ಎಮ್ಮೆ ಕಾಯುವ ಹೆಮ್ಮೆಯ ಕಾಯಕ

ಎಮ್ಮೆ ಕಾಯುವ ಹೆಮ್ಮೆಯ ಕಾಯಕ

ಬರಹ

ಎಮ್ಮೆ ಕಾಯುವ ಹೆಮ್ಮೆಯ ಕಾಯಕ

ಏ... ಲಚ್ಮೀ. . . ಮೂಲೆ ಮನೆಯರ ಮಣಕ ಬಂದೈತೋ ಇಲ್ಲವೋ ನೋಡು, ಮಸ್ಗು ಪಡ್ಡೆ ಜೊತೆಗೆ ಮೇಯ್ತಿತ್ತು. . . ವತೆರೆಯಿಂದ ಅದರ್ಹಿಂದೆ ಓಡಾಡಿ ಓಡಾಡಿ ಕಾಲು ಬಿದ್ದೋದ್ವು. . . ಗುಂಡು ಗುಟ್ಡೆಯೆಲ್ಲಾ ಸುತ್ತಾಡಿದ್ದಾಯಿತು. ಇದರ ಸೇಟು
ಹಿಗೊಂದು ದ್ವನಿಯ ಹಿಂದೆಯೇ “ಬಗ್ಗಾಲಾಕಿದ್ದೀನಿ ಅದಕ್ಕೆ ಇನ್ನ ರೂಡಿಯಿಲ್ಲ ಎಮ್ಮೆಗಳ ಮದೈದಗೆಲ್ಲೋ ಸೇರಿಕೊಂಡೈತಿ ಬಾ” ಉತ್ತರ ಬಂತು
ಇದೇನಪ್ಪಾ ! ನನ್ನ ಬಾಲ್ಯಾವಸ್ಥೆಯಲ್ಲಿ ಕೇಳಿತ್ತಿದ್ದ ಬಗ್ಗಾಲು ಮಣಕಾಲು ಪಡ್ಡೆ . . ಪದಗಳು ಇನ್ನು ಜೀವಂತವಾಗಿವೆ ಎಂದು ಕೊಂಡು ಮಿತ್ರ ತೋಟದ ಮನೆಯಿಂದ ಈಚೆ ಬಂದ ಅಬ್ಬಾ! ಅದೇನು ಎಮ್ಮೆಗಳ ಸಾಲು ಸರಿ ಸುಮಾರು ಇನ್ನೂರಕ್ಕೂ ಹೆಚ್ಚು ಎಮ್ಮೆಯ ದಂಡೊಂದು ದೂಳೆಬ್ಬಿಸಿಕೊಂಡು ಹಳ್ಳಿಯ ಕಡೆ ದಾಪು ಗಾಲು ಹಾಕುತ್ತಿತ್ತು. ಬೆಳಗಿನಿಂದ ಸುತ್ತಮುತ್ತಲ ಬೆಟ್ಟಗಳಲ್ಲಿ ಆರಾಮಾಗಿ ಮೇಯ್ದು ನೆಮ್ಮದಿಯಿಂದ ಊರ ಕಡೆ ನಡೆದಿದ್ದ ನಿಜಕ್ಕೂ ಸಂತಸವಾಯಿತು.

ಹಿಂದಿನ ದಿನಗಳಲ್ಲಿ ಪ್ರತಿ ಹಳ್ಳಿಗಳಲ್ಲಿಯೂ ಊರ ದನ ಕಾಯುವ ಕಾಯಕ ಈಗ ಇಲ್ಲ ಊರ ದಿನ ಕಾಯುತ್ತಿದ್ದ ಕುಟುಂಬಗಳು ಬೇರೆ ದೃಷ್ಟಿಯನ್ನು ಅವಲಂಬಿಸಿ ಹಳ್ಳಿಗಳಲ್ಲಿ ಬದುಕುತ್ತಿದ್ದಾರೆ. ನನ್ನೂರು ಮಿಡಿಗೇಶಿಲ್ಲಿಯೂ ದನ ಕಾಯುವ ರಂಗಣ್ಣನ ಮನೆಯವರೆಂದೇ ಈಗಲೂ ಕರೆಯುವ ಪರಿಪಾಠ ಇದೆ. ರಂಗಣ್ಣನೆಂಬ ಹೆಸರು ನೂರಾರಿದ್ದರೂ ಇದು ಮಾತ್ರ ಎಲ್ಲರಿಗೂ ಪರಿಚಿತ. ಇತ್ತೀಚಿನ ದಿನಗಳಲ್ಲಿ ಈ ಗೋಪಾಲಕರ ವೃತ್ತಿ ಬಹುತೇಕ ಇಲ್ಲವಾಗಿದ್ದರೂ, ಸತತ ಬರಗಾಲಕ್ಕೆ ತುತ್ತಾಗುವ ರಾಜ್ಯದ ಗಡಿಭಾಗ ಪಾವಗಡ ತಾಲ್ಲೂಕಿನ ದಾಸಲುಕುಂಟೆ, ರಂಗಸಮುದ್ರ, ವದನಕಲ್ಲು, ಬೆಳ್ಳಿಬಟ್ಲು, ಓಬಳಾಪುರ, ನಿಡಗಲ್, ಲಿಂಗದಹಳ್ಳಿ, ಶೈಲಾಪುರ . . . . ತಾಲ್ಲೂಕಿನ ನೂರಾರು ಹಳ್ಳಿಗಳಲ್ಲಿ ಇದು ಇನ್ನು ಜೀವಂತ ಇಲ್ಲಿನ ರೈತ ಕುಟುಂಬಗಳು ಇನ್ನೂ ಈ ಪದ್ದತಿಗೆ ನೀರೆರೆದು ಪೋಷಿಸುತ್ತರುವುದು ಹಳ್ಳಿಯ ಸಾಂಪ್ರದಾಯಿಕ ಪದ್ದತಿಗಳಿಗೆ ಸಾಕ್ಷಿಯಾಗಿದೆ.
ಯಾರಿವರು ಎಮ್ಮೆ ಕಾಯುವವರು ?
ಇಪ್ಪತ್ತು ವರ್ಷಗಳಿಂದ ಇದೇ ವೃತ್ತಿಯಲ್ಲಿರುವ ಪಾವಗಡ ತಾಲ್ಲೂಕಿನ ರಂಗಸಮುದ್ರದ ರಾಮಣ್ಣ ರಾಮಕ್ಕ ನವರ ಕುಟುಂಬ ನೆಮ್ಮದಿಯ ಬದುಕು ಸಾಗಿಸುತ್ತಾರೆ. ಊರಲ್ಲಿರುವ ಹೆಚ್ಚು ಕಡಿಮೆ ಎಲ್ಲಾ ಎಮ್ಮೆಗಳು ಇವರ ದಂಡಿನಲ್ಲಿ ಸದಸ್ಯತ್ವ ಪಡೆದಿವೆ. ರಾಮಣ್ಣನವರ ಹೆಂಡತಿ ರಾಮಕ್ಕ ಮತ್ತು ಸೊಸೆ ಇಬ್ಬರೂ ಊರ ಹೆಮ್ಮೆಗಳನ್ನು ಅಟ್ಟಕೊಂಡು ಬೆಟ್ಟಗಳಿಗೆ ಹೊರಡುತ್ತಾರೆ. ಮುಸ್ಸಂಜೆವರೆಗೂ ಎಮ್ಮೆಗಳ ದೇಖಾವೆ ಇವರ ಜವಾಬ್ದಾರಿ ಸಂಜೆಯಾದ ಕೂಡಲೇ ಊರಿನತ್ತ ಮುಖ ಮಾಡಿ ನಡೆಯುವ ಎಮ್ಮೆಗಳ ಜೊತೆ ಹೆಚ್ಚು ರಾಮಕ್ಕನ ತವರೂರು ಕೆ.ಟಿ.ಹಳ್ಳಿ ಇವರ ತಾತ ದನ ಕಾಯುವ ಈರಜ್ಜನೆಂದೇ ಖ್ಯಾತಿ. ಬಾಲ್ಯದಿಂದಲೂ ಕಾಯುವ ವೃತ್ತಿ ಇವರಿಗೆ ಕರಗತವಾಗಿದೆ. ಹಾಗಾಗಿ ಗಂಡನ ಮನೆಯಲ್ಲಿಯೂ ಪಾರಂಪರಿಕ ವೃತ್ತಿಯೂ ಇವರ ಜೀವಮಾನವಾಗಿದೆ.

ಕಾಯುವ ಕೆಲಸಕ್ಕೆ ಕೂಲಿ ಎಷ್ಟು?
ಪ್ರತಿ ದಿನ ಬೆಳಿಗ್ಗೆ ಪ್ರಾರಂಭವಾಗುವ ಈ ಗೋಪಾಲಕರ ದಿನಚರಿ, ಬೆಳಿಗ್ಗೆ ೭ ಗಂಟೆಗೆ ಎಮ್ಮೆಗಳ ಮಾಲೀಕರು ತಮ್ಮ ಎಮ್ಮೆಯನ್ನು ತಂದು ಕುರಿಮಂದೆ ಬಳಿ ಬಿಡಬೇಕು. ಊರ್ನ ದನಾ ಎಲ್ಲಾ ಸೇರ್ಕಂಬಾ ಅಷ್ಟತ್ಗೆ ಹತ್ಗಂಟೆ ಆಗೋತ್ತೈತಿ. ವತೇರಿಯಿಂದ ಬಂದಿರ ಎಮ್ಮೆ ದನ ಎಲ್ಲಾ ಇಲ್ಲೆ ತಪ್ಪೇ ಇಕ್ತವೆ. . ಪಕ್ದಾಗೆ ತಿಪ್ಪೇ ಹಾಕಿದ್ದೀನಿ ನೋಡ್ರಿತಪ್ಪೆ ಇಕ್ದಂಗೆ ತಿಪ್ಪೆಗೆ ಎತ್ತಾಕ್ತಿವಿ. . . ಎಲ್ಲಾ ಎಮ್ಮೆನೂ ಬಂದ್ಮೇಲೆ ಬೆಟ್ಟಕ್ಕೆ ಹೋಗ್ತಿವಿ. . . ಸೊಸೆನೂ ಬರ್ತಾಳೆ . . . ಎಂದ್ರು ರಾಮಕ್ಕ ಮಾತಾಡ್ತಿರುವಾಗಲೇ ತಗಾಳಕ್ಕ ಈ ತಿಂಗ್ಳು ಇನ್ನಾ ಐವತ್ತು ಕೊಡ್ಬೇಕಾಗಿತ್ತಲ್ಲ . . ಆವತ್ತೇ ಕೋಡಾನ ಅಂದ್ಕಂಡಿದ್ದೆ ನೀನು ಸಿಕ್ಕಿಲ್ಲ . . ನಾನೂ ಎಲ್ಲೋ ಜಾತ್ರೆಗೋಗಿದ್ದೆ.. ಹಳ್ಳಿಕಾರ್ ಹೋರಿಯೋಂದರ ಜೊತೆ ಹೆಜ್ಜೆ ಹಾಕುತ್ತದ್ದ ವೆಂಕಟರವಣಪ್ಪ ಹೇಳಿದರು.

ಒಂದು ಹೆಮ್ಮೆಗೆ ಒಂದು ವರ್ಷಕ್ಕೆ ೨೦೦ ರೂಪಾಯಿ ಕೊಡ್ತಿವಿ ಸಾ. . . ಕರುಗಳಿಗೆ ದುಡ್ಡಿಲ್ಲಾ. . . ಕರುಗಳಿಗೆ ೧ ವರ್ಷ ತುಂಬಿದ್ದವೆ ೨೫ ರೂಪಾಯಿ ಹಿಂಗೇ . . ವರ್ಷಕ್ಕೆ ಇಪ್ಪತ್ತೈದು ಜಾಸ್ತಿ ಮಾಡ್ತಿವಿ ಅದು ಯಾವಾಗ ಕೋಣನ್ನ ತಗೊಂಡು ಈಲಾಗುತ್ತೋ ಆ ವರ್ಷದಿಂದ ೨೦೦ ರೂಪಾಯಿ ಅದಕ್ಕೂ ಕೊಡ್ತಿವಿ . ನಮ್ನೆವೂ ೪ ಎಮ್ಮೆ ಆರಯ ವರ್ಷದಿಂದ ರಾಮಕ್ಕನೇ ನೋಡ್ಕಳದೂ . . .ಒಳ್ಳೆ ಜನಾ ಸಾ.. ಚೆನ್ನಾಗಿ ಕಾಯ್ತಾರೆ. . . ರಾಮಕ್ಕ ಕಾಯ್ಕೊಂಡು ಶಹಭಾಸ್ ಗಿರಿ ಮಗ್ಗುಲಲ್ಲದೆ ನೀಡಿದರು. ವೆಂಕಡರವಣಪ್ಪ.
ಒಂದು ಎಮ್ಮೆಗೆ ವರ್ಷಕ್ಕೆ ೨೦೦ ರೂನಂತೆ ೨೦೦ ಎಮ್ಮೆಗಳಿಂದ ಬರುವ ವಾರ್ಷಿಕ ಆದಾಯ ೪೦ ಸಾವಿರ ಇದು ಒಮ್ಮೆಗೆ ಸಿಗುವುದಿಲ್ಲಾ, ಬದಲಿಗೆ ಮಾಲೀಕರ ಬಳಿ ಹಣವಿದ್ದಾಗ ಇಲ್ಲವೇ ಇವರಿಗೆ ಅಗತ್ಯವಿದ್ದಾಗ ಕೊಡುತ್ತಾರೆ. ರಾಮಣ್ಣ ನಾಟಿ ವೈದ್ಯರೂ ಹೌದು. ಸುತ್ತಮುತ್ತಲ ಹಳ್ಳಿಗಳ ಜಾನುವಾರುಗಳಿಗೆ ಸಣ್ಣ ಪುಟ್ಟ ಕಾಯಿಲೆಯಾದಾಗ ಗಿಡಮೂಲಿಕೆಗಳ ಔಷಧಿ ನೀಡುತ್ತಾರೆ. ಎಮ್ಮೆಗಳಿಗೂ ಸಹ ಇವರ ಚಿಕಿತ್ಸೆ ಲಭ್ಯ.

ದಂಡಿನ ಎಮ್ಮೆಗಳ ಜಾತ್ಯಾತೀತ ಕಟ್ಟು ಕಟ್ಟಳ್ಳೆಗಳು
ಊರ ಎಮ್ಮೆಗಳೇನಾದರೂ ಇವರ ಮಂದೆಯಲ್ಲಿ ಬಿಡಬಹುದು ಯಾವುದೇ ಜಾತಿ ಮತದ ಸೋಂಕಿಲ್ಲ ಊರ ಎಮ್ಮಗಳ ದೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು. ಆದರೆ ಬೆಳಿಗ್ಗೆ ೭ ಗಂಟೆಗೆ ಸರಿಯಾಗಿ ಊರ ಹೊರಗಿರುವ ತುರಿಮಂದೆ ಗೆ ಎಮ್ಮೆಯನ್ನು ತಂದು ಬಿಡುವ ಕೆಲಸ ಮಾಲೀಕರದು ಅಲ್ಲಿಂದ ಸಂಜೆ ಕೊಟ್ಟಿಗೆಗೆ ಹೋಗುವತನಕ ಸಂಪೂರ್ಣ ಜವಾಬ್ದಾರಿ ರಾಮಕ್ಕನದು. ಮನೆಗೆ ಹೇಗೋ ಬಿದ್ರೂ ಈ ಬಿದ್ರೂ ತಪ್ಪಂಗಿಲ್ಲಾ . ಮಂದೆ ಎಮ್ಮೆಗಳು ಸ್ವಲ್ಪ ಮರೆಯಾದ್ರು ಅರುಸ್ತಾವೆ.

ಅಕಸ್ಮಾತ್ ನಾವು ಹೋಗಕ್ಕಾಗ್ಲಲ್ಲಾ . . ಅಂದ್ರೂ ಐವತ್ತು ರೂಪಾಯಿ ಕೂಲಿ ಕೊಟ್ಟು ಯಾರಾದ್ರು ಕಳಸ್ತೀವಿ. ಅದು ಯಾರ್ದಾದ್ರು ಮದ್ವೆನೂ ಮುಂಜಿನೋ, ಆದ್ರೆ ಅಷ್ಟೆ ಇಲ್ದಿದ್ರೆ .. ನಮ್ಮದೇ ಕೆಲ್ಸ. . ನಾವೋ ಮಾಡ್ತೀವಿ.

ರಂಗಸಮುದ್ರದ ಸುತ್ತಮುತ್ತ ಬೆಟ್ಟಗುಡ್ಡಗ ಳ ಸಾಲುಗಳಿವೆ. ಸುಮಾರು ಮೂರ್ನಾಲ್ಕು ಮೈಲಿ ಸುತ್ತ ಈ ಎಮ್ಮೆಗಳನ್ನು ಮೇಯಿಸಲು ಹೋಗುತ್ತಾರೆ. ರಾಮಕ್ಕನವರ ಪ್ರಕಾರ ಎಮ್ಮೆಗಳು ಬಿಸಿಲಿಗೆ ತಡೆಯುವುದಿಲ್ಲಾ ಏನಿದ್ದರೂ ತಣ್ಣಗಿರುವ ಜಾಗನೇ ಬೇಕು . ಎಲ್ಲಾದರೂ ಬುರ್ಜೆ ಕೆಸರು ಸಿಕ್ಕಿದರೆ ನೀರು ಸಿಕ್ಕಿದ್ರೆ ಅಲ್ಲೇ ಠಿಕಾಣಿ ಹೂಡ್ತಾವೆ. ಹಸುಗಳಂತೆ ಇವು ಬೇಗ ಬೇಗನೆ ನಡೆಯುವುದಿಲ್ಲಾ. ಬೆಟ್ಟದ ತಪ್ಪಲಿನಲ್ಲಷ್ಟೇ ಮೇವಾಡುತ್ತವೆ. ಬೆಟ್ಟದ ನೆತ್ತಿಯವರೆಗೂ ಹತ್ತುವ ಗೋಜಿಗೆ ಹೋಗುವುದಿಲ್ಲ. ಮಳೆಗಾಲದಲ್ಲಿ ಇವುಗಳ ಉಸ್ತುವಾರಿ ಕಷ್ಟಕರವಾದದ್ದು, ಊರ ಸುತ್ತಲೂ ಬೆಳೆ ಇಟ್ಟಾಗಂತೂ ಇವರ ಕಷ್ಟ ಹೇಳತೀರದು ಮಳೆಗಾಲದಲ್ಲಿ ಹಲವಾರು ಬಾರಿ ಸಣ್ಣ ಪಟ್ಟ ಕನಿಷ್ಟ ೩ ಜನ ರಾದರೂ ಕಾವಲಿಗೆ ಇರಬೇಕು ಗಲಾಟಗೂ ಎಮ್ಮೆಗಳಿಂದ ಆಗಿವೆ. ಆದರ ಪ್ರಮಾದವೇನೂ ನಡೆದಿಲ್ಲ .. ಬೆಟ್ಟಕ್ಕೆ ಹೋಗಲು ಸಮೀಪದ ದಾರಿ ಇರೋಲ್ಲ. ಹೊಸ ಎಮ್ಮೆಗಳನ್ನು ಮುಂದೇನೆ ಸೇರಿಸುವ ಕೆಲಸ ಸ್ವಲ್ಪ ತ್ರಾಸವೇ ರೂಡಿ ಇಲ್ಲದ ಕಾರಣ ಒಂಟಿಯಾಗಿ ಮೇಯುವುದು ಮುಂದೆ ಬಿಟ್ಟು ಮುಂದೆ ಹೋಗುವುದು ಬೇರೆ ಎಮ್ಮೆಗಳ ಜೊತೆ ಕದನಕ್ಕಿಳಿಯುವುದು ಇತರೆ ಎಮ್ಮೆಗಳ ನೆಮ್ಮದಿಗೆ ಸಂಚಕಾರ ತರುತ್ತಾವೆ. ಹಾಗಾಗಿ ಕನಿಷ್ಟ ಪಕ್ಷ ಒಂದು ವಾರ ತೀವ್ರ ನಿಗಾ ವಹಿಸಿ ಇವುಗಳನ್ನು ಕಾಯಬೇಕಾಗುತ್ತದೆ. ನಂತರ ಸರಿಯಾಗುತ್ತವೆ. ಯಾವ ಎಮ್ಮೆಗಳಿಗೂ ಹಗ್ಗ ಮುಗುದಾರ ಇರುವುದಿಲ್ಲ. ಹಾಗಾಗಿ ತಪ್ಪಸಿಕೊಳ್ಳುತ್ತಿರುತ್ತವೆ. ಹಾಗೆ ತಪ್ಪಿಸಿ ಕೊಂಡಾಗ ಹುಡುಕುವ ಜವಾಬ್ದಾರಿಯೂ ಇವರದೇ.

ಸಗಣಿಯ ಹಕ್ಕು ಇವರದೇ!
ತುರಿಮಂದೆಯಲ್ಲಿಡುವ ತಪ್ಪೆಯಿಂದಾಗುವ ತಿಪ್ಪೆ ವರ್ಷಕ್ಕೊಮ್ಮೆ ೮-೧೦ ಟ್ರ್ಯಾಕ್ಟರ್ ಲೋಡಿನಷ್ಟು ಗೊಬ್ಬರವಾಗುತ್ತದೆ. ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯಲ್ಲಯೇ ಹೆಚ್ಚು ವೀಳ್ಯದೆಲೆ, ತೆಂಗು, ಅಡಕೆ ತೋಟಗಳ ಮಾಲೀಕರಿಂದಾಗಿ, ತಿಪ್ಪೆ ಗೊಬ್ಬರಕ್ಕೆ ಬೇಡಿಕೆ ಹೆಚ್ಚು ವರ್ಷಕ್ಕೋಮ್ಮೆ ೧೫-೨೦ ಸಾವರ ರೂಪಾಯಿಗಳಿಗೆ ತಿಪ್ಪೆ ಮಾರುತ್ತಾರೆ. ಇವರ ಮಂದೆಗೆ ಬರುವ ಎಮ್ಮೆಯ ಸಗಣಿ ಇವರ ಹಕ್ಕು. ಮನೆಯ ಕೊಟ್ಟಿಗೆಯಲ್ಲಿಟ್ಟರೆ ಮಾಲೀಕದು. ಬಯಲಿನಲ್ಲಿ ಮೇಯುವಾಗ ಇಡುವ ಸಗಣಿಯನ್ನು ಅಲ್ಲಲ್ಲಿಯೇ ಸಣ್ಣ ಗುಡ್ಡೆಗಳನ್ನಾಗಿ ಹಾಕುತ್ತಾರೆ. ಇಂತಹ ನೂರಾರು ಸಗಣಿ ರಾಶಿಗಳು ಬೆಟ್ಟದ ತಪ್ಪಲು, ದನಗಳು ಹೋಗುವ ದಾರಿಯಲ್ಲಿ ಕಂಡುಬರುತ್ತವೆ. ಕೊನೆಗೆ ಎಲ್ಲವನ್ನು ಒಂದುಕಡೆ ಸೇರಿಸಿ ಮಾರುತ್ತಾರೆ. ಬೇಸಾಯ ಮಾಡುವುದುರ ಜೊತೆಯಲ್ಲಿ ಈ ವೃತ್ತಿ ಮುಂದುವರಿಸಿಕೊಂಡು ಬಂದಿರುವ ರಾಮಕ್ಕನವರ ಕುಟುಂಬ ನೆಮ್ಮದಿಯ ಬದುಕನ್ನಂತು ಸಾಗಿಸುತ್ತಿದೆ. ಈ ವೃತ್ತಿಯಿಂದ ವರ್ಷಕ್ಕೆ ಅಂದಾಜು ೫೦ -೬೦ ಸಾವಿರ ನಿಖರ ಆದಾಯವಿದೆ. ಹಳ್ಳಿಗಳಲ್ಲಿ ಆರಾಮಾಗಿ ಬದುಕಲು ಇದು ಸಾಕು.

ಇತ್ತೀಚಿನ ದಿನಗಳಲ್ಲಿ ಹಳ್ಳಿಗಾಡಿನಲ್ಲಿ ಮಕ್ಕಳು ಹಾಗೂ ಮುದುಕರನ್ನು ಬಿಟ್ಟರೆ ಹದಿ ಹರೆಯದವರು, ಮಧ್ಯವಯಸ್ಕರು ಯಾರು ಕಾಣ ಸಿಗುವುದಿಲ್ಲ. ಬರಗಾಲದ ಕ್ರೂರ ದವಡೆಗೆ ಸಿಕ್ಕಿ ವಲಸೆಯೆಂಬ ಮಹಾ ಮಾರಿಗೆ ಬಲಿಯಾಗುತ್ತಾರೆ. ಊರು ಬಿಟ್ಟು ನಗರ ಪ್ರದೇಶಗಳಿಗೆ ಗುಳೇ ಹೋಗಿದ್ದಾರೆ. ಶತಮಾನಗಳಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿದ್ದ ಉಪ ಆದಾಯದ ಮೂಲಗಳನ್ನು ಮರೆತ ರೈತಾಪಿ ವರ್ಗ ಪರ್ಯಾಯ ಕಸುಬುಗಳಿಗೆ ವಾಲುತ್ತಿದ್ದಾರೆ. ಹುಟ್ಟಿದ ಹಳ್ಳಿಗಳ್ಳಲ್ಲಿಯೇ ತಮಗೆ ಗೊತ್ತಿರುವ ಕೆಲಸ ಮಾಡಿಕೊಂಡು ಸ್ವಾವಲಂಭಿಯಾಗಿ ಬದುಕಬಹುದೆನ್ನುವುದಕ್ಕೆ ರಾಮಕ್ಕ ಸಾಕ್ಷಯಾಗಿದ್ದಾಳೆ. ನೀರೆಯೊಬ್ಬರ ಊರ ಹೆಮ್ಮೆ ಕಾಯುವ ನಿರಮ್ಮಳ ಕಾಯಕ ನಿರಂತರವಾಗಿರಲಿ.... ಹಳ್ಳಿಯ ಸೊಗಡು ಮರುಕಳಿಸಲಿ.