ಓ..ಒಲವೇ(3)
ಎಷ್ಟೇ ನಿದ್ರೆ ಮಾಡಲು ಪ್ರಯತ್ನಿಸಿದರೂ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ.ಏಕೆಂದರೆ ಸಂಜಯ್ ನಿದ್ರೆಯೇನೋ ಮಾಡಿದ್ದ, ಆದರೆ ಅವನಿಗೇ ತಿಳಿಯದಂತೆ ಅವನ ತಲೆ ಆಗಾಗ ಜಾರುತ್ತಾ ತನ್ಮಯಾಳ ಭುಜದ ಮೇಲೆ ವಾಲುತ್ತಿತ್ತು.ಅವಳು ಅವನ ತಲೆಯನ್ನು ಎಷ್ಟು ಸಾರಿ ಸರಿ ಮಾಡಿದರೂ ಬಸ್ಸಿನ ಅಲುಗಾಟದಲ್ಲಿ ಪದೇ ಪದೇ ಅವಳ ಮೇಲೆ ವಾಲುತ್ತಿತ್ತು.ಅಯ್ಯೋ ದೇವರೇ ಇದೆಂಥಾ ಗತಿ ಬಂತಪ್ಪ, ನನಗೆ ಇವನೆಲ್ಲಿಂದಾ ಗಂಟು ಬಿದ್ದನೋ, ನನ್ನ ಗಂಡ ನನ್ನ ಜೊತೆ ಬಂದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ ಎಂದು ಅತ್ತ ತನ್ನ ಗಂಡನನ್ನೂ, ಇತ್ತ ಈ ಸಂಜಯ್ ನನ್ನೂ ಮತ್ತು ಅಲುಗಾಡುವ ಬಸ್ಸನ್ನೂ ಬೈದುಕೊಳ್ಳುತ್ತಾ ಯಾವಾಗ ನಿದ್ರೆಯ ತೆಕ್ಕೆಗೆ ಜಾರಿದಳೋ ಅವಳಿಗೆ ಗೊತ್ತಾಗಲಿಲ್ಲ. ಎಚ್ಚರವಾದಾಗ ನಿಧಾನವಾಗಿ ಕಣ್ಬಿಟ್ಟಳು. ಬೆಳಿಗ್ಗೆ 6 ರ ಸಮಯವಿರಬಹುದು. ಸ್ವಲ್ಪ ಬೆಳಕಾಗಿತ್ತು. ಚೆನ್ನಾಗಿ ನಿದ್ದೆ ಮಾಡಿ ಎದ್ದಿದ್ದಳು.ಗಾಬರಿಯಾಗಿ ತಟ್ಟಂತ ಎದ್ದು ಸರಿಯಾಗಿ ಕುಳಿತಳು. ಯಾಕೆಂದ್ರೆ ಈ ಬಾರಿ ಅವಳೇ ಸಂಜಯ್ ಹೆಗಲ ಮೇಲೆ ತಲೆಯಿಟ್ಟು ಮಲಗಿದ್ದಳು.ಇಬ್ಬರ ಕಾಲುಗಳು ತೀರ ಹತ್ತಿರ ಅಂದ್ರೆ ಒಂದಕ್ಕೊಂದು ತಾಗಿಕೊಂಡಿದ್ದವು.ಅವನನ್ನು ನೋಡಿದಳು. ಅವನು ಗಾಢನಿದ್ರೆಯಲ್ಲಿರುವಂತೆ ಕಾಣಿಸಿತು.ಅವಳಿಗೆ ಅವಳ ಮೇಲೇ ತುಂಬಾ ಕೋಪ ಬಂದಿತ್ತು.ಛೇ ನನ್ನ ಮೈಮೇಲೆ ನನಗೇ ಪ್ರಜ್ಞೆಯಿಲ್ಲದಷ್ಟು ನಿದ್ದೆ ಮಾಡಿದ್ದೀನಲ್ಲಾ, ಇಡೀ ರಾತ್ರಿ ನಾನೇ ಅವನನ್ನು ಬೈದು ಈಗ ನಾನೇ ಆ ತಪ್ಪು ಮಾಡಿದ್ದೀನಲ್ಲಾ.ಅವಳಿಗೆ ತಪ್ಪಿತಸ್ಥ ಮನೋಭಾವ ಕಾಡತೊಡಗಿತ್ತು.ಮತ್ತೆ ಸಂಜಯ್ ನ ಮುಖ ನೋಡಲು ಇಷ್ಟವಾಗಲಿಲ್ಲ.ಕಿಟಕಿಯ ಕಡೆ ಮುಖ ಮಾಡಿ ತನ್ನನ್ನು ತಾನೇ ಶಪಿಸಿಕೊಂಡಳು.ಬಸ್ಸು ಚಿಕ್ಕಮಗಳೂರು ಬಂದು ತಲುಪಿತು.ಎಲ್ಲರೂ ಬಸ್ಸಿಂದ ಇಳಿಯತೊಡಗಿದರು.ಸಂಜಯ್ ಸಹ ಸರಸರನೆ ಇಳಿದನು.ಅವನು ಇಳಿಯುವವರೆಗೂ ತನ್ಮಯ ಮುಖ ಈ ಕಡೆ ತಿರುಗಿಸಲಿಲ್ಲ.ಅವನು ಇಳಿದುಹೋದದನ್ನು ಖಚಿತ ಮಾಡಿಕೊಂಡು ಕೆಳಗಿಳಿದಳು.ತನ್ನನ್ನು ಮನೆಗೆ ಕರೆದೊಯ್ಯಲು ತವರುಮನೆಯಿಂದ ಯಾರಾದರೂ ಬಂದಿದ್ದಾರಾ ಅಂತ ನೋಡಿದಳು.ಆದರೆ ಯಾರೂ ಬಂದಿರಲಿಲ್ಲ.ಆಟೋಸ್ಟಾಂಡ್ ಹತ್ತಿರ ಹೋಗಿ ಒಬ್ಬ ಆಟೋದವನಿಗೆ ಅಡ್ರೆಸ್ ಹೇಳಿ ಒಳಗೆ ಕುಳಿತಳು.ಯಾರೋ ತನ್ನನ್ನು ಗಮನಿಸುತ್ತಿದ್ದಾರೆ ಎಂದು ಭಾಸವಾಗಿ ತಟ್ಟನೆ ತಿರುಗಿ ನೋಡಿದಳು. ಅಲ್ಲೇ ಸ್ವಲ್ಪ ದೂರದಲ್ಲೇ ನಿಂತು ಸಂಜಯ್ ತನ್ನನ್ನೇ ನೋಡುತ್ತಿದ್ದನು.ಇವಳು ಅವನನ್ನು ನೋಡಿದ ತಕ್ಷಣ ಅವನ ತುಟಿಯ ಮೇಲೆ ಮಂದಹಾಸ ಮೂಡಿತು.ಆಟೋ ಮುಂದೆ ಸಾಗಿತು. ಅವನೇಕೆ ನನ್ನನ್ನೇ ನೋಡುತ್ತಿದ್ದ.ನನ್ನನ್ನೇಕೆ ನೋಡಿ ನಕ್ಕ, ನಾನು ಅವನ ಹೆಗಲ ಮೇಲೆ ತಲೆ ಯಿಟ್ಟು ಮಲಗಿದ್ದು ಅವನಿಗೇನಾದರೂ ಗೊತ್ತಾಗಿ ಹೋಯ್ತಾ, ಛೇ ಛೇ ಇರಲಿಕ್ಕಿಲ್ಲ,ಅವನು ಚೆನ್ನಾಗಿ ನಿದ್ದೆ ಮಾಡುತ್ತಿದ್ದ.ಏನೋ ಅವನ ಬಗ್ಗೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು,ಹೋಗಲಿ ಬಿಡು ಅಂತ ಸುಮ್ಮನಾದಳು.ತವರು ಮನೆ ತಲುಪಿ ಎಲ್ಲರ ಕುಶಲೋಪರಿ ವಿಚಾರಿಸಿದಳು. ತಾಯಿ ಹುಷಾರಿಲ್ಲದೆ ಸೊರಗಿ ಹೋಗಿದ್ದಳು.ಆದರೂ ಸ್ವಲ್ಪ ಚೇತರಿಸಿಕೊಂಡಿದ್ದಳು. 4 ದಿನ ಅಲ್ಲೇ ತವರುಮನೆಯಲ್ಲೇ ಉಳಿದಳು.ಈ ನಾಲ್ಕು ದಿನಗಳಲ್ಲಿ ಆಗಾಗ ಸಂಜಯ್ ನ ಮುಖ ಕಣ್ಣ ಮುಂದೆ ಬಂದಂತೆ ಭಾಸವಾಗುತ್ತಿತ್ತು. ಅಂದು ಬೆಳಿಗ್ಗೆ ತನ್ಮಯ ತನ್ನ ಮನೆಗೆ ಹೊರಡಲು ರೆಡಿಯಾದಳು.ಅಮ್ಮ ನಾನಿನ್ನು ಹೊರಡುತ್ತೇನೆ.ಇನ್ನು 4 ದಿನ ಇದ್ದು ಹೋಗಬಹುದಿತ್ತಲ್ಲಮ್ಮಾ ಅಂದಳು. ಇಲ್ಲಮ್ಮಾ ಹೇಗಿದ್ದದರೂ ನೀನು ಹುಷಾರಾಗಿದ್ದೀಯ.ಅಲ್ಲಿ ಮಧುನ ಬೇರೆ ಬಿಟ್ಟು ಬಂದಿದ್ದೀನಿ.ಮತ್ತೊಮ್ಮೆ ಯಾವಾಗಾದ್ರೂ ಅವಳನ್ನು ಕರೆದುಕೊಂಡು ಬರ್ತೀನಿ.ಆಗ ಇರ್ತೀನಿ ಬಿಡಮ್ಮ ಎಂದು ಹೇಳಿ ಹೊರಟಳು. ಅವಳ ಅಪ್ಪ ಬಸ್ ಸ್ಟಾಂಡಿನವರೆಗೂ ಬಂದು ಬಸ್ಸು ಹತ್ತಿಸಿ ಹೊರಟುಹೋದರು......
N....R....
ಮುಂದುವರೆಯುತ್ತದೆ.....