ಎರಡು ಕವನಗಳ ಸೊಗಸು...

ಎರಡು ಕವನಗಳ ಸೊಗಸು...

ಕವನ

೧. ಪ್ರೇಮ ಸುನಾದ

ಮಿಂಚು ಹರಿಸುತ ಒಲಿದು ಒಲವಿನ

ಮಳೆಯ ಸುರಿಸಿದ ಮೋಡವೆ

ಇಂಚು ನಗುವಲಿ ಕೊಳಲ ನುಡಿಸುತ

ಎದೆಯ ಬಯಲಲಿ ಓಡುವೆ 

 

ಭಾವ ಲಹರಿಯ ಖುಷಿಯ ನೆನಪಲಿ

ಹಾಲ ಹೊಳೆಯನು ಹರಿಸಿತು

ಹೂವ ರಸವನು ದುಂಬಿ ಹೀರುತ

ತುಟಿಗೆ ಜೇನನು ಸವರಿತು

 

ನನ್ನ ಸನಿಹಕೆ ನೀನು ಬಂದರೆ

ಸುಗ್ಗಿ ಹಬ್ಬವೆ ಹಬ್ಬಿದೆ

ಕಣ್ಣ ರೆಪ್ಪೆಯ ಮುಚ್ಚಿ ತೆರೆದರೆ

ಸಗ್ಗವೆದುರೆ ತಬ್ಬಿದೆ

 

ಹಸಿರ ಎಲೆಗಳ ಮೇಲೆ ಇಬ್ಬನಿ

ಹೊಳೆದು ಮನವನು ಸೆಳೆದಿದೆ

ಹೆಸರ ಬರೆಸಿದೆ ಬಾಳ ಪುಟದಲಿ

ನೂರು ಬೇಸರ ಕಳೆದಿದೆ

***

೨. ಕೊರಡು ಚಿಗುರಿದೆ

ಕೊನರ ತೊಡಗಿದೆ ಕೊರಡು ತುದಿಯಲಿ ಕದವ ತೆರೆದಿದೆ ಬಾಳಲಿ|

ಮನದ ಕೋಗಿಲೆ ಹಾಡ ತೊಡಗಿದೆ ಒಲವ ದೀಪದ ಸಾಲಲಿ||ಪಲ್ಲವಿ||

 

ಬನದ ಗಿಡಗಳು ಹೂವ ಬಿಡುತಿವೆ ನೀಡಿ ಘಮವನು ಗಾಳಿಗೆ|

ಹೊನಲು ಬೆಳಕಿನ ಒಲುಮೆ ಸಂಗಮ ದಿನವು ತುಂಬಲಿ ಜೋಳಿಗೆ ||೧||

 

ಹಿಮವ ಸುರಿಸುವ ಚಳಿಯ ನಾಡಲಿ ಬಿಸಿಯ ಉಸಿರನು ಕಾದಿದೆ|

ರಮಣ ರಮೆಯನು ರಮಿಸಿ ರೋಚಕ ಜಗವೆ ವಿಸ್ಮಯವಾಗಿದೆ ||೨||

 

ಬದುಕ ದಾರಿಯ ಉದಯ ಕಿರಣವು ನೀರ ಸುರಿದಿದೆ ಬೇರಿಗೆ

ಕುದುರೆ ಓಟದ ಜಾಣ ನೋಟವು ಪಯಣ ಬೆಳೆಸಿದೆ ಊರಿಗೆ ||೩||

 

ಸೊಗದ ಸೋಜಿಗ ನೋಡಿ ಮೂಜಗ ನಾಚಿ ಕರಗಿದೆ ಮೋಡಿಗೆ|

ಜಗದ ಸುತ್ತಲು ಹಾಲು ಸಕ್ಕರೆ ಎರಕ ಎದೆಯ ಹಾಡಿಗೆ ||೪||

 

-ಕಾ.ವೀ.ಕೃಷ್ಣದಾಸ್ (ಯಶುಪ್ರಿಯ ಪಕ್ಷಿಕೆರೆ)

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್