ಒಂದು ಒಳ್ಳೆಯ ನುಡಿ - 54

ನಮ್ಮ ಬದುಕು ಬಂಗಾರದಂತೆ ಹೊಳೆಯಬೇಕೆಂಬ ಆಸೆ ಸಹಜ, ತಪ್ಪಲ್ಲ. ಆದರೆ ಹಾಗೆ ಹೊಳೆಯಬೇಕಾದರೆ ನಾವು ಹೇಗಿರಬೇಕು, ಏನು ಮಾಡಬೇಕು ಮತ್ತು ಮಾಡಬಹುದು ಎಂದು ಮೊದಲೇ ಯೋಚಿಸಿ ಮುಂದಡಿಯಿಟ್ಟರೆ ಖಂಡಿತ ಸಾಧಿಸಬಹುದು. ಬಂಗಾರ ಬಹಳ ಬೆಲೆಬಾಳುವ ಮತ್ತು ಅಮೂಲ್ಯವಾದ ವಸ್ತು. ನಮ್ಮ ಜೀವನವೂ ಹಾಗೆ ಅಲ್ಲವೇ? ಬೆಲೆಯಿದೆ, ನೆಲೆಯಿದೆ, ಸೆಲೆಯಿದೆ. ಒಂದು ದಿನ ಕಳೆದರೆ ಆಯುಷ್ಯದಲ್ಲಿ ಒಂದು ದಿನ ಹೆಚ್ಚಾಯಿತು, ಕಳೆದ ದಿನ ಬದುಕಲ್ಲಿ ಮತ್ತೆಂದೂ ಬಾರದು ಎಂಬ ಪ್ರಜ್ಞೆ ಇರಲೇ ಬೇಕು.
ತುಕ್ಕು ಹಿಡಿದ ಕಬ್ಬಿಣ ಬೇಗ ಹಾಳಾಗುವುದು ಅದು ಒಂದು ರೀತಿಯ ಅಸೂಯೆಗೆ ಸಮ. ಹಾಗೆ ಆಗದ ಹಾಗೆ ನಾವಿರಬೇಕು.ಈ ಜೀವನ ಎನ್ನುವುದು ಕುಡಿದು ಎಸೆಯುವ ಕಾಫಿಯ ಲೋಟವಲ್ಲ, ಆ ಲೋಟವನ್ನು ಚೆನ್ನಾಗಿ ಸ್ವಚ್ಛ ಗೊಳಿಸಿ, ಅದರಲ್ಲಿ ಸಿಹಿಯಾದ ಜೇನನ್ನು ತುಂಬಿಸುವ ಕೆಲಸ ನಮ್ಮಿಂದಾಗಬೇಕು. ಜೇನು ತುಂಬಿಸಬೇಕಾದರೆ ಸುಮ್ಮನೆ ಸಾಧ್ಯವೇ? ಇಲ್ಲ, ಆಗ ಕಷ್ಟ ಪಟ್ಟು ದುಡಿಯಬೇಕು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ದುಡಿದು ಉಣ್ಣು ಮನುಜಾ ಎಂಬುದನ್ನು. ಕುಳಿತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು ನಾಣ್ನುಡಿ ಕೇಳಿದ್ದೇವೆ. ಅದು ದಿನ ಹೋದಂತೆ ಕರಗೀತು. ಪ್ರತಿಯೊಬ್ಬನೂ ಕಷ್ಟ ಪಟ್ಟು, ಬೆವರಿಳಿಸಿ ಕೆಲಸ ಮಾಡಿದರೆ, ದೇಶದಲ್ಲಿ ಬಡತನ, ಹಸಿವು ಎಂಬುದೇ ಇರಲಾರದು ಅನ್ನಿಸುವುದು ಒಮ್ಮೊಮ್ಮೆ. ತಾನೂ ಚಲಿಸಿ ಇತರರಿಗೆ ಚಲಿಸಲು ಪ್ರೇರೇಪಣೆ ನೀಡುವುದು ಮನುಷ್ಯ ಧರ್ಮ.ಇದನ್ನು ನಾವು ದಿನಕರನನ್ನು ನೋಡಿ ಕಲಿಯಬೇಕು. ಏನೇ ಆಗಲಿ ಹೋಗಲಿ, ಸೂರ್ಯ ಮೂಡುತ್ತಾನೆ, ಸಂಜೆ ಮರೆಯಾಗುತ್ತಾನೆ, ಚಂದಿರ ಮೇಲೇರಿ ಬರುತ್ತಾನೆ ಪ್ರಕೃತಿಯ ವಿಸ್ಮಯ. ಅವರವರ ಕೆಲಸ, ಕರ್ತವ್ಯ ಅವರವರೇ ನಿಭಾಯಿಸಬೇಕೆಂಬ ಪಾಠವಿದು. ಮತ್ತೊಬ್ಬರ ತಲೆಗೆ ಕಟ್ಟಬಾರದೆಂಬ ಧೋರಣೆ ಸಹ.
ನಮ್ಮೊಂದಿಗೆ ಬದುಕಿನ ಅಂಗಳದಲ್ಲಿ ಹೆತ್ತವರೆಂಬ ಎರಡು ದೇವರನ್ನು ಭಗವಂತ ನೀಡಿದ್ದಾನೆ. ಅವರನ್ನು ಆದರಿಸೋಣ. ನಮ್ಮನ್ನೇ ನಂಬಿದ ಮನೆಯ ಸದಸ್ಯರು ಇದ್ದಾರೆ, ಅವರನ್ನು ಪ್ರೀತಿಸೋಣ. ಹಿರಿಯರನ್ನು ಗೌರವಿಸೋಣ. ಪ್ರೀತಿ, ಸ್ನೇಹ, ಮಮತೆ ನಮ್ಮ ದಿನದ ವರ್ತನೆಗಳಲಿರಲಿ.ಬೇರೆಯವರ ನೋವು, ಕಷ್ಟಕ್ಕೆ ಸ್ಪಂದಿಸುವ, ಸಹಕರಿಸುವ ಮನೋಭಾವವಿರಲಿ, ಇದು ಧರ್ಮ ಸಹ. ಇನ್ನೊಬ್ಬರ ನೋವಲ್ಲಿ ಒಬ್ಬರಾಗಿ ಬೆರೆಯೋಣ.
*ಜನನ ಮರಣ ಸ್ವಾಭಾವಿಕ ಕ್ರಿಯೆಗಳು,ಭಗವಂತನ ನಿಯಮಗಳು,ಇದರ ಬಗ್ಗೆ ಸಂತಸವಾಗಲಿ ದುಃಖವಾಗಲಿ ಪಡದೆ ಸ್ಥಿತಪ್ರಜ್ಞರಾಗಿ ಬಾಳೋಣ*.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ : ಅಂತರ್ಜಾಲ ತಾಣ