂತ್ರ ಎಂದರೆ ಎತ್ತು ಮತ್ತು ಬಂಡಿ. ರಾಸಾಯನಿಕಗಳ ಸೋಂಕಿರದಿದ್ದರಿಂದ ಕೀಟಬಾಧೆ ಹತೋಟಿಯಲ್ಲಿರುತ್ತಿತ್ತು. ಭೂಮಿಗೆ ಯಾವ ರೀತಿಯ ಕಷ್ಟವೂ ಇರಲಿಲ್ಲ. ಒಂದು ಪ್ರಮಾಣದ ಬೆಳೆ ಕೈಗೆ ಬರುವ ಭರವಸೆ ಇದ್ದೇ ಇರುತ್ತಿತ್ತು.

ಬೆಳೆ ಕೈಗೆ ಬರುವವರೆಗೂ ಭೂಮಿ ಹಾಗೂ ಬೆಳೆಗಳನ್ನು ಪೋಷಿಸುವ ಹಲವಾರು ಪದ್ಧತಿಗಳನ್ನು ರೈತರು ಅನುಸರಿಸುತ್ತಿದ್ದರು. ಭೂಮಿತಾಯನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವ, ಬಣ್ಣಿಸುವ ಹಾಡು, ಹಬ್ಬ ಚಾಲ್ತಿಯಲ್ಲಿರುತ್ತಿದ್ದವು. ಇಡೀ ಸಮುದಾಯದ ಬೆಳವಣಿಗೆ ಭೂಮಿ, ಬೆಳೆ, ದನಕರುಗಳ ನಡುವಿನ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಜಾನಪದ ಹಾಡುಗಳು, ಸುಗ್ಗಿ ಪದಗಳು, ಹಂತಿ ಪದಗಳು- ಹೀಗೆ ಒಂದಿಡೀ ವ್ಯವಸ್ಥೆ ನಮ್ಮ ಕೃಷಿಯನ್ನು ಅವಲಂಬಿಸಿ ಬೆಳೆಯಿತು.

’ಸುಗ್ಗಿ’ ಎಂಬ ಶಬ್ದವೇ ಹಿಗ್ಗು ಮೂಡಿಸುವಂಥದು. ಬೆಳೆ ಕೈಗೆ ಬರುವ ಗಳಿಗೆಯಲ್ಲಿ ಅದಕ್ಕೆ ಕಾರಣರಾದ ಎಲ್ಲರನ್ನೂ ಸ್ಮರಿಸಿ, ಎಲ್ಲರಿಗೂ ಶಕ್ತ್ಯಾನುಸಾರ ದಾನ ನೀಡಿ, ಮಿಕ್ಕಿದ ಬೆಳೆಯಲ್ಲಿ ಸರ್ಕಾರದ ಪಾಲು ಕೊಟ್ಟರೂ ರೈತನಿಗೆ ವರ್ಷವಿಡೀ ಬದುಕಲು ಬೇಕಾದಷ್ಟು ಧಾನ್ಯ ಉಳಿಯುತ್ತಿತ್ತು. ನಿತ್ಯ ಬಳಸುವ ಜೋಳ, ರಾಗಿ, ಅಕ್ಕಿ, ಗೋದಿ ಜತೆಗೆ ಬೇಳೆಕಾಳುಗಳನ್ನೂ ಬೆಳೆದುಕೊಂಡಿರುತ್ತಿದ್ದ ರೈತ ಅಷ್ಟಿಷ್ಟು ತರಕಾರಿ, ಹಣ್ಣು ಮುಂತಾದವನ್ನು ಹಾಕಿಕೊಂಡು ಬದುಕುತ್ತಿದ್ದ. ಕುಟುಂಬ, ಓಣಿ, ಕೇರಿ, ಊರು, ಪ್ರಾಂತ್ಯ, ರಾಜ್ಯ- ಹೀಗೆ ಇಡೀ ವ್ಯವಸ್ಥೆ ಕೃಷಿಯ ಈ ಚಟುವಟಿಕೆಯೊಂದಿಗೆ ತನ್ನನ್ನು ಗುರುತಿಸಿಕೊಂಡಿತ್ತು. ಹೀಗಾಗಿ ಕೃಷಿ ಸಮಾಜದ ಮುಖ್ಯ ವೃತ್ತಿಯಾಗಿತ್ತು. ಇತರ ಎಲ್ಲ ವೃತ್ತಿಗಳನ್ನು ಪೋಷಿಸುವಂಥದಾಗಿತ್ತು.

ಸಾವಿರಾರು ವರ್ಷಗಳಿಂದ ಜಾರಿಯಲ್ಲಿದ್ದ ಈ ವ್ಯವಸ್ಥೆಗೆ ಕೊಡಲಿ ಪೆಟ್ಟು ಬಿದ್ದಿದ್ದು ನಮ್ಮ ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರಿಂದ.

’ಗ್ರಾಮಗಳಲ್ಲಿಯೇ ದೇಶ ಅಡಗಿದೆ’ ಎಂಬ ಗಾಂಧೀಜಿಯವರ ಮಾತನ್ನು ಕಡೆಗಣಿಸಿದ ನೆಹರು ೧೯೫೦ರ ದಶಕದಲ್ಲಿ ಜಾರಿಗೆ ತಂದ ’ಹಸಿರು ಕ್ರಾಂತಿ’ ದೇಶದ ಕೃಷಿ ಪದ್ಧತಿಯನ್ನು ಬುಡಮೇಲು ಮಾಡಿತು. ಹೆಚ್ಚು ಬೆಳೆಯಬೇಕು ಎಂಬುದೊಂದೇ ಧ್ಯೇಯವಾಗಿ, ಹೇಗೆ ಬೆಳೆಯಬೇಕು ಎಂಬ ಮೂಲಭೂತ ಪ್ರಶ್ನೆಯನ್ನು ನಿರ್ಲಕ್ಷ್ಯಿಸಲಾಯಿತು. ಕೃಷಿ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿರದಿದ್ದ, ದೇಶವನ್ನು ಆಹಾರದಲ್ಲಿ ಸ್ವಾವಲಂಬಿಯಾಗಿಸುವ ಮೂಲಕ ಅಂತರ್‌ರಾಷ್ಟ್ರೀಯ ಸಮುದಾಯದ ಗಮನ ಸೆಳೆಯುವ ತುರ್ತಿದ್ದ ನೆಹರೂ ಅವರಿಗೆ ತಕ್ಷಣದ ಯಶಸ್ಸಿನ ಅವಶ್ಯಕತೆಯಿತ್ತು. ಆದ್ದರಿಂದ ರಸಾಯನಿಕ ಗೊಬ್ಬರಗಳನ್ನು ಸುರಿದು, ಕೀಟನಾಶಕಗಳನ್ನು ಬಳಸಿ ಹೆಚ್ಚು ಬೆಳೆಯುವ ವಿದೇಶಿ ಕೃಷಿ ತಂತ್ರಜ್ಞಾನವನ್ನು ವಿವೇಚನೆಯಿಲ್ಲದೇ ಭಾರತಕ್ಕೆ ತಂದರು.

ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ರಸಾಯನಿಕ ಗೊಬ್ಬರ ತಯಾರಿಸುವ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು. ದುಬಾರಿ ಬೆಲೆಯ ಗೊಬ್ಬರ ಹಾಗೂ ಕೀಟನಾಶಕಗಳನ್ನು ರೈತರು ಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಕೃಷಿ ಸಹಾಯಧನ (ಸಬ್ಸಿಡಿ) ಹಾಗೂ ಕೃಷಿ ಸಾಲಗಳನ್ನು ನೀಡಲಾಯಿತು. ಗೊಬ್ಬರ, ಕೀಟನಾಶಕ, ಆಳದ ಉಳುಮೆ ಮುಂತಾದ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಹೆಚ್ಚು ಬೆಳೆಯಬಹುದು ಎಂದು ರೈತರಿಗೆ ಆಮಿಷ ಒಡ್ಡಲಾಯಿತು. ಇದರ ಪ್ರಚಾರಕ್ಕಾಗಿ ಆಕಾಶವಾಣಿಯನ್ನು ಬಳಸಿಕೊಳ್ಳಲಾಯಿತು. ದೇಶಾದ್ಯಂತ ಕೃಷಿ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕೃಷಿ ಸಂಬಂಧಿ ಕಚೇರಿಗಳನ್ನು ಸ್ಥಾಪಿಸಲಾಯಿತು.

ನೋಡನೋಡುತ್ತಲೇ ಇವೆಲ್ಲ ಬೆಳವಣಿಗೆಗಳು ವಿಪರೀತ ವೇಗದಲ್ಲಿ ನಡೆಯತೊಡಗಿದವು. ದೇಶದ ಬೆಳವಣಿಗೆ ನಮ್ಮ ಹೊಲಗಳಲ್ಲಿದೆ ಎಂಬ ಘೋಷಣೆ ಎದ್ದಿತು. ರೈತ ಇದರ ಕೇಂದ್ರ ಬಿಂದುವಾದ. ತನ್ನ ಪಾಡಿಗೆ ತಾನು ಬೀಜ, ಗೊಬ್ಬರ ಉತ್ಪಾದಿಸಿಕೊಂಡು, ಮನೆಯವರ ಸಹಾಯದಿಂದ ಕೃಷಿ ಕಾರ್ಯ ನಡೆಸುತ್ತಿದ್ದ ರೈತನ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪ ಶುರುವಾಯಿತು. ನಿನ್ನ ಹೊಲಕ್ಕೆ ಇಂತಹ ಗೊಬ್ಬರ ಹಾಕು, ಇಂತಹ ಬೀಜ ಬಿತ್ತು ಎಂಬ ಬೋಧನೆ ಶುರುವಾಯಿತು. ಇದಕ್ಕಾಗಿ ಆಕಾಶವಾಣಿಯನ್ನು ಎಗ್ಗಿಲ್ಲದೇ ಬಳಸಿಕೊಳ್ಳಲಾಯಿತು. ಹೊಸ ಪದ್ಧತಿಯಿಂದ ಹೆಚ್ಚು ಬೆಳೆಯಬಹುದು, ಹೆಚ್ಚು ಗಳಿಸಬಹುದು, ಆಗ ದೇಶ ಮುಂದೆ ಬರುತ್ತದೆ ಎಂದು ರೈತನ ಮುಂದೆ ಬಣ್ಣದ ಕನಸು ಕಟ್ಟಿಕೊಟ್ಟರು.

ಇದನ್ನು ಒಪ್ಪದ ರೈತನನ್ನು ಗಮಾರ ಎಂದು ಕರೆಯಲಾಯಿತು. ಪಾರಂಪರಿಕ ಕೃಷಿ ಪದ್ಧತಿಯನ್ನು ಹಳೆಯ ವಿಧಾನ ಎಂದು ಕರೆದು, ಅದರಿಂದ ಹೆಚ್ಚು ಬೆಳೆಯಲು ಸಾಧ್ಯವಿಲ್ಲ ಎಂದು ಪ್ರಚಾರ ಮಾಡಲಾಯಿತು. ಮೊದಲು ತನ್ನ ಪಾಡಿಗೆ ತಾನಿದ್ದ ರೈತನಿಗೆ ಸುತ್ತ ನಡೆಯುತ್ತಿದ್ದ ಬೆಳವಣಿಗೆಯನ್ನು ನೋಡಿಕೊಂಡು ಸುಮ್ಮನಿರಲಾಗಲಿಲ್ಲ. ಮೊದಲ ಹೋಳಿಗೆಗೆ ರುಚಿ ಹೆಚ್ಚು ಎನ್ನುವಂತೆ ರಸಾಯನಿಕ ಗೊಬ್ಬರದ ರುಚಿ ಕಂಡ ಭೂಮಿಯಲ್ಲಿ ಬೆಳೆ ಚೆನ್ನಾಗಿ ಬಂದಿತು. ಆಗ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಇದ್ದುದರಿಂದ ಉತ್ತಮ ಬೆಲೆಯೂ ರೈತನಿಗೆ ದಕ್ಕಿತು.

ಇವೆಲ್ಲದರಿಂದ ಇತರ ರೈತರು ಆಮಿಷಕ್ಕೆ ಒಳಗಾದರು. ರಸಾಯನಿಕಗಳನ್ನು ಬಳಸಿ ಹೆಚ್ಚು ಬೆಳೆಯಬಹುದು ಎಂದು ಭಾವಿಸಿದರು. ಸಾಲ ಕೊಡಲು ಸರ್ಕಾರ ಸಿದ್ಧವಿತ್ತು. ಬೆಳೆದ ಬೆಳೆಗೆ ಉತ್ತಮ ಬೆಲೆ ದಕ್ಕುತ್ತಿತ್ತು. ಇನ್ನು ನಮ್ಮ ಜೀವನದಲ್ಲಿ ಸುಖಿ ಕಾಲ ಶುರುವಾಯಿತು ಎಂಬ ಪುಳಕದಲ್ಲಿ ರೈತ ಸಾರಾಸಗಟಾಗಿ ರಸಾಯನಿಕ ಕೃಷಿಗೆ ಇಳಿದ. ೧೯೫೦, ೧೯೬೦ ಹಾಗೂ ೭೦ರ ದಶಕದಲ್ಲಾದ ಮುಖ್ಯ ಬೆಳವಣಿಗೆ ಇದು.

ಒಂದಿಡೀ ತಲೆಮಾರು ಪಾರಂಪರಿಕ ಕೃಷಿ ಕೈಬಿಟ್ಟು ರಸಾಯನಿಕ ಕೃಷಿಗೆ ಇಳಿದ ಕಾಲವಿದು. ಹಳೆಯದು ಹಿಂದಾಯಿತು. ಹೊಸದು ಮುಂದೆ ಬಂದಿತು. ರಸಾಯನಿಕಗಳಿಗೆ ಭೂಮಿ ಇದೇ ರೀತಿ ಸ್ಪಂದಿಸುತ್ತದೆ ಎಂಬ ಭ್ರಮೆಯಲ್ಲಿ ಹೆಚ್ಚು ಹೆಚ್ಚು ಬೆಳೆಯುವ ಆತುರದಲ್ಲಿ ರೈತ ಸಾವಿರಾರು ವರ್ಷಗಳಿಂದ ಬೆಳೆಸಿಕೊಂಡು ಬಂದಿದ್ದ ಜ್ಞಾನವನ್ನು ಕೈಬಿಟ್ಟ.

ಆದರೆ ಬಂದಿದ್ದು ರೋಗ.

ಮೊತ್ತಮೊದಲ ಬಾರಿಗೆ ಬೆಳೆಗೆ ಕೀಟಗಳ ಹಾವಳಿ ಅನಿರೀಕ್ಷಿತವಾಗಿ ಹೆಚ್ಚಿತು. ಅದುವರೆಗೆ ಇವೆಯೋ ಇಲ್ಲವೋ ಎಂಬಂತಿದ್ದ ಕೀಟಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯನ್ನು ಮುಕ್ಕಲಾರಂಭಿಸಿದವು. ಕಂಗಾಲಾದ ರೈತನ ನೆರವಿಗೆ ಬಂದಿದ್ದು ಹಸಿರುಕ್ರಾಂತಿಯ ತಂತ್ರಜ್ಞಾನವೇ. ಕೀಟನಾಶಕಗಳನ್ನು ಬಳಸಿ, ಬೆಳೆಯನ್ನು ಉಳಿಸಿ ಎಂದಿತು ಸರ್ಕಾರ. ರೈತನ ಹೊಲಕ್ಕೆ ವಿಷ ತುಂಬಿದ ಬಾಟಲಿಗಳು ಬರಲಾರಂಭಿಸಿದವು. ಅವುಗಳ ಹಿಂದೆ ಬಹುರಾಷ್ಟ್ರೀಯ ಕಂಪನಿಗಳು ಬಂದವು. ಉತ್ಪಾದನೆ ಖರ್ಚು ಹೆಚ್ಚಿದ್ದರಿಂದ ಬ್ಯಾಂಕುಗಳು ಸಾಲ ಹಿಡಿದುಕೊಂಡು ಬಂದವು. ಎಲ್ಲೋ ದೂರ ದೆಹಲಿ, ಬೆಂಗಳೂರಿನಂತಹ ನಗರಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದ ವ್ಯವಸ್ಥೆ ಕುಗ್ರಾಮದಲ್ಲಿರುತ್ತಿದ್ದ ರೈತನ ಹೊಲಗಳನ್ನು ಪ್ರವೇಶಿಸಿತು.

ಆದರೆ ಇದರಿಂದಾದ ದುರಂತ ಊಹೆಗೂ ನಿಲುಕದಂಥದು!

(ಮುಂದುವರಿಯುವುದು)

- ಚಾಮರಾಜ ಸವಡಿ