ಒಂದು ರೂಪಾಯಿ ಎಂದು ಹೀಗಳೆಯದಿರಿ

ಒಂದು ರೂಪಾಯಿ ಎಂದು ಹೀಗಳೆಯದಿರಿ

ಬರಹ

ರಸ್ತೆಯಲ್ಲೇನೋ ಮಿಂಚುತ್ತದೆ.

ಅದು ಏನು ಎಂಬುದನ್ನು ಗುರುತಿಸಿದಾಗ ನಿಮ್ಮ ಕಣ್ಣುಗಳೂ ಮಿಂಚುತ್ತವೆ. ’ಅರೆ ವ್ಹಾ, ಒಂದು ರೂಪಾಯಿ!’ ಎಂದು ಮನಸ್ಸು ಅರಳುತ್ತದೆ. ಖುಷಿಯಿಂದ ನಾಣ್ಯವನ್ನು ಕೈಗೆತ್ತಿಕೊಂಡು ಪರೀಕ್ಷಿಸುತ್ತೀರಿ. ಅನುಮಾನವೇ ಇಲ್ಲ. ಅದು ಪಕ್ಕಾ ಒಂದು ರೂಪಾಯಿ.

ನೀವು ಎಷ್ಟೇ ಸಂಬಳ ಪಡೆಯುವವರಾಗಿರಿ, ಹೀಗೆ ಅನಾಯಾಸವಾಗಿ ದೊರೆತ ದುಡ್ಡು ತರುವ ಖುಷಿ ಗಳಿಕೆಯ ಖುಷಿಯನ್ನು ಮೀರಿಸುತ್ತದೆ. ಸಿಕ್ಕಿದ್ದು ಒಂದೇ ರೂಪಾಯಿಯಾದರೂ ಆ ಕ್ಷಣಗಳಲ್ಲಿ ಅದು ಕೊಡುವ ಖುಷಿಯೇ ವಿಚಿತ್ರ. ಅರೆ, ಒಂದು ರೂಪಾಯಿ ಬಗ್ಗೆ ಎಷ್ಟೊಂದು ಹೇಳ್ತಿದ್ದೀ ಎಂದು ಹೀಗಳೆಯದಿರಿ. ಅದಕ್ಕೆ ಅಪಾರ ಸಾಧ್ಯತೆಗಳಿವೆ.

ಹಳ್ಳಿಯ ಕಡೆ ಯಾವ ಅಂಗಡಿಗೇ ಹೋಗಿ, ಒಂದು ರೂಪಾಯಿಗೆ ನಿಮಗೆ ಅರ್ಧ ಕಪ್ ಚಹ ಖಂಡಿತ ಸಿಗುತ್ತದೆ. ಒಂದು ಮೆಣಸಿನಕಾಯಿ ಬಜ್ಜಿ ಗ್ಯಾರಂಟಿ. ಬೀಡಾ ಅಂಗಡಿಯಲ್ಲಿ ಒಂದು ರೂಪಾಯಿಗೆ ಸೊಗಸಾದ ತಾಂಬೂಲ (ಬೀಡಾ ಅಲ್ಲ!), ಅಥವಾ ಗುಟ್ಕಾ ಚೀಟು, ಅಥವಾ ಅಡಿಕೆ ಪುಡಿ ಚೀಟು ದೊರತೀತು. ಧೂಮಪಾನಿಗಳಾಗಿದ್ದರೆ ಎರಡು ಬೀಡಿ ಸಿಗುವುದಂತೂ ಖಾತರಿ. ಇವೇನೂ ಬೇಡ ಎಂದರೆ ಲವಂಗ, ಏಲಕ್ಕಿ ಅಥವಾ ಸೋಂಪು ಇರುವ ಪುಟ್ಟ ಚೀಟನ್ನಾದರೂ ತೆಗೆದುಕೊಳ್ಳಬಹುದು.

ಒಂದು ವೇಳೆ ನೀವು ಚಟಗಳೇ ಇಲ್ಲದ ಸಂಪನ್ನರಾಗಿದ್ದರೆ ಒಂದು ರೂಪಾಯಿಯನ್ನು ದಾರಿಯಲ್ಲಿ ಸಿಗುವ ಮುದಿ ಭಿಕ್ಷುಕಿಯ ತಟ್ಟೆಗೆ ಹಾಕಿದರೂ ಆಯಿತು. ಒಂದು ಕೃತಜ್ಞತೆಯ ದೃಷ್ಟಿ ನಿಮಗೆ ದಕ್ಕೀತು. ಒಂದು ರೂಪಾಯಿಗಿಂತ ಕಡಿಮೆ ಕಾಸು ಹಾಕೀರಿ ಜೋಕೆ. ನಿಮ್ಮ ಭಿಕ್ಷೆಯ ಜೊತೆಗೆ ಆಕೆ ನಿಮ್ಮನ್ನೂ ನಿಕೃಷ್ಟವಾಗಿ ಕಾಣುವ ಅಪಾಯವುಂಟು. ಒಂದು ವೇಳೆ ಆಕೆ ಸ್ವಾಭಿಮಾನಿಯಾಗಿದ್ದರೆ ನಿಮ್ಮ ಭಿಕ್ಷೆ ಮರಳಿ ನಿಮ್ಮ ಕೈ ಸೇರುವುದು ಖಂಡಿತ.

ಹೋಟೆಲ್-ಪಾನಂಗಡಿಗಳ ತಂಟೆಯೇ ಬೇಡ ಎಂದು ಕಿರಾಣಿ ಅಂಗಡಿ ಹೊಕ್ಕರೆ ನಿಮಗೆ ಒಂದು ರೂಪಾಯಿಯ ಅಪಾರ ಸಾಧ್ಯತೆಗಳು ಕಣ್ಣಿಗೆ ಬೀಳುತ್ತವೆ. ಹೊಕ್ಕಿದ್ದು ಚಿಕ್ಕ ಅಂಗಡಿಯಾಗಿದ್ದರೆ ಒಂದು ರೂಪಾಯಿಗೆ ನಾಲ್ಕು ಬಿಸ್ಕೀಟುಗಳ ಒಂದು ಪ್ಯಾಕ್ ಸಿಕ್ಕುತ್ತದೆ. ಇಲ್ಲದಿದ್ದರೆ ಒಂದು ಬನ್ನನ್ನಾದರೂ ತೆಗೆದುಕೊಳ್ಳಬಹುದು. ನೀವು ಆಸ್ತಿಕರಾಗಿದ್ದರೆ, ದೇವರಿಗೆ ಅರ್ಪಿಸಲೆಂದೇ ತಯಾರಾದ ಊದುಬತ್ತಿಯ ಪುಟ್ಟ ಕಟ್ಟು ಅಥವಾ ಕರ್ಪೂರ ಅಥವಾ ಹೂಬತ್ತಿಗಳಾದರೂ ಸಿಕ್ಕಾವು. ಧೂಪದ ಪುಟ್ಟ ಚೀಟಂತೂ ಖಂಡಿತ ಸಿಕ್ಕುತ್ತದೆ.

ಇವೇನೂ ಬೇಡ ಎಂದರೆ ಲೋಕಲ್ ಬ್ರ್ಯಾಂಡ್‌ನ ಎರಡು ಪುಟ್ಟ ಬೆಂಕಿಪೊಟ್ಟಣಗಳನ್ನು ಕೊಳ್ಳಬಹುದು. ಕಿವಿಯ ಗುಗ್ಗೆ ತೆಗೆಯಲು ನಾಲ್ಕು ಕಿವಿಗೊಳವೆಗಳಾದರೂ ಸಿಕ್ಕಾವು. ಒಂದು ರೂಪಾಯಿ ಕೊಟ್ಟು ಚಹಪುಡಿ ಅಥವಾ ಇನ್‌ಸ್ಟಂಟ್ ಕಾಫಿಪುಡಿ ಚೀಟನ್ನೊಯ್ದು ಬಟ್ಟಲು ತುಂಬ ಚಹ/ಕಾಫಿ ಮಾಡಿಕೊಂಡು ಕುಡಿಯಬಹುದು. ಇಲ್ಲವೆ ಬಬಲ್‌ಗಮ್ ಅಥವಾ ಮಿಂಟನ್ನಾದರೂ ಕೊಂಡು ಬಾಯಿಗೆ ಪರಿಮಳ ತಂದುಕೊಳ್ಳಬಹುದು.

ಇಲ್ಲ, ಒಂದು ರೂಪಾಯಿಯನ್ನು ಇನ್ನೂ ಭಿನ್ನವಾಗಿ ಬಳಸಬೇಕು ಎಂದೇನಾದರೂ ನೀವು ಯೋಚಿಸಿದರೆ ಒಂದು ಡಿಟರ್ಜೆಂಟ್ ಪೌಡರ್ ಚೀಟು ಖರೀದಿಸಿ, ಬಟ್ಟೆ ತೊಳೆದುಕೊಂಡು ಸೋಮಾರಿತನ ಕಡಿಮೆ ಮಾಡಿಕೊಳ್ಳಬಹುದು. ಇಲ್ಲವೇ ಒಂದು ಚೀಟು ಶ್ಯಾಂಪೂ ಕೊಂಡು ತಲೆ ಸ್ನಾನ ಮಾಡಿ ಹಗುರಾಗಬಹುದು. ಅವೆಲ್ಲ ಇವೆ ಎನ್ನುವುದಾದರೆ ಒಂದು ಚೀಟು ತೆಂಗಿನೆಣ್ಣೆ ಕೊಂಡು ಮೂರು ದಿನ ಮಜಬೂತಾಗಿ ಬಳಸಿ.

ಕಿರಾಣಿ ಅಂಗಡಿ ಬೇಡ ಎಂದಾದರೆ ಪಕ್ಕದ ತರಕಾರಿ ಅಂಗಡಿಗೆ ಬನ್ನಿ. ಕೊಂಚ ಚೌಕಾಸಿ ಮಾಡಿದರೆ ಅಥವಾ ತೀರ ಪರಿಚಯದವರಾಗಿದ್ದರೆ ಒಂದು ರೂಪಾಯಿಗೆ ಕೊತ್ತಂಬರಿ ಅಥವಾ ಕರಿಬೇವು ಅಥವಾ ಸೊಪ್ಪಿನ ಒಂದು ಸಣ್ಣ ಕಟ್ಟನ್ನು, ಮಸ್ತು ಮುಗುಳ್ನಗೆಯ ಜೊತೆ ಕೊಟ್ಟಾಳು ತರಕಾರಿ ಆಂಟಿ! ಅವೇನೂ ಬೇಡ ಎಂದರೆ ಸಾದಾ ಗಾತ್ರದ ನಿಂಬೆಹಣ್ಣಾದರೂ ಸಿಕ್ಕೀತು. ಎರಡು ದಿನಗಳಿಗಾಗುವಷ್ಟು ಹಸಿ ಮೆಣಸಿನಕಾಯಿಗಂತೂ ಮೋಸವಿಲ್ಲ. ಇಲದ್ದಿದರೆ ಒಂದು ಪುಟ್ಟ ಕ್ಯಾರೆಟ್ ಅಥವಾ ಸೌತೆ ಕಾಯಿ ಕೊಂಡು ಹಲ್ಲಿಗೆ ವ್ಯಾಯಾಮ ಮಾಡಿಕೊಳ್ಳಬಹುದು. ಒಂದು ಭರ್ಜರಿ ನುಗ್ಗೆಕಾಯಿ ಕೊಂಡು ರುಚಿಕಟ್ಟಾದ ಸಾರು ಮಾಡಿ ಉಂಡು ರಸಿಕತೆ ಹೆಚ್ಚಿಸಿಕೊಳ್ಳಬಹುದು.

ತಿನ್ನುವ ತೊಳೆಯುವ ರಗಳೆ ಬೇಡ ಎಂದಾದರೆ ಒಂದು ರೂಪಾಯಿ ಬಳಕೆಯ ಹೊಸ ಆಯಾಮಗಳು ತೆರೆದುಕೊಳ್ಳತೊಡಗುತ್ತವೆ. ಶಿವಾಜಿನಗರದಲ್ಲಿ ಸಿಟಿ ಬಸ್ ಹತ್ತಿ, ಕಂಡಕ್ಟರ್ ಕೈಗೆ ಒಂದ್ರುಪಾಯಿ ಇಟ್ಟು ಸುಮ್ಮನೇ ನಿಂತರೆ ಎಂ.ಜಿ. ರಸ್ತೆಯವರೆಗೆ ಅದು ಅವನನ್ನು ನಿಮ್ಮ ಋಣದಲ್ಲಿ ಇರಿಸುತ್ತದೆ. ಕಾಯಿನ್ ಬೂತಿಗೆ ತೂರಿಸಿ, ಮೊಬೈಲ್‌ ಅಥವಾ ಲ್ಯಾಂಡ್‌ಲೈನ್‌ ಮೂಲಕ ಮೆಚ್ಚಿದ ಜೀವಿಯೊಂದಿಗೆ ಮಾತಿನಲ್ಲೇ ಕಷ್ಟಸುಖ ಹಂಚಿಕೊಳ್ಳಬಹುದು. ಪೆಟ್ರೋಲ್ ಬಂಕ್‌ನ ಗಾಳಿಯಂತ್ರದವ ಒಂದು ರೂಪಾಯಿಗೆ ಟುಣ್ ಟುಣ್ ಎನ್ನುವ ಹಾಗೆ ನಿಮ್ಮ ವಾಹನದ ಚಕ್ರಗಳಿಗೆ ಗಾಳಿ ತುಂಬಿ ಕೊಟ್ಟಾನು. ತೂಕದ ಯಂತ್ರದ ಬಾಯಿಗೆ ಹಾಕಿದರೆ ಅದು ನಿಮ್ಮ ಶರೀರದ (ವ್ಯಕ್ತಿತ್ವದ್ದಲ್ಲ!) ತೂಕವನ್ನು ತಿಳಿಸೀತು.

ಕೆ.ಆರ್. ಮಾರ್ಕೆಟ್‌ಗೆ ಹೋದರೆ ರೂಪಾಯಿಗೊಂದು ಪೆನ್ನು ಸಿಗುತ್ತದೆ. ಹೇರ್‌ಬ್ಯಾಂಡ್ ದೊರೆಯುತ್ತದೆ. ಬೆಂಗಳೂರಿನ ಯಾವುದೇ ಝೆರಾಕ್ಸ್ ಅಂಗಡಿಗೆ ಹೋದರೂ ಒಂದು ನೆರಳಚ್ಚು ಪ್ರತಿ ಮಾಡಿಕೊಡುತ್ತಾರೆ. ಮಲ್ಲೇಶ್ವರಂನಲ್ಲಾದರೆ ಎರಡು ಪ್ರತಿ ದೊರೆತಾವು. ಇವೇನೂ ಬೇಡ ಎಂದಾದರೆ, ನ್ಯೂಸ್ ಸ್ಟಾಲ್‌ಗಳಿಗೆ ಹೋಗಿ ಲಕ್ಷಣವಾಗಿ ಒಂದು ಸಂಜೆಪತ್ರಿಕೆ ಕೊಂಡು ನಿಮ್ಮ ಜ್ಞಾನ ದಿಗಂತವನ್ನು ನಗರದ ಮಿತಿಯಾಚೆಗೆ ವಿಸ್ತರಿಸಿಕೊಳ್ಳಬಹುದು.

ಇನ್ನು ಮುಂದೆ ಒಂದು ರೂಪಾಯಿ ಎಂದರೆ ’ಛೀ, ಚಿಲ್ಲರೆ’ ಎಂಬ ಹೀಗಳಿಕೆ ಬೇಡ. ಏಕೆಂದರೆ ಅದಕ್ಕೆ ನೂರಾರು ಸಾಧ್ಯತೆಗಳಿವೆ,
ಈ ಬದುಕಿಗೆ ಇರುವಂತೆ!

- ಚಾಮರಾಜ ಸವಡಿ