ಒಂದು ಒಳ್ಳೆಯ ನುಡಿ - 177
* ವಿದ್ಯಾಭ್ಯಾಸ ನಮ್ಮ ಜೀವನ ರೂಪಿಸುವಂತಿರಬೇಕು. ಅದೊಂದು ವಿಕಸಿತ ಪುಷ್ಪದಂತೆ. ಬದುಕನ್ನು ನೀಡದ ವಿದ್ಯೆ ಜೀವವನ್ನೇ ನಾಶ ಮಾಡಬಹುದು. ಒಂದು ಉತ್ತಮ ಪುಸ್ತಕ ಆದರ್ಶ ಮಾತೆಗೆ ಸಮಾನ. ಕಷ್ಟವೋ ಸುಖವೋ ಕಲಿಯುವ ವಯಸ್ಸಿನಲ್ಲಿ ಶ್ರದ್ಧೆಯಿಂದ ಕಲಿಯೋಣ, ಕಲಿಯುವವರಿಗೆ ಪ್ರೋತ್ಸಾಹ ನೀಡೋಣ.
* ಧ್ಯಾನ ಎಂದ ಕೂಡಲೆ ನಾವೆಲ್ಲ ಆಲೋಚಿಸುವುದು ಮೌನವಾಗಿ ಕೂರುವುದೆಂದು. ಧ್ಯಾನ ಸಾಧನೆ ಎಂಬುದು ಹೊಸ ಸಾಧನೆಯಲ್ಲ. ಮನುಷ್ಯರು ಧನದ ಧ್ಯಾನಕ್ಕಾಗಿ ಜೀವಮಾನವಿಡೀ ಚಿಂತಿಸುವರು. ಅದೇ ಸಮಯದಲ್ಲಿ ತಾನು ಮಾಡಬೇಕಾದ ಕಾಯಕದ ಬಗ್ಗೆ ಧ್ಯಾನ ಮಾಡಿದರೆ ಅದುವೇ ಧ್ಯಾನ ಮತ್ತು ಕಣ್ಣಿಗೆ ಕಾಣದ ನಮ್ಮನ್ನು ಮುನ್ನಡೆಸುವ ಅಗೋಚರ ಶಕ್ತಿಯ ಬಗ್ಗೆ ಪ್ರಾರ್ಥನೆಯಾಗಬಹುದು.ಕೆಲಸವೇ ಧ್ಯಾನ.
* ಒಳ್ಳೆಯವರನ್ನು, ಉತ್ತಮ ಗುಣನಡತೆ ಹೊಂದಿದ ಸಜ್ಜನರನ್ನು ಯಾವತ್ತೂ ನಿಂದಿಸಬಾರದು.
*ನಿಂದಾಂ ಯ: ಕುರುತೇ ಸಾಧೋ: ತಥಾ ಸ್ವಂ ದೂಷಯತ್ಯಸೌ/*
*ಖೇ ಭೂತಿಂ ಯ: ಕ್ಷಿಪೇದುಚ್ಚೈ: ಮೂಧ್ನಿ ತಸ್ಯೈವ ಸಾ ಪತೇತ್*//
ಆಗಸಕ್ಕೆ ಬೂದಿ ಚೆಲ್ಲಿದರೆ ಚೆಲ್ಲಿದವರ ತಲೆ ಮೇಲೆಯೇ ಬೀಳಬಹುದು. ಸಜ್ಜನರ ನಿಂದನೆಯೆಂದರೆ ತನ್ನ ಮುಖಕ್ಕೆ ತಾನೇ ಹೊಡೆದ ಫಲ.
* ತ್ಯಾಗ, ಸೇವಾ, ವಿಶ್ವಾಸ, ಸಹಾಯಹಸ್ತ ಮುಂತಾದ ನೈತಿಕ ಮೌಲ್ಯಗಳು ನಿತ್ಯ ಶಾಶ್ವತವಾದ ಧರ್ಮಗಳು. ಅಪಾಯಗಳು, ಸಂಕಷ್ಟಗಳು ಬಂದಾಗ ಇವುಗಳೇ ನಮ್ಮನ್ನು ರಕ್ಷಣೆ ಮಾಡುವುದು. ಹೇಳಿಕೆಯಲ್ಲಿ ಮಾತ್ರ ಕಾಣದೆ, ಆಚರಣೆಯಲ್ಲಿದ್ದಾಗ ಸಾರ್ಥಕ.
* ನಮ್ಮಲ್ಲಿ ಎಷ್ಟೇ ಬುದ್ಧಿವಂತಿಕೆ, ಜಾಣ್ಮೆ ಇರಬಹುದು. ಹಾಗೆಂದು ಇಲ್ಲದ್ದನ್ನು ತಂದಿಡಲಾಗದು. ಅದರದರ ಹುಟ್ಟುಗುಣ ಬೇರೆಯೇ ಇರುವುದು.
*ಸೌವರ್ಣಾನಿ ಸರೋಜಾನಿ ನಿರ್ಮಾತುಂ ಸಂತಿ ಶಿಲ್ಪಿನ:/*
*ತತ್ರ ಸೌರಭನಿರ್ಮಾಣೇ ಚತುರಾ ಪ್ರಕೃತಿ: ಪರಾ//*
*ಚಿನ್ನದ ತಾವರೆ ಹೂವನ್ನು ಮಾಡುವ ಶಿಲ್ಪಿಗಳೋ, ಚಿನಿವಾರರೋ ಇರಬಹುದು.ಆದರೆ ಪುಷ್ಪದ ಸಹಜತೆ ಪರಿಮಳವನ್ನು ತುಂಬಿಸಲು ಸಾಧ್ಯವೇ?ಆ ಸಾಮರ್ಥ್ಯವಿರುವುದು ಕೇವಲ ಪ್ರಕೃತಿ ಮಾತೆಗೆ ಮಾತ್ರ.ಯಾರಿಂದ ಎಷ್ಟು ಸಾಧ್ಯವೋ ಅಷ್ಟೇ ಮಾಡಬೇಕು.ಇದೆಲ್ಲ ಪ್ರಕೃತಿಯಿಂದ ನಾವು ಕಲಿಯಬೇಕಾದ ಪಾಠಗಳು.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ