ಒಂದಿಷ್ಟು ಹನಿಗಳು
ಕನ್ನಡ ಭಾಷಾ ಮಹಿಮೆ!
ಕವಿಸಿರಿ ಕುವೆಂಪು-
ಕನ್ನಡದಲ್ಲಿಯೇ
ಬಿನ್ನಹಗೈದೊಡೆ
ಹರಿವರಗಳ
ಮಳೆ ಕರೆಯುವನು-
ಎಂದು ಹೇಳಿದ ಮೇಲೇ...
ಕನ್ನಡದ ರಾಜಕಾರಣಿಗಳು-
ಅಚ್ಚ ಕನ್ನಡದಲ್ಲಿಯೇ
ವ್ಯವಹರಿಸುವುದರಿಂದ
ಇಷ್ಟೊಂದು
ಉಚ್ಛ ಸ್ಥಾನ-ಮಾನ
ಸಿರಿ ಪಡೆದಿರಬಹುದೇ?
***
ಡಬಲ್ ಧಮಾಕಾ
ಕನ್ನಡಿಗರಿಗೀ ವರ್ಷ
ಡಬಲ್ ಧಮಾಕಾ-
ದೀಪಾವಳಿಯೊಂದಿಗೆ
ಬೆರೆತು ಬೆಳಗುತಿದೆ
ಕನ್ನಡ ರಾಜ್ಯೋತ್ಸವಿದು
ದೇದೀಪ್ಯಮಾನ...
ಸವಿ ಕನ್ನಡದ
ರಾಜ್ಯೊತ್ಸವವಿದು-
ದೀವಳಿಗೆಯ
ಬೆಳಕಿನಲಿ
ಬೆಳಗಲಿ
ಜಾಜ್ವಲ್ಯಮಾನ!
***
ಪವರ್ ಫುಲ್ ಹಾಸನಾಂಬೆ
ಹಾಸನಾಂಬೆ-
ನಿನ್ನೀ ದರ್ಶನಕೆ
ಸರ್ಕಾರೀ ಅಧಿಕಾರಿಗಳು
ರಾಜಕಾರಣಿಗಳ-
ಮಾರಾಮಾರೀ
ಹೊಡೆದಾಟ...
ವರ್ಷದಲಿ
ಏನಿದು ಹನ್ನೆರೆಡೇ
ದಿನಗಳ ದರ್ಶನ....
ತೋರಿಬಿಡು
ವರ್ಷವಿಡೀ
ವಿಹಂಗಮ ನೋಟ!
***
ಓ ಮನಸೇ...
ಮನಸು
ವ್ಯಗ್ರಗೊಂಡು
ದೂರಾಗಲು
ಸಾಕು-
ಒಂದೇ ಒಂದು
ಕ್ಷುಲ್ಲಕ ಕಾರಣ...
ಪ್ರೀತಿಯಿಂದ
ಮುದಗೊಂಡು
ನಲಿದು
ಕೂಡಿಬಾಳಲು
ಬೇಕು
ನೂರಾರು ಹೂರಣ!
***
ಅಳಬೇಡ ತಮ್ಮ...
ನಾನು
ಯಾರಿಗೂ
ಇಷ್ಟವಾಗುತ್ತಿಲ್ಲ
ಎಂದು-
ಗಳಗಳ
ಅಳಬೇಡ ದಡ್ಡಾ...
ಎಲ್ಲರಿಗೂ
ಇಷ್ಟವಾಗಲು
ನೀನೇನು
ಸರ್ವಪ್ರಿಯ
ಝಣ ಝಣ
ಮೌಲ್ಯದ ದುಡ್ಡಾ?
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ