ಕಥೆ: ಪರಿಭ್ರಮಣ..(38)
(ಪರಿಭ್ರಮಣ..37ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
ಅದೆಷ್ಟು ಹೊತ್ತು ಹಾಗೆ ನಿಂತಿದ್ದನೆನ್ನುವ ಪರಿವೆಯೂ ಇಲ್ಲದ ಹಾಗೆ ಆ ನಿಸರ್ಗ ಲಾಸ್ಯದ ರುದ್ರ ರಮಣೀಯ ಕಲಾಪದಲ್ಲಿ ಮುಳುಗಿಹೋಗಿದ್ದ ಶ್ರೀನಾಥನನ್ನು ಯಾವುದೊ ಬಗೆಯ ಅಮಾನುಷ ಹಾಗು ಅತೀಂದ್ರೀಯ ಭಾವೋನ್ಮೇಶವೊಂದು ಆವರಿಸಿಕೊಂಡಂತಾಗಿ, ಅತಿಶಯವಾದ ಹೇಳಲಾಗದ ಧನ್ಯತೆಯ ಭಾವವೊಂದು ಮೈ ಮನ ತುಂಬಿಕೊಂಡುಬಿಟ್ಟಿತ್ತು. ಆ ಭವ್ಯ ಅಗಾದ ನಿಸರ್ಗ ಶಕ್ತಿಯೆದುರು ತಾವೆಷ್ಟು ಕುಬ್ಜರೆಂದು ಮನವರಿಕೆ ಮಾಡಿಕೊಡುವಂತೆ ಆ ಮೇಘೋತ್ಕರ್ಷ ತನ್ನೆಲ್ಲ ದೈತ್ಯ ಶಕ್ತಿಯನ್ನು ಕುಂಭದ್ರೋಣವಾಗಿ ವಿಸರ್ಜಿಸುತ್ತಿದ್ದರೆ, ತಾಯ ಎದೆ ಹಾಲ ಕುಡಿದು ನಡುನಡುವೆ ಮೊಗವೆತ್ತಿ ಅವಳನ್ನೆ ಆಳವಾಗೊಮ್ಮೆ ದಿಟ್ಟಿಸಿ ನೋಡಿ, ಮತ್ತೆ ಕಿಲಕಿಲ ನಕ್ಕು ಸೆರಗಿನ ಮರೆಯಡಿ ಮರೆಯಾಗುವ ಹಸುಗಂದನ ಮುಗ್ದತೆಯೊಂದಿಗೆ ಆಗಸವನ್ನೆ ದಿಟ್ಟಿಸಿ ನೋಡುತ್ತ ನಿಂತುಬಿಟ್ಟಿದ್ದ ಶ್ರೀನಾಥ. ನಿರಂತರ ಧಾರೆಯಾಗಿ ಸುರಿಯುತ್ತಿದ್ದ ಜಲೋತ್ಕರ್ಷವಲ್ಲದೆ ಮತ್ತೇನು ಕೇಳಿಸದ ಆ ಗಾಢಾಂಧಕಾರದಲ್ಲಿ ಸುತ್ತಲಿದ್ದ ಗಗನದೆತ್ತರದ ಮರಗಳು ತಮ್ಮಿರುವನ್ನೆ ಮರೆತಂತೆ ಆ ಗಗನೋನ್ಮಾದದಲ್ಲಿ ಸಂಪೂರ್ಣವಾಗಿ ಬೆರೆತು ಮಿಳಿತವಾಗಿ ಹೋಗಿದ್ದವು. ಅವು ಚಾಚಿಸಿದ್ದ ರೆಂಬೆ, ಕೊಂಬೆ, ಎಲೆಗಳ ಚಾಮರ ಎಲ್ಲೆಡೆ ಹಾಸಿಕೊಂಡಂತಿದ್ದರೂ, ದಿಟ್ಟಿಸಿದರೂ ಕಾಣಲಾಗದಂತೆ ಮುದುರಿಕೊಂಡಂತಿದ್ದಂತಹ ಕಗ್ಗತ್ತಲ ತಾಳಮೇಳದಲ್ಲಿ, ಯಾಕೊ ತಾನಲ್ಲಿ ಏಕಾಕಿಯೆಂಬ ಅನಾಥ ಪ್ರಜ್ಞೆ ಕಾಡುವ ಬದಲು, ಇಡಿ ನಿಸರ್ಗ ಸಮಷ್ಟಿಯ ಅವಿಭಾಜ್ಯ ಅಂಗದಲ್ಲಿ ತಾನೂ ಕೂಡ ಸೃಷ್ಟಿ ತಾದಾತ್ಮ್ಯದ ಒಂದಂಶವೆಂಬ ಭಾವನೆ ಮೂಡಿಸಿಬಿಟ್ಟಿತ್ತು. ಆ ನಿಸರ್ಗೋದ್ರೇಕ ಪ್ರಕ್ಷೇಪದಲ್ಲಿ ತಾನಾಗಲಿ, ಆ ದರ್ಪದ ಮಳೆಯಾಗಲಿ ಬೇರೆ ಬೇರೆಯಲ್ಲ, ಒಂದೆ ಅಸ್ಥಿತ್ವದ ಘನ ಮತ್ತು ಜಲ ಸ್ಥಿತಿಯಲ್ಲಿರುವ ಸೃಷ್ಟಿಯ ಎರಡು ವಿಭಿನ್ನ ರೂಪ ಮಾತ್ರಗಳಷ್ಟೆ ಎನಿಸಿಬಿಟ್ಟಿತ್ತು. ಆ ಜ್ಞಾನೋನ್ಮಾದದ ಹುರುಪೆಬ್ಬಿಸಿದ ಹಿಗ್ಗಿನ ಹೊದರಲ್ಲೆ ತಾನು ಬಯಸಿದರೆ ಅಲ್ಲೆ, ಆ ಕ್ಷಣದಲ್ಲೆ ನೀರಾಗಿ ಕರಗಿ ಮಳೆಯ ಜತೆಗೆ ಮಳೆಯಾಗಿಬಿಡಬಲ್ಲೆನೆಂಬ ಹುಸಿ ಆತ್ಮವಿಶ್ವಾಸದ ಕಿಡಿಯೊಂದು ಅಂತರಾಳದ ಅಗಾಧ ಗಾಢ ನಂಬಿಕೆಯಂತೆ ಒಡಮೂಡಿ, ಅದೊಂದು ಭ್ರಮೋತ್ಪಾತ ಗಳಿಗೆಯಲ್ಲಿ ತಾನು ನಿಜಕ್ಕೂ ಅಂದುಕೊಂಡ ಹಾಗೆಯೆ ಅಲ್ಲೆ ನಿಂತಲ್ಲಿಯೆ ಕರಗಿಯೇ ಹೋಗುತ್ತಿರುವೆನೇನೊ, ಮಳೆಯಲ್ಲೆ ಮಳೆಯಾಗಿ ಹೋಗುತ್ತಿರುವೆನೇನೊ ಎನ್ನುವ ಭ್ರಮಾಧೀನ ಭಾವ ದಿಗ್ಬ್ರಮೆಯಿಂದ ಹೊರಬರಲೇ ಆಗದ ಅಸೀಮ ಪರವಶತೆಯೊಂದಿಗೆ ತಟಸ್ಥ ಸ್ಥಿತಿಯಲ್ಲಿ ಅಚಲನಾಗಿ ನಿಂತುಬಿಟ್ಟಿದ್ದ.
ಆ ಅಶರೀರ ಭಾವಗಳ ಸಂವಾದಿಯಾಗಿ ನಿರಂತರ ಸದ್ದಿನೊಂದಿಗೆ ಅವಿರತ ಸಮಾಧಿ ಸ್ಥಿತಿಯಲ್ಲಿ ಸುರಿಯುತ್ತಿದ್ದ ಮಳೆಯ ಸದ್ದು ಏಕೀಭವಿಸಿ, ಬಾಹ್ಯ ಜಗದ ಮಿಕ್ಕೆಲ್ಲ ಚರಾಚರದ ಸದ್ದು, ಸರ್ವೇಂದ್ರಿಯಗಳ ಪ್ರಜ್ಞೆಯಿಂದ ಸಂಪೂರ್ಣ ಮರೆಯಾಗಿ, ಕೇವಲ ವರ್ಷಾಲಾಪದ ಅದೊಂದು ಸದ್ದು ಮಾತ್ರ ಕಿವಿಯಲ್ಲಿ ಸತತ ಗುಂಯ್ಗುಡುವ ನಿನಾದವಾಗಿ ಪ್ರತಿಷ್ಟಾಪಿಸಿಕೊಂಡುಬಿಟ್ಟಿತ್ತು. ಆ ಭಾವ ಪರವಶತೆಯ ಗಾಢ ಮೋಹ ಬಂಧನ ಕೈವಲ್ಯದಿಂದ ಹೊರಬಂದು ಬಾಹ್ಯ ಜಗತ್ತಿನ ಪರಿವೆ ಪುನರನಾವರಣಗೊಂಡು, ಪ್ರಜ್ಞೆಯ ಬಾಹ್ಯೇಂದ್ರೀಯ ಪರಿಕರಗಳು ನಿದ್ದೆಯಿಂದೆದ್ದಂತೆ ಆ ಬಾಹ್ಯ ವಾಸ್ತವದ ಕ್ರಿಯೆಗಳಿಗೆ ಸ್ಪಂದಿಸುವ ಅರಿವು ಮತ್ತೆ ಮೈದೋರುವ ಹೊತ್ತಿಗೆ, ಯಾವುದೋ ಅದ್ಭುತ ಅಮಾನುಷ ದೈವಿ ಅನುಭೂತಿ ಮಾತ್ರವೊಂದು ತನ್ನ ಅಸ್ಪಷ್ಟ ಮಸುಕು ನೆನಪಿನ ತುಣುಕನುಳಿಸಿ, ಮಿಕ್ಕೆಲ್ಲ ಅನುಭವದ ದಿವ್ಯ ಸ್ಪಂದನವನ್ನು ಯಾವುದೊ ಸ್ವಪ್ನಲೋಕದ ಭ್ರಮಾಧೀನ ಪ್ರಕ್ರಿಯೆಯಂತೆ ಪರಿವರ್ತಿಸಿ, ಅದು ಘಟಿಸಿದ ನೈಜವೊ ಅಲ್ಲವೊ ಎಂಬ ದ್ವಂದ್ವ, ಅನುಮಾನದ ಬೀಜ ಬಿತ್ತಿ ತಮ್ಮ ಅಸ್ತಿತ್ವದ ಕುರುಹುಳಿಸದಂತೆ ಗುರುತಳಿಸಿಕೊಂಡು ಮರೆಯಾಗಿಬಿಟ್ಟಿದ್ದವು. ಜಾಗೃತಾವಸ್ತೆಗೆ ಮರಳಿದಾಗ ಸವರಿದ ಮೆಲುವಾದ ತಂಗಾಳಿಯಲ್ಲಿ, ನಿಸರ್ಗ ಜಲೋದ್ಯುಕ್ತ ತೀರ್ಥ ಪ್ರೋಕ್ಷಣೆಯ ತಂಪಲ್ಲಿ ಮಿಂದ ಕಣ್ತೆರೆದು ನೋಡಿದರೆ ಜೋರಾಗಿ ಸುರಿಯುತ್ತಿದ್ದ ಮಳೆಯ ಸದ್ದೆಲ್ಲ ಕರಗಿ, ಮತ್ತೆ ಮೊದಲಿದ್ದ ತುಂತುರಿನ 'ಕುಟುಕುಟು' ಮಾತ್ರ, ಆರ್ಭಟಿಸಿ ಸೋತು ಹಿಂದೆಗೆದ ಸೇನಾನಿಯ ಹಾಗೆ ತುಸು ಮಂದವಾದ ಸದ್ದಿನೊಂದಿಗೆ ವಿಳಂಬಿತ ಕಾಲಾವಧಿಯ ಪರ್ಯಾಯಗಳಲ್ಲಿ ನಿಧಾನವಾಗಿ ಅನುರಣಿತವಾಗುತ್ತಿತ್ತು. ಅರೆ! ಈ ಮಳೆಯ ಮಾಯಜಾಲದಲ್ಲಿ ಸಿಲುಕಿ ಸ್ವಯಂ ತನ್ನನ್ನು ಮತ್ತು ತನ್ನಿರುವನ್ನೆ ಸಂಪೂರ್ಣವಾಗಿ ಮರೆತುಹೋದೆನಲ್ಲ? ಎಂದು ಸೋಜಿಗಪಡುತ್ತ ನಿಧಾನವಾಗಿ ಇಹ ಲೋಕದ ವಾಸ್ತವಕ್ಕೆ ತನ್ನನ್ನು ತಾನೆ ಮತ್ತೆ ತೆರೆದುಕೊಳ್ಳುವ ಹೊತ್ತಿಗೆ, ತಾನಿನ್ನೂ ಆ ಬಾಲ್ಕಾನಿಯಲ್ಲಿ ಹೊರಗಡೆಯೆ ನಿಂತಿರುವುದರ ಅರಿವನ್ನು, ಬೆನ್ನಟ್ಟಿಕೊಂಡು ಬಂದಿದ್ದ ಗುದುಗುಟ್ಟಿಸುವ ಚಳಿ ನೆನಪಿಸಿತ್ತು. ಆ ಗಳಿಗೆಯಲ್ಲಿ ಇದ್ದಕ್ಕಿದ್ದಂತೆ ನಖಶಿಖಾಂತ ಅದುರಿಕೆಯುಂಟಾಗಿ ಅದರ ಬೆನ್ನಲ್ಲೇ ಕ್ಷಿಪ್ರ ಗತಿಯಲ್ಲೊಮ್ಮೆ ಮೈಯೆಲ್ಲ ಗಡಗಡ ನಡುಗಿ ನರಮಂಡಲದೊಳಗೆಲ್ಲ ಕಂಪನದ ಮಿಂಚಿನ ಸಂಚಾರವಾದಂತಾಗಿ, ತಕ್ಷಣವೆ ಮತ್ತೆ ರೂಮಿನೊಳಗಡೆಗೆ ದೌಡಾಯಿಸುವಂತೆ ಮಾಡಿತ್ತು. ಆ ರಾತ್ರಿಯ ಹಿತವಾದ ತಂಪಲ್ಲಿ ರೂಮಿನ ಮಂಚದ ಮೆತ್ತನೆಯ ಹಾಸಿಗೆಯ ಮೇಲೆ ಬೆಚ್ಚಗೆ ಪೂರ್ತಿ ಹೊದಿಕೆ ಹೊದ್ದುಕೊಂಡು ಮೈಕೈಯೆಲ್ಲ ಮುದುರಿಕೊಂಡು ಮುದ್ದೆಯ ಹಾಗೆ ಒರಗುತ್ತಿದ್ದಂತೆ, ಯಾರೊ ತನ್ನ ಸುತ್ತಲು ನೆರೆದು ಜೋಗುಳ ಹಾಡಿದ ಹಾಗೆ, ಯಾರೊ ಮಡಿಲಿನಲಿಟ್ಟುಕೊಂಡು ತಟ್ಟಿ ತಟ್ಟಿ ಮಲಗಿಸಿದ ಹಾಗೆ, ಖಡಾಖಂಡಿತ ನಿಜವೇನೋ ಅನಿಸುವ ಭ್ರಮೆ ಹುಟ್ಟಿಸುವ ರೀತಿಯಲ್ಲಿ ಏನೇನೊ ನಂಬಲೇ ಆಗದಂತಹ ಚಿತ್ರ ವಿಚಿತ್ರ ಸ್ವಪ್ನಗಳು ಬಿದ್ದ ಹಾಗೆ, ಮಂಪರು ಮಂಪರಿನಲ್ಲಿ ಅರೆ ನಿದ್ರೆ ಅರೆ ಎಚ್ಚರದಲ್ಲಿ ತನ್ನ ನಿದ್ರಾವಸ್ಥೆಯನ್ನು ತಾನೆ ಮತ್ತೆಲ್ಲಿಂದಲೊ ಗಾಳಿಯಲ್ಲಿ ಸ್ವಸ್ಥವಾಗಿ ಕೂತು ಮೇಲಿನಿಂದ ನೋಡುತ್ತಿರುವ ಹಾಗೆ - ಹೀಗೆ ಏನೇನೊ ಮನೋಭ್ರಾಂತ ಭಾವಸಂಚಯ ಸಲ್ಲಾಪದಲ್ಲಿ ಪೂರ್ತಿಯಾಗಿ ಮುಳುಗಿದ್ದರೂ, ಮುಂಜಾನೆ ಎದ್ದಾಗ ಮಾತ್ರ ಸೊಗಡಾದ ಸುಖ ನಿದ್ರೆಯಾದ ಹಿತಾನುಭವ ಮುಖದಲ್ಲೆಲ್ಲ ಪ್ರತಿಫಲಿಸಿ, ನಿರ್ಲಿಪ್ತ ಪ್ರಶಾಂತ ಭಾವನೆಯನ್ನಾರೋಪಿಸಿ ಸಂಪೂರ್ಣ ತನುವನ್ನು ಪ್ರಪುಲ್ಲವಾಗಿಸಿಬಿಟ್ಟಿತ್ತು..!
ಆ ಬೆಳಗಿನ ಅಪೂರ್ವ ನಸುಕಿನ ಮನಮೋಹಕತೆಯಲ್ಲಿ, ಕಾನನದ ನಡುವಣ ಅಪರಿಚಿತ ಜಗದಲ್ಲಿ ಮುಲುಗುಟ್ಟುವ ತಂಗಾಳಿಯ ಜತೆ ಹಕ್ಕಿಗಳ ಕಲರವ ಬೆರೆತು ಮೋಹನ ರಾಗದಂತೆ ಸುತ್ತೆಲ್ಲಾ ಆವರಿಸಿಕೊಂಡ ಭಾವ ಮನವನ್ನು ಪುಳಕಿತಗೊಳಿಸಿದರು, ಆ ಹೊತ್ತಿನ ಚುಮುಗುಟ್ಟಿಸುವ ಚಳಿಗೆ ಮೇಲೇಳಲು ಬಿಡದ ಸೋಮಾರಿತನದ ಅಸಹಾಯಕತೆಯೂ ಸೇರಿ ಮತ್ತಷ್ಟು ಹೊತ್ತು ಹೊದ್ದುಕೊಂಡು ಹಾಗೆಯೆ ಮುದುರಿ ಮಲಗಿರಲು ಪ್ರೇರೇಪಿಸಿತ್ತು. ಅದೆ ಸಮಯದಲ್ಲಿ ಬಿಸಿಲೇರಿದ ಹೊತ್ತಲ್ಲಿ ಈ ಮುಂಜಾವಿನ ಪ್ರಶಾಂತ ಪರಿಸರ ಬೇಕೆಂದರೂ ನೋಡಸಿಗದೆಂಬ ಅರಿವಿನ ಪ್ರಜ್ಞೆಯು ಕಾಡಿಸಿ, ಬಿಸಿಲೇರುವ ಮೊದಲೆ ಒಂದು ಸಣ್ಣ ಸುತ್ತಾದರೂ ಹಾಕಿ ಬರೋಣವೆಂದು ಬಲವಂತದಿದ್ದ ಮೇಲೆದ್ದಿದ್ದ ಶ್ರೀನಾಥ, ಮತ್ತೆ ಮುದುರಿ ಮಲಗಲು ಹವಣಿಸುತ್ತಿದ್ದ ದೇಹವನ್ನು ಬಲಾತ್ಕಾರದಿಂದ ಹೊರಗೆಳೆಯುತ್ತ. ಚಳಿಯ ಹೊಡೆತವನ್ನೆದುರಿಸಲು ಜತೆಗೆ ತಂದಿದ್ದ ಜಾಕೇಟ್ಟಿನ ಜತೆ ಮಂಕಿ ಟೋಪಿಯನ್ನು ತಲೆಗೇರಿಸಿ, ಜೋಬಿನೊಳಗೆ ಕೈ ಇಳಿಬಿಟ್ಟು ನಿಧಾನವಾಗಿ ಹೆಜ್ಜೆ ಹಾಕುತ್ತ ಸುತ್ತಲಿನ ಪರಿಸರವನ್ನು ಆಸ್ವಾದಿಸುತ್ತ ಸಾಗಿದ್ದ ಪ್ರಪುಲ್ಲಿತ ಮನಕ್ಕೆ ಆ ಮರಗಳ ಅಗಾಧ ಎತ್ತರ ಮತ್ತು ಗಾತ್ರಗಳನ್ನು ನೋಡಿಯೆ ದಿಗ್ಭ್ರಮೆಯಾದಂತಿತ್ತು. ಪೂರ್ಣವಾಗಿ ತಲೆಯೆತ್ತಿ ಕತ್ತೆತ್ತಿ ನೋಡಿಯೂ ಕಣ್ತುಂಬಿಕೊಳ್ಳಲಾಗದಷ್ಟು ಎತ್ತರವಿದ್ದ ವೃಕ್ಷಸಮೂಹವನ್ನು ನೋಡನೋಡುತ್ತಲೆ ಕತ್ತು ನೋಯುವಂತಾಗಿ, ಆ ಗೊಡವೆ ಬಿಟ್ಟು ಪ್ರಕೃತಿಯ ಪ್ರಾತಃಕಾಲದ ದೂತರ ಸುಶ್ರಾವ್ಯ ಕಲರವ, ಸುನಾದ, ನಿನಾದಗಳನ್ನು ಆಸ್ವಾದಿಸುತ್ತ ಹೆಜ್ಜೆಯಿಕ್ಕತೊಡಗಿದ್ದ ಶ್ರೀನಾಥ, ರಾತ್ರಿ ಕಂಡಿದ್ದ ಹೊಳೆಯ ನೀರಿನ ದಿಕ್ಕಿನಲ್ಲಿ. ಆ ಕಡೆಗೆ ನಡೆಯುತ್ತಿದ್ದಂತೆ ಕಲ್ಲು ಚಪ್ಪಡಿಯ ಹಾಸಿನ ರಸ್ತೆಯ ಅನುಕೂಲವೆಲ್ಲ ಮುಗಿದು, ನೈಸರ್ಗಿಕವಾಗಿ ಹಾಸಿಕೊಂಡಿದ್ದ ಕೊಚ್ಚೆ ತುಂಬಿದ ಮಣ್ಣಿನ ಭಾಗಶಃ ರಸ್ತೆ ಆರಂಭವಾಗಿತ್ತು. ಆ ರಾತ್ರಿಯೆಲ್ಲ ಬಿದ್ದಿದ್ದ ಜಡಿ ಮಳೆಯಿಂದಾಗಿ ನೆಲದ ಮಣ್ಣು ಸಾಕಷ್ಟು ಒದ್ದೆಯಾಗಿ ಕಾಲು ಜಾರಿಸುವಂತಿದ್ದರೂ, ಆ ರಾಡಿಯ ನಡುವಲ್ಲಿ ಹುದುಗಿಸಿ ಚೌಕಾಕಾರದ ಕಲ್ಲುಗಳನ್ನು ಕೂರಿಸಿ ಮಾಡಿದ್ದ ಕಿರು ಕಾಲುದಾರಿಯಲ್ಲಿ ನಿರಾತಂಕವಾಗಿ ಸಾಗಿದ್ದವನಿಗೆ ಹೊಳೆಯ ಹರಿವು ಕಣ್ಣಿಗೆ ಬೀಳುವಷ್ಟು ಹೊತ್ತಿಗೆ ಆ ಅರೆಬರೆ ಸುಗಮ ಹಾದಿಯೂ ಮುಗಿದು ಮತ್ತೆ ಪೂರ್ತಿ ಕೆಸರು ಕೊಚ್ಚೆ ತುಂಬಿದ ರಾಡಿಯ ಕಾಲುದಾರಿ ಎದುರಾಗಿತ್ತು. ಆ ಕೊಚ್ಚೆಯಲ್ಲಿ ನಡೆಯಲು ಬೆಳಗಿನ ಶುಚಿರ್ಭೂತ ಪ್ರಸನ್ನ ಚಿತ್ತ ಯಾಕೊ ತಕರಾರು ಮಾಡಿದಂತಾಗಿ ಮುಂದೆ ಹೋಗುವುದೊ, ಬಿಡುವುದೊ ಎಂದು ಅನುಮಾನಿಸುತ್ತಿದ್ದಾಗಲೆ, ತುಸು ದೂರದಲ್ಲಿ ಯಾರೊ ಹಾಕಿದ್ದ ಮರದ ಹಲಗೆಗಳು ಕಂಡು ಬಂದಿದ್ದವು - ಒಂದು ಪುಟ್ಟ ಜಿಗಿತದಳತೆಯಲ್ಲಿ. ಸರಿ ಯಾರೊ ಮೊದಲೆ ಸಮಯೋಚಿತವಾಗಿ ಆಲೋಚಿಸಿ ಈ ಉಪಾಯ ಮಾಡಿಟ್ಟಿದ್ದಾರೆಂದು ಹರ್ಷಿಸುತ್ತ, ಆ ಹಾದಿಯತ್ತ ಒಂದು ಪುಟ್ಟ ನೆಗೆತದಲ್ಲಿ ಮೆಲುವಾಗಿ ಹಾರಿದ್ದ ಶ್ರೀನಾಥ. ಹಗುರವಾಗೆ ಹಾರಿದ್ದರೂ, ದೇಹದ ಭಾರಕ್ಕೊ ಅಥವಾ ಮಳೆಯ ನೀರು ಮರದ ಹಲಗೆಯ ಅಡಿ ಸೇರಿ ಅಸಮತೋಲಿಸಿ ಜಾರಿಸುತ್ತಿದ್ದ ಕೊಚ್ಚೆಯ ಕಾರಣಕ್ಕೊ - ಸುತ್ತಲ್ಲಿದ್ದ ಕೆಸರೆಲ್ಲ ಮಿನಿ ಕಾರಂಜಿಯಂತೆ ಚಿಮ್ಮಿದಂತಾಗಿ ಮೇಲೆದ್ದು ಅದರ ಎರಚಲು ತುಣುಕುಗಳು ಮೈ ಮುಖದ ಸಮೇತ ಬಟ್ಟೆಯ ಮೇಲೆಲ್ಲ ಸಿಕ್ಕಸಿಕ್ಕಲ್ಲಿ ಹಾರಿದ್ದವು. ಆ ಅನಿರೀಕ್ಷಿತ ಕೆನ್ನೀರ ಧಾಳಿಗೆ ಸಿದ್ದನಿರದಿದ್ದ ಶ್ರೀನಾಥ ಹೌಹಾರಿದವನಂತೆ ಕಂಗಾಲಾಗಿ, ಅದುವರೆವಿಗೂ ಆವರಿಸಿಕೊಂಡಿದ್ದ ಸ್ವಚ್ಚ, ಪರಿಶುದ್ಧ ಅನುಭಾವದ ಹೊದಿಕೆಯೆಲ್ಲ ಮಲಿನವಾಗಿ ಹೋದಂತೆ ಭಾಸವಾಗಿ ಮಂಕಾದರು, ಮರುಕ್ಷಣವೆ 'ಹೇಗೂ ಕೆಸರಾಯ್ತಲ್ಲ? ಇನ್ನು ಅತಿ ಎಚ್ಚರಿಕೆ ವಹಿಸುವ ಅಗತ್ಯವಿಲ್ಲದೆ ನಿರಾಳವಾಗಿ ಸಾಗಬಹುದು' ಎಂದುಕೊಂಡು ಲೆಕ್ಕಿಸದೆ ಮುನ್ನಡೆದಿದ್ದ.
ಹಾಗೆ ಸ್ವಲ್ಪ ದೂರ ಸಾಗಿದ ಮೇಲೆ ಆ ಕೃತಕ ಹಲಗೆಯ ಹಾದಿಯೂ ಮುಗಿದು ಬರಿಯ ಕೊಚ್ಚೆ ಮಣ್ಣಿನ ಕೆಸರ ರಾಡಿ ಎದುರಾಗುವ ಹೊತ್ತಿಗೆ ಆ ಹೊಳೆಯ ಸಾಕಷ್ಟು ಸಮೀಪಕ್ಕೆ ತಾನೀಗಾಗಲೆ ಬಂದಿರುವುದನ್ನು ಗಮನಿಸಿ ಅಲ್ಲೆ ಕೈಕಟ್ಟಿಕೊಂಡು ನೋಡುತ್ತ ನಿಂತಿದ್ದ ಶ್ರೀನಾಥ - ಆ ಹರಿಯುವ ಹೊಳೆಯ ವಿಶಾಲ ಹರವನ್ನು. ಸುಮಾರು ದೂರವಿದ್ದ ಆಚೆಗಿನ ಎದುರು ತೀರದಲ್ಲಿ ಯಾವುದೊ ದೊಡ್ಡ ಕಾಡುಪ್ರಾಣಿಯೊಂದು ನೀರು ಕುಡಿಯುತ್ತಿರುವಂತೆ ಕಂಡಾಗ, ತಾನೊಬ್ಬನೆ ಹೀಗೆ ಒಂಟಿಯಾಗಿ ಬರಬಾರದಿತ್ತೇನೊ ಅನಿಸಿದರೂ, ಸುತ್ತಲು ಚೆಲ್ಲಿಕೊಳ್ಳುತ್ತ ಪ್ರಖರವಾಗುತ್ತಿದ್ದ ಬೆಳಕಿನ ಜಾಲ ತುಸು ಧೈರ್ಯವಿತ್ತಂತಾಗಿ ಮತ್ತೆ ನದಿಯತ್ತ ಕಣ್ಣು ಹಾಯಿಸಿದ್ದ ಶ್ರೀನಾಥ. ಆಗಲ್ಲಿ ಕಂಡು ಬಂದ ಅರುಣೋದಯದ ಅದ್ಭುತ ದೃಶ್ಯ ವೈಭವದಿಂದ ಮನವನ್ನು ಆವರಿಸಿಕೊಂಡಿದ್ದ ಭೀತಿಯ ಪರದೆಯೆಲ್ಲ ಜಾರಿ ಹೋಗಿ, ನಿಸರ್ಗ ಕಲಾರಾಧನೆಯ ಮುಗ್ದ ಮನ ಮತ್ತೆ ಮತ್ತೆ ಮುದದ ಆಮೋದವನು ಬೆನ್ನಟ್ಟುವ ರಸಿಕನ ಮನದಂತೆ ಆ ವೈಭೋಗವನ್ನೆಲ್ಲ ಆಸ್ವಾದಿಸತೊಡಗಿತು. ದಿನ ನಿತ್ಯವೂ ಸೂರ್ಯೋದಯವೆಬ್ಬಿಸುವ ವರ್ಣೋತ್ಕರ್ಷವನ್ನು ಹಿಂದೆ ಅದೆಷ್ಟೊ ಬಾರಿ ನೋಡಿದ್ದರೂ, ಆ ದಿಟ್ಟ ದಟ್ಟ ಕಾನನದ ಮಡಿಲಲ್ಲಿ, ತುಂಬಿ ಹರಿಯುತ್ತಿರುವ ಹೊಳೆಯ ದಂಡೆಯಲ್ಲಿ ಅದೂ ಆ ರೀತಿಯ ಏಕಾಂತ ಭಾವದಲ್ಲಿ ನೋಡಿದ್ದು ಅದೆ ಮೊದಲು. ಅದಕ್ಕು ಮಿಗಿಲಾಗಿ ಆ ಹೊಸ ಜಾಗದಲ್ಲಿ ಯಾವುದು ಪೂರ್ವ, ಯಾವುದು ಪಶ್ಚಿಮವೆಂಬ ದಿಕ್ಕು ದೆಸೆಯ ಸ್ಪಷ್ಟ ಅರಿವಿಲ್ಲದ ಸಂದರ್ಭದಲ್ಲಿ ಹೀಗೆ ಏಕಾಏಕಿ ಅರುಣೋದಯದ ಪ್ರಥಮ ಕಿರಣಗಳನ್ನು ಕಾಣುವ ಸನ್ನಿವೇಶ ದೊರಕ್ಕಿದ್ದಕ್ಕೆ ಮೈಯೆಲ್ಲಾ ಪುಳಕಿತವಾಗಿ, ಮತ್ತೆ ಹಿಂದಿನ ರಾತ್ರಿಯ ಅಪೂರ್ವ ಭಾವೋನ್ಮೇಶದ ಕಿರು ಆವೃತ್ತಿಯ ತೆಳುವಾದ ಮರುಲೇಪನ ಮಾಡಿಸಿಬಿಟ್ಟಿತ್ತು - ಅರೆಗಳಿಗೆಯಾದರು. ಅದುವರೆವಿಗೂ ಖಾಲಿಯಿದ್ದಂತಿದ್ದ ಪ್ರಶಾಂತ ನೀರಿನ ಪದರದ ಮೇಲೆ ಇದ್ದಕ್ಕಿದ್ದಂತೆ, ದಿನಕರ ತೇಜದ ತೆರೆಯೇಳಿಸುತ್ತಿದ್ದ ವರ್ಣಜಾಲ ತನ್ನ ವಾಯೋನ್ಮತ್ತ ಕುಂಚದಿಂದ ಭವ್ಯ ಕಲಾಕೃತಿಯೊಂದನ್ನು ಬರೆಯುತಿದ್ದ ಹಾಗೆ ಕಣ್ಣಳತೆಯ ದೂರದ ಪ್ರಕ್ಷೇಪದಲ್ಲಿ ಕೆಂಪು, ಹಳದಿ, ನೀಲಿ, ಕಿತ್ತಳೆಯಾದಿ ವರ್ಣಗಳ ಅಸ್ತವ್ಯಸ್ತ ವಿಸ್ತಾರದೆರಚಲು, ನೀರ ಮೇಲೆ ಪಸರಿಸಿದಷ್ಟೆ ಸಲೀಸಾಗಿ ತನ್ನ ಕೆಳಗಿನ ಅಡಿ ನೀರಿನಲ್ಲೂ ಪ್ರತಿಫಲಿಸುತ್ತ ಇಡಿ ಕ್ಷಿತಿಜರೇಖೆಯ ಸುತ್ತಲ್ಲೂ ಒಂದು ದಿವ್ಯವಾದ, ದೇದೀಪ್ಯಮಾನವಾದ ವರ್ಣಚಿತ್ತಾರವನ್ನು ಸೃಷ್ಟಿಸಿ, ಸುತ್ತಲ ವಾತಾವರಣಕ್ಕೆ ಯಾವುದೊ ವರ್ಣಿಸಲಾಗದ ಅದಮ್ಯ ನಿಸರ್ಗೋತ್ಸಾಹವನ್ನು ಲೇಪಿಸಿಬಿಟ್ಟಿತ್ತು. ಆ ಅಭೂತಪೂರ್ವ ನಸುಕಿನ ಸೌಂದರ್ಯದ ಪರಿಶುದ್ಧತೆ ಮನದೊಳಗಡಕವಾಗಿದ್ದ ಕಶ್ಮಲತೆಯನ್ನೆಲ್ಲ ತೊಡೆದು ತನ್ನ ಹೊಚ್ಚ ಹೊಸ ಸಂಸರ್ಗದ ಅಮಲತೆಯನ್ನು ಲೇಪಿಸಿಬಿಟ್ಟಂತೆ ಸುತ್ತಲಿನ ಜಗವೆಲ್ಲವೂ ಎಂದಿಗಿಂತಲೂ ಹೆಚ್ಚು ಆತ್ಮೀಯವಾಗಿ, ಹೆಚ್ಚು ಸ್ನೇಹಮಯವಾಗಿ, ಶತೃ ಭಾವವಿಲ್ಲದ ಕೇವಲ ಸ್ವಚ್ಛ ಶುದ್ಧ ಸ್ಪಟಿಕ ಮೈತ್ರಿಯ ಸಂಕೇತ ಮಾತ್ರವಾಗಿ ಕಾಣಹತ್ತಿದ್ದವು. ಆ ಹೊತ್ತಿನಲ್ಲಿ ಇಂತಹ ಅಪರೂಪದ ದೃಶ್ಯ ವೈಭವವನ್ನು ಸೆರೆ ಹಿಡಿಯಲು ರೂಮಿನಿಂದ ಕ್ಯಾಮರ ಹಿಡಿದು ಬರಲಿಲ್ಲವೆಂಬ ವಾಸ್ತವ ಜಗದ ಭೌತಿಕ ಪ್ರಜ್ಞೆ ತಟ್ಟನುದಿಸಿ ಖೇದವಾಗಿ ಕಾಡುವ ಹೊತ್ತಿಗೆ, ಆ ದೃಶ್ಯ ವೈಭವದ ಬಹುತೇಕ ಪಾಲು ಕರಗುತ್ತ ದಿನಕರನ ದೈನಂದಿನ ನೈಜ ಪ್ರಖರ ಕಿರಣಗಳಾಗಿ ಅವತರಿಸಲಾರಂಭವಾಗಿತ್ತು. ಅದೆ ಹೊತ್ತಿಗೆ ಸರಿಯಾಗಿ ಮೇಲಿನಿಂದ ಯಾರೊ ಕರೆಯುತ್ತಿರುವುದರ ದನಿ ಮಸುಕಾಗಿ ಕಿವಿಯೊಳಗೆ ನುಸುಳಿದಂತಾಗಿ, ಯಾರಿರಬಹುದೆಂದು ತಿರುಗಿ ನೋಡಿದಾಗ, ಅಲ್ಲಾರೊ ದಿಬ್ಬದೆತ್ತರದಿಂದ ಕೈಬೀಸಿ ವಾಪಸ್ಸು ಬರುವ ಸನ್ನೆಯೊಡನೆ ಕರೆಯುತ್ತಿರುವುದು ಕಾಣಿಸಿ ಮತ್ತೆ ಕಾಟೇಜಿನತ್ತ ಹೆಜ್ಜೆ ಹಾಕತೊಡಗಿದ್ದ ಶ್ರೀನಾಥ.
ಎರಡನೆಯ ದಿನದ ಪ್ರವಾಸ ಚೇತೋಹಾರಿಯಾದ ಬೆಳಗಿನ ಸೂರ್ಯೋದಯದ ಉಲ್ಲಾಸದೊಂದಿಗೆ ಆರಂಭವಾಗಿತ್ತು. ಅಂದು ಬೆಳಗಿನ ಉಪಹಾರ ಮುಗಿಯುತ್ತಿದ್ದಂತೆ ಮೋಟಾರು ಬೋಟಿನಲ್ಲಿ ಹೊಳೆಯ ಮೇಲಿನ ನೌಕಾ ವಿಹಾರವನ್ನು ಆಯೋಜಿಸಲಾಗಿತ್ತು. ಒಂದು ತುದಿಯಲ್ಲಿ ಮೋಟಾರು ಅಳವಡಿಸಿದ್ದ ದೋಣಿಗಳಲ್ಲಿ ತಂಡ ತಂಡವಾಗಿ ಕುಳಿತು ಹೊರಟ ಗುಂಪುಗಳನ್ನು ಇಡೀ ಕಾಡಿನ ಒಂದು ಸುತ್ತು ಪರಿಚಯವಾಗುವ ರೀತಿ ಸುತ್ತು ಹಾಕಿಸುವ ಸುಮಾರು ಒಂದೂವರೆ ಗಂಟೆಯ ಜಲನೌಕಾ ವಿಹಾರದಲ್ಲಿ ಸುತ್ತಲಿನ ಪರಿಸರ ವೈಭವದ ಜತೆಗೆ ಆಗಾಗ ಕಾಣ ಸಿಗುವ ಜಲಚರ ದರ್ಶನವೆ ಪ್ರಮುಖವಾಗಿತ್ತಷ್ಟೆ ಹೊರತು ಮತ್ತೇನು ಚಟುವಟಿಕೆಯ ಹಂಗಿರಲಿಲ್ಲ - ನೀರಿನ ಜತೆಗೆ 'ಗರ್..ಗರ್..' ಕರ್ಕಶ ಶಬ್ದದೊಂದಿಗೆ ರಸಸ್ವಾದಕ್ಕೆ ಭಂಗವನ್ನುಂಟು ಮಾಡುವ ಆ ಮೋಟಾರಿನ ನಿರಂತರ ಸದ್ದನ್ನು ಬಿಟ್ಟರೆ. ಹೀಗಾಗಿ ನೀರಿಗೆ ಕೈ ತಾಕುವ ಮಟ್ಟದಲ್ಲಿದ್ದ ಕೆಳಸ್ತರದೆತ್ತರದ ಒಂದು ಸೀಟಿನಲ್ಲಿ ಕುಳಿತ ಶ್ರೀನಾಥ ನೀರನ್ನು ಹಿಂದೆ ಹಾಕಿ ಮುನ್ನುಗ್ಗುವ ದೋಣಿಯ ವೇಗದ ಚಲನೆಯನ್ನು, ತಾನು ಸಾಗಿದ ದಿಕ್ಕಲ್ಲೆ ಬಿಟ್ಟುಕೊಂಡು ಸಾಗುವ ಪಥದ ಹೆಜ್ಜೆ ಗುರುತುಗಳ ನೊರೆನೊರೆ ಧಾರೆಯನ್ನು, ಅದರ ಕಲಕುವಿಕೆಯ ಚಲನೆಯಿಂದುಂಟಾಗುವ ನೀರಿನ ಕಂಪನ ತರಂಗಗಳನ್ನು ದೃಷ್ಟಿಸುತ್ತ ಕುಳಿತಿದ್ದರೂ, ಆ ಗಳಿಗೆಯಲ್ಲಿ ಯಾಕೊ ಮತ್ತೆ ಕುನ್. ಸು ಆ ಪ್ರವಾಸದಲ್ಲಿಲ್ಲದಿರುವುದರ ನೆನಪಾಗಿ, ಪ್ರಶಾಂತ ಭಾವದ ಮನಸಿಗು ಏನೊ ಹೇಳಿಕೊಳ್ಳಲಾಗದ ಕಸಿವಿಸಿ, ಖೇದಪೂರಿತ ವಿಷಾದ ಅಸಹನೀಯ ಭಾವದ ರೂಪದಲ್ಲಿ ತೇಲಿಕೊಂಡು ಬಂದಿತ್ತು. ಅವಳೇಕೆ ಕೆಲಸದಿಂದ ಏಕಾಏಕಿ ಹೊರ ಹೋಗಬೇಕಾದ ಸಂದರ್ಭವುಂಟಾಯಿತೊ, ಅದೂ ಆಗಿನ ಅವಳ ಸೂಕ್ಷ್ಮ ಪರಿಸ್ಥಿತಿಯಲ್ಲಿ ಎಂದು ಅನೇಕ ಬಾರಿ ಕಾಡಿದ್ದ ಅನಿಸಿಕೆಯೆ ಮತ್ತೆ ಮತ್ತೆ ಕಾಡಿಸಿ ಆ ಬೇಸರದ ಆಳವನ್ನು ಮತ್ತಷ್ಟು ತೀವ್ರವಾಗಿಸಿ ಭಾದಿಸಿದಾಗ ಹೊಟ್ಟೆಯೆಲ್ಲಾ ಖಾಲಿಯಾದಂತೆ ತಳಮಳದ ಅನುಭವ; ಆ ನೆನಪಿನ ಹೊರೆ ತಂದ ಪ್ರಕ್ಷುಬ್ದತೆಗೊ ಏನೊ - ಅಲ್ಲಿಯತನಕ ಅನುಭವಕ್ಕೆ ಬರದಂತಿದ್ದ ಬೋಟಿನ ನೀರಿನಲೆಗಳ ಮೇಲಿನ ಏಳು ಬೀಳುವಾಟದ ಅದುರಾಟ, ಹೊಯ್ದಾಟ, ಅಲುಗಾಟಗಲೆಲ್ಲ ಪ್ರಜ್ಞೆಯ ನಿಲುಕಿಗೆ ಏಕಾಏಕಿ ಸಾಕ್ಷಾತ್ಕರಿಸಿದಂತೆನಿಸಿ ಮನದಲೊಡಮೂಡಿದ್ದ ಹರ್ಷೋಲ್ಲಾಸದ ಪಲುಕುಗಳನ್ನೆಲ್ಲ ಒಂದೆ ಏಟಿಗೆ ಚದುರಿಸಿ ಗೊಂದಲಗಳ ಮಿಶ್ರ ಗೂಡಾಗಿಸಿಬಿಟ್ಟಿತ್ತು. ಏನಾದರಾಗಲಿ ಅವಳ ಪರಿಸ್ಥಿತಿ, ಸನ್ನಿವೇಶಗಳು ಈ ಮಟ್ಟಕ್ಕೆ ಮುಟ್ಟಬಾರದಿತ್ತು - ಪ್ರಾಜೆಕ್ಟಿನ ಕಾರಣದಿಂದ ತಾನಲ್ಲಿರುವತನಕಲಾದರೂ; ಆಗ ಕನಿಷ್ಠ ತಾನಾವುದೊ ಪರೋಕ್ಷವಾದ, ತಪ್ಪಿತಸ್ಥ ಭಾವನೆಯಿಂದ ನರಳುವ ಪ್ರಮೇಯವಾದರೂ ತಪ್ಪುತ್ತಿತ್ತು... 'ಏನು ತಪ್ಪು ಮಾಡಿಕೊಂಡು ಕೆಲಸದಿಂದ ಹೊರಗೆ ಹಾಕಿಸಿಕೊಳ್ಳುವ ಸನ್ನಿವೇಶ ಸೃಷ್ಟಿಸಿಕೊಂಡಳೊ, ಯಾಕಾದರೂ ಈ ಸಮಯದಲ್ಲೆ ಅದನ್ನು ಆಗಗೊಟ್ಟಳೊ' ಎಂದು ಮನವೊಂದೆಡೆ ಪರಿತಪಿಸಿದರೆ, ಮತ್ತೊಂದೆಡೆ ಅವಳಿದ್ದ ಸೂಕ್ಷ್ಮ ಪರಿಸ್ಥಿತಿಯಲ್ಲಿ ಭಾವನಾತ್ಮಕ ತೀವ್ರತೆ ತನ್ನ ಅತ್ಯುನ್ನತ ಸ್ತರದಲ್ಲಿ ಸಕ್ರೀಯವಾಗಿರುವುದು ತುಂಬಾ ಸಹಜವಾದ ಕಾರಣ ಅವಳ ನಿಯಂತ್ರಣ, ಹತೋಟಿಯ ಸೀಮಾರೇಖೆಯನ್ನು ಮೀರಿ ಯಾವುದೊ ತಪ್ಪೆಸಗುವಂತೆ ಮಾಡಿರಬಹುದೇನೊ - ಅದು ಕೆಲಸದಲ್ಲಿನ ನಿರ್ಲಕ್ಷ್ಯಕ್ಕೆ ಕಾರಣವಾಗಿ ಕೆಲಸದಿಂದಲೆ ತೆಗೆಯುವಷ್ಟರ ಮಟ್ಟಿಗೆ ಪರಿಣಾಮ ಬೀರುವಷ್ಟು - ಎಂದೂ ವಾದಿಸುತ್ತಿತ್ತು. ಆದರೂ ಅವಳ ಕೆಲಸದಲ್ಲಿನ ಶಿಸ್ತು, ಸುವ್ಯವಸ್ಥೆ, ಚಾಕಚಕ್ಯತೆ, ಚುರುಕುತನಗಳನ್ನು ನೋಡಿದರೆ ಅದಾವ ಕೆಲಸದ ಅಶಿಸ್ತು ಅವಳನ್ನು ಕೆಲಸದಿಂದಲೆ ತೆಗೆಸುವ ಮಟ್ಟದ ಭೂಮಿಕೆ ನಿಭಾಯಿಸಿತೆಂದು ಅರಿವಾಗದೆ ಮತ್ತಷ್ಟು ಗೊಂದಲದಲ್ಲಿ ಕೆಡವಿತ್ತು. ಅವಳ ಕುರಿತಾದ ಆಲೋಚನೆಯಲ್ಲಿ ಅವಳ ವಿಷಯದಲ್ಲೇನು ಅನ್ಯಾಯ ನಡೆದಿರಬಹುದೆಂಬ ಸಾಧ್ಯಾಸಾಧ್ಯತೆಯ ಜಿಜ್ಞಾಸೆಯಲ್ಲೆ ಕಳುವಾಗಿ ಹೋಗಿದ್ದ ಶ್ರೀನಾಥನ ಮನ ಮತ್ತೆ ವಾಸ್ತವ ಲೋಕಕ್ಕೆ ಬಂದದ್ದು ತನ್ನ ಪಯಣ ಮುಗಿಸಿದ ವಿಹಾರದ ದೋಣಿ ತಲುಪಬೇಕಿದ್ದ ತನ್ನ ಗಮ್ಯದ ದಡವನ್ನು ಮುಟ್ಟಿದಾಗಲೆ.
ತಾವು ಮೊದಲಿಗೆ ಹೊರಟಿದ್ದ ತಾಣ-ತೀರದಿಂದ ಬೇರೆಯದೆ ಆದ ದಡದ ಹತ್ತಿರಕ್ಕೆ ಬಂದು ಮುಟ್ಟಿದ್ದ ದೋಣಿಯಿಂದ ಇಳಿಯುತ್ತಿದ್ದ ಶ್ರೀನಾಥನ ವಿಹ್ವಲ ಮನಸಿಗೆ, ತಾವು ಹಿಂದಿನ ದಿನ ಏರಿ ಬಂದಿದ್ದ ಬಸ್ಸು ಅಲ್ಲಾಗಲೆ ಬಂದು ಕಾಯುತ್ತಿದ್ದುದ್ದು ನೋಡಿ ಅಚ್ಚರಿಯಾಯ್ತು. ಇವರೆಲ್ಲ ನೌಕಾ ವಿಹಾರಕ್ಕೆ ಮೋಟಾರು ಬೋಟಿನತ್ತ ಹೊರಡುತ್ತಿದ್ದಂತೆ ಎಲ್ಲರನ್ನು ತಂತಮ್ಮ ಲಗೇಜುಗಳನ್ನು ಬಸ್ಸಿನೊಳಗಿಡಿಸಿದ್ದ ಕಾರಣ ಈಗರಿವಾಗಿತ್ತು. ಇವರು ಜಲಮಾರ್ಗದಲ್ಲಿ ಹೊರಟಿದ್ದ ಹೊತ್ತಿನಲ್ಲೆ, ರಸ್ತೆಯ ಮಾರ್ಗವಾಗಿ ಲಗೇಜುಗಳ ಸಮೇತ ಬಂದುಬಿಟ್ಟಿದ್ದ ಬಸ್ಸು, ಇವರು ನದಿಯ ಆ ತೀರವನ್ನು ತಲುಪುತ್ತಿದ್ದ ಹಾಗೆಯೆ ಎಲ್ಲರನ್ನು ತುಂಬಿಕೊಂಡು ಮತ್ತೆ ತನ್ನ ಪಯಣವನ್ನು ಆರಂಭಿಸಿಬಿಟ್ಟಿತ್ತು. ಮತ್ತೊಂದು ಗಂಟೆಯ ಪಯಣ ಕಳೆಯುತ್ತಿದ್ದ ಹಾಗೆ ಎದುರಾದ ಬೆಟ್ಟವೊಂದರ ಹತ್ತಿರ ಬಸ್ಸು ನಿಂತಾಗ ಇದಾವುದೊ ಬೆಟ್ಟದ ಮೇಲಿನ ದೇಗುಲವೊ, ಬೌದ್ಧ ವಿಹಾರವೊ ಇರಬಹುದೇನಿಸಿತ್ತು. ಬಸ್ಸು ಮೇಲೆ ಹೋಗುವ ಸಾಧ್ಯತೆಯಿರದ ಕಾರಣ ಮೆಟ್ಟಿಲುಗಳನ್ನು ಹತ್ತಿಯೆ ಮೇಲೆರಬೇಕಾಗಿತ್ತಾಗಿ, ಆ ಕಡಿದಾದ ಬೆಟ್ಟ ಮತ್ತು ಮೆಟ್ಟಿಲುಗಳನ್ನು ನೋಡಿಯೆ ಒಂದಷ್ಟು ಜನ ಬಸ್ಸಿನಿಂದ ಕೆಳಗಿಳಿಯಲೆ ಇಲ್ಲ. ನಿಜಕ್ಕೂ ಅಲ್ಲಿದ್ದುದೊಂದು ಪುಟ್ಟ ದೇವಾಲಯವೆ ಆದರೂ ಸುವ್ಯವಸ್ಥಿತವಾಗಿದ್ದ ಮೆಟ್ಟಿಲುಗಳನ್ನು ಹತ್ತಿ ತುದಿ ತಲುಪುವ ಹೊತ್ತಿಗೆ ಶ್ರೀನಾಥನಿಗೂ ಏದುಸಿರು ಬಿಡುವಂತಾಗಿತ್ತು. ಆದರೆ ಮೇಲೆ ತಲುಪುತ್ತಿದ್ದಂತೆ ಬೀಸುತ್ತಿದ್ದ ತಂಗಾಳಿ ಮತ್ತು ಸುತ್ತಲಿನ ರಮಣೀಯ, ವಿಹಂಗಮ ಎತ್ತರದ ನೋಟ ಒಂದೆ ಬಾರಿಗೆ ದಣಿವಾರಿಸಿ ಮನಸನ್ನು ಮುದಗೊಳಿಸಿತ್ತು. ಆ ದೇಗುಲದ ಒಳಗೆ ಮತ್ತು ಅದರ ಬೃಹತ್ ಪ್ರಾಂಗಣದ ಸುತ್ತೆಲ್ಲ ಹೆಜ್ಜೆ ಹಾಕಿ, ಅದರ ದೊಡ್ಡ ಗಂಟೆಯಾಕಾರದ ಬೃಹತ್ ಗೋಪುರದ ಸುತ್ತನ್ನು ಬಳಸುತ್ತ, ಛಾಯ ಚಿತ್ರ ಕ್ಲಿಕ್ಕಿಸುತ್ತ ಸುತ್ತಾಡುತ್ತಿದ್ದವರ ಜತೆಗೂಡಿದ್ದ ಶ್ರೀನಾಥ. ದೇಗುಲದ ನಂತರದ ಸುತ್ತಮುತ್ತಿನ ಜಾಗವನ್ನು ಉಕ್ಕಿನ ಕಟಕಟೆಯಿಂದಾವೃತ್ತವಾಗಿದ್ದ ಕಾಂಪೌಂಡ್ ಬೇಲಿಯಿಂದ ರಕ್ಷಿಸಿತ್ತಾಗಿ ಆ ತುದಿಗಳವರೆಗೂ ಹೋಗಿ ಕೆಳಗಿನ ಕಣಿವೆ, ಕಮರಿಯ ಪಕ್ಷಿನೋಟವನ್ನು ಕಾಣಬಹುದಿತ್ತು. ಅಲ್ಲೆಲ್ಲ ಪೋಟೋ ಸೆಶನ್ ಮುಗಿಸಿ ಎಲ್ಲರನ್ನು ಹೊರಡಿಸಿಕೊಂಡು ಮತ್ತೆ ಮೆಟ್ಟಲಿಳಿಯುವ ಹೊತ್ತಿಗೆ ಎಲ್ಲರ ಹೊಟ್ಟೆ ಚುರುಗುಟ್ಟುತ್ತಿದ್ದ ಕಾರಣ ಎಲ್ಲರೂ ಬೇಗ ಬೇಗನೆ ಬಸ್ ಹತ್ತಿಕೊಂಡಿದ್ದರು. ಅವರೆಣಿಕೆಯಂತೆ ಮುಂದಿನ ಸ್ಟಾಪ್ ಊಟದ ಹೋಟೆಲಿನ ಮುಂದೆ ನಿಂತಾಗ ಯಾರ ನಿಯಂತ್ರಣ ನಿರ್ದೇಶನದ ಅಗತ್ಯವೂ ಇಲ್ಲದೆ ಸರಸರನೆ ಇಳಿದು ಊಟಕ್ಕೆ ಕೂಡಬೇಕಾದ ಜಾಗಗಳಲ್ಲಿ ಚಕಚಕನೆ ಕೂತು ಕೈ ಬಾಯಿಗೆ ಕೆಲಸ ಕೊಟ್ಟಿದ್ದರು. ಅದೆಲ್ಲಾ ಮುಗಿದು ಎಲ್ಲರೂ ಹೊರಬರುತ್ತಿದ್ದಂತೆ ಶ್ರೀನಾಥ ಕೇಳಿದ್ದ, 'ಇನ್ನು ಮುಂದಿನ ತಾಣ ಯಾವುದು?' ಎಂದು.
' ಓಹ್ ಅದೆ ಈ ಪ್ರವಾಸದ ವಿಶೇಷ ತಾಣ...'ಕೌ ಯಾಯ್ ಕೌ ಬಾಯ್ ರೆಸೋರ್ಟ್..' ಇವತ್ತು ರಾತ್ರಿಯ ನಿಲುಗಡೆ ಅಲ್ಲಿಯೆ...'
' ಕೌ ಬಾಯ್ ರೆಸಾರ್ಟ್...? ಏನೊ ವಿಶೇಷವಿರುವಂತಿದೆಯಲ್ಲಾ ಹೆಸರಿನಲ್ಲೆ?'
' ಹೌದು ...ಕುದುರೆ ಮೇಲೆ ಕೂತು ದನ, ಕುರಿ ಕಾಯುವುದಕ್ಕೆ ಹೆಸರಾದ ಜಾಗ.. ಬೇಕಿದ್ದರೆ ನಾವು ಕೂಡ ಅಲ್ಲಿ ಹಾರ್ಸ್ ರೈಡ್ ಮಾಡಬಹುದು..'
' ಓಹ್ ಅದೆ ಈ ಪ್ರವಾಸದ ವಿಶೇಷ ತಾಣ...'ಕೌ ಯಾಯ್ - ಕೌ ಬಾಯ್ ರೆಸೋರ್ಟ್..' ಇವತ್ತು ರಾತ್ರಿಯ ನಿಲುಗಡೆ ಅಲ್ಲಿಯೆ...'
' ಕೌ ಬಾಯ್ ರೆಸಾರ್ಟ್...? ಏನೊ ವಿಶೇಷವಿರುವಂತಿದೆಯಲ್ಲಾ ಹೆಸರಿನಲ್ಲೆ?'
' ಹೌದು ...ಕುದುರೆ ಮೇಲೆ ಕೂತು ದನ, ಕುರಿ ಕಾಯುವುದಕ್ಕೆ ಹೆಸರಾದ ಜಾಗ.. ಬೇಕಿದ್ದರೆ ನಾವು ಅಲ್ಲಿ ಹಾರ್ಸ್ ರೈಡ್ ಕೂಡ ಮಾಡಬಹುದು..'
ಥಾಯ್ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಹಿನ್ನಲೆಯ ಜತೆ ಈ ಪಾಶ್ಚಾತ್ಯ ಕೌ ಬಾಯ್ ನುಸುಳಿದ್ದಾದರೂ ಹೇಗೆ ಎನ್ನುವ ಅಚ್ಚರಿಯಾದರೂ, ಅದೂ ಕೂಡ ಕಾಂಚನಾಬುರಿಯ ಸರಹದ್ದಿನೊಳಗಿರುವ ಗ್ರಾಮ್ಯ ವಾತಾವರಣದ ರೆಸೋರ್ಟ್ ಎಂದರಿವಾದಾಗ ಕುತೂಹಲ ಗರಿಗೆದರಿತ್ತು. ಅಲ್ಲದೆ ಅಲ್ಲಿಗೆ ಹೋದ ಮೇಲೆ ಎಲ್ಲರಿಗೂ 'ಹುಸಿ ಕೌ ಬಾಯ್' ಉಡುಗೆ ತೊಡುಗೆ ಕೊಡುವರೆಂದು, ಅದನ್ನು ಧರಿಸಿಯೆ ರಾತ್ರಿಯ ಡಿನ್ನರ ಪಾರ್ಟಿಯಲ್ಲಿ ಭಾಗವಹಿಸಬೇಕೆಂದು 'ಅನೌನ್ಸ್' ಬೇರೆ ಮಾಡಿ ಮತ್ತಷ್ಟು ಕುತೂಹಲ ಕೆರಳಿಸಿಬಿಟ್ಟಿದ್ದರು. ಮತ್ತೆ ಗರಿಗೆದರಿದ್ದ ಉತ್ಸಾಹದೊಂದಿಗೆ ಆ ತಾಣಕ್ಕಾಗಿ ಎದುರು ನೋಡುತ್ತ ಬಸ್ಸಿನ ಕಿಟಕಿಯ ಗಾಳಿಗೆ ತಲೆಯೊಡ್ಡಿಕೊಂಡು ಕುಳಿತಿದ್ದ ಶ್ರೀನಾಥ. ಆದರೆ ಅವನಿಗಿನ್ನು ಅರಿವಿರಲಿಲ್ಲ - ಆ ತಾಣದಲ್ಲಿ ಅವನ ಬ್ಯಾಂಕಾಕ್ ಬದುಕಿನ ದೊಡ್ಡದೊಂದು 'ಶಾಕ್' ಅವನಿಗಾಗಿ ಕಾದು ಕೂತಿದೆಯೆಂದು; ಅದು ಅವನ ಜೀವನ ಗತಿಯನ್ನೆ ಬದಲಿಸಿ, ಅವನ ನಂಬಿಕೆಯ ತಳಹದಿಯನ್ನೆ ಬುಡಮೇಲಾಗಿಸಿಬಿಡುವ ಸಂಘಟನೆಗಳ 'ಓಂ' ನಾಮ ಹಾಡುವ ಮೂಲ ಪ್ರಚೋದಕವಾಗಿಬಿಡುತ್ತದೆಂದು. ಅವನ ಸ್ವ-ಅನಿಸಿಕೆಗೆ ವಿರುದ್ಧವಾಗಿ ಅವನಲ್ಲಿ ಮಾತ್ರವೆ ಅಂತರ್ಗತವಾಗಿರಬೇಕಾಗಿದ್ದ ರಹಸ್ಯಾತ್ಮಕ ವಿಷಯದ, ಮತ್ತು ಗುಟ್ಟಾಗಿಡಬೇಕಾದ ವೈಯಕ್ತಿಕ ದೌರ್ಬಲ್ಯಗಳ ಚರಿತ್ರೆಗೆ ಕನ್ನಡಿ ಹಿಡಿವ ಕೆಲವು ಅಪ್ರಿಯ ಸತ್ಯಗಳು, ಆಕಸ್ಮಿಕ ಸನ್ನಿವೇಶದ ಪ್ರಚೋದನೆಯಿಂದ ತಾವಾಗೆ ಅನಾವರಣಗೊಂಡು ಅವನ ವ್ಯಕ್ತಿತ್ವವನ್ನು ತೀರಾ ತೀರಾ ಕೆಳಸ್ತರಕ್ಕೆ ಇಳಿಸಿ ಕುಗ್ಗಿಸಿಬಿಡುತ್ತವೆಂದು. ಅದು ಅವನಾಗಿ ಪ್ರಚೋದಿಸಿ ತಂದುಕೊಂಡಿದ್ದೊ, ವಿಧಿ ತಾನಾಗಿ ಪ್ರಕ್ಷೇಪಿಸಿ ಅನಾವರಣಗೊಳಿಸಿದ್ದೊ - ಯಾವುದೆ ಆಗಿದ್ದರು, ಅವನ ಮುಂದಿನ ಹೆಜ್ಜೆಯ ನಿಲುಕನ್ನು ನಿರ್ದೇಶಿಸುವಲ್ಲಿ ಅದು ಬಹು ಮುಖ್ಯ ಪಾತ್ರ ವಹಿಸಲಿದೆಯೆಂದು ಶ್ರೀನಾಥನಿಗೆ ತಿಲ ಮಾತ್ರದ ಸುಳಿವೂ ಇರಲಿಲ್ಲ...
ಶ್ರೀನಾಥ ಬಸ್ಸಿನಲ್ಲಿ ಸಾಗುತ್ತಿದ್ದ ಅದೇ ಹೊತ್ತಿನಲ್ಲಿ ಅವನು 'ವಾಟ್ ಪೋ'ನಲ್ಲಿ ಭೇಟಿಯಾಗಿದ್ದ ಬೌದ್ಧ ಸನ್ಯಾಸಿ ತನ್ನ ಬಗಲಿನ ಚೀಲವನ್ನು ಹೆಗಲಿಗೆ ನೇತು ಹಾಕಿಕೊಂಡು, ಥಾಯ್ಲ್ಯಾಂಡಿನ ಮತ್ತೊಂದು ಕಾನನದ ವಾತಾವರಣದ ನಡುವಿನಲ್ಲಿದ್ದ ಮೂಲ ಭವ್ಯ ಬೌದ್ಧ ದೇವಾಲಯದತ್ತ ನಡೆದಿದ್ದ, ತನ್ನ ಎಂದಿನ ಅದೆ ಸ್ನಿಗ್ದ ಕಿರುನಗೆಯ ಮೊಗದಲ್ಲಿ. ಆ ತಾಣ ಬೇರಾವುದೂ ಆಗಿರದೆ, ಆ ಬೌದ್ಧ ಗುರು ಶ್ರೀನಾಥನಿಗೆ ಕೊಟ್ಟಿದ್ದ ಮಾನೆಸ್ಟರಿಯ ವಿಳಾಸವಿದ್ದ ಅದೆ ಭವ್ಯ ಬೌದ್ಧ ದೇಗುಲವಾಗಿತ್ತು! ಅಲ್ಲಿದ್ದ ಹಿರಿಯ ಮಾಂಕ್ ರಿಂದ ಹಿಡಿದು ಬಹುತೇಖರು ಇಂಗ್ಲೀಷ್ ಬಲ್ಲ ಅಥವಾ ವಿದೇಶದಿಂದ ಬಂದು ಮಾಂಕುಗಳಾಗಿ ನೆಲೆಸಿದವರಾದ ಕಾರಣ, ಆ ದೇವಾಲಯ ಥಾಯ್ ಬರದ ವಿದೇಶಿಗರಲ್ಲೆ ಹೆಚ್ಚು ಪ್ರಸಿದ್ಧಿ ಪಡೆದು ಪ್ರಚಲಿತವಾಗಿತ್ತು. ಕಾಲ್ನಡಿಗೆಯಲ್ಲಿ ದೂರದಿಂದಲೆ ನಡೆದು ಬಂದಿದ್ದ ಆ ಬುದ್ದ ಸನ್ಯಾಸಿ 'ಮಾಂಕ್ ಸುಚರಿತ್', ದೇಗುಲದ ಹೆಬ್ಬಾಗಿಲನ್ನು ತಲುಪುತ್ತಿದ್ದಂತೆ ಅವರ ಆ ಹೊತ್ತಿನ ಚಿಂತನೆಯಾಗಿ ಆವರಿಸಿದ್ದ ಮನದಾಲೋಚನೆಯನ್ನು ಅನುಮೋದಿಸುವ ಹಾಗೆ ಮೇಲಿನಿಂದ ಲೊಚಗುಟ್ಟಿದ ಹಲ್ಲಿಯ ದನಿ ಕೇಳಿದವರೆ ತಲೆಯೆತ್ತಿ ನೋಡಿ 'ಅಮಿತಾಭ' ಎಂದುದ್ಗರಿಸುತ್ತ, ತಮ್ಮ ಎಡಗೈ ಹಸ್ತವನ್ನು ಹೃದಯಕ್ಕೆದುರಾಗಿ ಲಂಬ ನೇರವಾಗಿ ಹಿಡಿದುಕೊಂಡು ತಲೆಬಾಗಿ ನಮಿಸುತ್ತಲೆ ಒಳಗೆ ನಡೆದಿದ್ದರು. ಯಾಕೊ ಅವರರಿವಿಗೂ ಮೀರಿದಂತೆ ಅನಾವರಣಗೊಂಡ ಅನಿರೀಕ್ಷಿತ ಭಾವವೊಂದು ಒಳಗೇನೊ ಪ್ರಕ್ಷೇಪಿಸಿದಂತಾಗಿ, ಮನದೊಳಗೇನೊ ತಂತಾನೆ ಅರಿವಾದವರಂತೆ ಪ್ರಸನ್ನವದನರಾಗಿ ತಮ್ಮಲ್ಲೆ ನಕ್ಕು ಒಳನಡೆದಿದ್ದರು - ಬುದ್ಧನ ಭವ್ಯ ಮೂರ್ತಿಯಿದ್ದ ವಿಶಾಲ ಕೊಠಡಿಯ ಕಡೆಗೆ !
(ಇನ್ನೂ ಇದೆ)
________________
Comments
ಉ: ಕಥೆ: ಪರಿಭ್ರಮಣ..(38)
ನಿಸರ್ಗ ಲಾಸ್ಯದ ಭವ್ಯ ಚಿತ್ರಣವನ್ನು ನಿಮ್ಮ ಪದಗಳ ಅನನ್ಯ ಲಾಸ್ಯ ಯಶಸ್ವಿಯಾಗಿ ಮೂಡಿಸಿದೆ. ಅಭಿನಂದನೆಗಳು.
In reply to ಉ: ಕಥೆ: ಪರಿಭ್ರಮಣ..(38) by kavinagaraj
ಉ: ಕಥೆ: ಪರಿಭ್ರಮಣ..(38)
ಕವಿಗಳೆ ತಮ್ಮ ಅಭಿನಂದನೆಯ ಪ್ರತಿಕ್ರಿಯೆಗೆ ವಿನಮ್ರ ಧನ್ಯವಾದಗಳು :-)