ಕಡೂರಿನ ದಿನಗಳು - ಬ್ರೆಡ್ ಐಯ್ಯಂಗಾರ್!!!

ಕಡೂರಿನ ದಿನಗಳು - ಬ್ರೆಡ್ ಐಯ್ಯಂಗಾರ್!!!

ಕಡೂರಿನ ದಿನಗಳು - ಬ್ರೆಡ್ ಐಯ್ಯಂಗಾರ್!

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಸಣ್ಣ ಊರಾಗಿದ್ದರಿಂದ ಕಡೂರಲ್ಲಿ ನಾವೆಲ್ಲ ಸಣ್ಣವರಿದ್ದಾಗ ಇದ್ದಿದ್ದು ಒಂದು ಬ್ರೆಡ್ ಅಂಗಡಿ - ಬೇಕರಿ. ಇನ್ನೊಂದು ಸಣ್ಣದು ಇತ್ತೇನೋ, ಆದರೆ ಇದು ಪ್ರಸಿದ್ಧವಾಗಿದ್ದರಿಂದ ನನ್ನ ನೆನಪಿನಲ್ಲಿ ಇದೇ ಉಳಿಯಿತು. ಬ್ರೆಡ್ ಐಯ್ಯಂಗಾರ್ಗಳು ಇಬ್ಬರು ಅಣ್ಣ, ತಮ್ಮಂದಿರು ಇದನ್ನು ನಡೆಸುತ್ತಿದ್ದರು. ಇದು ಪೇಟೆಯಲ್ಲಿ, ಬೇರೆ ಮಾರುಕಟ್ಟೆಗಳ ಮಧ್ಯೆ ಇತ್ತು. ಊರಿನವರೆಲ್ಲಾ ಈ ಬೇಕರಿಗೆ ಬಂದೇ ಬರುತ್ತಿದ್ದರು. ಹುಷಾರು ತಪ್ಪಿದಾಗ, ಬ್ರೆಡ್ ಕೊಳ್ಳಲು, ಬೇರೆ ಸಮಯದಲ್ಲಿ, ಪಫ್, ನಿಪ್ಪಟ್ಟು, ಬೆಣ್ಣೇ ಬಿಸ್ಕತ್ತು, ಕೊಬ್ಬರಿ ಬಿಸ್ಕತ್ತು, ಖಾರ ಶೇವಿಗೆ, ಖಾರಾ ಪುರಿ, ಎಲ್ಲಾ ತಿಂಡಿಗಳನ್ನೂ ಕೊಂಡು ಹೋಗಲು. ಬ್ರೆಡ್ ಐಯ್ಯಂಗಾರ್ಗಳು ಈ ಎಲ್ಲಾ ತಿಂಡಿಗಳನ್ನು ಬಹಳ ಚೆನ್ನಾಗಿ ಮಾಡುತ್ತಿದ್ದರು. "ಇಂಗೂ - ತೆಂಗೂ ಹಾಕಿದರೆ ಮಂಗನಂತವನೂ ಚೆನ್ನಾಗಿ ಮಾಡುತ್ತಾನೆ" ಅನ್ನುವ ಹಾಗೆ, ಬೆಣ್ಣೇ, ಸಕ್ಕರೆ, ಓಂ ಕಾಳೂ (ಕೋಡುಬಳೆ, ನಿಪ್ಪಟ್ಟಿಗೆ), ಖಾರ, ಮಸಾಲೆ ಎಲ್ಲ ಚೆನ್ನಾಗಿ ಜೋಡಿಸುತ್ತಿದ್ದರು. ನಾವೆಲ್ಲ ಬೇಕರಿಗೆ ಹೋದಾಗ, ಇನ್ನೂ ಬ್ರೆಡ್ ಬೇಕ್ ಆಗುವುದಕ್ಕೆ ಸಮಯ ಇದ್ದಾಗ, ಅಲ್ಲೇ ನಿಂತು, ಹಿಟ್ಟು, ಕಲಿಸುವುದು, ಮಸಾಲ ಬೆರೆಸುವುದು, ಒತ್ತುವುದು ಎಲ್ಲ ನೋಡುತ್ತಾ, ಅಲ್ಲೇ ವಾಸನೆ ಕುಡಿಯುತ್ತಾ ನಿಂತಿರುತ್ತಿದ್ವಿ. ಬೇರೆ ವ್ಯಾಪಾರಿಗಳು ಬಂದಾಗ ಬ್ರೆಡ್ ಐಯ್ಯಂಗಾರ್ ನಮ್ಮನ್ನುದ್ಧೇಶಿಸಿ: ಸ್ವಲ್ಪ ಜಾಗ ಬಿಡಿ ಅವರಿಗೆ, ಇನ್ನೂ ೧೫ ನಿಮಿಷ ಆಗತ್ತೆ ಬ್ರೆಡ್ ಆಗಲು ಅಂತ ಲಘುವಾಗಿ ಗದರುತ್ತಿದ್ದರು. ಸ್ವಲ್ಪ ಊರ ಪ್ರಮುಖರು ಬಂದರೆ, ಅವರಿಗೆ ರುಚಿ ನೋಡಲು ನಿಪ್ಪಟ್ಟು ಎಲ್ಲ ಕೊಟ್ಟು, ಇದನ್ನೂ ಪ್ಯಾಕ್ ಮಾಡಲಾ ಅಂತ ಕೇಳುತ್ತಿದ್ದರು. ನಾವೂ ಆಗ ಕೈ ಒಡ್ಡುತ್ತಿದ್ವಿ ಯಾವ ನಾಚಿಗೆಯೂ ಇಲ್ಲದೇ. ಅಲ್ಲೀವರೆಗೂ ಘಮ ಘಮ ವಾಸನೆ ಕುಡಿದು ಕಾಯುತ್ತಿದ್ದ ನಮಗೆ ನಿಪ್ಪಟ್ಟು ತಿನ್ನಲು ಆಸೆಯಾಗುತ್ತಿತ್ತು. ನಮ್ಮ ಅಣ್ಣನಿಗೆ ತುಂಬಾ ಸ್ನೇಹಿತರಿದ್ದರಿಂದ ಅಣ್ಣನ ಸ್ನೇಹಿತರು ಯಾರಾದರೂ ಬ್ರೆಡ್ ಅಂಗಡಿಗೆ ನಾವಿದ್ದಾಗ ಬಂದರೆ, ಅವರು ಖರೀದಿಸಿದರಲ್ಲಿ ನಮಗೆಲ್ಲಾ ಒಂದು ಪೀಸ್ ಕೊಡಲು ಮರೆಯುತ್ತಿರಲಿಲ್ಲ. ಆಗ ನಾವು ಬ್ರೆಡ್ ಐಯ್ಯಂಗಾರ್ ನ ನೋಡಿಕೊಂಡು ಗರಮ್ ಗರಮ್ ಅಂತ ಶಬ್ಧಮಾಡಿಕೊಂಡು ತಿನ್ನುತ್ತಿದ್ವಿ.

ಬ್ರೆಡ್ ಐಯ್ಯಂಗಾರ್ ಬೇಕರಿಯಲ್ಲಿ ಒಳಗೆ ತುಂಬಾ ಬಿಸಿಯಾಗಿರುತ್ತಿತ್ತು. ಬೇಸಿಗೆಯ ಬೇಸಿಗೆ, ಮತ್ತು ಅವನ್ ನ ಹೀಟು ಎಲ್ಲ ಸೇರಿ. ಅವರು ತುಂಬಾ ಕಷ್ಟ ಪಟ್ಟೂ ಬಿಸಿಯಲ್ಲಿ ಬೆವರು ಸುರಿಸಿ ಕೆಲಸಮಾಡುತ್ತಿದ್ದರು. ಹಾಗಾಗಿ ಒಂದು ತೆಳು ಪಂಚೆ, ಅದರ ಮೇಲೆ ಒಂದು ಖೋರಾ ಬಟ್ಟೆಯಲ್ಲಿ ಹೊಲಿದ ತೋಳಿಲ್ಲದ ಬನಿಯನ್ ಹಾಕಿಕೊಂಡು ಕೆಲಸ ಮಾಡುತ್ತಿದ್ದರು. ಎಣ್ಣೆ, ಬೆಣ್ಣೆ, ಎಲ್ಲ ಮುಟ್ಟಿದ ಕೈಯನ್ನು ಬನಿಯನ್ ಮೇಲೆ ಅಥವಾ ಪಂಚೆಗೆ ವರೆಸುತ್ತಿದ್ದರು. ಬೆಳಗ್ಗೆ ಉಟ್ಟಿ ಬಂದ ಬಿಳಿ ಪಂಚೆ, ಬನಿಯನ್ ಎರಡೂ , ಕೆಲಸ ಮುಗಿಸೋಹೊತ್ತಿಗೆ ಕೊಳೆ, ಕಪ್ಪಿನ ಬನಿಯನ್ ಮತ್ತು ಪಂಚೆಗಳಾಗುತ್ತಿತ್ತು. ನಮ್ಮ ಅಣ್ಣ (ನಮ್ಮ ತಂದೆ), ನಮ್ಮನ್ನೆಲ್ಲಾ "ಸ್ನಾನ ಆಯ್ತಾ? ಅಂತ ಯಾವಾಗಲಾದರೂ ಕೇಳಿದಾಗ, ನಾವು "ಇನ್ನೂ ಇಲ್ಲ" ಅಂದರೆ, "ಶೊಬಚಿ’ ಅಂತ ಬೈಯುತ್ತಿದ್ದರು. ನಮ್ಮ ಅಮ್ಮನ ಕೇಳಿದಾಗ ಶೊಬಚಿ ಅಂದರೆ "ಕೊಳಕು" ಅಂತ ತಿಳಿದಮೇಲೆ, ಅಣ್ಣ ಶೊಬಚಿ ಅಂದಾಗಲೆಲ್ಲ ನಾವುಗಳು: "ನಾವಲ್ಲ ಕೊಳಕು, ಅದು ಬ್ರೆಡ್ ಐಯ್ಯಂಗಾರ್ ಅಂತಿದ್ವಿ" ಏಕೆಂದರೆ ಅವರ ಬಟ್ಟೆ ಎಲ್ಲ, ಎಣ್ಣೆ ಜಿಡ್ಡು, ಕೊಳೆ ಎಲ್ಲ ಸೇರಿ ಕಪ್ಪಗೆ ಆಗಿದ್ದರಿಂದ. ಆಗ ನಮ್ಮ ಅಮ್ಮ ಹೀಗೆ ಹೇಳಿದ್ದರು.... ಖಾರ, ಎಣ್ಣೆ, ಬೆಣ್ಣೇ, ಕರಿದ ಕನುಗು ಎಲ್ಲ ಸೇರಿ ಹಾಗೆ ಕಾಣಿಸುತ್ತೆ ಅವರ ಬಟ್ಟೆ ಅಷ್ಟೇ. ಅವರು ಬೆಳಗ್ಗೆ ಕ್ಲೀನಾದ ಬಟ್ಟೆಯನ್ನೇ ಹಾಕಿರುತ್ತಾರೆ ಎಂದು ತಿಳಿ ಹೇಳಿದ್ದರು.

ಬ್ರೆಡ್ ಐಯ್ಯಂಗಾರ್ ಹೇಗಿದ್ದರು ಅಂತ ಹೇಳಲೇಬೇಕು. ನಾವು ಬ್ರೆಡ್ ಅಂಗಡಿಗೆ ಹೋದಾಗ ಯಾವ ಅವಸರವೂ ಇರುತ್ತಿರಲಿಲ್ಲ. ಆದ್ದರಿಂದ ಅಲ್ಲೇ ನಿಂತು ಅವರ ಮುಖ ಚಹರೆ, ಅವರ ಆಕ್ಶನ್ಸ್ (ಕೆಲಸಗಳನ್ನು) ಅಚ್ಚುಕಟ್ಟಾಗಿ ನೋಡುತ್ತಿದ್ದೆವು. ನೋಡಿ ಕಲಿಯುವುದೂ ಒಂದು ಉದ್ಧೇಶವಾಗಿತ್ತು. ಅವರು ಬ್ರೆಡ್ ಅನ್ನು ಅವನ್ ಇಂದ ತೆಗೆಯುವುದು, ಲೋಫ಼್ ಅನ್ನು ಸಣ್ಣದಾಗಿ ಸ್ಲೈಸ್ ಮಾಡುವುದು, ಹಳೇ ನ್ಯೂಸ್ ಪೇಪರ್ ಮೇಲೆ ಇಟ್ಟು ಪ್ಯಾಕ್ ಮಾಡುವುದು, ಆಮೇಲೆ ಹತ್ತಿಯ ತೆಳು ದಾರದಿಂದ ಕಟ್ಟುವುದು ಗಿರಾಕಿಗೆ ಕೊಡುವ ಮೊದಲು, ಹೀಗೆ ಪ್ರತಿಯೊಂದು ಸ್ಟೆಪ್ಗಳನ್ನು ಚಾಚೂ ತಪ್ಪದೇ ನೋಡುತ್ತಿದ್ದೆವು. ಮತ್ತು ಅದನ್ನು ಕಲಿಯುತ್ತಿದ್ದೆವು. ಮನೆಯಲ್ಲಿ ಏನಾದರೂ ಕಟ್ ಮಾಡಬೇಕಾದರೆ - ಸೌತೆಕಾಯಿ, ಅವರ ಬ್ರೆಡ್ ಕಟ್ ಮಾಡುವ ಟೆಕ್ನಿಕ್ (ವಿಧಾನ) ಉಪಯೋಗಿಸುತ್ತಿದ್ವಿ. ನೋಡಿ ಕಲಿಯುವುದು ತುಂಬಾ ಸುಲಭವಾದ ವಿಧಾನ ನನ್ನ ಪ್ರಕಾರ. ಹಾಗೇ ನಾನು ಬಹಳ ವಿಷಯಗಳನ್ನು ನೋಡೇ ಕಲಿತಿರುವುದು.

ಹೀಗೆ ಊರವಿರಿಗೆಲ್ಲಾ ಬ್ರೆಡ್ ಐಯ್ಯಂಗಾರ್ ತುಂಬಾ ಅಚ್ಚುಮೆಚ್ಚಾಗಿದ್ದರು. ಬಿಸಿ - ಬಿಸಿ, ಖಾರ, ಸಿಹಿ,  ಘರಮ್, ಆದ ತರ ತರಾವರಿ ತಿನಿಸುಗಳನ್ನೆಲ್ಲಾ ಸಮಯಕ್ಕೆ ಸರಿಯಾಗಿ ರೆಡಿಮಾಡಿ ಕೊಡುತ್ತಿದ್ದರು. ಬ್ರೆಡ್ ಐಯ್ಯಂಗಾರ್ಗಳು ಇಬ್ಬರೂ, ಕುಳ್ಳಗೆ, ದಪ್ಪಗೆ, ಕಪ್ಪಗೆ ಇದ್ದರು. ಡೊಡ್ಡವರು ಸಣ್ಣವರಿಗಿಂತ ಸ್ವಲ್ಪ ಜಾಸ್ತಿ ದಪ್ಪ ಇದ್ದರು. ಏಕೆಂದರೆ ಅವರಿಗೆ ಬೆಣ್ಣೆ ಬಿಸ್ಕತ್ ಮಾಡಿ, ಮಾಡಿ, ಅದರ ರುಚಿನೋಡಿ ಜಾಸ್ತಿ ವರುಷಗಳ ಅನುಭವ ಇತ್ತು. ತುಂಬಿದ ಕೆನ್ನೆಗಳು, ಸ್ವಲ್ಪ ಚೌಕಾಕಾರದ ಮುಖಕಟ್ಟು, ಕೂತಿದ್ದ ಕತ್ತು, ಒಂದಕ್ಕಿಂತ ಹೆಚ್ಚು ಗಲ್ಲಗಳು, ಕತ್ತಿನಲ್ಲಿ ಒಂದೆರಡು ಫೋಲ್ಡ್ಸ್ ಗಳೂ ಇದ್ದವು.  ತುಂಬಾ ಸೆಕೆಯಾದ್ದರಿಂದ ಅವರುಗಳು ಒಂದು ಖೋರಾ ಬಟ್ಟೆಯಲ್ಲಿ ಹೊಲಿದ ತೋಳಿಲ್ಲದ ಬನಿಯನ್ ಹಾಕುತ್ತಿದ್ದರು. ಅದಕ್ಕೆ ಎರಡೂ ಪಕ್ಕದಲ್ಲೂ ಒಂದೊಂದು ಜೇಬು ಇತ್ತು. ಆ ಜೇಬಿನೊಳಗೆ ಕೆಲಸಕ್ಕೆ ಅನುಕೂಲವಾಗುವಂತೆ ಕೆಲವು ಸಣ್ಣ, ಪುಟ್ಟ, ಸಾಮಾನುಗಳನ್ನು ಇಟ್ಟುಕೊಳ್ಳುತ್ತಿದ್ದರು. ಉದಾಹರಣೆಗೆ, ಸಣ್ಣ ಕತ್ತರಿ, ವರೆಸುವ ಬಟ್ಟೆ, ಅಥವಾ ಸಣ್ಣ ಕರವಸ್ತ್ರ, ಕೆಲವೊಮ್ಮೆ ಹಸಿ ಹತ್ತಿ ದಾರದ ಉಂಡೆ ಹೀಗೆ ಮುಂತಾದುವುಗಳನ್ನು ಕೈಗೆ ಸುಲಭವಾಗಿ ಸಿಗುವಂತೆ ಜೋಪಾನವಾಗಿ ಶೇಕರಿಸಿಡುತ್ತಿದ್ದರು. ಎಣ್ಣೆ, ಬೆಣ್ಣೆ, ಖಾರ, ಜಿಡ್ಡು, ಮತ್ತು ನ್ಯೂಸ್ ಪೇಪರ್ ಕರಿ ಮಸಿ, ಇದರ ಜೊತೆ ಕೆಲಸಮಾಡುತ್ತಿದ್ದರಿಂದ ಕೈಯನ್ನು ಬನಿಯನ್ ಮೇಲೆ, ಜೇಬಿನ ಹೊರಗಡೆ ಮತ್ತು ಹೊಟ್ಟೆಯ ಮೇಲೆ ಪದೇ ಪದೇ ಸವರಿಕೊಳ್ಳುತ್ತಿದ್ದರಿಂದ, ಆ ಜಾಗಗಳಲ್ಲಿ ಕರೀ ಕೊಳೆತರಹ ಅಂಟಿಕೊಂಡಿರುತ್ತಿತ್ತು. ಅದು ಒಂದು ಕೊಳೆ ತರ ಕಂಡರೂ ಅದೂ ಬರೀ ಜಿಡ್ಡಿನ ಖಲೆಯಾಗಿತ್ತು. ಬಿಳಿ ಮಲ್ ಪಂಚೆ ಮೇಲಕ್ಕೆ ಎತ್ತಿ ಕಟ್ಟಿರುತ್ತಿದ್ದರು. ಅದು ದಿನದ ಕೊನೆಯವೇಳೆಗೆ ಒಂದು ತರ ಕೊಳೆ ಪಂಚೆ ತರಹ ಕಾಣುತ್ತಿತ್ತು.

ದಿನಾ ಬೆಳಗ್ಗೆ ಹೋದರೆ ಅಂಗಡಿಗೆ, ಮಧ್ಯ್ಹಾನ ೨ ಘಂಟೆಗೆ ಮನೆಗೆ ಊಟಕ್ಕೆ ಬಂದು ಮತ್ತೆ ೩-೪ ಘಂಟೆ ಹೊತ್ತಿಗೆ ಅಂಗಡಿಗೆ ಹೋಗುವರು. ಅಂಗಡಿ ಮುಚ್ಚುತ್ತಿದ್ದಿದ್ದು ರಾತ್ರಿ ೯ ಘಂಟೆಗೆ. ಹೀಗೆ ಅಣ್ಣ - ತಮ್ಮಂದಿರಿಬ್ಬರೂ ತುಂಬಾ ಕಷ್ಟ ಪಟ್ಟು ಬೇಕರಿಯನ್ನು ಬೆಳೆಸಿದ್ದರು. ಮಕ್ಕಳು ಸ್ವಲ್ಪ ದೊಡ್ದವರಾಗುವ ಹೊತ್ತಿಗೆ ಅಣ್ಣ - ತಮ್ಮಂದಿರು ಬೇರೆ, ಬೇರೆಯಾಗಿ ಬೇರೆ ಮನೆಗಳನ್ನು ಮಾಡಿಕೊಂಡಿದ್ದರು. ದೊಡ್ಡವರು ಪೇಟೆಯಲ್ಲೇ ಉಳಿದು, ಸಣ್ಣವರು ಕೋಟೆಗೆ ಬಂದಿದ್ದರು. ಕೋಟೆಯಲ್ಲಿದ್ದವರ ಮಗಳು ರತ್ನ ನನ್ನ ಕ್ಲಾಸ್ಮೇಟ್ ಆಗಿದ್ದಳು. ನಾವೆಲ್ಲರೂ ಸಾಯಂಕಾಲ ಒಟ್ಟಿಗೇ ಆಟ ಆಡುತ್ತಿದ್ದೆವು. ಆಟಕ್ಕೆ ಕರೆಯಲು ನಾವುಗಳೇ ಅವಳ ಮನೆಗೆ ಹೋಗುತ್ತಿದ್ದೆವು. ಅವರ ಮನೆಗೆ ಹೋದಾಗಲೆಲ್ಲ, ಬೆಣ್ಣೆ ಬಿಸ್ಕತ್, ಕರಿದ ತಿಂಡಿ ವಾಸನೆ ಜೋರಾಗಿ ಬರುತ್ತಿತ್ತು. ಅವರಮ್ಮ ಏನಾದರೂ ಕೊಡುವವರೆಗೂ ನಾವು ಗಾಡಿ ಬಿಡುತ್ತಿರಲಿಲ್ಲ ಅವರ ಮನೆಯಿಂದ. ಅವರಮ್ಮ ನಮಗೆ ಸ್ವಲ್ಪ ಜಾಸ್ತಿ ತಿಂಡಿ ಕೊಟ್ಟಿದ್ದರೆ ಅವರ ಮಕ್ಕಳಿಗೆ ಸ್ವಲ್ಪ ನ್ಯಾಚುರಲ್ ಡಯಟ್ ಆಗುತ್ತಿತ್ತು. ಆದರೆ ಹಾಗಾಗುತ್ತಿರಲಿಲ್ಲ. ನಾವು ಗೇಟ್ ಹತ್ತಿರ ಹೋದಾಗಲೆ ಅವರ ಅಮ್ಮ ಅವಳನ್ನು ಹೊರಗೆ ಕಳಿಸುತ್ತಿದ್ದರು. "ನಿನ್ನ ಫ್ರೆಂಡ್ಸ್ ಬಂದರು ಹೋಗು" ಅಂತ ಹೇಳಿ. ಆದರೂ ನಾವು ಬಿಡಬೇಕಲ್ಲ, ಅವಳನ್ನು ವಾಪಸ್ ಮನೆಯೊಳಗೆ ಕಳಿಸಿ, ನಿಪ್ಪಟ್ಟು ಅಥವಾ ಬಿಸ್ಕತ್ ಎಲ್ಲ ತರಿಸುತ್ತಿದ್ವಿ. ಆ ತಿಂಡಿಗಳ ರುಚಿ ಇನ್ನೂ ನೆನಪಿನಲ್ಲಿದೆ. ಸ್ವಲ್ಪ ಯೋಚಿಸಿದರೆ, ಪೂರ್ತಿ ರೆಸಿಪಿ ಬಿಲ್ಡ್ ಮಾಡಬಹುದು. ಓಮ್ ಕಾಳು ಘಮ ಘಮ, ಜೀರಿಗೆ ಮೆಣಸು ಫ಼್ಲೇವರ್ರು ಎಲ್ಲಾ ಒಂದು "ಸವಿಯಾದ ನಾಸ್ಟಾಲ್ಜಿಯಾ - ಉತ್ಕಂಠತೆ" ಅಂದರೆ ತಪ್ಪಾಗಲಾರದು. ನೀವೆಲ್ಲರೂ ಇದೇ ರೀತಿ ಈ ಬರಹವನ್ನು ಸವಿಯುತ್ತೀರೆಂದು ಇಲ್ಲಿ ಹಂಚಿಕೊಳ್ಳುತ್ತಾ, ಈ ಸಂಚಿಕೆಯನ್ನು ಮುಗಿಸುತ್ತಿದ್ದೇನೆ.

ಈ ಬರಹಕ್ಕೆ ಚಿತ್ರ ರಚಿಸಿದವರು : ಕಲೆಗಾರರೂ ಮತ್ತು ಸ್ನೇಹಿತರೂ ಆದ ಶ್ರೀ: ಶ್ರೀವತ್ಸ ದುಗ್ಲಾಪುರ ಅವರು. ಸುಂದರವಾದ ಚಿತ್ರವನ್ನು ಬರೆದುಕೊಟ್ಟ ಶ್ರೀವತ್ಸ ಅವರಿಗೆ ನನ್ನ ವಂದನೆ ಮತ್ತು ಅಭಿನಂದನೆಗಳು!!!  

Comments

Submitted by rasikathe Sat, 03/28/2015 - 04:22

In reply to by kavinagaraj

ಕವಿ ನಾಗರಾಜ್ ಅವರೆ, ನಮಸ್ಕಾರ. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು! ನಿಮ್ಮಂತ ಹಿರಿಯರ ಪ್ರೋತ್ಸಾಹಕ್ಕೆ ನನ್ನೀ.
ನೀವು ಎಂದಿನಂತೆ ಪುರುಸೊತ್ತು ಮಾಡಿಕೊಂಡು ಕಾಮೆಂಟಿಸಿದ್ದೀರ, ಅದು ತುಂಬಾ ದೊಡ್ಡ ವಿಷಯ.
ಧನ್ಯವಾದಗಳು!
ಮೀನಾ

Submitted by rasikathe Tue, 03/31/2015 - 04:45

In reply to by chandrug

ಧನ್ಯವಾದಗಳು ಚಂದ್ರು ಅವರಿಗೆ.
ನಿಮ್ಮ ಊರು ಕಡೂರಾ?
ಕಡೂರಿನ ಮೇಲೆ ಮತ್ತಷ್ಟು ಬೇರೆ ಬರಹಗಳನ್ನು ಬರೆದಿದ್ದೇನೆ ಇದೇ ಸರಣಿಯಲ್ಲಿ. ಸಮಯವಾದಾಗ ನೋಡಿ!

ಮೀನಾ!