ಕಡೂರಿನ ದಿನಗಳು - ನಾರಾಯಣ ದರುಶನ!

ಕಡೂರಿನ ದಿನಗಳು - ನಾರಾಯಣ ದರುಶನ!

ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಪ್ರತಿ ಸಂಜೆ ಕತ್ತಲಾಗುವವರೆಗೂ ಆಡುವ ಕಾಲ, ಸೆಲ್ ಫೋನ್, ಲ್ಯಾಪ್ಟಾಪ್, ಟಿವೀ ಗಲಾಟೆಗಳಿಲ್ಲದಕಾಲ. ನಾನೂ, ನನ್ನ ಗೆಳತಿಯರು, ಅಕ್ಕ ತಂಗಿಯರೂ ಆಟ ಆಡಿದ್ದೇ ಆಡಿದ್ದು. ಕುಂಟಪಿಲ್ಲಿ, ಓಡಾಟ ಬಾಲಾಟ, ಹಗ್ಗದಾಟ ಹೀಗೆ ಹಲವಾರು. ಅಂದು ಒಂದು ದಿನ ಹೀಗೇ ಆಟ ಆಡಿ ಸುಸ್ತಾಗಿ ಬಾಯಾರಿಕೆ ಆಗಿ ಇನ್ನೇನು ಮನೆ ಸೇರಬೇಕು ಅಂತಿದ್ದು ಮೈದಾನದಿಂದ ಮನೆಯ ಹಿತ್ತಲಿನ ಬಾಗಿಲ ಹತ್ತಿರ ಬಂದೆ. ನನ್ನ ಗೆಳತಿ ಲಕ್ಷ್ಮಿನೂ ನನ್ನೊಡನೆ ನಮ್ಮ ಮನೆಗೆ ಬಂದಳು ನೀರು ಕುಡಿದು ಮನೆಗೆ ಹೋಗುವ ಅಂತೆನಿಸಿ. ಹಿತ್ತಲಿನ ಬಾಗಿಲ ಮುಂದೆ ನಮ್ಮಜ್ಜಿ ಸಣ್ಣ ಇಬ್ಬರು ಹುಡುಗರ ಜೊತೆ (ನಮಗಿಂತ ಸ್ವಲ್ಪ ದೊಡ್ಡವರಿರಬೇಕು) ಸಂಭಾಷಣೆ ನಡೆಸಿತ್ತು. ಕೈಯಲ್ಲಿ ಒಂದು ನಾರಯಣ ವಿಗ್ರಹ ಹಿಡಿದು ಅವರೊಡನೆ ಚೌಕಾಸಿ ಮಾಡುತ್ತಿತ್ತು. ನಾಲ್ಕಾಣೆ ಕೊಟ್ಟು, ಸಾಕು ನಡೆಯೋ, ನಿನಗಿನ್ನೆಷ್ಟು ದುಡ್ಡು ಬೇಕು ಅಂತ. ಕೈಯಲ್ಲಿ ನಾರಾಯಣನನ್ನು ಇಟ್ಟುಕೊಂಡು "ತುಂಬಾ ಚೆನ್ನಾಗಿದೆ ಈ ವಿಗ್ರಹ, ಎಷ್ಟು ಸುಂದರವಾಗಿದೆ, ನಗುವಾದ ಮುಖ ಅಂತ ಹೇಳಿ ಆನಂದ ಪಡುತ್ತಿತ್ತು. ನಾವಿಬ್ಬರೂ ಅಜ್ಜಿಯ ಹತ್ತಿರ ಹೋಗಿ ಅಜ್ಜಿ ಕೈಯಲ್ಲಿದ್ದ ಆ ವಿಗ್ರಹವನ್ನ ನೋಡಿದೆವು. ಅಜ್ಜಿಗೆ ನಾರಾಯಣ ದರುಶನ ಕೊಟ್ಟಿದ್ದ, ಅದನ್ನು ಸಂಭ್ರಮದಿಂದ ಆನಂದಿಸುತಿತ್ತು. ಆ ಹುಡುಗರು ನಾಲ್ಕಾಣೆ ಸಾಲದಜ್ಜಿ ಇನ್ನೂ ನಾಲ್ಕಾಣೆ ಕೊಡಿ ಅಂತ ಪೀಡಿಸುತ್ತಿದ್ದರು. ಅಜ್ಜಿ ಸ್ವಲ್ಪ ಸ್ವಲ್ಪನೇ ಚಿಲ್ಲರೆ ಕೊಟ್ಟು, ೫, ೧೦ ಪೈಸೆ ಕೊಟ್ಟು ಸಮಾಧಾನ ಮಾಡುತ್ತಿತ್ತು. ಆ ಹುಡುಗರು ಜಾಸ್ತಿ ದುಡ್ಡು ಕೇಳುತ್ತಲೇ ಇದ್ದರು.

ಆ ಹುಡುಗರು ಕೂಲಿ ಮಾಡಿ, ಬೇಡಿ ತಿನ್ನುವ ಮಕ್ಕಳು. ಹೀಗೇ ಸಂತೆ ಮಳದಲ್ಲಿ ಆಟ ಆಡುತ್ತಿದ್ದಾಗ, ಮಣ್ಣಿನ ಗುಂಡಿ ತೋಡುವಾಗ, ಯಾರೋ ಮರದ ಕೆಳಗೆ ಹೂತಿಟ್ಟ ಈ ನಾರಾಯಣ ವಿಗ್ರಹ (ಸಣ್ಣದು ), ಮತ್ತಿನ್ನೇನೋ ದೇವರ ಸಾಮಾನು ಸಿಕ್ಕಿತ್ತು. ಆಟವಾಡುವುದನ್ನೂ ನಿಲ್ಲಿಸಿ ತಕ್ಷಣ ಅದನ್ನು ಮಾರಲು ಕೇರಿಗೆ ಬಂದವು. ನಮ್ಮ ಮನೆ ಸಂತೆ ಎದುರಿಗೇ ಇದ್ದ ಕಾರಣ ಅಜ್ಜಿ ಕಣ್ಣು ತಪ್ಪಿಸಿ ಯಾರೂ ಹಾಯುವ ಹಾಗಿರಲಿಲ್ಲ. ಅಜ್ಜಿಗೂ ಅನುಮಾನ ಬಂದಿತ್ತು, ಇವು ಯಾರ ಮನೇದೋ ದೇವರನ್ನು ಕದ್ದಿವೆ ಎಂದು. ಆದರೆ ನಾರಾಯಣ ಮೈಪೂರ್ತಿ ಮಣ್ಣು ಅಂಟಿದ್ದರಿಂದ ಎಲ್ಲೋ ನೆಲದಲ್ಲಿ ಸಿಕ್ಕಿದೆ ಅಂತ ಖಚಿತವಾಗಿತ್ತು. ನಮಗೂ ಅಜ್ಜಿ ನಾರಯಣನನ್ನು ತೋರಿಸಿ, "ಎಷ್ಟು ಸುಂದರವಾದ ನಗು ಮುಖ ಈ ಮೂರ್ತಿದು" ಅಂತ ಖುಷಿ ಪಡುತ್ತಿತ್ತು. ಆದರೆ ಈ ನಾರಾಯಣ ಅಜ್ಜಿಗೆ ದಿವ್ಯ ದರ್ಶನ ಕೊಟ್ಟು ಓಡುತ್ತಾನೆ ಎಂಬ ಯಾವ ಸಂಶಯವೂ ಅಜ್ಜಿಗೆ ಬರಲಿಲ್ಲ. ಲಕ್ಷ್ಮಿ ಈ ವಿಗ್ರಹವನ್ನು ಒಂದೇ ಸಮ ಕುತೂಹಲದಿಂದ ನೋಡಿ ನುಡಿದಳು "ಅಜ್ಜೀ, ಈ ನಾರಾಯಣ ದೇವರು ಮಂಜಣ್ಣನ ಮನೇದು ಇದ್ದ ಹಾಗಿದೆ ( ಅವಳ ಚಿಕ್ಕಪ್ಪ) ಎಂದು, ಓಡಿ ಹೋಗಿ ಮಂಜಣ್ಣನ ಕರೆದೇ ತಂದಳು. ಅಷ್ಟರಲ್ಲಿ ಅಜ್ಜಿ ಆ ಹುಡುಗರಿಗೆ ಎಂಟು ಆಣೆ ಕೊಟ್ಟು, ಇನ್ನಿಲ್ಲ ನಡೀರಿ ಅಂತ ಹೇಳುತ್ತಿತ್ತು. ಆ ಹುಡುಗರು, ಮಂಜಣ್ಣ ಬರುವುದನ್ನು ನೋಡಿ, ಇನ್ನು ಅವರನ್ನು ಕಳ್ಳರು ಅಂತಾರೆ ಎಂದೆಣಿಸಿ ಓಟ ಶುರು ಮಾಡಿದರು.

ಅಜ್ಜಿ ಕೈಯಲ್ಲಿ ನಾರಾಯಣನನ್ನು ಇಟ್ಟುಕೊಂಡು ನೋಡಿದ್ದೇ ನೋಡಿದ್ದು. ಮಂಜಣ್ಣನ ಮನೆಗೆ ವರುಷಗಳ ಹಿಂದೆ ಕಳ್ಳರು ಕನ್ನ ಹಾಕಿ ಕೆಲವು ವಸ್ತುಗಳನ್ನೂ ಮತ್ತು ಒಡವೆಗಳನ್ನೂ ಕದ್ದು, ಸಂತೆ ಮಳದಾಚೆಗೆ ಓಡಿ ಅವಿತಿಟ್ಟುಕೊಂಡು, ದೇವರ ವಿಗ್ರಹಗಳನ್ನು, ಅಲ್ಲೇ ಮರದ ಅಡಿಯಲ್ಲಿ ಹೂತು ( ಆಮೇಲೆ ರಾತ್ರಿ ಬಂದು ಕೊಂಡೊಯ್ಯುವ ಯೋಜನೆ ಹಾಕಿಕೊಂಡು) ತಪ್ಪಿಸಿಕೊಂಡು ಓಡಿದ್ದರು. ಮಂಜಣ್ಣ ಓಡಿ ಬಂದು, "ಅಜ್ಜಿ ಕಳ್ಳ ಸಿಕ್ಕಿದ್ನಾ? ಎಲ್ಲಿ ಆ ಹುಡುಗರು ಅಂತ ಅವರನ್ನ ಹಿಡಿದು, ಅವರು ಕಳ್ಳರಲ್ಲ, ಅವರಿಗೆ ಈ ವಿಗ್ರಹ ಮತ್ತು ಕೆಲವು ಸಣ್ಣ ದೇವರ ವಸ್ತುಗಳು ಮರದಡಿಯಲ್ಲಿ ಸಿಕ್ಕಿದ್ದಷ್ಟೇ ಆಟ ಆಡುವಾಗ ಎಂಬುದನ್ನು ಖಚಿತಪಡಿಸಿ, ಆ ಮಕ್ಕಳನ್ನು ಬಿಟ್ಟು ಅಜ್ಜಿಯಲ್ಲಿಗೆ ನಡೆದು ಬಂದರು. ಅಜ್ಜಿ ಆಗತಾನೆ ದೇವರನ್ನು ತೊಳೆದು ಇನ್ನೇನು ದೇವರಮನೆಯಲ್ಲಿ ಇಡಬೇಕು ಅಂತಿರುವಾಗ ಮಂಜಣ್ಣ "ಅಜ್ಜಿ, ನಮ್ಮನೆ ದೇವರು ಅದು, ಕೊಡಿ ಅಂದರು". ಅಜ್ಜಿ "ಹೋಗಲಿ ಬಿಡು ಮಂಜಣ್ಣ, ಎಲ್ಲಿದ್ದರೇನು ಅಂತ ಸಮಾಧಾನ ಹೇಳಲು ಯತ್ನಿಸಿತು". ಆದ್ರೇ ಮಂಜಣ್ಣ ನಾರಾಯಣನ ಇಸ್ಕೊಂಡೇ ಬಿಟ್ರು. ಆಮೇಲೆ ಅಜ್ಜಿ "ನಾನು ಆ ಹುಡುಗ್ರುಗೆ ದುಡ್ಡು ಕೊಟ್ಟಿ ತಗೊಂಡಿದೀನಿ ಅಂತು". ಮಂಜಣ್ಣ ಆ ಎಂಟಾಣೆನೂ ಅಜ್ಜಿಗೆ ಕೊಡದೇ ನಾರಾಯಣನನ್ನು ಸ್ವತ್ತಿಗೆ ಹಾಕ್ಕೊಂಡರು. ಲಕ್ಷ್ಮಿಗೆ ಹೆಮ್ಮೆಯೋ ಹೆಮ್ಮೆ "ಡೆಟೆಕ್ಟೀವ್" ಕೆಲಸ ಮಾಡಿ ಅದೂ ಯಶಸ್ವಿಯಾಯಿತು ಅಂತ. ಒಟ್ಟಿನಲ್ಲಿ ಅಜ್ಜಿಗೆ "ನಾರಾಯಣ ದರುಶನ" ಕೊಟ್ಟು ಮಾಯವಾಗಿದ್ದು ಹೀಗೆ. ಅಜ್ಜಿಗೆ ಕೈಗೆ ಬಂದಿದ್ದು ಬಾಯಿಗೆ ಬಂದಿರಲಿಲ್ಲ. ಮಂಜಣ್ಣನಿಗೆ ಅವರ ದೇವರು ದಕ್ಕಿತ್ತು. ಹುಡುಗರಿಗೆ ಎಂಟಾಣೆ ಗಿಟ್ಟಿತ್ತು. ನನಗೊಂದು ಅನುಭವ ಕಥನ ಮನಸಲ್ಲಿ ಬರೆಸಿತ್ತು. "ಓಂ ನಮೋ ನಾರಾಯಣಾಯ" ಇಗೋ.. ಅಕ್ಷರ ಸ್ವರೂಪ!

 

Comments

Submitted by rasikathe Wed, 12/12/2012 - 11:29

In reply to by kavinagaraj

ಧನ್ಯವಾದಗಳು!, ಇತ್ತೀಚೆಗೆ ಬರೆಯಲು ಸಮಯ ಸಿಕ್ಕಿರಲಿಲ್ಲ, ಬರೆಯದೇ ಒಂದು ತರಹ ವಿತ್ಡ್ರಾಯಲ್ ತರಹ ಆಗಿ ಹೋಗಿತ್ತು. ಈಗ ಸ್ವಲ್ಪ ಶಮನ ವಾಯಿತು