ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !

ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !

ಬರಹ

ಹಸ್ತಲಿಖಿತದ ಬಗ್ಗೆ, ಅದರಲ್ಲೂ ಕನ್ನಡಭಾಷೆಯ ಕೈಬರಹದ ಬಗ್ಗೆ ಈಗ ಯಾರಾದರೂ ಹೇಳಿದರೆ, ಏನು ಇವರು ಹೇಳುತ್ತಿರುವುದು ಅಂತನ್ನಿಸಿದರೆ, ಆಶ್ಚರ್ಯವೇನಿಲ್ಲ ! ಅದರಲ್ಲೇನಿದೆ ಮಹಾ, ಎಂದು ಈಗಿನವರು, ಕೇಳಲೂ ಬಹುದು !

ಆದರೆ ಒಂದು ಕಾಲದಲ್ಲಿ ಒಳ್ಳೆಯ ಬರವಣಿಗೆಗೆ ಇದ್ದ ಮಹತ್ವವನ್ನು ನೆನೆಸಿದರೆ, ಹರ್ಷವಾಗುತ್ತದೆ. ಕಾಲಬದಲಾವಣೆಯ ಒಂದು ಉದಾಹರಣೆ ಇದು. ಕಂಪ್ಯೂಟರ ಯುಗದಲ್ಲಿ ಸ್ವಲ್ಪ ವರ್ಷಗಳಹಿಂದೆ, ಟೈಪ್ ರೈಟರ್ ಗಳು ಮಾಯವಾದವು. ಎಲ್ಲವೂ ಕಂಪ್ಯೂಟರ್ ಇಲಿಯ ಕ್ಲಿಕ್ ನವೇಗದ ಜೊತೆಯಲ್ಲಿ ವಿಹರಿಸುತ್ತಿರುವ ನಾವು, ಗತಕಾಲದ ಕೆಲವು ವಿಷಯಗಳನ್ನು ಸ್ಮರಿಸಿದಾಗ, ಅಬ್ಬಾ ಎಷ್ಟುಮುಂದೆ ಸಾಗಿದ್ದೇವೆ ನಾವು ಎನ್ನಿಸಿ, ಹೆಮ್ಮೆಯಾಗುತ್ತದೆ. ಆದರೆ, ನಮ್ಮ ಕೈಬರಹ ಇನ್ನೂ ಉಚ್ಚಮಟ್ಟದಲ್ಲಿ ಇರಬೇಕಾದದ್ದು ಅವಶ್ಯಕ. ನಾನು ಲೋಯರ್ ಸೆಕೆಂಡರಿಗೆ ಪಾದಾರ್ಪಣೆ ಮಾಡುವಹೊತ್ತಿಗೆ, ಪಬ್ಲಿಕ್ ಪರೀಕ್ಷೆಯನ್ನೇ ರದ್ದುಮಾಡಿದ್ದರು. ನಮ್ಮ ಹಿರಿಯರೆಲ್ಲಾ ಎಂಥಾ ಅನ್ಯಾಯವಾಗಿದೆ, ನಮ್ಮ ಶಿಕ್ಷಣಮಟ್ಟ ಅದಕ್ಕೆ ಇಷ್ಟು ಕಡಿಮೆಯಾಗಿರುವುದು, ಎಂದು ಲೊಚಗುಟ್ಟುತ್ತಿದ್ದರು. ಮೆಟ್ರಿಕ್ ಪಾಸಾಗುವವರೆಗೆ ನಾವು, ಫಂಟನ್ ಪೆನ್ ಮುಟ್ಟಿರಲಿಲ್ಲ. ಮಸಿ ದೌತಿ, ಹಾಗೂ ಸ್ಟೀಲ್ ತೆಗೆದುಕೊಂಡು ಪರೀಕ್ಷೆಯ ಕೊಠಡಿಗೆ ಹೋಗಿಬರೆಯಬೇಕಾಗಿತ್ತು.

ನಮ್ಮ ಕನ್ನಡಪಂಡಿತ ಶ್ರೀ. ನರಸಿಂಹಶಾಸ್ತ್ರಿಗಳ ಅಕ್ಷರಗಳ ಅಂದವನ್ನು ನೋಡಿದವರೆಲ್ಲಾ, ಅದನ್ನು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದರು. ಅವರು ಬೋರ್ಡ್ ಮೇಲೆ ಬರೆದ ಮುದ್ದಾದ ಬರವಣಿಗೆಯನ್ನು, ಡಾಸ್ಟರ್ ನಿಂದ, ಯಾಕೆ ಅಳಿಸುತ್ತಾರೊ ಎಂದು ಮುಜುಗರವಾಗುತ್ತಿತ್ತು. ಅವರ ಪಾಠಹೇಳಿಕೊಡುವ ಸಮಯದಲ್ಲಿ ಬಳಸುತ್ತಿದ್ದ ಭಾಷಾಸಂಪತ್ತು. ಶಿಸ್ತು, ನಿಯಮ ನಿಯಮಪಾಲನೆ ಇತ್ಯಾದಿಗಳು, ನಮಗೆಲ್ಲಾ ಅತ್ಯಂತ ಮುದಕೊಡುತ್ತಿದ್ದವು. ಆಗ, ಎಲ್ಲ ಶಿಕ್ಷಕರೂ ಚೆನ್ನಾಗಿಯೇ ಪಾಠಮಾಡುತ್ತಿದ್ದರು. ತಮ್ಮ ಕೆಲಸದಲ್ಲಿ ಅತಿಹೆಚ್ಚು ಕಾಳಜಿವಹಿಸುತ್ತಿದ್ದರು. ಬೇರೆ ಆಕರ್ಷಣೆಗಳಿಲ್ಲದೆ, ಮಕ್ಕಳಿಗೆ ವಿದ್ಯೆ ಚೆನ್ನಾಗಿ ಮನಸ್ಸಿಗೆ ನಾಟುತ್ತಿತ್ತು. ಬಹುಶಃ ಆದಿನದ ಬಡತನ, ಹಾಗೂ ವಿದ್ಯೆ ನಮ್ಮನ್ನು ಅದೆಲ್ಲಿಗೋ ಮಾಯಾಲೋಕಕ್ಕೆ ಕರೆದೊಯ್ಯುತ್ತದೆಂಬ, ಆಶಾಕಿರಣದಿಂದ ಹುಡುಗರು, ಮುಂದುವರೆಯುತ್ತಿದ್ದರು.

ನಮ್ಮ ಮನೆಯಲ್ಲಿ ನಮ್ಮ ತಂದೆಯವರು, ಓದು ಬರಹದಲ್ಲಿ ಯಾವಾಗಲೂ ತೊಡಗಿರುತ್ತಿದ್ದರು. ವಂಶಪಾರಂಪರ್ಯದಿಂದ ಶ್ಯಾನುಭೋಗರಾಗಿದ್ದ ಅವರು, ದಾವಣಗೆರೆಯಲ್ಲಿ ಮೆಟ್ರಿಕ್ ಪಾಸುಮಾಡಿದ್ದರು. ಅದನ್ನು ಮುಂದುವರೆಸಲು ಸಾಧ್ಯವಾಗದಿದ್ದದ್ದು, ಮನೆಯ ಆರ್ಥಿಕ ಮುಗ್ಗಟ್ಟೇ ಕಾರಣವಾಗಿತ್ತು. ಅದಲ್ಲದೆ, ನಮ್ಮ ಊರಿನಲ್ಲಿ ಸ್ಕೂಲುಗಳೇ ಇರಲಿಲ್ಲ. ಶಾಲೆ ಬಂದದ್ದು, ೧೯೫೦ ರ ಹೊತ್ತಿಗೆ. ಆದರೆ ಬೆಂಗಳೂರಿನಿಂದ ಆ ಶಾಲೆಗೆಪಾಠಹೇಳಲು ಬರುತ್ತಿದ್ದ ಶಿಕ್ಷಕರಿಗೆ ತಿಂಗಳುಗಟ್ಟಲೆ ಸಂಬಳ ಸಿಗುತ್ತಿರಲಿಲ್ಲ. ನಮ್ಮ ತಂದೆ, ಬೊಂಬಾಯಿಗನಗರದಲ್ಲಿ ಬ್ರಿಟಿಷ್ (ಮೆ. ವೋಲ್ಕಾರ್ಟ್ ಬ್ರದರ್ಸ್ ಜಾಲಿ ಬ್ರದರ್ಸ್ )ನಲ್ಲಿ ನೌಕರಿಯಲ್ಲಿದ್ದವರು, ನಮ್ಮಜ್ಜನವರ ಆಗ್ರಹದ ಮೇರೆಗೆ ತಮ್ಮ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ, ವಾಪಸ್ ಊರಿಗೆ ಬಂದರಂತೆ.

ಶ್ಯಾನುಭೋಗಿಕೆ, ನಮ್ಮ ಹಿರಿಯರಕಾಲದಿಂದ ನಡೆಸಿಕೊಂಡು ಬಂದ ವೃತ್ತಿ. ಅದನ್ನು ತಮ್ಮ ತರುವಾಯ ನಿಲ್ಲಿಸಲು ನಮ್ಮಜ್ಜನವರು ಒಪ್ಪುತ್ತಿರಲಿಲ್ಲ. ಸರಿ ನಮ್ಮಪ್ಪ ಹೊಳಲ್ಕೆರೆಯ ಬಳಿಯ ಹಳ್ಳಿಯ ಶ್ಯಾನುಭೋಗರಾದರು ! ಅಲ್ಲಿಯೂ ತಮ್ಮ ಅದ್ಭುತ ಕೈಬರಹದ ಅಂದ, ಹಾಗೂ ಅಕೌಂಟ್ ಬಗ್ಗೆ ಇದ್ದ ಅವರ ಪ್ರಾವೀಣ್ಯತೆಯಿಂದ ಅವರ ಮೇಲಧಿಕಾರಿಗಳ ಪ್ರೀತಿ, ಗೌರವಗಳಿಗೆ ಪಾತ್ರರಾದರು.

ಶ್ಯಾನುಭೋಗರ ವಾರ್ಷಿಕ ಜಮಾಬಂದಿ ಲೆಕ್ಕಪತ್ರಗಳ ಪುಸ್ತಕವನ್ನು ಪರಿಶೀಲಿಸಲು ಅಂದಿನದಿನದ ಅಮಲ್ದಾರರು, ಜಿಲ್ಲಾಧಿಕಾರಿಗಳೂ ಬಂದಾಗ, ನಮ್ಮ ತಂದೆಯವರ ಕೈಬರಹದ ಅಂದದ ವರ್ಣನೆ, ಮತ್ತು ಶ್ಲಾಘನೆಯನ್ನು ಮಾಡದೆ ಹೋಗುತ್ತಿರಲಿಲ್ಲ. ಅವರ ಸುಂದರ ಅಕ್ಷರಗಳ ಹೊಗಳಿಕೆ, ಯಾವಾಗಲೂ ಇದ್ದೇ ಇರುತ್ತಿತ್ತಂತೆ. ಅಂತಹ ಮುತ್ತಿನಂತಹ ಅಕ್ಷರಗಳ ಸೌಂದರ್ಯಕ್ಕೆ ಮೋಹಗೊಳ್ಳದವರ್ಯಾರು ?

ನಮ್ಮಪ್ಪ, ಪುಟ್ಟ ಪೋಸ್ಟ್ ಕಾರ್ಡ್ ನಲ್ಲಿ ಎಷ್ಟು ಅಚ್ಚುಕಟ್ಟಾಗಿ ಬರೆಯುತ್ತಿದ್ದರೆಂದರೆ, ಒಂದಾದರೂ ಚಿತ್ತಿಲ್ಲದ ಮಲ್ಲಿಗೆಹೂವಿನ ತರಹದ ಅಕ್ಷರಗಳು. ಸ್ವಲ್ಪ ಹೆಚ್ಚಿಲ್ಲ; ಸ್ವಲ್ಪ ಕಡಿಮೆಯಿಲ್ಲ. ಎಷ್ಟು ಬೇಕೋ ಅಷ್ಟೇ, ವಿಷಯಗಳು. ಅವೆಲ್ಲಾ ಅತ್ಯಂತ ಸ್ಪಷ್ಟ, ಹಾಗೂ ಎಲ್ಲೂ ಗೊಂದಲವಿಲ್ಲದ ವಿಷಯ ಪ್ರಸ್ತಾವನೆ. ಅಕ್ಕ-ಪಕ್ಕದ ಸಂಬಂಧಿಕರ ಮನೆಯವರೂ, ಆಕಾಗದಗಳನ್ನು ತರಿಸಿಕೊಂಡು ತಪ್ಪದೆ ಓದುತ್ತಿದ್ದರು. ಅದರ ಬಗ್ಗೆ ವಾರಗಳ ಕಾಲ, ಮೆಚ್ಚುಗೆಯ ಚರ್ಚೆನಡೆಯುತ್ತಿತ್ತು.

ನಾವು ಚಿಕ್ಕವರಾಗಿದ್ದಾಗ, ಊರಿನಜನರೆಲ್ಲಾ ಅವರ ಜಾಣತನ, ವ್ಯವಹಾರಜ್ಞಾನ, ನಯ-ವಿನಯದ ನಡುವಳಿಕೆ, ಸಮಯಪ್ರಜ್ಞೆ, ಮಹಾಕಾವ್ಯಗಳ ಬಗ್ಗೆ ಇದ್ದ ಅಪಾರಜ್ಞಾನ, ಜ್ಯೋತಿಷ್ಯವಿದ್ಯೆಯ ಸಹಾಯದಬಗ್ಗೆ, ಮಾತಾಡಿಕೊಳ್ಳುತ್ತಿದ್ದರು. ಸುಮಾರು ೨೦೦೦ ಜನರಿದ್ದ ನಮ್ಮೂರಿನಲ್ಲಿ ಆಗ, ನಮ್ಮ ಮನೆಯಲ್ಲಿ ಮಾತ್ರ, ಒಂದು ಹೆಚ್. ಎಮ್ .ವಿ. ಗ್ರಾಮಾಫೋನ್ ರೆಕಾರ್ಡ್ ಪ್ಲೇಯರ್ ಇತ್ತು. ಅದನ್ನು ನಮ್ಮ ತಂದೆಯವರು, ೧೯೩೧ ನೆಯ ಇಸವಿಯಲ್ಲಿ ಖರೀದಿಸಿದ್ದರು. ಸುಮಾರು ೮೪ ರೆಕಾರ್ಡ್ ಗಳನ್ನು ೭ ಡೆಕ್ ಗಳಲ್ಲಿ ಅಡಕಮಾಡಿ ವ್ಯವಸ್ಥಿತವಾಗಿ ಇಟ್ಟಿದ್ದರು. ಅವರು ಬಳಸುತ್ತಿದ್ದ, ಟೈಪ್ ರೈಟರ್, ಅಲಾರಾಂ ಟೈಂ ಪೀಸ್, * ಪಾಕೆಟ್ ವಾಚ್, ಪಾರ್ಕರ್ ಪೆನ್, ಅದಕ್ಕೆ ಬಳಸಲು 'ಕ್ವಿಂಕ್ ಶಾಯಿ', ಆಗಿನಕಾಲದಲ್ಲಿ ಟೇಬಲ್ ಕುರ್ಚಿ, ಗಳನ್ನು ಎಲ್ಲರೂ ಇಷ್ಟಪಡುತ್ತಿದ್ದರು.

'ಫಿನ್ಲೆ ಮಿಲ್' ನ ಕಚ್ಚೆ-ಪಂಚೆ, ಕೋಟು , ಪೇಟ, ಪಾಕೆಟ್ ವಾಚ್, ಕೈನಲ್ಲಿ ಒಂದು 'ವಾಕಿಂಗ್ ಸ್ಟಿಕ್' ಇವು ಅವರ ವೇಷ-ಭೂಷಣಗಳು. ಬೊಂಬಾಯಿನಲ್ಲಿದ್ದಾಗ ಮಾರ್ವಾಡಿಗಳು ಧರಿಸುತ್ತಿದ್ದ ಪೇಟವನ್ನು ಲಪಾಟೆಸುತ್ತುತ್ತಿದ್ದರಂತೆ. ನಮ್ಮ ಊರಿಗೆ ಬಂದಮೇಲೆ, ಅದು ಕ್ರಮೇಣ ನಿಲ್ಲಿಸಿದರಂತೆ. ನಮ್ಮತಂದೆಯವರು ಬರೆದ ಪೋಸ್ಟ್ ಕಾರ್ಡ್ಗ್ ಗಳ ಕಂತೆಯನ್ನು ನಾವು ಜೋಪಾನವಾಗಿ ಬಹಳ ವರ್ಷಗಳಕಾಲ, ಇಟ್ಟಿದ್ದೆವು. ನಮ್ಮ ಬೊಂಬಾಯಿನ ಮನೆಯ ಗೋಡೆಗಳನ್ನು ಪೇಂಟ್ ಮಾಡಿಸುವ ಸಮಯದಲ್ಲಿ, ಆ ಸಂಗ್ರಗಳು ಅದೆಲ್ಲೋ, ಹೇಗೋ, ಕಾಣೆಯಾದವು ! ಆದರೂ ಅವರು ಬರೆಯುತ್ತಿದ್ದ ದಿನಚರಿ ಪುಸ್ತಕ, ಹಾಗೂ ವಿಶೇಷ ವಿಶಯ ಸಂಗ್ರವನ್ನು, ಇಂದಿಗೂ ನಾವೆಲ್ಲಾ ಆಸಕ್ತಿಯಿಂದ ಓದಿಕೊಳ್ಳುತ್ತೇವೆ.

ನಮ್ಮ ಪರಿವಾರದ ಸದಸ್ಯರೆಲ್ಲರ ಜಾತಕದ ಪುಸ್ತಕ, ಅವರು ಕೆಲಸಕ್ಕೆ ಸೇರಿದಾಗಿನಿಂದ, ಮರಣದ ಸಮಯದ ವರೆಗಿನ ಎಲ್ಲಾ ಹಣ-ಕಾಸು ಸಂಪಾದನೆ, ಖರ್ಚು, ಪ್ರಯಾಣ, ಮಕ್ಕಳ ವಿದ್ಯಾಭ್ಯಾಸ, ಒಡವೆಗಳ ಖರೀದಿ, ಅವರು ಬದಲಾಯಿಸಿದ ೩-೪ ನೌಕರಿಗಳ ಸಂಪೂರ್ಣಮಾಹಿತಿ, ಖರೀದಿಸಿದ, ರೆಮಿಂಗ್ಟನ್ ಟೈಪ್ ರೈಟರ್, ಪಾರ್ಕರ್ ಪೆನ್, ಪಾಕೆಟ್ -ವಾಚ್, ಇತ್ಯಾದಿಗಳ ಬಗ್ಗೆ ವಿಸ್ತೃತ ವಿವರಣೆಗಳಿವೆ, ಆಪುಸ್ತಕದಲ್ಲಿ ! ಪುಸ್ತಕದ ಕೆಲವು ಪುಟಗಳನ್ನು 'ಸ್ಕಾನ್' ಮಾಡಿ ಓದುಗರಿಗೆ ಪರಿಚಯಿಸುತ್ತಿದ್ದೇನೆ.

ಇದೊಂದು, ಉದಾಹರಣೆಮಾತ್ರ. ಒಳ್ಳೆಯ ಕೈ ಬರವಣಿಗೆಯ ಮಾದರಿಯ ಮಹನೀಯರು ಹಲವಾರುಜನ, ಇದ್ದಾರೆ. ಈಗಲೂ, ಹಲವಾರು ಕನ್ನಡದ ವಿದ್ಯಾರ್ಥಿಗಳು ಉತ್ತಮವಾಗಿ ಬರೆಯುತ್ತಿದ್ದಾರೆ.  ಆದರೆ, ಪುಟ್ಟ ಪೋಸ್ಟ್ ಕಾರ್ಡ್ ನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಬರೆದು, ಎಲ್ಲಾ ವಿಷಯಗಳನ್ನು ದಾಖಲಿಸುತ್ತಿದ್ದ ಅಂದಿನ ವೈಖರಿಯನ್ನು, ಈಗ ಕಾಣಲು ಸಾಧ್ಯವೇ ?

ಈಗ ಪತ್ರಬರಿಯುವವರ ಸಂಖ್ಯೆ ತೀರಾ ಕಡಿಮೆಯಾಗಿದೆ- ಅದೂ ಪೋಸ್ಟ್ ಕಾರ್ಡ್ ನಲ್ಲಿ ! ಇದೊಂದು ಉದಾಹರಣೆಮಾತ್ರ. ನಮ್ಮ ತಂದೆಯವರ ೧೧೩ ನೆಯ, ಪುಣ್ಯಸ್ಮರಣೆಯದಿನ, ಹೋದ ಡಿಸೆಂಬರ್ ನಲ್ಲಿ ನೆರವೇರಿತು. ಅವರ ಪ್ರೀತಿಯ ನಾಲ್ಕು ಜನ ಮಕ್ಕಳ, ಪರಿವಾರದವರ ಸ್ಮೃತಿಯಲ್ಲಿ ಅವರು ಅಮರರಾಗಿ ನೆಲೆಸಿದ್ದಾರೆ. ಎಂದೆಂದಿಗೂ ಅವರ ಆಶೀರ್ವಾದ, ಹಾಗೂ ಮಾರ್ಗದರ್ಶನಗಳು, ನಮ್ಮ ಇಂದಿನ ಪ್ರಗತಿಗೆ ದಾರಿದೀಪಗಳಾಗಿವೆ.  *[ಆಗ, ಗಾಂಧೀಜಿಯವರು ಗಡಿಯಾರವನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರು]

-ಚಿತ್ರ. ವೆಂ.

** ಕೆಲವು ಪುಟಗಳಲ್ಲಿ ಆಗಿನಕಾಲದಲ್ಲಿ ಖರೀದಿಸಿದ್ದ, ಹೆಚ್. ಎಮ್. ವಿ. ಗ್ರಾಮಫೋನ್ ರೆಕಾರ್ಡ್ ನ ರೆಕಾರ್ಡ್ ಗಳ ಹಾಡಿನ-ವಿವರಗಳನ್ನು ಸ್ಪಸ್ಟವಾಗಿಬರೆದಿಟ್ಟ ವಿಷಯಾನುಕ್ರಮಣಿಕೆ, ಅತ್ಯಂತ ಸೊಗಸಾಗಿದೆ. ಸ್ಪುಟವಾದ ಅಕ್ಷರಗಳು, ಆಕಾರದಲ್ಲಿ ಒಂದೇ ಸಮ, ಹಾಗೂ ಅತಿಸುಂದರವಾದ ಪುಟವಿನ್ಯಾಸವನ್ನು, ಗಮನಿಸಿ.