ಕಂಪಿನ ‘ಕಸ್ತೂರಿ’ ಮರಿಗಳು ನಮ್ಮ ಹೃದಯದಲ್ಲಿ ಮೂಡಿಸಿದ ಪುಟ್ಟ ಹೆಜ್ಜೆ!

ಕಂಪಿನ ‘ಕಸ್ತೂರಿ’ ಮರಿಗಳು ನಮ್ಮ ಹೃದಯದಲ್ಲಿ ಮೂಡಿಸಿದ ಪುಟ್ಟ ಹೆಜ್ಜೆ!

ಬರಹ

ಪುನಗು ಬೆಕ್ಕಿಲಿಯ ಮರಿಗಳು ಧಾರವಾಡದ ಮಂಜುನಾಥಪುರದಲ್ಲಿ ನಮ್ಮ ಕೈಗೆ ಸಿಕ್ಕಾಗ. ಕ್ಲಿಕ್ಕಿಸಿದವರು: ದಿವ್ಯಾ ಶೀಲವಂತ

ಜಗತ್ತೇ ಬೀಗುವ ಬಹುದೊಡ್ಡ ಸಾಧನೆಯ ಹಿಂದಿನ ಪ್ರಾರಂಭಿಕ ಹೆಜ್ಜೆ ಯಾವತ್ತೂ ಪುಟ್ಟದಾಗಿಯೇ ಇರುತ್ತದೆ!
ಖ್ಯಾತ ಪರಿಸರ ಪತ್ರಕರ್ತ ನಾಗೇಶ ಹೆಗಡೆ ಅವರು ಹೇಳುವಂತೆ ‘ಈ ಪರಿಸರದಲ್ಲಿ ಮಾನವನ ‘ಹೆಜ್ಜೆ’ಗುರುತು ಪುಟ್ಟದಿದ್ದಷ್ಟು ಉಳಿದ ಜೀವಿಗಳಿಗೆ ಕ್ಷೇಮ.’



ಕಾಕತಾಳೀಯವೆಂದರೆ, ‘ದೊಡ್ಡ ಪಾದದ’ಪ್ರಾಣಿಗಳಾದ ಆನೆ, ಹುಲಿಗಳಿಗಾಗಿ ಯೋಜನೆ, ‘ಸೇಫ್ ಕಾರಿಡಾರ್’ ಕ್ರಿಯಾಯೋಜನೆಗಳನ್ನು ರೂಪಿಸುವ ನಾವು, ಪರಿಸರ ಸಮತೋಲನದಲ್ಲಿ ಗಣನೀಯ ಪಾತ್ರವಹಿಸುವ ‘ಪುಟ್ಟ ಪಾದದ’ಅಳಿಲು, ಮುಂಗುಸಿ, ಪುನುಗು ಬೆಕ್ಕಿಲಿ, ಜಿಂಕೆ ಮೊದಲಾದವುಗಳ ಬಗ್ಗೆ ಯಾಕೆ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ?  

ದೊಡ್ಡ ಪಾದದ ಪ್ರಾಣಿಗಳನ್ನು ನಿರ್ಲಕ್ಷಿಸಿದ್ದೇ ಆದರೆ ನಾವು ಭಾರಿ ಬೆಲೆ ತೆರಬೇಕು; ಅದೇ ಪುಟ್ಟಪಾದದ ಪ್ರಾಣಿಗಳಾದರೆ ಅವುಗಳನ್ನು ನಾವೇ ಮೆಟ್ಟಬಹುದು! ನಮ್ಮನ್ನು ಸಂಧಿಸಿದ ತಪ್ಪಿಗಾಗಿ ಅವು ಭಾರಿ ಬೆಲೆ ತೆರಬೇಕು!

ಧಾರವಾಡದ ೭ ಗುಡ್ಡಗಳಲ್ಲಿ ನೆಲ ಸಮಕ್ಕೆ ಸವರಲಾದ ಒಂದು ಗುಡ್ಡ ಮಾಳಮಡ್ಡಿ. ಈ ಗುಡ್ಡದ ಎಲ್ಲ ಮಗ್ಗುಲುಗಳಲ್ಲಿ ಈಗ ಮನೆಗಳಿವೆ. ಈ ಮಾಳಮಡ್ಡಿ ತಪ್ಪಲಿನಲ್ಲಿ ಮಂಜುನಾಥಪುರವಿದೆ. ಅಲ್ಲಲ್ಲಿ ತೆಂಗಿನ ಮರಗಳು, ಪೇರಲ ಹಾಗೂ ಚಿಕ್ಕು ಗಿಡಗಳು ಮನೆಗಳ ಅಂಗಳದಲ್ಲಿ ಜಾಗೆ ಪಡೆದಿವೆ. ಆ ಹಣ್ಣುಗಳನ್ನು ಅರಸಿ ಮನೆಗಳ ಅಂಗಳಕ್ಕೆ ರಾತ್ರಿಯ ವೇಳೆ ಪುನಗು ಬೆಕ್ಕು, ಮುಂಗಲಿ,  ಹಗಲು ವೇಳೆ ಕಪ್ಪು ಮತ್ತು ಕೆಂಪು ಮೂತಿಯ ಮಂಗಗಳು ಲಗ್ಗೆ ಹಾಕುತ್ತವೆ. ಹೂವಿನ ಚಿಗುರು, ಮೊಗ್ಗೆಗಳು ಯಾವುದನ್ನೂ ಬಿಡದೇ ಕಚ್ಚಿ, ತಿಂದು ಬಿಸುಟುತ್ತವೆ.

ಪಕ್ಕದಲ್ಲಿಯೇ ಇರುವ ಲಕ್ಷ್ಮಿಸಿಂಗನ ಕೆರೆಯಲ್ಲಿ ಸುಮಾರು ೮೦೦ ಮನೆಗಳಿದ್ದು, ಎಲ್ಲವೂ ಹೆಂಚುಗಳನ್ನೇ ಮೇಲ್ಛಾವಣಿಯಾಗಿ ಹೊಂದಿವೆ. ಹಾಗಾಗಿ ಮಂಜುನಾಥಪುರದವರು ಈ ಪ್ರಾಣಿಗಳನ್ನು ಬೆದರಿಸಿ ಓಡಿಸಿದರೆ ಹೆಂಚುಗಳ ಪರಿಸ್ಥಿತಿ ದೇವರಿಗೇ ಪ್ರೀತಿ.

‘ಮಂಜುನಾಥಪುರದಾವರು ಹಣ್ಣಿನ ಗಿಡಗೋಳ್ನ ಹಚ್ಚಿದ್ದಿಲ್ಲಂದ್ರ ಲಕ್ಷ್ಮಿಸಿಂಗನಕೆರ್ಯಾಗ ಮನಿ ಕಟ್ಟಿದ ನಮ್ಮಂಥ ಬಡವರು ಈ ಪರಿಸ್ಥಿತಿ ಅನಭೋಗಿಸ್ತಿರಲಿಲ್ಲ’ ಎಂದು ಹಲುಬುವುದನ್ನು, ಪ್ರತಿಭಟನಾರ್ಥವಾಗಿ ಮನೆಗಳ ಮುಂದೆ ಕಸದ ಗುಡ್ಡೆಹಾಕಿ, ಮಲ-ಮೂತ್ರ ವಿಸರ್ಜಿಸಿ ಸಿಟ್ಟುತೀರಿಸಿಕೊಳ್ಳುವುದನ್ನು ನಾನು ನೋಡುತ್ತಲೇ ಬಂದಿದ್ದೇನೆ. ಜತೆಗೆ, ಮನೆಗಳ ಅಂಗಳದಲ್ಲಿರುವ ಹೂ ಗಿಡಗಳಿಂದ ಬೆಳಗು ಮುಂಜಾನೆ ಹೂ ಕದ್ದು, ತಮ್ಮ ಮನೆಯ ದೇವರಿಗೆ ಏರಿಸಿ ಅವರು ಭಕ್ತಿಯ ಪರಾಕಾಷ್ಠೆ ಮೆರೆದಿದ್ದನ್ನೂ ನಾನು ಕಂಡಿದ್ದೇನೆ!

ಐಭೋಗಕ್ಕಾಗಿ ಮನುಷ್ಯರು ಸಂಘರ್ಷಕ್ಕಿಳಿದಿದ್ದನ್ನು ನೋಡುತ್ತ ಬಂದ ನನಗೆ, ಈ ಪುಟ್ಟ ಪಾದದ ಪ್ರಾಣಿಗಳ ಬದುಕಿನ ಸಂಘರ್ಷ ಕಂಡಾಗ ಯಾವುದಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ತಿಳಿಯಲು ಪೇಚಾಡಿದ್ದೇನೆ. ಅವರ ಹಾರಾಟ-ಇವುಗಳ ಹೋರಾಟ ಎರಡೂ ಮೇಳೈಸಿದ ಬ್ರಾಹ್ಮಣರ ಅಗ್ರಹಾರ ಮಾಳಮಡ್ಡಿ.

ಎರಡು ದಿನಗಳ ಕೆಳಗೆ ರಾತ್ರಿಯ ಹೊತ್ತು ನಮ್ಮ ಮನೆಯ ಎದುರಿನ ಡಾ. ಎನ್.ಬಿ.ಶೂರಪಾಲಿ ಅವರ ಮನೆಯ ಮಾಳಿಗೆಯ ಮೇಲೆ ಯಾವುದೋ ವಿಚಿತ್ರ ಪ್ರಾಣಿಯ ಮರಿಗಳ ಕೀರಲು ಧ್ವನಿಯಲ್ಲಿ ಕೂಗುತ್ತಿವೆ ಎಂಬ ಸುದ್ದಿ ಬಂತು. ಅವರ ಮನೆಯ ಮಾಳಿಗೆಯ ಮೇಲೆ ಪಿಯೂಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ದಂಡೇ ಇದೆ. ನಾನು ಅಲ್ಲಿಗೆ ತಲುಪುವ ವೇಳೆಗೆ ಹರಸಾಹಸ ಪಟ್ಟು, ಮರವೇರಿ, ಪಕ್ಕದ ಮನೆಯ ಹಂಚುಗಳ ಸವಾರಿ ಮಾಡಿ ಆ ಮರಿಗಳನ್ನು ಹಿಡಿದು ಈ ಪಕ್ಕಾ ಉಡಾಳರ ಕಂಪೆನಿ! (ಪಿ.ಯೂ.ಸಿ) ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದರು. ಪಾರ್ಲೆ ಬಿಸ್ಕಿಟ್ ನ ರಟ್ಟಿನ ಪೆಟ್ಟಿಗೆಯಲ್ಲಿ ಅವು ಭದ್ರವಾಗಿದ್ದವು.

ನಾನು ಹೋದ ತಕ್ಷಣ ಎಲ್ಲರೂ ಮುಗಿಬಿದ್ದರು. ಎಲ್ಲರದ್ದೂ ಒಕ್ಕೋರಲಿನ ಪ್ರಶ್ನೆ..‘ಯಾವ ಪ್ರಾಣಿಯ ಮರಿಗಳಿವು ಹರ್ಷಣ್ಣ?’. ಕೈಗಳಲ್ಲಿ ಹಿಡಿದೆತ್ತಿ ನೋಡಿದೆ. ಪುನಗು ಬೆಕ್ಕಿನ ಮರಿಗಳು ಎಂಬುದರಲ್ಲಿ ಸಂಶಯವೇ ಇರಲಿಲ್ಲ. ನೆರೆದಿದ್ದ ಎಲ್ಲರಿಗೂ ಕೈಯಲ್ಲಿ ಹಿಡಿಯಲು ಹೇಳಿ ಪುನಗು ಬೆಕ್ಕಿಲಿಯ ಬಗ್ಗೆ ವಿವರಿಸಿದೆ. ‘ಪುನಗನ್ನು ಕಸ್ತೂರಿ ಬೆಕ್ಕು ಅಂತಲೂ ಕರೆಯುತ್ತಾರೆ. ಆದರೆ ಇದು ಬೆಕ್ಕಿನ ಪ್ರಜಾತಿಗೆ ಸೇರಿದ ಪ್ರಾಣಿಯಲ್ಲ; ಇದು ಇಲಿಯ ಕುಟುಂಬಕ್ಕೆ ಸೇರಿದ್ದು. ಪ್ರೌಢಾವಸ್ಥೆಗೆ ಬಂದ ಈ ಕಸ್ತೂರಿ ಬೆಕ್ಕನ್ನು ವೇದನೆಗೆ ಒಳಪಡಿಸಿದಾಗ ಹೊಕ್ಕಳಿನಿಂದ ಸುವಾಸನೆ ಬೀರುವ ದ್ರವ ಸ್ರವಿಸುತ್ತದೆ. ಆ ದ್ರವವನ್ನು ಸುಗಂಧ ದ್ರವ್ಯವಾಗಿ ಅಥವಾ ಸುಗಂಧ ದ್ರವ್ಯದ ಮೌಲ್ಯವರ್ಧನೆಗೆ ಬಳಸುತ್ತಾರೆ. ಇದು ಕೇವಲ ಹಣ್ಣುಗಳನ್ನು ಮಾತ್ರ ತಿನ್ನುವ ಸಸ್ಯಾಹಾರಿ ಪ್ರಾಣಿ’.

ನಾನು ಮಾತು ಮುಗಿಸುತ್ತಿದ್ದಂತೆಯೇ, ನಾಲ್ಕಾರು ಮಕ್ಕಳು ಮನೆಯಲ್ಲಿನ ಬಾಳೆ ಹಣ್ಣು, ಸೇಬು, ಚಿಕ್ಕು ಹಾಗೂ ಪಾರ್ಲೆ ಬಿಸ್ಕಿಟ್ ಹಿಡಿದು ಅವುಗಳಿಗೆ ತಿನ್ನಿಸಲು ಸನ್ನದ್ಧರಾದರು. ಹೊಸ ಇಂಕ್ ಫಿಲ್ಲರ್ ತಂದು ಅದರಿಂದ ಆ ಮರಿಗಳಿಗೆ ಹಾಲು ಕುಡಿಸುವ ಪ್ರಯತ್ನ ಮಾಡಿದರು. ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ, ಹಾಗೆಯೇ ಮತ್ತೊಬ್ಬರ ಕೈಗೆ ಹೀಗೆ ಹತ್ತಾರುಬಾರಿ ಸಾಗಿಸಲ್ಪಟ್ಟಾಗಲೂ ವಿಚಲಿತಗೊಳ್ಳದೇ ಎರಡೂ ಮರಿಗಳು ಸಾಕಿದ ಬೆಕ್ಕಿನ ಮರಿಯಂತೆ ಖುಷಿಯಿಂದ ಇದ್ದವು. ಬಾಳೆ ಹಣ್ಣು     ಸಹ ಚಪ್ಪರಿಸಿ ತಿಂದು ತಮ್ಮ ಹಸಿವನ್ನು ಇಂಗಿಸಿಕೊಂಡವು. ತಮ್ಮ ಕೈಯಿಂದ ಮರಿಗಳಿಗೆ ಉಣಿಸಿದ ಧನ್ಯತೆ ಮಕ್ಕಳ ಕಣ್ಣಲ್ಲಿ ಮಿಂಚು ಹೊಳೆಸಿತ್ತು.

ನಾನು ಕೂಡಲೇ ಅರಣ್ಯಾಧಿಕಾರಿಗಳಿಗೆ ಕರೆ ಮಾಡಲು ಮುಂದಾದೆ. ಇದನ್ನು ಗಮನಿಸಿದ ಅವರು, ನಾನು ಅರಣ್ಯ ಇಲಾಖೆಗೆ ಅವುಗಳನ್ನು ಹಸ್ತಾಂತರಿಸುವುದು ಬೇಡವೆಂದು, ಅವರು ದೇಖ್-ರೇಖ್ ಮಾಡದೇ ಎಲ್ಲೋ ಅರಣ್ಯದಲ್ಲಿ ಬಿಟ್ಟು ಮರಿಗಳನ್ನು ತಬ್ಬಲಿ ಮಾಡಿಬಿಡುತ್ತಾರೆ ಎಂದು ವಾದಗಳನ್ನು ಮಂಡಿಸಿದರು. ಅವುಗಳ ತಾಯಿ ಅಲ್ಲಿಯೇ ಇರುವುದಾಗ್ಯೂ, ಇನ್ನೊಂದು ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಅದು ಓಡಿ ಹೋಗಿದ್ದನ್ನು ಇವರೆಲ್ಲ ನೋಡಿದ್ದಾಗ್ಯೂ, ಮರಳಿ ಬಂದು ಇವುಗಳನ್ನೂ ತನ್ನ ಸುಪರ್ದಿಗೆ ತಾಯಿ ಪುನಗು ತೆಗೆದುಕೊಳ್ಳುವುದಾಗಿಯೂ, ಹಾಗಾಗದೇ ಹೋದರೆ, ತಾವೇ ಪಂಜರ ಮಾಡಿ ನಾಡ ಬೆಕ್ಕಿನಂತೆ ಸಾಕುವುದಾಗಿಯೂ ನನ್ನನ್ನು ಓಲೈಸಲು ಮುಂದಾದರು. ನನ್ನ ತಂಗಿ ದಿವ್ಯಾ ಸಹ ಅವರೊಟ್ಟಿಗೆ ಧ್ವನಿ ಗೂಡಿಸಿ, ಅಳು ಮೋರೆ ಮಾಡಿ ಅವರಿಗೆ ಕೊಡುವುದು ಬೇಡವೆಂದಳು. ಅಲ್ಲಿಯವರೆಗೆ ‘ಹೂಂ’ ಗುಟ್ಟಿದ್ದ ಡಾ. ಶೂರಪಾಲಿ ಅವರೂ ಮಕ್ಕಳ ಮಾತನ್ನು ಅನುಮೋದಿಸುವವರಂತೆ ನನಗೆ ಕಂಡಿತು. ನನಗೂ ಮಕ್ಕಳ ಮನಸ್ಸನ್ನು ಘಾಸಿಗೊಳಿಸಲು ಮನಸ್ಸಾಗಲಿಲ್ಲ. ಎರಡು ದಿನಗಳು ಇಟ್ಟುಕೊಳ್ಳುವಂತೆ ಸೂಚಿಸಿದೆ.

ಎರಡೂ ದಿನ ಅವುಗಳಿಗೆ ರಾಜೋಪಚಾರ. ಆದರೆ ಅವುಗಳಿಗೆ ಸ್ವಾತಂತ್ರ್ಯ ಹರಣವಾದ ಅನುಭವವಾಗುತ್ತಿತ್ತು. ತಿನ್ನಲು ಅಲ್ಲಗಳೆದು ಉಪವಾಸ ಸತ್ಯಾಗ್ರಹ ಆರಂಭಿಸಿಬಿಟ್ಟವು. ಕೊನೆಗೆ, ನಾವೆಲ್ಲ ನಿರ್ಧರಿಸಿ ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದೆವು. ಅವರೂ ಕೂಡ ನಮ್ಮನ್ನು ಅಭಿನಂದಿಸಿ ಕೂಡಲೇ ಬರುವುದಾಗಿ ಹೇಳಿದರು. ಆದರೆ ಬರೋಬ್ಬರಿ ಮತ್ತೆರಡು ದಿನ ಅವುಗಳು ನಮ್ಮ ಆರೈಕೆಯಲ್ಲಿ ಉಳಿಯುವಷ್ಟು ಶೀಘ್ರಗತಿಯಲ್ಲಿ ಅರಣ್ಯ ಇಲಾಖೆಯವರು ಬಂದರು!

ನಾಲ್ಕು ದಿನಗಳಲ್ಲಿ ಮನೆಯವರೊಂದಿಗೆ ಬೆರೆತುಹೋಗಿದ್ದ ಆ ಮರಿಗಳನ್ನು ಅರಣ್ಯ ಇಲಾಖೆಯವರು ತೆಗೆದುಕೊಂಡು ಹೊರಡಲು ಅನುವಾದಾಗ ನಮ್ಮೆಲ್ಲರ ಕಣ್ಣುಗಳು ತೇವವಾಗಿದ್ದವು. ಅವರೂ ಸಹ ಒಲ್ಲದ ಮನಸ್ಸಿನಿಂದ, ಭಾರವಾದ ಹೃದಯಹೊತ್ತು ನಮ್ಮಿಂದ ಮರಿಗಳನ್ನು ಪಡೆದುಕೊಂಡು ಹೋದರು. ನನ್ನ ಕೈಯಲ್ಲಿ ಮರಿಗಳನ್ನು ಕೊಟ್ಟು ನನ್ನ ತಂಗಿ ದಿವ್ಯಾ ಒಂದೆರಡು ಛಾಯಾಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಅವುಗಳನ್ನು ಬೀಳ್ಕೊಟ್ಟಳು. ಪಿಯೂಸಿ ಕಂಪೆನಿ ಆಕೆಯ ಹಿಂದೆ ನಿಂತಿತ್ತು. ಅವರೆಲ್ಲರಿಗೂ ನಾನೇ ವಿಲನ್ ಆಗಿ ಕಂಡಿದ್ದೆ!