ಎಸ್ಸೆಮ್ಮೆಸ್ಸಿಗೆ ದಾರಿ ಬಿಡು....(ಲಘು ಬರಹ)

ಎಸ್ಸೆಮ್ಮೆಸ್ಸಿಗೆ ದಾರಿ ಬಿಡು....(ಲಘು ಬರಹ)

ಬರಹ

ದಾರಿ ಬಿಡು, ದಾರಿ ಬಿಡು...
ಬೆಳ್ಳಂ ಬೆಳಿಗ್ಗೆ ದಾರಿ ಬಿಡು
ಎಸ್ಸೆಂಸ್ಸಿಗೆ ದಾರಿ ಬಿಡು
ಹಳೆ ಮೆಸ್ಸೇಜ್‌ಗಳ ಅಳಿಸಿ ಬಿಡು
ಹೊಸದಕ್ಕೆ ನೀ ದಾರಿ ಬಿಡು
ಮನಸ್ಸಲ್ಲೊಂದಿಷ್ಟು ನಕ್ಕು ಬಿಡು

ಮುಂಜಾನೆ ರಂಗೇರುತ್ತಿದ್ದಂತೆ ಕೋಳಿಗಿಂತಲೂ ಮುಂಚೆಯೇ ನಿಮ್ಮ ಮೊಬೈಲು ಕುಂಯ್‌ಗುಟ್ಟತೊಡಗುತ್ತದೆ. ಹಾಸಿಗೆಯಿಂದೇಳುತ್ತಾ ಕಣ್ಣೊರೆಸಿಕೊಂಡು ಬಾಯಾಕಳಿಸುತ್ತಾ ಮೊಬೈಲು ಗುಂಡಿ ಒತ್ತಲು ರೆಡಿ. ಅಲ್ಲಿ ನೋಡಿದರೆ ಹತ್ತಿಪ್ಪತ್ತು ಗುಡ್ ಮಾರ್ನಿಂಗ್ ಮೆಸ್ಸೇಜುಗಳು.. ಅದಕ್ಕೊಂದು `ಕೋಟ್' ಅಟ್ಯಾಚ್ ಆಗಿರುತ್ತದೆ. ಕೆಲವೊಂದು ಗಂಭೀರವಾಗಿದ್ದರೆ ಕೆಲವೊಂದು ಕಚಗುಳಿಯಿಡುತ್ತವೆ. ಒಂದೊಂದನ್ನೇ ಓದುತ್ತಾ ಕೆಲವು ರಿಪೀಟ್ ಆಗಿರುವುದನ್ನು ಡಿಲೀಟ್ ಮಾಡುತ್ತಾ ಮುಂದಿನದನ್ನು ಓದುವುದರಲ್ಲಿ ಮಗ್ನ.. ಡಿಲೀಟ್ ಮಾಡಿದಷ್ಟೂ ಇನ್ನೂ ತುಂಬುವ ಬುತ್ತಿ ಈ ಇನ್‌ಬಾಕ್ಸ್.

"ಜಾರ್ಜ್ ಬುಷ್
ಅಬ್ದುಲ್ ಕಲಾಮ್
ಅಮಿತಾಬ್ ಬಚ್ಚನ್
ಸಚಿನ್ ತೆಂಡೂಲ್ಕರ್ ಹಾಗೂ ನಾನು.....
ಈ ಎಲ್ಲಾ ವಿ. ಐ. ಪಿ ಗಳಿಂದ ನಿನಗೆ ಗುಡ್ ಮಾರ್ನಿಂಗು..."

ಇಂಥಹ  ಕೆಲವೊಂದು ಮೆಸ್ಸೇಜುಗಳು ಕಳಿಸಿದವನ ಮೇಲೆ ಅನುಮಾನ ಮೂಡಿಸಿ. ಇವನ್ಯಾವಾಗ ಅವರ ಸಾಲಿನಲ್ಲಿ ಸೇರಿದ್ನಪ್ಪೊ ಅಂತ ಕಳವಳ..
ಅದರೊಂದಿಗೆ ಕೆಲವು ಸಂಜ್ಞೆಗಳಿಂದ ಅದಕ್ಕೊಪ್ಪುವಂತೆ ನಿರ್ಮಿತ ಚಿತ್ರಗಳು.. ಆಹಾ...

ಹತ್ತು ಗಂಟೆ ಕಳೆದರೆ.. ಸಾಕು ಸೆಕೆಂಡ್ ವರ್ಷನ್ ಎಸ್ಸೆಂಸ್ಸು ಶುರುವಾಗುತ್ತದೆ...
ಕೆಲವೊಂದು ಅನುಭವಾಮೃತಗಳು, ಚಿಕ್ಕ ಪುಟ್ಟ ಸಂದೇಶಗಳು ಹಾಗೂ ನಯವಾದ ಪೋಲಿ ಜೋಕುಗಳು, ಟೀಸಿಂಗ್ ಸೆಂಟೆನ್ಸು... ಇವೆಲ್ಲಾ ಈ ಪಾಳಿಯ ಸರಕು

ಎಲ್ಲಾ ಮರಗಳಿಗೂ ನೀನೊಂದು ಸುಂದರ `ಹೂ'ವಿದ್ದಂತೆ
ಎಲ್ಲಾ ಮುಖಗಳಿಗೂ ನೀನೊಂದು ಮಿನುಗುವ 'ನಗು'ವಿದ್ದಂತೆ
ಎಲ್ಲಾ ಗುಡ್ಡಗಳಿಗೂ ನೀನೊಂದು ಹರಿಯುವ 'ಝರಿ'ಯಿದ್ದಂತೆ
ಎಲ್ಲಾ ಚಂದದ ಹುಡುಗಿಯರಿಗೂ ನೀನೊಂದು ಒಳ್ಳೆಯ 'ಅಣ್ಣ'ನಿದ್ದಂತೆ

..........ಇಂತಹ ಟೀಸಿಂಗು ಮುದ ನೀಡುತ್ತವೆ..

ಸಾದಾರಣ ೧ -೨ ಗಂಟೆಯ ನಂತರದ ವರ್ಷನ್ನು ಜೋಕುಗಳದ್ದು.. ಅದರಲ್ಲಿ ಬಹುಪಾಲು ಸರ್ದಾರ್ಜಿ ಜೋಕುಗಳು, ನೀಲು ಕೀಲು ಜೋಕುಗಳಿಗೂ ಬರವಿಲ್ಲ...

"ಎಲ್ಲಿದ್ದೀಯಾ?.. ಎಲ್ಲಿದ್ದರೂ ಸರಿ ಅಲ್ಲೇ ಇರು ೩- ೪ ಗಂಟೆ ಹೊರಗೆ ಬರ್ಬೇಡ.. ಕೋತಿ ಹಿಡಿಯೋರು ಸುತ್ತುತ್ತಾ ಇದ್ದಾರೆ.. ಸುಮ್ನೆ ಯಾಕೇ.. ರಿಸ್ಕು?''

೪ ರಿಂದ ೭ ರವೆಗಿನ ವರ್ಷನ್ನು - ಈ ಸಮಯದಲ್ಲಿ ಕಾಲೇಜು, ಆಫೀಸು ಬಿಡೋ ಹೊತ್ತು ಸಂಜೆಯ ಗೆಳೆಯ ಗೆಳತಿಯರಿಗಿದು ಮೀಟಿಂಗು ಟೈಮು.

"ಹಾಯ್ ಡಾರ್ಲಿಂಗ್ ಅಶೋಕ ಹೊಟೇಲ್ ಹತ್ತಿರ ಬರ್ತೀಯಾ?''
ಅನ್ನೋ ಮೆಸೇಜಿಗೆ..
"ಸ್ಸಾರಿ ಸ್ವೀಟಿ ನಮ್ಗೆ ಇವತ್ತು ಅರ್ಜೆಂಟ್ ಕೆಲ್ಸ ಇದೆ.. ನಾಳೆ ಸಿಗ್ಲಾ .. ಬೇಜಾರ್ ಮಾಡ್ಕೊಳ್ಳಲ್ಲಾ ತಾನೇ''
ಅನ್ನೋ ರಿಪ್ಲೈ.
ಅಥವಾ "ಏಯ್.. ಈವ್ನಿಂಗು ನನ್ ಪ್ರಮೋಶನ್ ಪಾರ್ಟಿ ಇದೆ ನೀನು ಖಂಡಿತ ಬರ್ಬೇಕು ಕಣೋ, ೭ ಒ'ಕ್ಲಾಕಿಗೆ ಹೊಟೇಲ್ ಸಿಪ್ `ಎನ್' ಡೈನ್‌ನಲ್ಲಿ ಕಾಯ್ತಿರ್ತೀನಿ ಓ . ಕೆ.'
ಅನ್ನೋ ಇನ್ವಿಟೇಶನ್ನುಗಳು..

ಪಾರ್ಟಿ - ಮೀಟಿಂಗು ಮುಗಿಸಿ ಸಂಜೆ ಮನೆಗೆ ಹೋದ ನಂತರದ ೮:೩೦ ಯಿಂದ ಮಲಗೋ ವರೆಗಿನ ಲಾಸ್ಟ್ ವರ್ಷನ್ನು ಗುಡ್ ನೈಟು ಹೇಳೋ ಟೈಮು. ಇಲ್ಲೂ ಜೋಕು, ಟೀಸಿಂಗು, ಸೀರಿಯಸ್ಸು ಎಲ್ಲಾ ಸಮ್ಮಿಳಿತಗೊಂಡಿರುತ್ವೆ..

'ಕೋತಿಯ ಚಿತ್ರದೊಂದಿಗೆ  "ಅರೆ ನೀನಿನ್ನೂ ಮರದಲ್ಲಿ ಜೋತಾಡ್ತಾ ಇದ್ದೀಯಾ?... ಕೆಳಗ್ ಬಾರೋ .. ಮಲಗೋ ಹೊತ್ತಾಯ್ತು''... ಗುಡ್ ನೈಟ್...' ಎಂಬ ಟೀಸಿಂಗು.

ದಿನವಿಡೀ ಮೆಸ್ಸೇಜು ಗುಂಡಿ ಒತ್ತಿ ಒತ್ತಿ ಸುಸ್ತಾಗಿರುತ್ತೇವೆ.. ಮೊಬೈಲ್ ಸ್ವಿಚ್ ಆಫ್ ಮಾಡಿ ಚಾರ್ಗಿಂಗ್‌ಗೆ ಇಟ್ಟು ಮಲಗೋದ್ರಲ್ಲಿ ನಿದ್ದೆ ಹತ್ತೋದೇ ಗೊತ್ತಾಗೊಲ್ಲ...

ಪ್ರಕಾಶ್ ಶೆಟ್ಟಿ ಉಳೆಪಾಡಿ