ಒಂದು ಒಳ್ಳೆಯ ನುಡಿ - 197
ನಮ್ಮ ದೇಹವನ್ನು ಒಂದು ‘ಬೃಹತ್ ತೋಟಕ್ಕೆ’ ಹೋಲಿಸಬಹುದು. ತೋಟ ಎಂದ ಮೇಲೆ ಏನೆಲ್ಲ ಇದೆ ನಮಗೆ ಗೊತ್ತಿರುವ ವಿಚಾರವೇ ಆಗಿದೆ. ಆದರೆ ನಮ್ಮ ಶರೀರದಲ್ಲಿ ಮನಸ್ಸೇ ತೋಟಗಾರ, ಚಟುವಟಿಕೆಗಳೇ ಗೊಬ್ಬರ, ಸೋಮಾರಿತನವೇ ಬಂಜರು ನೆಲ. ಅರಿಷಡ್ವರ್ಗಗಳು ಕಳೆಗಳು.
ತೋಟವನ್ನು ನಾವು ಹೇಗೆ ಇಟ್ಟಿರುತ್ತೇವೆಯೋ, ಹೇಗೆ ನೋಡುತ್ತೇವೆಯೋ, ಏನೆಲ್ಲ ಉಣಿಸುತ್ತೇವೆಯೋ ಅದಕ್ಕೆ ಸರಿಯಾಗಿ ಚೆನ್ನಾಗಿ ಫಸಲು ಬರುತ್ತದೆ. ತೋಟಕ್ಕೆ ಏನೂ ಹಾಕದಿದ್ದಾಗ ಅದು ಬಂಜರಾಗಿ, ಬರಡಾಗುತ್ತದೆ, ನಿಧಾನವಾಗಿ ನಾಶ ಹೊಂದುತ್ತದೆ. ಹಾಗೆಯೇ ನಾವು ಸಹ. ಯಾವುದೇ ಚಟುವಟಿಕೆಗಳಿಲ್ಲದಾಗ ಬಡ್ಡು ದೇಹವಾಗಿ, ಔದಾಸೀನ್ಯವೇ ಮನೆಮಾಡಬಹುದು.
ನಮ್ಮ ಶರೀರ ಆರೋಗ್ಯವಾಗಿರಲು ಬೇಕಾದಂಥ ಪೋಷಕಾಂಶಗಳನ್ನು ಒದಗಿಸಬೇಕು. ಮೈಮುರಿದು, ಬೆವರುಹರಿಸಿ ದುಡಿಯಬೇಕು. ಇಂದಿನ ಒತ್ತಡದ ಬದುಕಲ್ಲಿ, ಕಛೇರಿಗಳಲ್ಲಿ, ತಾವು ಕೆಲಸ ನಿರ್ವಹಿಸುವಲ್ಲಿ ಬೆವರು ಹರಿಯುವುದಿಲ್ಲ ಬದಲಾಗಿ ತಲೆಗೆ ವಿಪರೀತ ಒತ್ತಡ. ಇದಕ್ಕೆ ದಾರಿ ಸ್ವಲ್ಪ ಹೊತ್ತು ವ್ಯಾಯಾಮ, ನಡಿಗೆ, ಯೋಗ, ಧ್ಯಾನ ಇತ್ಯಾದಿ.
ಒಂದೇ ಕಡೆ ಕುಳಿತರೆ ಶರೀರಕ್ಕೆ ವ್ಯಾಯಾಮ ಎಲ್ಲಿದೆ? ಸ್ವಲ್ಪ ಎದ್ದು ಓಡಾಡುವುದು, ಕುಳಿತಲ್ಲೇ ಕೈ ಕಾಲುಗಳಿಗೆ ಸಣ್ಣ ಚಟುವಟಿಕೆ ನೀಡಬಹುದು. ಕಣ್ಣಿನ ಆರೋಗ್ಯ ಬಹು ಮುಖ್ಯ. ಕಣ್ಣಿನ ವ್ಯಾಯಾಮ ಕುಳಿತಲ್ಲಿಯೇ ಮಾಡಬಹುದು.
ಮನೆ ಮಂದಿಯೊಂದಿಗೆ ಬೆರೆತು ಮಾತುಕತೆ ಮನಸ್ಸಿಗೆ ಮುದ ನೀಡಬಹುದು.ಎಷ್ಟು ಹೊತ್ತಿಗೂ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್, ಟಿ.ವಿ ಎಂದರೆ ಹೇಗಾದೀತು? ಮಕ್ಕಳೊಂದಿಗೆ ಸ್ವಲ್ಪ ಸಮಯ ಆಟ ಆಡಬಹುದು. ಮನೆ ಸುತ್ತಲೂ ಗಿಡನೆಡುವ ಹವ್ಯಾಸ, ಬಿಡುವಿದ್ದಾಗ ಉತ್ತಮ ಪುಸ್ತಕಗಳನ್ನು ಓದುವುದು, ಬರೆಯುವ ಹವ್ಯಾಸ, ಬಂಧುಗಳ ಭೇಟಿ ಇತ್ಯಾದಿಗಳೆಲ್ಲ ಶರೀರದ ಆರೋಗ್ಯಕ್ಕೆ ಒಳ್ಳೆಯದು.
ಶರೀರವೆಂಬ ತೋಟದಲ್ಲಿ, ಮನಸ್ಸೆಂಬ ತೋಟಗಾರನನ್ನು ಹಿಡಿತದಲ್ಲಿಟ್ಟುಕೊಂಡು, ಆದಷ್ಟೂ ಉತ್ತಮ ಬದುಕು ನಡೆಸೋಣ.ಇದು ಆರೋಗ್ಯ,ಉಲ್ಲಾಸ ಎರಡನ್ನೂ ನೀಡಬಹುದು.ವಯಸ್ಸು ದೇಹಕ್ಕೆ ಮಾತ್ರ,ಮನಸ್ಸಿಗಲ್ಲ.ಪುಸ್ತಕಗಳನ್ನು ಓದುವುದರಿಂದ ಲೋಕಜ್ಞಾನವೂ ಸಿಗಬಹುದು. ಮನೆಗೊಂದು ನಿಯತಕಾಲಿಕ ತರುವ ಅಭ್ಯಾಸವಿರಲಿ. ಮನರಂಜನಾ ಕಾರ್ಯಕ್ರಮಗಳಿಗೆ ಮನೆಯ ಸದಸ್ಯರೊಂದಿಗೆ ಹೋಗಬಹುದು. ಒಟ್ಟಿನಲ್ಲಿ ಭಗವಂತನ ಕೊಡುಗೆಯಾದ ಈ ದೇಹ ಮಣ್ಣಿಗೆ ಸೇರುವಲ್ಲಿಯವರೆಗೂ ಋಣಾತ್ಮಕ ಬಿಟ್ಟು ಧನಾತ್ಮಕ ಮಾತ್ರ ಇಟ್ಟುಕೊಂಡು ಬಾಳ ದಾರಿಯಲಿ ನೆಮ್ಮದಿಯ ಹೆಜ್ಜೆ ಊರೋಣ.
-ರತ್ನಾಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ