ಒಂದು ಒಳ್ಳೆಯ ನುಡಿ - 243

ಒಂದು ಒಳ್ಳೆಯ ನುಡಿ - 243

ಹನಿ ಹನಿ ಗೂಡಿದರೆ ಹಳ್ಳ

ತೆನೆ ತೆನೆ ಗೂಡಿದರೆ ಬಳ್ಳ

ಅದರಂತೆ ಒಂದೊಂದು ಮಳೆಹನಿಯಿಂದ ಹೇಗೆ ನೀರು ತುಂಬಿ ಹರಿಯುವುದೋ ಹಾಗೆ ನಮ್ಮ ಬರವಣಿಗೆಯ ಶೈಲಿ, ಓದುವಿಕೆ ಎಲ್ಲವೂ ಇರಬೇಕು. ಅಮ್ಮ ಎನ್ನುವ ಆರಂಭದಿಂದ ಸುಂದರವಾಗಿ ಓದಲು ಬರೆಯಲು ಕಲಿಸಿ ಕಲಿಯುವುದು ನಮ್ಮ ಧ್ಯೇಯವಾಗಿರಬೇಕು. ಅಆಇಈ ವರ್ಣಮಾಲೆ, ಕನ್ನಡದ ಮೊದಲ ಅಕ್ಷರಗಳನ್ನು ತಪ್ಪಿಲ್ಲದೆ ಓದಿ ಬರೆದು ಒಂದೊಂದೇ ಹಂತಗಳನ್ನು ದಾಟಿದರೆ ಬರೆಯುವ ಪದಗಳಲ್ಲಿ ಕೊರತೆ ಕಾಣಿಸದು. ಅದೇ ಸರಿಯಾಗದೆ ಒಮ್ಮೆಯೇ ಬರೆಯುತ್ತೇನೆಂದು ಹೊರಟರೆ ಜೀವಮಾನವಿಡೀ ತಿದ್ದಲಾಗದು. ಎಳವೆಯಲ್ಲಿಯೇ ತಪ್ಪಿಲ್ಲದೆ ಬರೆಯಲು ಕಲಿಯಬೇಕು, ಕಲಿಸಬೇಕು. ಇದಕ್ಕಲ್ಲವೇ ಪ್ರಾಥಮಿಕ ಶಾಲೆಗಳಲ್ಲಿ ಎರಡುಗೆರೆ, ಮೂರುಗೆರೆ, ಒಂದುಗೆರೆ ಕೋಪಿ ಬರೆಯುತ್ತಿದ್ದೆವು. ಆಗ ಯಾರೆಲ್ಲ ಔದಾಸಿನ್ಯ ಮಾಡಿರಬಹುದು, ಶಿಕ್ಷಕರ ಮಾತಿನಂತೆ ಬರೆದಿರಲಾರರು, ಅವರಿಗೆಲ್ಲ ಈಗ ಸರಿಯಾದ ಬರೆಯುವ ರೀತಿ ಇಲ್ಲದಿರಬಹುದು. ಕೆಲವೊಂದು ಸಲ ಅವಸರದ ಬರವಣಿಗೆಯೂ ಇರಬಹುದು. ಈಗಂತೂ ಈ ಅಂತರ್ಜಾಲದ ಮಹಿಮೆಯಲ್ಲಿ ಗಡಿಬಿಡಿಗೆ ಮುದ್ರಾಸುರನ ಹಾವಳಿಯೂ ಇರಬಹುದು. ಒಟ್ಟಿನಲ್ಲಿ ತಪ್ಪಿಲ್ಲದೆ ತಾಯ್ನುಡಿಯನ್ನು ಬರೆಯೋಣ, ಓದೋಣ ಸ್ನೇಹಿತರೇ. ಇದೇ ಕನ್ನಡಮ್ಮನಿಗೆ ನಾವು ಸಲಿಸುವ ಸೇವೆ ಗೌರವ.

ಒಂದೊಂದೇ ವಿದ್ಯೆಯ ಹಂತಗಳನ್ನು ಕಲಿತು ಅನುಭವ ಹೊಂದೋಣ. ತಂದೆ-ತಾಯಿ,ಗುರು-ಹಿರಿಯರು, ಭಗವಂತ ಎಲ್ಲರಲ್ಲೂ ಗೌರವ, ಪ್ರೀತಿ, ನಂಬಿಕೆ, ವಿಶ್ವಾಸವಿರಲಿ, ಆಗ ಅವರೆಲ್ಲರ ಆಶೀರ್ವಾದ ಖಂಡಿತಾ ಇದೆ. ಸಮರ್ಥ ಬರಹಗಾರರಿಗೆ, ವಿದ್ಯೆಯನ್ನು ಕಲಿತವನಿಗೆ, ಸಾಹಿತಿಗಳಿಗೆ ಸಮತೂಕದ ಮಾತುಗಾರನಿಗೆ ಎಲ್ಲಿ ಹೋದರೂ ಮನ್ನಣೆಯಿದೆ. ಬರಿಯ ಪದಗಳ ನೇಯ್ಗೆ ಕವನ/ಕವಿತೆಯಾಗದು. ಒಂದಷ್ಟು ಅಲಂಕಾರವಿತ್ತಾಗ, ಮಾಧುರ್ಯ ತುಂಬಿದಾಗ, ಭಾವನೆಗಳ ಸಾಗರ ಜೊತೆಗೂಡಿದಾಗ ಅಂದದ ಮೊಗಕ್ಕೆ ಒಂದು ಚಂದದ ತಿಲಕವಿಟ್ಟಂತೆ, ದೃಷ್ಟಿಬೊಟ್ಟು ಇಟ್ಟಂತೆ ಶೋಭಾಯಮಾನವಾಗಬಹುದು. ನಾಲ್ಕು ಜನ ಬರಹಗಾರರು ಓದಿ ಆಸ್ವಾದಿಸುವರು. ಇಲ್ಲದಿದ್ದರೆ ವಾಕ್ಯರೂಪದ ಹೇಳಿಕೆಯಂತಾಗಬಹುದು. ಪ್ರಾಸಗಳೇ ಕವನವಾಗದು. ಅಗತ್ಯವಿದ್ದಲ್ಲಿ, ಅನಿವಾರ್ಯವಾದಲ್ಲಿ ಪ್ರಾಸ ಇರಲಿ. ಒಟ್ಟಾರೆ ಪ್ರಾಸ ತುರುಕಿದರೆ ಅದನ್ನು ಓದುವುದು ಬಿಡಿ, ಮನಸ್ಸಿಗೂ ಹಿತವಾಗದು, ಅದು ಕಬ್ಬಿಣದ ಕಡಲೆಯಷ್ಟೆ.

ಕುಡುಗೋಲು, ಕತ್ತರಿಗಳಿಗೆ ಸಾಣೆ ಹೇಗೆ?

ನೆಲಕ್ಕೆ ಉಳುಮೆ ಹೇಗೆ?

ಮರಕ್ಕೆ ಕಸಿ ಹೇಗೆ?

ಕವಿಗೆ ನಿರಂತರ ಅಭ್ಯಾಸ ಹಾಗಿರಬೇಕು. ಅಧ್ಯಯನಶೀಲನಿಗೆ ವಿದ್ಯೆಯ ಕೊರತೆ ಕಾಣಿಸದು. ಸುಲಲಿತವಾಗಿ ಕನ್ನಡ ಪದಗಳನ್ನು ಓದಿ ಬರೆದು ತಾಯಿಯ ಸೇವೆಯನ್ನು ಗೈಯೋಣ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ