ಎರಡು ಗಝಲ್ ಗಳು.....
ಗಝಲ್ ೧
ಈಗೀಗ ಎಲ್ಲರೂ ಎಲ್ಲವೂ ಗೊತ್ತಿದೆ ಎನ್ನುವಂತೆ ಮಾತನಾಡುವವರೆ ನೋಡು
ಹಾಗೆಯೇ ಹೀಗೆಯೇ ಎನುತ ನಮ್ಮ ಮುಂದೆಯೇ ಕುಳಿತಾಡುವವರೆ ನೋಡು
ಕಲಿತಿರುವುದಿಂದು ಸ್ವಲ್ಪವಾದರೂ ಗತ್ತು ಗೈರತ್ತಿಗೇನೂ ಕಡಿಮೆಯಿಲ್ಲವೋ ಏಕೆ
ತಪ್ಪುಗಳಲ್ಲಿಯೆ ಮೀಯುತ್ತಿದ್ದರೂ ಎಲ್ಲರ ಜೊತೆಗೂ ಎಗರಾಡುವವರೆ ನೋಡು
ನಾನು ಸರಿಯಾಗಿರುವೆ ನೀನೇ ಸರಿಯಿಲ್ಲವೆನ್ನುವ ಮಂದಿಯಿಂದ ಏನಾದೀತಯ್ಯಾ
ಬಣ್ಣದ ಮಾತುಗಳಲ್ಲೇ ಕಾಮನ ಬಿಲ್ಲನು ತೋರಿಸಿ ಹೊರಳಾಡುವವರೆ ನೋಡು
ವಿಮರ್ಶೆಗಳಿಂದು ಬರಹಗಾರರ ಉನ್ನತಿಗಾಗಿ ಇರದೆ ಸೋತಿರುವುದೇ ಹೇಳು
ಜಾತಿಯ ಲೆಕ್ಕಾಚಾರದಲ್ಲಿ ಬಲ್ಲವರು ಅಲ್ಲಲ್ಲಿಯೇ ಹೊಡೆದಾಡುವವರೆ ನೋಡು
ಭಾವನೆಗಳೇ ಇಲ್ಲದೆಯೆ ಸಾಹಿತ್ಯವಿಂದು ಮರುಗುತ್ತಿರವುದನ್ನು ನೋಡೋ ಈಶಾ
ಬರೆಯುತ್ತಿರುವುದೇ ಪ್ರಶಸ್ತಿಗೆಂದೂ ಹಲವರ ಕೈಹಿಡಿದು ತಡಕಾಡುವವರೆ ನೋಡು
***
ಗಝಲ್ ೨
ಸುಖದ ನೆಲೆಗೆ ಜಾರುವಾಗ ಮುನಿಸೆ
ಯಶದ ಗೀತೆ ಹಾಡುವಾಗ ಮುನಿಸೆ
ಯೌವನದ ಕಾಲದಲ್ಲಿ ಹೊಸ ಕನಸಿದೆ
ಚೆಲುವು ಉಕ್ಕಿ ಹರಿಯುವಾಗ ಮುನಿಸೆ
ಚಿಂತೆಯಿರದ ವಯಸ್ಸಿನಲ್ಲಿ ಪ್ರೇಮವಿದೆ
ಮಧುರ ಭಾವ ಕಲಿಯುವಾಗ ಮುನಿಸೆ
ಮನದೊಳಗಿನ ಮಾತುಗಳಲಿ ಸವಿಯಿದೆ
ಹೃದಯ ಭಾಷೆ ಅರಿಯುವಾಗ ಮುನಿಸೆ
ಸಖಿಯು ಇರಲಿಂದು ಬೆಸುಗೆಯಿದೆ ಈಶಾ
ಮೌನ ಮುರಿದು ಹೊರಳುವಾಗ ಮುನಿಸೆ
-ಹಾ ಮ ಸತೀಶ ಬೆಂಗಳೂರು
ಚಿತ್ರ : ಇಂಟರ್ನೆಟ್ ಕೃಪೆ