ಎಂದೆಂದೂ ಬಾಡದ ಮಲ್ಲಿಗೆ
ಅಯೋಧ್ಯಾ ಪ್ರಕಾಶನ ಇವರ ೧೬ನೆಯ ಕೃತಿಯೇ ರೋಹಿತ್ ಚಕ್ರತೀರ್ಥ ಇವರು ಬರೆದ ‘ಎಂದೆಂದೂ ಬಾಡದ ಮಲ್ಲಿಗೆ. ಈ ಪುಸ್ತಕದಲ್ಲಿ ಸಾಹಿತ್ಯ ಜಗತ್ತಿನ ಸ್ವಾರಸ್ಯಗಳನ್ನು ಸೊಗಸಾಗಿ ವರ್ಣನೆ ಮಾಡಲಾಗಿದೆ. ಹಿರಿಯ ವಿಮರ್ಶಕರಾದ ಮುರಳೀಧರ ಉಪಾಧ್ಯ ಹಿರಿಯಡಕ ಇವರು ತಮ್ಮ ಬೆನ್ನುಡಿಯಲ್ಲಿ “ರೋಹಿತ್ ಚಕ್ರತೀರ್ಥ ವೈವಿಧ್ಯಪೂರ್ಣ ಆಸಕ್ತಿಗಳಿರುವ ಹೊಸ ತಲೆಮಾರಿನ ಕನ್ನಡ ಲೇಖಕ. ಎಂದೆಂದೂ ಬಾಡದ ಮಲ್ಲಿಗೆಯಲ್ಲಿ ಇವರು ಜಿ.ಟಿ.ನಾ, ಕೆ.ಎಸ್.ನ, ತ.ಸು.ಶಾ, ಜಿ.ವೆಂಕಟಸುಬ್ಬಯ್ಯ ಇಂಥ ಲೇಖಕರನ್ನು, ಪಾ.ವೆಂ., ಗುಲ್ವಾಡಿಯವರಂಥ ಪತ್ರಕರ್ತರನ್ನು, ಚಂದಮಾಮ, ಸಂದೇಶಗಳಂಥ ಪತ್ರಿಕೆಗಳನ್ನು ಪರಿಚಯಿಸಿದ್ದಾರೆ. ವಿಮರ್ಶಾತ್ಮಕ ಒಳನೋಟಗಳೂ ಈ ಲೇಖನಗಳಲ್ಲಿವೆ. ತಲಸ್ಪರ್ಶಿ ಅಧ್ಯಯನ, ನಿಖರ ಮಾಹಿತಿಗಳು, ಲಕ್ಷಿಸುವ ಅತಿ ಸಣ್ಣ ವಿವರಗಳು, ಸರಳ ಶೈಲಿ ಇವುಗಳಿಂದ ಚಕ್ರತೀರ್ಥರು ಇಷ್ಟತೀರ್ಥರಾಗುತ್ತಾರೆ.” ಎಂದು ಬರೆದಿದ್ದಾರೆ.
ಖ್ಯಾತ ವಿಮರ್ಶಕರೂ, ಕಥೆಗಾರರೂ ಆದ ಎಸ್.ದಿವಾಕರ್ ಅವರು ಈ ಪುಸ್ತಕಕ್ಕೆ ಸೊಗಸಾದ ಮುನ್ನುಡಿ ಬರೆದಿದ್ದಾರೆ. ಪುಸ್ತಕದ ಪ್ರತಿಯೊಂದು ಅಧ್ಯಾಯದ ಸ್ವಾರಸ್ಯವನ್ನು ತಮ್ಮದೇ ಆದ ಧಾಟಿಯಲ್ಲಿ ಬರೆದಿದ್ದಾರೆ. ಮುನ್ನುಡಿಯ ಒಂದೆಡೆ ಅವರು ಹೀಗೆ ಬರೆಯುತ್ತಾರೆ “ಈ ಸಂಕಲನದ ಬರಹಗಳೆಲ್ಲವೂ ಈ ಮೊದಲೇ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪತ್ರಿಕೆಗಳಲ್ಲಿ ಸಾಮಯಿಕ ವಿಷಯಗಳ ಬಗೆಗೆ ಪ್ರಕಟವಾಗುವ ಲೇಖನಗಳು ಇತರ ಸುದ್ದಿ ಬರಹಗಳಿಗಿಂತ ಭಿನ್ನವಾಗಿರುವುದರಿಂದಲೇ ಅವು ಓದುಗನೊಡನೆಯ ಸಂವಾದಕ್ಕೆ ಇಂಬು ಕೊಡುತ್ತದೆ. ಪತ್ರಿಕೆಗಳಿಗೆ ಬರೆಯುವವನು ತನಗೇ ಅರಿವಿಲ್ಲದಂತೆ ಬರೆಯುವುದನ್ನು ಒಂದು ರೂಢಿಯನ್ನಾಗಿ ಮಾಡಿಕೊಳ್ಳುತ್ತಾನಷ್ಟೆ. ಹಾಗೆ ರೂಢಿ ಮಾಡಿಕೊಳ್ಳುತ್ತಲೇ ಓದುಗರೂ ಒಂದು ಜಾಡಿಗೆ ಬೀಳದ ಹಾಗೆ, ತನ್ನ ವಿಚಾರಗಳನ್ನು ಸುಲಭವಾಗಿ ಅಂಗೀಕರಿಸದ ಹಾಗೆ ತನ್ನ ಬರಹಗಳಲ್ಲಿ ಅಚ್ಚರಿಯನ್ನು ಹೇಗೋ ಹಾಗೆ ಒಂದು ಬಗೆಯ ಸವಾಲನ್ನೂ ಪಡಿಮೂಡಿಸಬೇಕಾಗುತ್ತದೆ. ಅದನ್ನು ಸಾಧಿಸಬಲ್ಲ ಒಂದು ಮಾರ್ಗವೆಂದರೆ ಅಪರೂಪದ, ಅಪರಿಚಿತವಾದ ವಿಷಯಗಳ ಸಂಕೀರ್ಣತೆಯನ್ನು ಸಹಪಾಠಿಗೆ ತಿಳಿಸುವ ಹಾಗೆ ನಿರೂಪಿಸುವುದು. ಪತ್ರಿಕೆಗಳಿಗೆ ಬರೆಯುವವನು ತಾನು ಬರೆದ ಲೇಖನಗಳಿಗೆ ಎಷ್ಟು ಮಟ್ಟಿನ ತಾಳಿಕೆಯ ಗುಣವಿದೆ, ಎಷ್ಟುಮಟ್ಟಿಗೆ ಅವು ಕಾಲಾತೀತವಾಗಿವೆ ಎಂದು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಸಾಮಾನ್ಯವಾಗಿ ಪತ್ರಿಕಾ ಬರಹಗಳಲ್ಲಿ ಮಾಹಿತಿಯೇ ಹೆಚ್ಚು. ವಿಚಾರಮಂಥನ ಕಡಿಮೆ.”
ಈ ಮುನ್ನುಡಿಯನ್ನು ಗಮನಿಸಿದಾಗ ಎಸ್.ದಿವಾಕರ್ ಅವರು ರೋಹಿತ್ ಅವರ ಬರವಣಿಗೆಯ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿದ್ದಾರೆ ಎಂದು ಗಮನಕ್ಕೆ ಬರುತ್ತದೆ. ತಮ್ಮದೇ ನುಡಿಯಾದ ‘ಮಾಲೆಗಾರನ ಮಾತು' ಇಲ್ಲಿ ರೋಹಿತ್ ಚಕ್ರತೀರ್ಥ ಇವರು ಬರೆದ ಮಾತುಗಳು “ಇಲ್ಲಿನ ಬರಹಗಳಲ್ಲಿ ಕವಿ-ಕಲಾವಿದರೇ ನಾಯಕರು. ಗ್ರಾಚೋನಿಂದ ಹಿಡಿದು ಅನಂತಮೂರ್ತಿ ಅವರವರೆಗೆ ಇಲ್ಲಿನ ಹರವು. ಬರೆದದ್ದು ಬೇರೆ ಬೇರೆ ಸಂದರ್ಭಗಳಲ್ಲಿ. ಆದರೆ, ಇವೆಲ್ಲವೂ ಕೆಲವೊಂದು ಸಾಧಕರ ಜೀವನದ ಕೆಲವು ಪುಟ್ಟ ಪುಟ್ಟ ಕ್ಷಣಗಳನ್ನು ಹಿಡಿದಿಟ್ಟಿವೆ ಎಂಬ ಕಾರಣಕ್ಕೆ ಪುಸ್ತಕದ ರೂಪ ಕೊಡುವ ಧೈರ್ಯ ಮಾಡಿದ್ದೇನೆ. ಇಲ್ಲಿ ದಾಖಲಾಗುವ ಕೆಲವು ಸಂಗತಿಗಳೂ ಇವೆ. ಉದಾಹರಣೆಗೆ, ವಿಲಿಯಂ ಬಕ್ ನ ಲೇಖನದಲ್ಲಿ ನಾನು ಬಳಸಿಕೊಂಡ ಚಿತ್ರ (ಅಮ್ಮನೊಂದಿಗೆ ಪುಟಾಣಿ ಬಕ್) ಆತನ ಬಗ್ಗೆ ನಮಗೆ ಇದುವರೆಗೆ ಸಿಕ್ಕಿರುವ ಏಕೈಕ ಚಿತ್ರದಾಖಲೆ ! ಹಾಗೆಯೇ, ವಿಜ್ಞಾನಲೋಕದ ವಿದ್ಯಾಲಂಕಾರ ಎಂಬ ಲೇಖನ ನಾವು (ನಾನು ಮತ್ತು ಹಿರಿಯ ವಿಜ್ಞಾನ ಲೇಖಕ ಶ್ರೀ ಟಿ.ಆರ್. ಅನಂತರಾಮು) ಪ್ರಕಟಿಸುವವರೆಗೂ ವೆಂಕಟಸುಬ್ಬಯ್ಯನವರು ವಿಜ್ಞಾನ ಲೇಖನಗಳನ್ನೂ ಬರೆದಿದ್ದಾರೆ ಎನ್ನುವುದು ಎಲ್ಲೂ ದಾಖಲಾಗಿರಲಿಲ್ಲ.”
ಲೇಖಕರು ಇನ್ನೂ ಹಲವಾರು ರೋಚಕ ಸಂಗತಿಗಳನ್ನು ಚಿತ್ರಗಳ ಸಹಿತ ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಖ್ಯಾತ ನಾಟಕಕಾರ ಷೇಕ್ಸ್ ಪಿಯರ್ ಆಗಿರಬಹುದು, ಪತ್ರಕರ್ತರಾದ ಶಾಮರಾಯರಾಗಿರಬಹುದು ಅಥವಾ ಕನ್ನಡದ ಆಸ್ತಿ ಮಾಸ್ತಿಯೇ ಆಗಿರಬಹುದು. ಇವರ ಬದುಕಿನ ರಸ ನಿಮಿಷಗಳನ್ನು ಓದಿ ಅರಿಯುವುದರಲ್ಲೇ ಸ್ವಾರಸ್ಯ ಇರುವುದು. ಈ ಪುಸ್ತಕದಲ್ಲಿ ಕಾರಂತರೂ ಇದ್ದಾರೆ, ನಿಸಾರ್ ಅಹಮ್ಮದರೂ ಇದ್ದಾರೆ. ಎರಡು ಸಂದರ್ಶನಗಳೂ ಇವೆ. ನಮ್ಮ ಬಾಲ್ಯದ ಗೆಳೆಯ ‘ಚಂದಮಾಮ’ನ ವಿವರಗಳೂ ಇವೆ. ಹೀಗೆ ಒಟ್ಟು ೧೯ ಸೊಗಸಾದ ಅಧ್ಯಾಯಗಳು ಈ ಪುಸ್ತಕದಲ್ಲಿವೆ. ಓದಲು ಪ್ರಾರಂಭಿಸಿದರೆ ನೀವು ಮುಗಿಸಿಯೇ ಕೆಳಗಿಡಬಹುದಾದ ಪುಸ್ತಕ ಇದು.
೧೮೪ ಪುಟಗಳನ್ನು ಹೊಂದಿರುವ ಈ ಪುಸ್ತಕದ ಮುಖಪುಟವನ್ನು ಅಶ್ವತ್ಥ ಕೃಷ್ಣ ಇವರು ರಚಿಸಿದ್ದಾರೆ. ನಮ್ಮ ನಡುವೆಯೇ ಆಗಿಹೋದ ಮಹನೀಯರು ಹಾಗೂ ಅವರ ಬದುಕಿನ ಕೆಲವು ಪುಟಗಳನ್ನು ಓದಿ ತಿಳಿದುಕೊಳ್ಳುವ ಅವಕಾಶವನ್ನು ಕೃತಿಯ ಲೇಖರಾದ ರೋಹಿತ್ ಚಕ್ರತೀರ್ಥ ಇವರು ನಮಗೆ ಒದಗಿಸಿ ಕೊಟ್ಟಿದ್ದಾರೆ.