ಕಗ್ಗ ದರ್ಶನ – 36 (2)
ಬೇವು ಬೆಲ್ಲಗಳುಂಡೆ ದಿನದಿನದ ನಮ್ಮೂಟ
ಪೂರ್ವಕರ್ಮದ ಫಲಿತಶೇಷದಿಂದ ಕಹಿ
ದೈವಪ್ರಸಾದದಿಂದ ಸಿಹಿಯೀ ದ್ವಂದ್ವದಲಿ
ಆವೇಶವೇತಕೋ – ಮರುಳ ಮುನಿಯ
ದಿನದಿನದ ನಮ್ಮ ಊಟದಲ್ಲಿ ಬೇವಿನ ಉಂಡೆಯೂ ಇದೆ; ಬೆಲ್ಲದ ಉಂಡೆಯೂ ಇದೆ. ಪೂರ್ವಜನ್ಮಗಳ ಕರ್ಮದ ಫಲವೇ ನಮಗೆ ಈ ಜನ್ಮದಲ್ಲಿ ಸಿಗುವ ಕಹಿ. ದೇವರ ಕೃಪೆಯಿಂದಾಗಿ ಸಿಹಿಯೂ ಸಿಗುತ್ತದೆ. ಹೀಗೆ ಕಹಿ ಮತ್ತು ಸಿಹಿ, ಅಂದರೆ ನೋವು ಹಾಗೂ ನಲಿವನ್ನು ನಾವು ಜೀವನದಲ್ಲಿ ಅನುಭವಿಸಲೇ ಬೇಕು. ಹಾಗಿರುವಾಗ, ಈ ವಿಷಯದಲ್ಲಿ ಆವೇಶ ಏತಕ್ಕೆ? ಎಂದು ಪ್ರಶ್ನಿಸುತ್ತಾರೆ ಮಾನ್ಯ ಡಿ.ವಿ.ಜಿ.
ಜನವರಿ ತಿಂಗಳಲ್ಲಿ ಎಲ್ಲೆಡೆ ಸಂಕ್ರಾತಿಯ ಸಂಭ್ರಮ. ಸಂಕ್ರಾತಿಯಂದು ಬೇವುಬೆಲ್ಲ ಸೇವಿಸುವ ಸಂಪ್ರದಾಯ. ಇದು ನಮ್ಮ ಬದುಕಿನುದ್ದಕ್ಕೂ ಸಾಗಿ ಬರುವ ಕಹಿ-ಸಿಹಿಗಳ ಸಂಕೇತ. ಬಾಳಿನಲ್ಲಿ ಸಿಹಿ ಸಿಕ್ಕಿದಾಗೆಲ್ಲ ನಲಿದಾಡುವ ನಾವು, ಕಹಿ ಸಿಕ್ಕಿದಾಗ ಸಂಕಟ ಪಡುತ್ತೇವೆ. ನಲಿವು ಬಂದಾಗ, ಇದ್ಯಾಕೆ? ಎಂದು ಕೇಳದ ನಾವು ನೋವು ಬಂದಾಗ ಇದ್ಯಾಕೆ? ಎಂದು ಕೇಳಿಯೇ ಕೇಳುತ್ತೇವೆ. ಈ ಎರಡೂ ಪ್ರಶ್ನೆಗಳಿಗೆ ನೇರ ಉತ್ತರ ಈ ಮುಕ್ತಕದಲ್ಲಿದೆ. ಈ ಹಿನ್ನೆಲೆಯಲ್ಲಿ, ಭಯೋತ್ಪಾದಕರ ಬಾಂಬ್ ಧಾಳಿಗಳಿಂದ ಪಾರಾದ ಕೆಲವರ ಕತೆ ತಿಳಿಯೋಣ.
ಪುಣೆಯ ಜರ್ಮನ್ ಬೇಕರಿಯಲ್ಲಿ ೨೦೧೦ರಲ್ಲಿ ಬಾಂಬ್ ಸಿಡಿದಾಗ ನಲುಗಿದವರು ಸುಮೀತ್ ಸಿಂಗ್ (೩೧). ಅವರು ೨೮ ದಿನ ಐಸಿಯುನಲ್ಲಿದ್ದು ಚೇತರಿಸಿಕೊಂಡರು. ಅವರ ಶರೀರದಲ್ಲಿರುವ ಸುಟ್ಟ ಗಾಯಗಳ ಬಗ್ಗೆ ಕೇಳಿದರೆ ಈಗ ಅವರ ಉತ್ತರ: “ಅವೆಲ್ಲ ದೀಪಾವಳಿಯಲ್ಲಿ ಸುಡುಮದ್ದು ಸಿಡಿದು ಆದ ಗಾಯಗಳು.” ಮುಂಬೈಯ ಲಿಯೋಪೊಲ್ಡ್ ಕೆಫೆಗೆ ೨೦೧೧ರಲ್ಲಿ ಭಯೋತ್ಪಾದಕರ ಧಾಳಿ. ಆಗ ಅಲ್ಲಿದ್ದ ಸೌರವ್ ಮಿಶ್ರಾ (೩೭) ಎದೆಗೆ ಬುಲೆಟ್ ತಗಲಿತ್ತು. ಅವರು ಬದುಕಿ ಉಳಿದದ್ದೇ ಪವಾಡ. “ಮುಂಚೆ ನಾನು ಹಣಕ್ಕಾಗಿ ದುಡಿಯುತ್ತಿದ್ದೆ, ಈಗ ಕೇವಲ ಸಂತೋಷಕ್ಕಾಗಿ” ಅಂತಾರೆ. ೨೦೦೫ರಲ್ಲಿ ದೀಪಾವಳಿಯ ಹೊತ್ತಿನಲ್ಲಿ ದೆಹಲಿಯ ಸರೋಜಿನಿ ನಗರದಲ್ಲಿ ಬಾಂಬ್ ಸ್ಫೋಟ, ೪೮ ಜನರ ಸಾವು. ಅಂದು ಮನಿಷಾ ಮೈಕೇಲ್ ಎಂಬ ೮ ವರುಷದ ಬಾಲಕಿ ತತ್ತರಿಸಿದಳು. ಅವಳ ಅಪ್ಪ ಮತ್ತು ಅಣ್ಣ ಮೃತರಾದರು. ತೀವ್ರ ಗಾಯಗಳಾಗಿದ್ದ ಅವಳ ಅಮ್ಮ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಎರಡು ತಿಂಗಳು ಚಿಕಿತ್ಸೆ ನೀಡಿದರೂ ತೀರಿಕೊಂಡರು. ಅಜ್ಜ-ಅಜ್ಜಿ ಜೊತೆ ಇರುವ ಮನಿಷಾ “ಕಳೆದ ೧೧ ವರುಷ ಬದುಕು ನನಗೆ ಬಹಳಷ್ಟು ಕಲಿಸಿದೆ. ನಾನೀಗ ಹೊಸ ಜೀವನ ಆರಂಭಿಸುತ್ತಿದ್ದೇನೆ. ಜಗತ್ತನ್ನೇ ಗೆಲ್ಲಲು ಸಜ್ಜಾಗಿದ್ದೇನೆ” ಎನ್ನುತ್ತಾಳೆ. ಇವರ ಮಾತು ಕೇಳುತ್ತಾ, “ಆವೇಶವೇತಕೋ” ಎಂಬ ಮಾತಿನ ಧ್ವನಿ ಅರ್ಥವಾಗುತ್ತದೆ, ಅಲ್ಲವೇ?