'ಕನ್ನಡ'ಕ್ಕೆ ಕೊರಳಾದ ಅಪರ್ಣಾಗೊಂದು ನುಡಿ ನಮನ

'ಕನ್ನಡ'ಕ್ಕೆ ಕೊರಳಾದ ಅಪರ್ಣಾಗೊಂದು ನುಡಿ ನಮನ

ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡುವವರೇ ಕಡಿಮೆಯಾಗುತ್ತಿದ್ದಾರೆ, ಅದರಲ್ಲೂ ಅರಳು ಹುರಿದಂತೆ ಸ್ಪಷ್ಟವಾಗಿ ಕನ್ನಡ ಮಾತನಾಡುವವರ ಸಂಖ್ಯೆ ಬಹಳ ವಿರಳ. ಮಾತನಾಡುವ ಕನ್ನಡದಲ್ಲಿ ಭಾವನೆಗಳನ್ನು ತುಂಬಿ, ಅವುಗಳನ್ನು ಕೇಳುಗರ ಮನದಲ್ಲಿ ಪ್ರತಿಫಲಿಸಿ, ಅವರಲ್ಲೂ ಕನ್ನಡಾಭಿಮಾನ ಮೂಡುವಂತೆ ಮಾಡಿದ ವ್ಯಕ್ತಿ ಎಂದರೆ ನಿಸ್ಸಂಶಯವಾಗಿ ನಮ್ಮ ಮುಂದೆ ಬರುವ ಚಿತ್ರ ಅಪರ್ಣಾ ಅವರದ್ದು. ಇಂತಹ ವ್ಯಕ್ತಿತ್ವ ಹೊಂದಿದ ಅಪರ್ಣಾ ಕಾಲನ ಕರೆಗೆ ಓಗೊಟ್ಟು ನಮ್ಮನ್ನು ಅಗಲಿದಾಗ (ನಿಧನ- ಜುಲೈ ೧೧) ಅವರಿಗೆ ಬರೇ ೫೮ ವರ್ಷ. ಕೆಲಸದಿಂದ ನಿವೃತ್ತಿಯಾಗುವ ಸಮಯದಲ್ಲಿ ಅವರು ಜೀವನದಿಂದಲೇ ನಿವೃತ್ತಿ ತೆಗೆದುಕೊಂಡು ಬಿಟ್ಟರು. ಎಲ್ಲವೂ ಕಾಲದ ಮಹಿಮೆ.

ಅಕ್ಟೋಬರ್ ೧೪, ೧೯೬೬ರಲ್ಲಿ ಪಂಚನಹಳ್ಳಿಯಲ್ಲಿ ಹುಟ್ಟಿದ ಅಪರ್ಣಾ ಬಾಲ್ಯದಿಂದಲೂ ಬಲು ಚೂಟಿಯಾಗಿದ್ದ ಹುಡುಗಿ. ಇವರ ತಂದೆ ಕೆ ಎಸ್ ನಾರಾಯಣಸ್ವಾಮಿಯವರು ಪತ್ರಕರ್ತರಾಗಿದ್ದರು. ಬಹುಷಃ ಈ ಕಾರಣದಿಂದಲೇ ಅಪರ್ಣಾ ಶುದ್ಧವಾಗಿ, ಸ್ಪಷ್ಟವಾಗಿ ಕನ್ನಡ ಮಾತನಾಡಲು ಕಲಿತಿರಬಹುದುದೇನೋ? ಅಪರ್ಣಾ ೧೯೮೪ರಲ್ಲಿ ತೆರೆಕಂಡ ತರಾಸು ಕಾದಂಬರಿ ಆಧಾರಿತ, ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ 'ಮಸಣದ ಹೂವು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಮಸಣದ ಹೂವು ಚಿತ್ರವು ಜನಪ್ರಿಯವಾದರೂ ಅಪರ್ಣಾ ಚಿತ್ರರಂಗದಲ್ಲಿ ಸಂಪೂರ್ಣವಾಗಿ ನೆಲೆಯೂರಲು ಸಾಧ್ಯವಾಗಲಿಲ್ಲ. ಅಪರ್ಣಾ ಅವರು ನಂತರ ಸಂಗ್ರಾಮ, ನಮ್ಮೂರ ರಾಜ, ಸಾಹಸವೀರ, ಮಾತೃ ವಾತ್ಸಲ್ಯ, ಒಲವಿನ ಆಸರೆ, ಇನ್ಸ್ ಪೆಕ್ಟರ್ ವಿಕ್ರಮ್, ಒಂದಾಗಿ ಬಾಳು, ಡಾಕ್ಟರ್ ಕೃಷ್ಣ, ಒಂಟಿ ಸಲಗ, ಚಕ್ರವರ್ತಿ ಮೊದಲಾದ ಚಲನ ಚಿತ್ರಗಳಲ್ಲಿ ನಟಿಸಿದರೂ ಬಹಳ ಯಶಸ್ಸು ಕಾಣಲಿಲ್ಲ. ಈ ಕಾರಣದಿಂದಲೇ ಅವರು ಚಿತ್ರರಂಗವನ್ನು ಬದಿಗೆ ಸರಿಸಿ ಆರಿಸಿಕೊಂಡದ್ದು ನಿರೂಪಣೆ. ಅಪರ್ಣಾ ಅವರಿಗೆ ಯಾವುದೇ ಕಾರ್ಯಕ್ರಮವಾಗಲಿ ಅದಕ್ಕೆ ತಕ್ಕಂತೆ ಶುದ್ಧ ಕನ್ನಡದಲ್ಲಿ ಸ್ಪಷ್ಟವಾಗಿ ನಿರೂಪಣೆ ಮಾಡುವ ತಾಕತ್ತು ಇತ್ತು ಎಂದರೆ ತಪ್ಪಾಗಲಾರದು. 

ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ಹರಿದಾಡುವ ನೂರಾರು ವಿಡಿಯೋಗಳು ಅಪರ್ಣಾ ಅವರ ನಿರೂಪಣಾ ಸಾಮರ್ಥ್ಯವನ್ನು ತೆರೆದಿಡುತ್ತವೆ. ೧೯೯೦ರಲ್ಲಿ ದೂರದರ್ಶನ ‘ಚಂದನ' ವಾಹಿನಿಯ ಬಹುತೇಕ ಕಾರ್ಯಕ್ರಮಗಳಿಗೆ ಅಪರ್ಣಾ ಅವರೇ ನಿರೂಪಕರಾಗಿದ್ದರು. ಇದೇ ಸಮಯದಲ್ಲಿ ಹಲವು ಧಾರಾವಾಹಿಗಳಲ್ಲೂ ಅವರು ನಟಿಸಿದ್ದರು. ಸರಕಾರಿ ಕಾರ್ಯಕ್ರಮಗಳು ಅಪರ್ಣಾ ಅವರ ನಿರೂಪಣೆಯಿಂದಲೇ ಪ್ರಾರಂಭವಾಗುತ್ತಿದ್ದ ಕಾಲವೂ ಇತ್ತು. ಮೆಟ್ರೋ ಉದ್ಘಾಟನೆ, ಭಾರತ ಸರಕಾರದ ವಿವಿಧ ಕಾರ್ಯಕ್ರಮಗಳು, ಪುನೀತ್ ರಾಜಕುಮಾರ್ ಸ್ಮರಣೆ, ರೇಡಿಯೋದಲ್ಲಿ ಜಾಕಿಯಾಗಿ ಅವರು ನಿರೂಪಣಾ ಕಾರ್ಯ ಮಾಡಿದ್ದರು. ೧೯೯೮ರಲ್ಲಿ ದೀಪಾವಳಿ ಕಾರ್ಯಕ್ರಮವೊಂದಕ್ಕೆ ಅವರು ನಿರಂತರವಾಗಿ ಎಂಟು ಗಂಟೆ ನಿರೂಪಣೆ ಮಾಡಿದ್ದು ಈಗಲೂ ಒಂದು ದಾಖಲೆಯಾಗಿಯೇ ಉಳಿದಿದೆ. 

ಅಪರ್ಣಾ ಅವರದ್ದು ಸಹಜ ಸೌಂದರ್ಯ, ಸ್ಪಷ್ಟವಾದ ಕನ್ನಡವನ್ನು ಹೊರಹೊಮ್ಮಿಸುವ ಕಂಠವು ಅವರನ್ನು ಕನ್ನಡದ ನಂ ೧ ನಿರೂಪಕಿಯನ್ನಾಗಿಸಿತು. ೨೦೧೩ರಲ್ಲಿ ಪ್ರಾರಂಭವಾದ ಕನ್ನಡದ ಮೊದಲ ಬಿಗ್ ಬಾಸ್ ಸೀಸನ್ ನಲ್ಲಿ ಭಾಗವಹಿಸಿದ್ದ ಅಪರ್ಣಾ ‘ಬಿಗ್ ಬಾಸ್’ ಮನೆಯಲ್ಲಿ ತಮ್ಮ ಛಾಪನ್ನು ಮೂಡಿಸುವಲ್ಲಿ ಸಫಲರಾಗಿದ್ದರು. ನಂತರ ೨೦೧೫ರಲ್ಲಿ ಸೃಜನ್ ಲೋಕೇಶ್ ಅವರ ನಿರೂಪಣೆಯಲ್ಲಿ ಆರಂಭವಾದ ‘ಮಜಾ ಟಾಕೀಸ್' ಎಂಬ ಕಾರ್ಯಕ್ರಮದಲ್ಲಿ ಅಪರ್ಣಾ ಭಾಗವಹಿಸುವ ಮೂಲಕ ತಾವು ಕೇವಲ ನಿರೂಪಣೆಗಷ್ಟೇ ಅಲ್ಲ, ಉತ್ತಮ ಹಾಸ್ಯ ಪಟುವಾಗಿಯೂ ಕಾರ್ಯನಿರ್ವಹಿಸಬಲ್ಲೆ ಎಂದು ನಿರೂಪಿಸಿದ್ದರು. ಅಪರ್ಣಾ ಅವರು ‘ವರಲಕ್ಷ್ಮಿ' ಎಂಬ ಪಾತ್ರದಲ್ಲಿ ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಾಡಿಸಿದ್ದರು. ಗಂಭೀರ ಪಾತ್ರಗಳಷ್ಟೇ ಅಲ್ಲ ಹಾಸ್ಯ ಪಾತ್ರಕ್ಕೂ ತಾವು ಸೈ ಎಂದು ನಿರೂಪಿಸಿದ್ದರು. ಇವರು ಮೂಡಲ ಮನೆ, ಈ ಫ್ಯಾಮಿಲಿ, ಮುಕ್ತ, ಇವಳು ಸುಜಾತಾ, ನನ್ನರಸಿ ರಾಧಾ, ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಅಪರ್ಣಾ ಅವರು ಸ್ವಲ್ಪ ಸಮಯ ‘ಕನ್ನಡ ಪ್ರಭ' ಪತ್ರಿಕೆಯಲ್ಲಿ ಅಂಕಣ ಬರೆಯುವ ಮೂಲಕ ಅಪ್ಪನಿಗೆ ತಕ್ಕ ಮಗಳು ಎಂದು ನಿರೂಪಿಸಿದ್ದರು. 

ಅಪರ್ಣಾ ಅವರು ತಮ್ಮ ಮೊದಲ ಪತಿಯಿಂದ ವಿಚ್ಚೇದನ ಪಡೆದುಕೊಂಡು ಕನ್ನಡದ ಖ್ಯಾತ ಕಥೆಗಾರ ನಾಗರಾಜ ವಸ್ತಾರೆಯವರನ್ನು ದ್ವಿತೀಯ ವಿವಾಹವಾಗಿ ಅಪರ್ಣಾ ವಸ್ತಾರೆಯಾಗಿದ್ದರು. ಈ ದಂಪತಿಗಳಿಗೆ ಮಕ್ಕಳಾಗದ ಕೊರಗು ಕೊನೆಯವರೆಗೆ ಇತ್ತು. ಅದೇ ಸಮಯದಲ್ಲಿ ಅಪರ್ಣಾ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ತಗುಲಿತು. ಕ್ಯಾನ್ಸರ್ ತಗುಲಿದ ವಿಷಯ ತಿಳಿಯುವಾಗಲೇ ತುಂಬಾ ತಡವಾಗಿ ಹೋಗಿತ್ತು. ಎರಡು ವರ್ಷಗಳ ಕಾಲ ಕ್ಯಾನ್ಸರ್ ಜೊತೆ ಹೋರಾಡಿ ಕೊನೆಗೆ ಸೋತು ಜೀವ ಚೆಲ್ಲಿದರು ಅಪರ್ಣಾ. ಅಪರ್ಣಾ ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದೇ ಹೋದರೂ ‘ನಮ್ಮ ಮೆಟ್ರೋ’ ಗೆ ಅವರು ನೀಡುದ ಸೂಚನೆ ಮತ್ತು ಪ್ರಕಟಣೆಗಳ ಧ್ವನಿ ಈಗಲೂ ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ನಾವು ಕೇಳಬಹುದಾಗಿದೆ. ಇದರೊಂದಿಗೆ ಅವರು ನಟಿಸಿದ ಚಿತ್ರಗಳು, ಧಾರವಾಹಿಗಳು, ರಿಯಾಲಿಟಿ ಶೋಗಳು ಅಪರ್ಣಾ ಅವರನ್ನು ನಮ್ಮ ನಡುವೆ ಜೀವಂತವಾಗಿರಿಸಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇವೆಲ್ಲದರ ನಡುವೆ ಅಪರ್ಣಾ ವರಿಗೆ ಖ್ಯಾತಿ ನೀಡಿದ್ದು ಅವರ ಸ್ವಚ್ಛ ಕನ್ನಡದ ನಿರೂಪಣೆ. ಹೀಗಾಗಿ 'ಕನ್ನಡ' ಭಾಷೆಯ ರಾಜಭಾರಿಯಾಗಿ ಅಪರ್ಣಾ ಸದಾಕಾಲ ಜೀವಂತ.  

ಚಿತ್ರ ಕೃಪೆ: ಅಂತರ್ಜಾಲ ತಾಣ