ಒಂದು ಒಳ್ಳೆಯ ನುಡಿ (11) -ತಾಳ್ಮೆಯೆಂಬ ತಪಸ್ಸು

ಒಂದು ಒಳ್ಳೆಯ ನುಡಿ (11) -ತಾಳ್ಮೆಯೆಂಬ ತಪಸ್ಸು

ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ?

ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ//

 ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ? 

ತಾಳುಮೆಯ ಪರಿಪಾಕ--ಮಂಕುತಿಮ್ಮ//

ಬೆಳಗಿನ ಹೊತ್ತು ಹೊಲದಲ್ಲಿ ಕಾಳನ್ನು ಬಿತ್ತಿ, ಸಂಜೆಯೇ ಫಲ ನೀಡು ಎಂದರೆ ಹೇಗೆ? ಮದುವೆಯಾದ ತಕ್ಷಣ ಮಕ್ಕಳು, ಹುಟ್ಟಿದ ಮಗು ಕೂಡಲೇ ಓಡಾಡಬೇಕು ಎಂದರೆ ಹೇಗೆ? ಇದೆಲ್ಲಾ ಹಾಸ್ಯಾಸ್ಪದವಲ್ಲವೇ? ಎಲ್ಲದಕ್ಕೂ ತಾಳ್ಮೆ, ಕಾಯುವಿಕೆ ಇರಲೇ ಬೇಕು. ತಾಳ್ಮೆ ಎಂಬುದು ಒಂದು ರೀತಿಯ ತಪಸ್ಸು ಇದ್ದಂತೇ ಸರಿ. ನೆಟ್ಟ ಸಸಿ ಫಲ ನೀಡುವವರೆಗೆ ತಾಳಲೇ ಬೇಕು. ಪುಟ್ಟ ಮಗು ಅಂಬೆಗಾಲಿಡುತ್ತಾ, ಎದ್ದು ಬಿದ್ದು ನಡೆದಾಡಿ, ಮುಂದೆ ನೆಟ್ಟಗೆ ನಡೆಯುವಲ್ಲಿವರೆಗೆ ಕಾಯಲೇಬೇಕು.

ಮಾನವ ಸ್ವಭಾವ, ಎಲ್ಲವೂ ತಕ್ಷಣ ಕಾಲಬುಡಕ್ಕೆ ಬರಬೇಕು, ಸಿಗಬೇಕು ಎಂದು. ಅದು ಸಾಧ್ಯವೇ? ಮನುಷ್ಯ ಇಷ್ಟೂ ಸೋಮಾರಿಯಾದರೆ ಹೇಗೆ? ನಾವು ಮಕ್ಕಳನ್ನು ವಿವಿಧ ಲಲಿತ ಕಲೆಗಳಿಗೆ, ಸೃಜನಾತ್ಮಕ ಚಟುವಟಿಕೆಗಳಿಗೆ ಸೇರಿಸುತ್ತೇವೆ. ಎರಡು ತಿಂಗಳಾಗಲು ಪುರುಸೊತ್ತಿಲ್ಲ, ಅರ್ಧಂಬರ್ಧ ಕಲಿತ ಮಗು, ಇನ್ನೂ ಪ್ರಾಥಮಿಕ ಪಠ್ಯ ಸಹ ಆಗಿರದ ಸ್ಥಿತಿಯಲ್ಲಿ ವೇದಿಕೆಯಲ್ಲಿ ಮಿಂಚಬೇಕೆಂಬ ಬಯಕೆ ಹೆತ್ತವರದು. ಪಾಪ ಆ ಮಗುವಿನ ಮಾನಸಿಕ ಸ್ಥಿತಿ ಹೇಗಿದೆಯೆಂದು ಹೆತ್ತವರು ಒಂದಿನಿತೂ ಯೋಚಿಸುವುದಿಲ್ಲ. ಒಟ್ಟಾರೆ ಕಾಯುವ ತಾಳ್ಮೆ ಅವರಿಗಿಲ್ಲ. ಇದರಿಂದ ಕಲೆಯ ಕೊಲೆಯಾಗುವುದು ಸತ್ಯ. ಮಗುವಿನ ಆರೋಗ್ಯವೂ ಹಾಳು.

ಎಲ್ಲರೂ ನಮ್ಮನ್ನು ಹೊಗಳಬೇಕೆಂಬ ಭ್ರಮೆಯಲ್ಲಿ ಸಿಲುಕಿ *ನೀರಿನಿಂದ ಹೊರ ಬಂದ ಮೀನಿನಂತೆ ಚಡಪಡಿಸುತ್ತೇವೆ* ಹೊಗಳಿಕೆ--ತೆಗಳಿಕೆ ಎರಡನ್ನೂ ಸಮಾನವಾಗಿ ಸ್ವೀಕರಿಸುವವನೇ ಸ್ಥಿತಪ್ರಜ್ಜ, ಯಾವುದಕ್ಕೂ ಆತ ಹಿಗ್ಗಲಾರ-ಕುಗ್ಗಲಾರ.

ತಾಳುವಿಕೆಗಿಂತ ಅನ್ಯ ತಪವು ಇಲ್ಲ, ತಪಸ್ಸು, ಸಿದ್ಧಿಯೋಪಾದಿಯಲ್ಲಿದ್ದರೆ ಮಾತ್ರ ಬಯಸಿದ್ದನ್ನು ಪಡೆಯಬಹುದು. ಅವಿವೇಕತನದಿಂದ ಬರುವುದು ಇಲ್ಲದಾಗಬಹುದು. ನಮ್ಮ ಮನಸಾಕ್ಷಿಗೆ ಸರಿಯಾಗಿ ವರ್ತಿಸೋಣ, ವ್ಯವಹರಿಸೋಣ. ಇತರರು ಏನೇ ಹೇಳಿದರು ಕೆರಳುವ, ಕೋಪಮಾಡಿಕೊಳ್ಳುವ ಅಗತ್ಯವಿಲ್ಲ. ನಾವೇನು ಎಂಬುದು ನಮಗೆ ಗೊತ್ತಿದ್ದರೆ, ಅರಿತು ನಡೆದರೆ, ತಾಳ್ಮೆ ವಹಿಸಿದರೆ ಎಲ್ಲವೂ ಸುಗಮವಾಗಬಲ್ಲುದು. *ಕೋಪದಲ್ಲಿ ಕತ್ತರಿಸಿದ ಮೂಗು*ಅಷ್ಟು ಬೇಗ ಬರಲಾರದು. ನಮ್ಮ ತಲೆ ಮೇಲೆ ನಾವೇ ಕಲ್ಲು ಹಾಕಿದಂತಾದೀತು.

ಗಡಿಬಿಡಿ ಬೇಡ, ಈ ಗಡಿಬಿಡಿಯ ನಿರೀಕ್ಷೆಗಳಿಗೆ ಆಗಾಗ ಚಿಂತನೆ, ಸಹನೆ, ತಾಳ್ಮೆ ಎಂಬ ಸಕ್ಕರೆಯನ್ನು ಆಗಾಗ ಹಾಕಿ ಸರಿಪಡಿಸೋಣ. *ಕಟ್ಟುಬುತ್ತಿಯ ಮುಂದೆ ಉಣಲುಂಟು ತಾಳು* ಕೇಳಿದ್ದೇವೆ, ಇಲ್ಲಿ ನಾವು ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ ಮುಂದೆ ಒಳ್ಳೆಯ ಫಲವೇ ಸಿಗಬಹುದು ಎಂಬ ಹಾಗೆ ಅರ್ಥೈಸೋಣ. ಏನೂ ಮಾಡದೆ, ಅಯ್ಯೋ ನನಗೆ ಹೀಗಾಯಿತಲ್ಲ ಎಂದು ಹಲುಬಿದರೆ, ಯಾರೂ ಸಹಾಯಕ್ಕೆ ಬರಲಾರರು. ಇಂದು ಬಿತ್ತಿದ್ದನ್ನೇ ನಾಳೆ ಉಣ್ಣುವುದು ನಾವು.

ಕರ್ಮ ಮಾಡು, ಫಲಕ್ಕಾಗಿ ಚಿಂತಿಸಬೇಡ, ಎಲ್ಲವನ್ನೂ ಶಾಂತವಾಗಿ, ಸಮಾಧಾನ ಚಿತ್ತದಿಂದ ಆಲೋಚಿಸಿ ಹೆಜ್ಜೆಗಳನ್ನಿಡು, ಮುಂದೆ ಒಳ್ಳೆಯದಾಗಬಹುದೆಂಬ ನಿರೀಕ್ಷೆಯಲ್ಲಿರು, ಇದುವೇ ತಾಳ್ಮೆ ಎಂಬ ತಪಸ್ಸು.

ಸ್ನೇಹಿತರೇ, ತಾಳ್ಮೆ ಎಂಬ ದೀಪಕ್ಕೆ, ಸಹನೆ ಎಂಬ ಬತ್ತಿಯನ್ನು ಹಾಕಿ, ತಪಸ್ಸು ಎಂಬ ತೈಲವ ಹೊಯಿದು, ಕಾಯೋಣ, ಮಾನಸಿಕವಾಗಿ ಪರಿಪಕ್ವತೆ ಹೊಂದಿ, ನಮ್ಮೆಲ್ಲರ ಬದುಕನ್ನು ಸುಂದರವಾಗಿಸೋಣ.

-ರತ್ನಾ ಭಟ್  ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ