ಎಲ್ಲವೂ ಒಂದು ರೀತಿಯಲ್ಲಿ ನಾಟಕದಂತೆ ಕಾಣುತ್ತದೆ…!
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದ ಈ ಸಂದರ್ಭದಲ್ಲಿ ಅದರ ಸುತ್ತ ಸುಮಾರು 15 ಕ್ಕೂ ಹೆಚ್ಚು ಸಂಘಟನೆಗಳಿಂದ ಮತ್ತು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸುಮಾರು 5 ಕ್ಕೂ ಹೆಚ್ಚು, ಜೊತೆಗೆ ರಾಜ್ಯದ ಮತ್ತಷ್ಟು ಭಾಗಗಳಲ್ಲಿ ಇನ್ನೊಂದಿಷ್ಟು ಸಂಸ್ಥೆಗಳಿಂದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿಭಟನೆ, ಪ್ರದರ್ಶನ, ಹೋರಾಟ, ಚಳವಳಿ ನಿರಂತರವಾಗಿ ನಡೆಯುತ್ತಲೇ ಇದೆ.
" ಪ್ರಜೆಗಳಿಂದ - ಪ್ರಜೆಗಳಿಗಾಗಿ - ಪ್ರಜೆಗಳಿಗೋಸ್ಕರ " ಇರುವ ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯಲ್ಪಡುವ ವಿಧಾನಮಂಡಲದಲ್ಲಿ ಪ್ರಜೆಗಳ ಸಮಸ್ಯೆಗಳ ಬಗ್ಗೆಯೇ ಸಾಕಷ್ಟು ದುಡ್ಡು ಖರ್ಚು ಮಾಡಿ ಚರ್ಚೆ ಮಾಡುತ್ತಿರುವಾಗ ಜನಗಳೇ ಈ ಮುಷ್ಕರ ನಡೆಸುತ್ತಿರುವ ದೃಶ್ಯಗಳು ಯಾವುದೋ ದೊಡ್ಡ ಪ್ರಹಸನದಂತೆ ಭಾಸವಾಗುತ್ತಿದೆ. ಬೇಡಿಕೆ ಏನು, ಪೂರೈಕೆ ಹೇಗೆ, ಚರ್ಚೆಯ ವಿಷಯ ಯಾವುದು, ಚರ್ಚೆ ಮಾಡುತ್ತಿರುವವರು ಯಾರು, ಚಳವಳಿಯಲ್ಲಿ ಭಾಗವಹಿಸುತ್ತಿರುವವರು ಯಾರು ಎಲ್ಲವೂ ಒಂದು ರೀತಿಯಲ್ಲಿ ನಾಟಕದಂತೆ ಕಾಣುತ್ತದೆ.
ಪ್ರತಿಭಟನೆ - ಮುಷ್ಕರ - ಮುತ್ತಿಗೆ - ಹೋರಾಟ - ಚಳವಳಿ - ಬಂದ್ - ಸತ್ಯಾಗ್ರಹ - ಹರತಾಳ - ಅಮರಣಾಂತ ಉಪವಾಸ - ಜೈಲ್ ಭರೋ .. ಬ್ಯಾಂಕ್ ಅಧಿಕಾರಿಗಳು, " ಬೇಕೆ ಬೇಕು ನ್ಯಾಯ ಬೇಕು " ಬೇಡಿಕೆಗಳು -- ಸಂಬಳ ಜಾಸ್ತಿ ಮಾಡಿ, ರಜಾ ಸೌಕರ್ಯ ಹೆಚ್ಚು ಮಾಡಿ, ಖಾಸಗೀಕರಣ ಬೇಡ ಹೀಗೆ ಇನ್ನೂ ಇನ್ನೂ..
ಶಿಕ್ಷಕರು, " ಅನ್ಯಾಯ ಅನ್ಯಾಯ, ಶಿಕ್ಷಕರಿಗೆ ಅನ್ಯಾಯ " ಬೇಡಿಕೆಗಳು -- ಸಂಬಳ ಹೆಚ್ಚು ಮಾಡಿ, ಪರೀಕ್ಷಾ ದಿನ ಭತ್ಯೆ ಜಾಸ್ತಿ ಮಾಡಿ, ವರ್ಗಾವಣೆ ನೀತಿ ರೂಪಿಸಿ ಹೀಗೆ ಇನ್ನೂ ಇನ್ನೂ...
ಅಂಗನವಾಡಿ ಕಾರ್ಯಕರ್ತೆಯರು, " ಧಿಕ್ಕಾರ ಧಿಕ್ಕಾರ ಸರ್ಕಾರಕ್ಕೆ ಧಿಕ್ಕಾರ " ಬೇಡಿಕೆಗಳು -- ಗೌರವಧನ ಹೆಚ್ಚಿಸಿ - ಮೂಲ ಭೂತ ಸೌಕರ್ಯ ಒದಗಿಸಿ ಇನ್ನೂ ಇನ್ನೂ.... ಕನ್ನಡ ಕಾರ್ಯಕರ್ತರು..... " ಕನ್ನಡ ಬೆಳೆಸಿ ಕನ್ನಡ ಉಳಿಸಿ " ಬೇಡಿಕೆಗಳು -- ಕರ್ನಾಟಕದಲ್ಲಿ ಕನ್ನಡಕ್ಕೇ ಆದ್ಯತೆ, ಉದ್ಯೋಗದಲ್ಲಿ ಕನ್ನಡಿಗರಿಗೇ ಮೊದಲ ಪ್ರಾಶಸ್ತ್ಯ, ಸರೋಜಿನಿ ಮಹಿಷಿ ವರದಿ ಜಾರಿಯಾಗಲಿ ಹೀಗೆ ಇನ್ನೂ ಇನ್ನೂ...
ರೈತರು, " ನ್ಯಾಯ ಕೊಡಿ ಇಲ್ಲ ವಿಷ ಕೊಡಿ " ಬೇಡಿಕೆಗಳು -- ಕೃಷಿ ಉತ್ಪನ್ನಗಳಿಗೆ ಬೆಂಬಲ ಹೆಚ್ಚಿಸಿ, ಸಾಲಾ ಮನ್ನಾ ಮಾಡಿ, ಹೀಗೆ ದೊಡ್ಡ ಪಟ್ಟಿ ಸೇರಿ ಇನ್ನೂ ಇನ್ನೂ.
ವಿದ್ಯಾರ್ಥಿಗಳು.. " ನ್ಯಾಯ ನಮ್ಮ ಹಕ್ಕು ಅದು ಭಿಕ್ಷೆಯಲ್ಲ " ಬೇಡಿಕೆಗಳು -- ಪ್ರವೇಶ ಶುಲ್ಕ ಕಡಿಮೆ ಮಾಡಿ, ಶಿಕ್ಷಕರ ಸಂಖ್ಯೆ ಹೆಚ್ಚು ಮಾಡಿ ಇನ್ನೂ ಇನ್ನೂ...
ಕಾರ್ಮಿಕರು.. " ನ್ಯಾಯ ಕೊಡಿ ಇಲ್ಲವೇ ಅಧಿಕಾರ ಬಿಡಿ " ಬೇಡಿಕೆಗಳು -- ಕನಿಷ್ಠ ಸಂಬಳ ಹೆಚ್ಚಿಸಿ, ಮಾಲೀಕರ ಶೋಷಣೆ ತಡೆಯಿರಿ..
ಸರ್ಕಾರಿ ಅಧಿಕಾರಿಗಳು,.." ಪ್ರಾಣ ಬಿಟ್ಟೇವು ಪಿಂಚಣಿ ಬಿಡುವುದಿಲ್ಲ " ಬೇಡಿಕೆಗಳು - ಹಳೆಯ ಪಿಂಚಣಿ ಯೋಜನೆ ಜಾರಿಯಾಗಲಿ - ಹೊಸ ಪಿಂಚಣಿ ಯೋಜನೆ ರದ್ದಾಗಲಿ...
ವಿವಿಧ ಜಾತಿಗಳಿಂದ ಮೀಸಲಾತಿ ಹೋರಾಟಗಳು… ಮಹಿಳೆಯರು, ಅವರು ಇವರು ಎಂದು ಲೆಕ್ಕಾ ಹಾಕುತ್ತಾ ಸಾಗಿದರೆ ಬಹುತೇಕ ಎಲ್ಲರೂ ನೀರಿಗಾಗಿಯೋ, ಬೆಲೆ ಏರಿಕೆಗೋ ಅಥವಾ ಬೇರೆ ಯಾವುದೋ ಕಾರಣಕ್ಕಾಗಿ ಒಂದಲ್ಲಾ ಒಂದು ರೀತಿಯ ಅಸಮಾಧಾನ ಹೊರ ಹಾಕುತ್ತಲೇ ಇದ್ದಾರೆ.
ಶೋಭಾ ಯಾತ್ರೆ - ಹಿಂದೂಪರರಿಂದ, ಸ್ವಾಭಿಮಾನ ಯಾತ್ರೆ - ಶೋಷಿತ ವರ್ಗದವರಿಂದ, ಸೌಹಾರ್ದಯಾತ್ರೆ - ಮುಸ್ಲೀಮರಿಂದ, ಶಾಂತಿಯಾತ್ರೆ - ಕ್ರಿಶ್ಚಿಯನ್ನರಿಂದ, ಅಹಿಂಸಾ ಯಾತ್ರೆ - ಜೈನರಿಂದ, ಸಮಾನತೆಯ ಯಾತ್ರೆ - ಲಿಂಗಾಯತರಿಂದ, ಪರಿವರ್ತನಾ ಯಾತ್ರೆ - ಭೌದ್ದರಿಂದ, ಕಾಲ ಭೈರವ ಯಾತ್ರೆ - ಒಕ್ಕಲಿಗರಿಂದ, ಕನಕ ಯಾತ್ರೆ - ಕುರುಬರಿಂದ...ಭಾವೈಕ್ಯತೆಯ ಯಾತ್ರೆ - ಪ್ರಗತಿಪರರಿಂದ.....ಯಪ್ಪಾ,
ಏನಿದು ನಾವು ಜೀವಿಸುತ್ತಿರುವ ವ್ಯವಸ್ಥೆ, ಏನೆಂದು ಹೇಳುವುದು ನಮ್ಮ ಮುದ್ದು ಮಕ್ಕಳಿಗೆ - ಯಾವುದನ್ನು ಕಲಿಸುವುದು ಪುಟ್ಟ ಕಂದಮ್ಮಗಳಿಗೆ - ಹೇಗೆ ಅರ್ಥಮಾಡಿಸುವುದು ಮುಂದಿನ ಪೀಳಿಗೆಗೆ. ಈ ವಿಭಜಕ ವಾತಾವರಣದಲ್ಲೇ ಇದ್ದರೆ ಕಟ್ಟುವ ಕ್ರಿಯಾತ್ಮಕ ವಾತಾವರಣಕ್ಕೆ ಬದಲಾಗುವುದು ಯಾವಾಗ?
ಅಲ್ಲಾ ಕಣ್ರೀ, ಸಿನಿಮಾಗಾಗಿ ಆಸ್ಕರ್ ಪ್ರಶಸ್ತಿಯನ್ನು ಪಡೆಯುವುದೆಂದು - ಸಂಗೀತಕ್ಕಾಗಿ ಇನ್ನೊಂದಿಷ್ಟು ಗ್ರಾಮ್ಯೀ ಅವಾರ್ಡ್ ಪಡೆಯುವುದು ಯಾವಾಗ, ಸಾಹಿತ್ಯ, ವಿಜ್ಞಾನ, ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆಯುವುದು ಎಂದು,
ಒಲಿಂಪಿಕ್ ಕ್ರೀಡೆಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಳ್ಳುವುದನ್ನು ನೋಡುವುದು ಯಾವಾಗ? ನಮ್ಮ ಮಕ್ಕಳು ಆತಂಕರಹಿತವಾಗಿ ಬದುಕು ಸವಿಯುವುದನ್ನು ನೋಡಿ ಕಣ್ತುಂಬಿಕೊಳ್ಳುವುದು ಯಾವಾಗ? ಇವೆಲ್ಲಾ ಕನಸುಗಳಾಗೇ ಉಳಿಯುತ್ತವೆಯೇ ? ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲವೇ ? ಅಷ್ಟೊಂದು ಅಸಹಾಯಕರೇ ?
ಹಾಗಾದರೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೇ ಚುನಾಯಿಸಿದ ಸರ್ಕಾರ ಮಾಡುತ್ತಿರುವುದಾದರೂ ಏನು ? ಅಥವಾ ನಮ್ಮದೇ ಸರ್ಕಾರದ ವಿರುದ್ಧ ಹೋರಾಡುವ ನಾವೇ ಅವಾಸ್ತವ ಬೇಡಿಕೆಗಳನ್ನು ಇಡುತ್ತಿದ್ದೇವೆಯೇ ? ಅಥವಾ ನ್ಯಾಯ ಅನ್ಯಾಯ, ಬೇಡಿಕೆ ಪೂರೈಕೆ, ವಾಸ್ತವ ಭ್ರಮೆ, ಸರ್ಕಾರ ಸಾರ್ವಜನಿಕ ಕರ್ತವ್ಯಗಳು ಈ ಎಲ್ಲವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೇವೆಯೇ....
ಅಪರೂಪಕ್ಕೆ ಸರ್ಕಾರದ ಕೆಲವು ಅಚಾತುರ್ಯದ ವಿರುದ್ಧ ಹೋರಾಡಬೇಕಾದ ಜನ ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಪ್ರತಿಭಟಿಸುತ್ತಾ ಅದನ್ನೇ ವೃತ್ತಿ ಅಥವಾ ಹವ್ಯಾಸ ಮಾಡಿಕೊಳ್ಳುವ ಮಟ್ಟಕ್ಕೆ ಆಡಳಿತ ವ್ಯವಸ್ಥೆ ಕುಸಿಯಲು ಕಾರಣವೇನು? ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಎಲ್ಲೋ ಕೊಂಡಿ ಕಳಚಿದೆ. ಸಮನ್ವಯ ಸಾಧ್ಯವೇ ಆಗುತ್ತಿಲ್ಲ. ಅವರ ಬೇಡಿಕೆ ಮತ್ತು ಪೂರೈಕೆ ತುಂಬಾ ದೂರದಲ್ಲಿದೆ. ಪ್ರಜಾಪ್ರಭುತ್ವದ ನಿಜ ಯಶಸ್ಸು ಸರ್ಕಾರದ ಜನ ಸ್ಪಂದನೆಯ ಆಧಾರದಲ್ಲಿ ನಿರ್ಧರಿಸಬೇಕಿದೆ. ಅದನ್ನು ಸರಿದೂಗಿಸುವುದೇ ಜನರ ಜೀವನಮಟ್ಟ ಸುಧಾರಣೆಯ ಮೊದಲ ಮೆಟ್ಟಿಲು ಎಂದು ಭಾವಿಸಬಹುದೇ...ಪರಿಹಾರದ ಮಾರ್ಗಗಳನ್ನು ಯೋಚಿಸುತ್ತಾ ನಿಮ್ಮೊಂದಿಗೆ....
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ