ಏನಾದರೂ ಆಗು, ಮೊದಲು ಮಾನವನಾಗು..

ಏನಾದರೂ ಆಗು, ಮೊದಲು ಮಾನವನಾಗು..

ಬರಹ

ಏನಾದರೂ ಆಗು, ಮೊದಲು ಮಾನವನಾಗು..

ಬದುಕು ಎಂಬುದು ನಮಗೆಲ್ಲರಿಗೂ ದೊರೆತ ಬೆಲೆ ಕಟ್ಟಲಾಗದ ಅತ್ಯಮೂಲ್ಯ ಕಾಣಿಕೆ. ತಾಳ್ಮೆ, ಪರೋಪಕಾರ, ಸಹಬಾಳ್ವೆ, ದಯೆ, ಕರುಣೆ, ಹೀಗೆ ಮುಂತಾದ ಮೌಲ್ಯಗಳನ್ನು ಈ ಬದುಕಿನಲ್ಲಿ ರೂಢಿಸಿಕೊಳ್ಳುವುದರ ಮೂಲಕ ಈ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಇಂತಹ ಸುದುದ್ದೇಶದಿಂದಲೇ ಆಚರಣೆಗೆ ಬಂದಿರುವುದು ’ಧರ್ಮ’ ಎಂಬ ನೀತಿ ಸಂಹಿತೆ.

ಇಂದು ಧರ್ಮದ ಕುರಿತು ಅನೇಕ ಚರ್ಚೆ, ಸಂವಾದ, ಸಂಘರ್ಷಗಳು ನಡೆಯುತ್ತಲೇ ಇವೆ. ಮನುಷ್ಯ - ಮನುಷ್ಯರ ನಡುವೆ ಸೇತುವೆಯಾಗಬೇಕಿದ್ದ ಧರ್ಮ, ಇಂದು ಮನುಷ್ಯರ ನಡುವೆ ಗೋಡೆಯಾಗಿದೆ. ಪ್ರೀತಿ ಹುಟ್ಟಿಸಬೇಕಿದ್ದ ಧರ್ಮ ಇಂದು ದ್ವೇಷದ ಕಿಡಿ ಕಾರುತ್ತಿದೆ. ’ಧರ್ಮ ಸಹಿಷ್ನುತೆ’ ಎಂಬ ಪದ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿದೆ.ಸರ್ವಧರ್ಮೀಯರೊಂದಿಗೆ ಸಹಬಾಳ್ವೆ ನಡೆಸುತ್ತಿರುವ ಭಾರತೀಯರ ಜೀವನದಲ್ಲಿ ಇಂದು ಕೋಮುಗಲಭೆ, ಮತಾಂತರ ಹಾಗೂ ಧರ್ಮದ ಇತರೆ ವಿಷಯಗಳಿಗಾಗಿ ಅನೇಕ ಜಗಳಗಳು, ಘರ್ಷಣೆಗಳು, ಸಂಘರ್ಷಗಳು ನಡೆದು ಸಾಮಾಜಿಕ ಶಾಂತಿ ಭಂಗವಾಗುತ್ತಿದೆ. ಒಬ್ಬ ವ್ಯಕ್ತಿ ಅನ್ಯ ಧರ್ಮವನ್ನು ದ್ವೇಷಿಸುತ್ತಾನೆ ಎಂದರೆ, ಆತ ತನ್ನ ಧರ್ಮವನ್ನು ಸರಿಯಾಗಿ ತಿಳಿದುಕೊಂಡಿಲ್ಲವೆಂದೇ ಹೇಳಬೇಕಾಗುತ್ತದೆ. ಏಕೆಂದರೆ, ಯಾವುದೇ ಧರ್ಮವು ಹಿಂಸೆ, ಅಸೂಯೆ, ಜಗಳ ಮುಂತಾದ ಋಣಾತ್ಮಕ ಅಂಶಗಳನ್ನು ಪ್ರತಿಪಾದಿಸುವುದಿಲ್ಲ.

’ಪರರಿಗೆ ಕೇಡು ಬಗೆಯಬಾರದು’ ಎಂಬುದು ಎಲ್ಲ ಧರ್ಮಗಳಲ್ಲಿ ಕಂಡು ಬರುವ ಅಂಶ.

ಒಂದು ಧರ್ಮದಲ್ಲಿರುವ ವಿಚಾರಗಳು, ನೀತಿ, ನಿಯಮಗಳು ಸರ್ವಕಾಲಕ್ಕೂ ಅನ್ವಯವಾಗುತ್ತದೆ ಎಂದು ಹೇಳಲಾಗದು. ಕಾಲಕ್ಕೆ ತಕ್ಕಂತೆ, ಧರ್ಮದ ವಿಚಾರಗಳು, ಆಚರಣೆಗಳು ಪರಿಷ್ಕ್ರ್ರ್ತತಗೊಳ್ಳುತ್ತಾ ಸಾಗಬೇಕು. ಈ ರೀತಿಯ ಪರಿಷ್ಕರಣೆ ಧರ್ಮದ ಉಳಿವಿಗೆ ಹಾಗು ಬೆಳವಣಿಗೆಗೆ ಸಹಕಾರಿ. ಅಂತೆಯೇ, ನೂನ್ಯತೆಗಳೇ ಇಲ್ಲದ ಧರ್ಮಗಳು ಯಾವುದೂ ಇಲ್ಲ. ಪ್ರತಿ ಧರ್ಮದಲ್ಲಿಯೂ ಪಂಗಡ, ಒಳ ಪಂಗಡಗಳು, ಮೂಢನಂಬಿಕೆ ಇದ್ದದ್ದೇ. ಆದ್ದರಿಂದ, ಒಂದು ಧರ್ಮದ ನೂನ್ಯತೆಗಳೇ ಮತ್ತೊಂದು ಧರ್ಮಕ್ಕೆ ಮತಾಂತರವಾಗಲು ಕಾರಣವಾಗಬಾರದು.

’ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸು’ ಎಂಬುದೇ ಎಲ್ಲ ಧರ್ಮದ ದಿವ್ಯವಾಣಿ.

ಹೀಗೆ ಧರ್ಮ ಹಾಗೂ ಧರ್ಮಪಾಲನೆ ಬಗ್ಗೆ ಎದುರಾಗಿರುವ ಹತ್ತು ಹಲವು ಗೊಂದಲಗಳೇ ಇಂದು ಸಮಾಜದ ಶಾಂತಿ, ಸ್ವಾಸ್ಥ್ಯ ಕೆಡಿಸುತ್ತಿರುವುದು. ಈ ರೀತಿಯಾದಾಗ ಯಾವ ಧರ್ಮ ಸರಿ ? ಯಾವ ಧರ್ಮವನ್ನು ಪಾಲಿಸುವುದು ? ಎಂಬ ಜಿಜ್ಣಾಸೆ ಮೂಡುತ್ತದೆ.

’ ನಡೆವುದೊಂದೇ ಭೂಮಿ, ಕುಡಿವುದೊಂದೇ ಜಲ,
ಸುಡುವಾಗ್ನಿಯೊಂದೇ ಇರುತಿರಲು, ಜಾತಿ-ಧರ್ಮಗಳು
ನಡುವೆ ಎತ್ತಣದು ಸರ್ವಜ್ನ ’

ಯಾವುದೇ ದೇಶ, ಭಾಷೆಯಿರಲಿ ನಾವು ನಡೆದಾಡುವ ನೆಲ, ಕುಡಿಯುವ ನೀರು, ಸುಡುವ ಅಗ್ನಿ ಎಲ್ಲ ಒಂದೇ ಆಗಿರುವಾಗ, ಈ ಜಾತಿ ಧರ್ಮಗಳ ಗೊಂದಲಗಳು ನಮಗೇಕೆ ?

ಆದಿಕವಿ ಪಂಪ ಹೇಳಿರುವಂತೆ, ’ ಮನುಷ್ಯ ಜಾತಿ ತಾನೊಂದೇ ವಲಂ ’

ಮನುಷ್ಯ ಮನುಷ್ಯರ ನಡುವೆ ಸಾಮಾಜಿಕ ಸಂಬಂಧಗಳಲ್ಲಿ ಬಿರುಕು ಮೂಡಿಸುವ ಈ ಧರ್ಮಗಳಿಗಿಂತ ಮನುಷ್ಯ ಧರ್ಮ / ಮಾನವ ಧರ್ಮವೇ ಶ್ರೇಷ್ಠವಾದದ್ದು.

ನಮ್ಮೆಲ್ಲರ ಹೆಮ್ಮೆಯ ರಾಷ್ಟ್ರಕವಿ ಕುವೆಂಪುರವರ ’ವಿಶ್ವಮಾನವ ಸಂದೇಶ’ ಈ ಸಂದರ್ಭದಲ್ಲಿ ಬಹಳ ಪ್ರಸ್ತುತ ಹಾಗು ಸದಾ ನಾವೆಲ್ಲ ಸ್ಮರಿಸಬೇಕಾಗಿರುವಂತದ್ದು.

" ಪ್ರತಿಯೊಂದು ಮಗುವು ಹುಟ್ಟುತ್ತಲೇ - ’ವಿಶ್ವಮಾನವ’, ಬೆಳೆಯುತ್ತಾ ನಾವು ಅದನ್ನು ’ಅಲ್ಪ ಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು

’ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು.

ಮನುಜ ಮತ, ವಿಶ್ವ ಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ - ಈ ಪಂಚಮಂತ್ರ ಇನ್ನು ಮುಂದಿನ ದೃಷ್ಠಿಯಾಗಬೇಕಾಗಿದೆ. ಅಂದರೆ,

ನಮಗೆ ಇನ್ನು ಬೇಕಾದುದು ಆ ಮತ, ಈ ಮತ ಅಲ್ಲ ; ಮನುಜ ಮತ.

ಆ ಪಥ, ಈ ಪಥ ಅಲ್ಲ ; ವಿಶ್ವ ಪಥ.

ಆ ಒಬ್ಬರ ಉದಯ ಮಾತ್ರವಲ್ಲ ; ಸರ್ವರ ಸರ್ವಸ್ತರದ ಉದಯ.

ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ ; ಸಮನ್ವಯಗೊಳ್ಳುವುದು. ಸಂಕುಚಿತ ಮತದ ಆಂಶಿಕ ದೃಷ್ಠಿಯಲ್ಲ ,

ಭೌತಿಕ, ಪಾರಮಾರ್ಥಿಕ ಎಂಬ ಭಿನ್ನದೃಷ್ಥಿಯಲ್ಲ ; ಎಲ್ಲ್ಲವನ್ನೂ ಭಗವದ್ ದೃಷ್ಠಿಯಿಂದ ಕಾಣುವ ಪೂರ್ಣದೃಷ್ಠಿ. "

ನಮ್ಮ ದೈನಂದಿನ ಜೀವನವೇ ನಮ್ಮ ದೇಗುಲ ಮತ್ತು ನಮ್ಮ ಧರ್ಮವಾಗಬೇಕು ಎಂಬುದೇ ಈ ಯುಗದ ಕವಿಯ ವಿಶ್ವಮಾನವ ಸಂದೇಶದಿಂದ ನಾನು ತಿಳಿದುಕೊಂಡಿರುವ ಅಂಶ.

" ಏನಾದರೂ ಆಗು, ಮೊದಲು ಮಾನವನಾಗು "